ಮುಡಾ ಸಂಕಷ್ಟದಿಂದ ಹೊರಬರಲು ಸಿದ್ದರಾಮಯ್ಯ ಪ್ರತ್ಯಸ್ತ್ರ: ಪರೋಕ್ಷವಾಗಿ ಅಹಿಂದ ಟ್ರಂಪ್ ಕಾರ್ಡ್ ಬಳಸ್ತಿರುವ ಸಿಎಂ

ಹೋರಾಟ ಮಾಡುತ್ತೇನೆ, ಓಡಿ ಹೋಗೋದಿಲ್ಲ. ಅಹಿಂದ ಸಮುದಾಯಕ್ಕೋಸ್ಕರ ಹೋರಾಟ ಮಾಡುತ್ತೇನೆ. ಮುಡಾ ಹಗರಣ ಒಂದು ರಾಜಕೀಯ ಷಡ್ಯಂತ್ರ ಎಂದಿರುವ ಸಿಎಂ ಸಿದ್ದರಾಮಯ್ಯ, ರಾಜಕೀಯವಾಗಿಯೇ ಬಿಜೆಪಿ ನಾಯಕರಿಗೆ ಉತ್ತರ ಕೊಡಲು ಮುಂದಾಗಿದ್ದಾರೆ. ಮುಡಾ ಸಂಕಷ್ಟದಿಂದ ಹೊರಬರಲು ಮತ್ತೆ ಅಹಿಂದ ಬ್ರಹ್ಮಾಸ್ತ್ರವನ್ನೇ ಪ್ರಯೋಗಿಸಿದ್ದಾರೆ. ಅಹಿಂದ ಶಕ್ತಿಯನ್ನೇ ಮುಂದಿಟ್ಟುಕೊಂಡು ರಾಜಕೀಯ ಫೈಟ್​ಗೆ ಮುಂದಾಗಿದ್ದಾರೆ.

ಮುಡಾ ಸಂಕಷ್ಟದಿಂದ ಹೊರಬರಲು ಸಿದ್ದರಾಮಯ್ಯ ಪ್ರತ್ಯಸ್ತ್ರ: ಪರೋಕ್ಷವಾಗಿ ಅಹಿಂದ ಟ್ರಂಪ್ ಕಾರ್ಡ್ ಬಳಸ್ತಿರುವ ಸಿಎಂ
ಸಿದ್ದರಾಮಯ್ಯImage Credit source: PTI
Follow us
| Updated By: ಗಣಪತಿ ಶರ್ಮ

Updated on: Oct 06, 2024 | 1:21 PM

ಬೆಂಗಳೂರು, ಅಕ್ಟೋಬರ್ 6: ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ಸಿಎಂ ಸಿದ್ದರಾಮಯ್ಯರ ಅಹಿಂದ ಬಲ ಕೂಡ ಒಂದು ಕಾರಣ. ಇದೀಗ ಇದೇ ಅಹಿಂದ ಶಕ್ತಿಯನ್ನೇ ಮುಡಾ ಹಗರಣದ ಸಂಕಷ್ಟ ನಿವಾರಣೆಗೆ ಸಿದ್ದರಾಮಯ್ಯ ಬ್ರಹ್ಮಾಸ್ತ್ರವಾಗಿ ಬಳಸಿಕೊಳ್ಳುತ್ತಿದ್ದಾರೆ. ರಾಯಚೂರಿನಲ್ಲಿ ಶನಿವಾರ ಸ್ವಾಭಿಮಾನದ ರಣಕಹಳೆ ಮೊಳಗಿಸುವ ಮೂಲಕ ಪರೋಕ್ಷವಾಗಿಯೇ ಅಹಿಂಡ ಟ್ರಂಪ್ ಕಾರ್ಡ್​ ಬಳಸಿದ್ದಾರೆ. ಸಾವಿರಾರು ಜನರು ನೆರೆದಿದ್ದ ವೇದಿಕೆಯಲ್ಲೇ ಭಾವನಾತ್ಮಕ ಬಾಣವನ್ನೂ ಮಾಡಿದ್ದಾರೆ.

ವಿಪಕ್ಷಗಳ ಮೇಲೆ ಹಿಂದುಳಿದ ವರ್ಗದ ಅಸ್ತ್ರವನ್ನೂ ಝಳಪಿಸಿದ ಸಿಎಂ, ನಾನು ಹಿಂದುಳಿದ ವರ್ಗಕ್ಕೆ ಸೇರಿದವನು. ಎರಡನೇ ಬಾರಿ ಮುಖ್ಯಮಂತ್ರಿ ಆದೆ ಎಂದರು ಎಲ್ಲರಿಗೂ ಹೊಟ್ಟೆ ಉರಿ, ನನ್ನ ಮೇಲೆ ಕಪ್ಪು ಚುಕ್ಕೆ ಇಡಲು ಯತ್ನ ನಡೆಯುತ್ತಿದೆ ಎಂದು ಕೆಂಡ ಕಾರಿದರು.

ಸಿದ್ದರಾಮಯ್ಯ ಅಹಿಂದ ಅಸ್ತ್ರಕ್ಕೆ ಕುಮಾರಸ್ವಾಮಿ ಕೌಂಟರ್

ಮಾತೆತ್ತಿದ್ರೆ ಅಹಿಂದ, ಅಹಿಂದ ಎನ್ನುತ್ತಾರೆ. ಅಹಿಂದ ವರ್ಗಕ್ಕೆ ಏನ್​ ಮಾಡಿದ್ದೀರಿ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಸಿಎಂ ಬದಲಾದ್ರೆ ಅಹಿಂದ ನಾಯಕರಿಗೇ ಮಾನ್ಯತೆಗೆ ಪಟ್ಟು

ಈ ಮಧ್ಯೆ, ಕಾಂಗ್ರೆಸ್​ನಲ್ಲಿ ಆಗಾಗ ಸಿಎಂ ಕುರ್ಚಿ ಕಾಳಗ ಕಂಡು ಬರುವುದು ಸಹಜ. ಮೂಲಗಳ, ಪ್ರಕಾರ ದೆಹಲಿ ಅಂಗಳದಲ್ಲಿ ಪ್ಲ್ಯಾನ್ ಬಿಗೂ ಚರ್ಚೆ ನಡೆದಿದೆ. ಒಂದು ವೇಳೆ ಸಿಎಂ ಬದಲಾವಣೆಯಾದರೆ ಅಹಿಂದ ನಾಯಕರಿಗೇ ಸಿಎಂ ಸ್ಥಾನ ಕೊಡಬೇಕು ಎಂಬ ಬೇಡಿಕೆಯನ್ನು ಒಂದಿಷ್ಟು ಹಿರಿಯ ನಾಯಕರು ವ್ಯಕ್ತಪಡಿಸಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಎದುರು ಪದೇ ಪದೆ ಅಹಿಂದ ನಾಯಕತ್ವವನ್ನೇ ಮುಂದುವರಿಸುವಂತೆ ಪ್ರಸ್ತಾಪ ಮಾಡುತ್ತಿದ್ದಾರೆ.

ಅಹಿಂದ ಜಾತಿ ಜನಗಣತಿ ಅಸ್ತ್ರ ಬಳಸುತ್ತಿರುವ ಸಿದ್ದರಾಮಯ್ಯ

ಮುಡಾ ಸಂಕಷ್ಟದಿಂದ ಹೊರrಲು ಅಹಿಂದ ಅಸ್ತ್ರ ಪ್ರಯೋಗಿಸುತ್ತಿರುವ ಸಿಎಂ ಸಿದ್ದರಾಮಯ್ಯ, ಅಹಿಂದ ಜಾತಿ ಜನಗಣತಿ ಅಸ್ತ್ರವನ್ನೂ ಬಳಸುತ್ತಿದ್ದಾರೆ. ಸದ್ಯದಲ್ಲೇ ಜಾತಿ ಜನಗಣತಿಯನ್ನು ಸಚಿವ ಸಂಪುಟದಲ್ಲಿ ಮಂಡಿಸಲು ಅವರು ಚಿಂತನೆ ನಡೆಸಿದ್ದಾರೆ. ಜಾತಿ ಜನಗಣತಿಯಲ್ಲಿ ಅಹಿಂದ ಸಂಖ್ಯೆ ಹೆಚ್ಚಿದೆ ಎಂಬ ಚರ್ಚೆ ಇದೆ. ಇದರ ಆಧಾರದ ಮೇಲೆಯೇ ಅಹಿಂದ ಜನಸಂಖ್ಯೆಗೆ ಅನುಗುಣವಾಗಿ ಯೋಜನೆಗಳನ್ನ ಜಾರಿಗೆ ತರೋಕೆ ಪ್ಲ್ಯಾನ್ ಮಾಡಲಾಗಿದೆ. ಈ ಮೂಲಕ ರಾಜಕೀಯವಾಗಿಯೂ ಪರೋಕ್ಷವಾಗಿ ಅಹಿಂದ ಧ್ವನಿ ಎತ್ತುವುದು ಸಿದ್ದರಾಮಯ್ಯರ ಯೋಜನೆ ಆಗಿದೆ. ಅಹಿಂದ ನಾಯಕತ್ವಕ್ಕೆ ಪ್ರಬಲ ಸ್ಥಾನ ನೀಡಬೇಕು ಎಂಬುದು ಇದರ ಹಿಂದಿನ ಧ್ವನಿಯಾಗಿದೆ.

2 ದಿನಗಳ ಕಾಲ ಕರ್ನಾಟಕದಲ್ಲಿ ಖರ್ಗೆ ವಾಸ್ತವ್ಯ

ರಾಜ್ಯದಲ್ಲಿನ ಎಲ್ಲಾ ಬೆಳವಣಿಗೆ ಗಮನಿಸುತ್ತಿರುವ ಕಾಂಗ್ರೆಸ್ ಹೈಕಮಾಂಡ್​ ನಾಯಕರು ಅಲರ್ಟ್​ ಆಗಿದ್ದಾರೆ. ಅಕ್ಟೋಬರ್ 15ಕ್ಕೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಬೆಂಗಳೂರಿಗೆ ಬರಲಿದ್ದಾರೆ. ಅದಕ್ಕೂ ಮುಂಚೆ ಇದೀಗ ಶನಿವಾರ ರಾತ್ರಿಯೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಗಮಿಸಿದ್ದಾರೆ. 2 ದಿನಗಳ ಕಾಲ ಬೆಂಗಳೂರಿನ ವಾಸ್ತವ್ಯ ಹೂಡಲಿರುವ ಖರ್ಗೆ, ಹಲವು ಬೆಳವಣಿಗಳ ಬಗ್ಗೆ ಮಾಹಿತಿ ಪಡೆಯಲಿದ್ದಾರೆ. ಯಾವುದೇ ಕ್ಷಣದಲ್ಲೂ ಖರ್ಗೆಯನ್ನು ಡಿಕೆ ಸಹೋದರರು ಭೇಟಿಯಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಸ್ನೇಹಮಯಿ‌ ಕೃಷ್ಣ ಆತಂಕ: ಲೋಕಾಯುಕ್ತ ಎಸ್​ಪಿಗೆ ಸಿಎಂ ವಿರುದ್ಧ ಮತ್ತೊಂದು ದೂರು

ಒಟ್ಟಾರೆಯಾಗಿ ಮುಡಾ ಹಗಣದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಸಿದ್ದರಾಮಯ್ಯ, ರಕ್ಷಣೆಗಾಗಿ ಅಹಿಂದ ಬ್ರಹ್ಮಾಸ್ತ್ರ ಪ್ರಯೋಗಿಸುತ್ತಿದ್ದರೆ, ಇದೆಲ್ಲವನ್ನೂ ಗಮನಿಸುತ್ತಿರುವ ಹೈಕಮಾಂಡ್​, ವ್ಯತಿರಿಕ್ತ ಪರಿಸ್ಥಿತಿ ಬಂದರೆ ಏನು ಮಾಡಬೇಕು ಎಂಬ ಲೆಕ್ಕಾಚಾರದಲ್ಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ