Congress Protest Highlights: ಗಾಂಧಿ ಕುಟುಂಬದಿಂದ ನಾವೆಲ್ಲಾ ಸಾಕಷ್ಟು ಪಡೆದುಕೊಂಡಿದ್ದೇವೆ, ಈಗ ಋಣ ತೀರಿಸಬೇಕು ಎಂದ ರಮೇಶ್ ಕುಮಾರ್
Sonia Gandhi ED Appearance | Congress Protest Live News Updates: ಇಡಿ ಪ್ರಶ್ನೆಗಳಿಗೆಲ್ಲಾ ಉತ್ತರಿಸಲು ಸಿದ್ಧ ಎಂದು ಕಾಂಗ್ರೆಸ್ ನಾಯಕರ ಬಳಿ ಸೋನಿಯಾ ಗಾಂಧಿ ಹೇಳಿದ್ದಾರೆ.
ಸೋನಿಯಾ ಗಾಂಧಿಗೆ (Sonia Gandhi) ಇಡಿ ಸಮನ್ಸ್ ವಿರೋಧಿಸಿ ಕಾಂಗ್ರೆಸ್ (Congress) ಇಂದು (ಜುಲೈ 21) ದೇಶಾದ್ಯಂತ ಪ್ರತಿಭಟನೆ ನಡೆಸಲು ಮುಂದಾಗಿದೆ. ಬೆಂಗಳೂರಿನಲ್ಲೂ ಕಾಂಗ್ರೆಸ್ ನಾಯಕರು ಪ್ರತಿಭಟನೆಗೆ ಸಜ್ಜಾಗಿದ್ದಾರೆ. ಪೊಲೀಸರು ಇಂದು ಯಾವುದೇ ಮೆರವಣಿಗೆಗೆ ಅವಕಾಶ ನೀಡಿಲ್ಲ. ಫ್ರೀಡಂ ಪಾರ್ಕ್ನಲ್ಲಿ ಮಾತ್ರ ಪ್ರತಿಭಟನೆ ನಡೆಸಲು ಅನುಮತಿ ನೀಡಲಾಗಿದೆ. ಅಸೋಸಿಯೇಟೆಡ್ ಜರ್ನಲ್ ಲಿಮಿಟೆಡ್ ಕಂಪನಿಯ ಆಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗಲು ಇಡಿ ಸೋನಿಯಾ ಗಾಂಧಿಗೆ ಸಮನ್ಸ್ ನೀಡಿದೆ. ಇಡಿ ಪ್ರಶ್ನೆಗಳಿಗೆಲ್ಲಾ ಉತ್ತರಿಸಲು ಸಿದ್ಧ ಎಂದು ಕಾಂಗ್ರೆಸ್ ನಾಯಕರ ಬಳಿ ಸೋನಿಯಾ ಗಾಂಧಿ ಹೇಳಿದ್ದಾರೆ. ಈ ಹಿಂದೆ ಇಡಿ ನಾಲ್ಕು ದಿನಗಳ ಕಾಲ ರಾಹುಲ್ ಗಾಂಧಿ ವಿಚಾರಣೆ ನಡೆಸಿತ್ತು.
LIVE NEWS & UPDATES
-
Congress Protest Live: ಕಲಬುರಗಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ನಾಳೆ ಪ್ರತಿಭಟನೆ
ಸೋನಿಯಾ ಗಾಂಧಿಗೆ ಇಡಿ ತನಿಖೆ ಖಂಡಿಸಿ ನಾಳೆ ಕಲಬುರಗಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ. ಕಲಬುರಗಿ ನಗರದ ಜಗತ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರಗೆ ಪಾದಯಾತ್ರೆ ನಡೆಸಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಕಾಂಗ್ರೆಸ್ ಕಾರ್ಯಕರ್ತರು ತೀರ್ಮಾನಿಸಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಸೇರಿದಂತೆ ಅನೇಕರು ಭಾಗಿಯಾಗಲಿದ್ದಾರೆ.
-
Congress Protest Live: ನಾಳೆ, ನಾಡಿದ್ದು ಕಾಂಗ್ರೆಸ್‌ನಿಂದ ಮತ್ತೆ ಪ್ರತಿಭಟನೆ ನಡೆಯುತ್ತೆ -ಸತೀಶ್ ಜಾರಕಿಹೊಳಿ
ಇಡಿ ಅಧಿಕಾರಿಗಳಿಂದ ಸೋನಿಯಾ ಗಾಂಧಿ ವಿಚಾರಣೆ ವಿಚಾರಕ್ಕೆ ಸಂಬಂಧಿಸಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ. ಕಾನೂನು ಪ್ರಕಾರ ಇಡಿ ವಿಚಾರಣೆ ಮಾಡಿದರೆ ತೊಂದರೆ ಇಲ್ಲ. ಸದ್ಯದ ಸನ್ನಿವೇಶ ನೋಡಿದರೆ ಕಾನೂನು ಬದ್ಧವಾಗಿ ಆಗುತ್ತಿಲ್ಲ. ರಾಜಕೀಯವಾಗಿ ಗಾಂಧಿ ಕುಟುಂಬ ಟಾರ್ಗೆಟ್ ಮಾಡುತ್ತಿದ್ದಾರೆ. ಹಾಗಾಗಿ ನಾಳೆ, ನಾಡಿದ್ದು ಕಾಂಗ್ರೆಸ್‌ನಿಂದ ಮತ್ತೆ ಪ್ರತಿಭಟನೆ ನಡೆಯುತ್ತೆ. ಕೇಂದ್ರ ಸರ್ಕಾರದ ತನಿಖಾ ಸಂಸ್ಥೆಗಳು ದುರ್ಬಳಕೆ ಆಗುತ್ತಿದೆ. ವಿಪಕ್ಷಗಳ ವಿವಿಧ ನಾಯಕರನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ರಾಷ್ಟ್ರೀಯ ಪಕ್ಷದ ಜೊತೆ ಪ್ರಾದೇಶಿಕ ಪಕ್ಷಗಳನ್ನೂ ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಬೆಳಗಾವಿ ಜಿಲ್ಲೆ ಅಥಣಿಯಲ್ಲಿ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
-
Congress Protest Live: ಅವರಪ್ಪರಾಣೆಗೂ ಕಾಂಗ್ರೆಸ್ 90 ಸೀಟ್ ದಾಟುವುದಿಲ್ಲ -ಡಾ.ಕೆ.ಸುಧಾಕರ್
ಅವರಪ್ಪರಾಣೆಗೂ ಕಾಂಗ್ರೆಸ್ 90 ಸೀಟ್ ದಾಟುವುದಿಲ್ಲ ಎಂದು ಸಿದ್ದರಾಮಯ್ಯ ಸ್ಟೈಲ್‌ನಲ್ಲೇ ಸಚಿವ ಡಾ.ಕೆ.ಸುಧಾಕರ್, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇಬ್ಬರು ನಾಯಕರು ಸಿಎಂ ಸೀಟ್ಗಾಗಿ ಕಿತ್ತಾಡುತ್ತಿದ್ದಾರೆ. ಇನ್ನೊಬ್ಬರು ದೆಹಲಿಗೆ ಹೋಗಿದ್ದಾರೆ ಅಂತಾ ಅವರಿಗೆ ಗೊತ್ತಿಲ್ಲ. ಸಿಎಂ ಸ್ಥಾನಕ್ಕಾಗಿ ದೆಹಲಿಯಲ್ಲಿ ಹೋಗಿ ರೆಡಿಯಾಗಿದ್ದಾರೆ. ಅವರಪ್ಪರಾಣೆಗೂ ಕಾಂಗ್ರೆಸ್ 90 ಸ್ಥಾನ ಬರಲ್ಲ ಎಂದು ವ್ಯಂಗ್ಯವಾಡಿದ್ದಾರೆ. ಕೋಲಾರದಲ್ಲೂ ಮಹಾಘಟಬಂಧನ್ ಮಾಡಿಕೊಂಡಿದ್ದಾರೆ. ಕೋಲಾರದಲ್ಲಿ ಲೀಡರ್ನಿಂದ ಯಾರೂ ಸಹ ಅಡ್ರೆಸ್ ಇರಲ್ಲ. ಇದು ಶ್ರೀನಿವಾಸಪುರದಿಂದ ಆರಂಭವಾಗಲಿದೆ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ಧವೂ ವಾಗ್ದಾಳಿ ನಡೆಸಿದ್ದಾರೆ.
Congress Protest Live: ಗಾಂಧಿ ಕುಟುಂಬದಿಂದ ನಾವೆಲ್ಲಾ ಸಾಕಷ್ಟು ಪಡೆದುಕೊಂಡಿದ್ದೇವೆ
‘ನಾವೆಲ್ಲರೂ 3-4 ತಲೆಮಾರಿಗೆ ಆಗುವಷ್ಟು ಮಾಡಿಕೊಂಡಿದ್ದೇವೆ’ ಎಂಬ ನನ್ನ ಹೇಳಿಕೆಯಿಂದ ನಾನು ಹಿಂದೆ ಸರಿಯಲ್ಲ ಎಂದು ಬೆಂಗಳೂರಿನಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಸ್ಪಷ್ಟಣೆ ನೀಡಿದ್ದಾರೆ. ನಾನು ಯಾವಾಗಲೂ ನೇರವಾಗಿ ಹೇಳುತ್ತೇನೆ, ಮಾತಾಡುತ್ತೆನೆ. ಗಾಂಧಿ ಕುಟುಂಬದಿಂದ ನಾವೆಲ್ಲಾ ಸಾಕಷ್ಟು ಪಡೆದುಕೊಂಡಿದ್ದೇವೆ. ಇಂತಹ ಸಮಯದಲ್ಲಿ ನಾವು ಸೋನಿಯಾ ಬೆನ್ನಿಗೆ ನಿಲ್ಲಬೇಕು. ಅವರಿಂದ ಅನುಕೂಲ ಪಡೆದುಕೊಂಡವರು ಬೆನ್ನಿಗೆ ನಿಲ್ಲಬೇಕು. ಲಾಭ ಪಡೆದವರು ಸೋನಿಯಾ ಜೊತೆ ನಿಂತಿಲ್ಲವೆಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಪರೋಕ್ಷವಾಗಿ ಆಕ್ರೋಶ ಹೊರ ಹಾಕಿದ್ದಾರೆ. ಸೋನಿಯಾ, ರಾಹುಲ್ ಬಲ ಕುಗ್ಗಿಸುವ ಪ್ರಯತ್ನ ನಡೆಯುತ್ತಿದೆ. ಹಾಗಾಗಿ ನಾವು ಕಾಂಗ್ರೆಸ್ನವರೆಲ್ಲರೂ ಅವರ ಬೆನ್ನಿಗೆ ನಿಲ್ಲಬೇಕು ಎಂದರು.
Congress Protest Live: ತಮ್ಮದೇ ಕಾರಿಗೆ ಬೆಂಕಿ ಹಚ್ಚಿ ಆಕ್ರೋಶ
ಯುವ ಕಾಂಗ್ರೆಸ್, ಶಾಂತಿನಗರದ ಇಡಿ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿದೆ. ಕಾಂಗ್ರೆಸ್ ಕಾರ್ಯಕರ್ತರ ತಮ್ಮದೇ ಕಾರಿಗೆ ಬೆಂಕಿ ಹಂಚಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಲಾಗುತ್ತಿದೆ. ವಿಲ್ಸನ್ಗಾರ್ಡನ್ ಠಾಣೆ ಪೊಲೀಸರು 11 ಜನರನ್ನು ವಶಕ್ಕೆ ಪಡೆದಿದ್ದಾರೆ.
Congress Protest Live: ನಾವೆಲ್ಲ ನಮ್ಮ ನಾಯಕಿ ಸೋನಿಯಾ ಗಾಂಧಿ ರಕ್ಷಣೆಗೆ ಇದ್ದೀವಿ ಎಂದ ಡಿಕೆಶಿ
ನಮ್ಮನ್ನು ವಶಕ್ಕೆ ಆದರೂ ತಗೊಳ್ಳಲಿ, ಜೈಲಿಗಾದ್ರೂ ಹಾಕಲಿ. ನಾವೆಲ್ಲ ನಮ್ಮ ನಾಯಕಿ ಸೋನಿಯಾ ಗಾಂಧಿ ರಕ್ಷಣೆಗೆ ಇದ್ದೀವಿ. ಕಾಂಗ್ರೆಸ್ ನಾಯಕರನ್ನು ಕುಗ್ಗಿಸಲು ತನಿಖಾ ಸಂಸ್ಥೆ ಬಳಸುತ್ತಿದ್ದಾರೆ ಎಂದು ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಕ್ರೋಶ ಹೊರ ಹಾಕಿದ್ದಾರೆ.
Congress Protest Live: ಕಾಂಗ್ರೆಸ್ನವರು ದೇಶ ಲೂಟಿ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ -ಆರ್.ಅಶೋಕ್
K.R.ರಮೇಶ್ ಕುಮಾರ್ಗೆ ಜ್ಞಾನೋದಯ ಆಗಿ ಸತ್ಯ ಹೇಳಿದ್ದಾರೆ ಎಂದು ಮಂಡ್ಯದಲ್ಲಿ ಟಿವಿ9ಗೆ ಕಂದಾಯ ಸಚಿವ ಆರ್.ಅಶೋಕ್ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ನವರು ದೇಶ ಲೂಟಿ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ. 40 ಪರ್ಸೆಂಟ್ ಕಮಿಷನ್ ಅಂತಿದ್ರು ಜನರಿಗೆ ಈವಾಗ ಗೊತ್ತಾಗಿದೆ. ಅದು 10 ತಲೆಮಾರು ಆಗಬೇಕು ಅಂತ ಇತ್ತು. ಬಾಯ್ತಪ್ಪಿ 3, 4 ತಲೆಮಾರು ಅಂತ ಭಾಷಣದಲ್ಲಿ ಹೇಳಿದ್ದಾರೆ. ಇನ್ಮುಂದೆ ಬಿಜೆಪಿ ಮೇಲೆ ಅದು ಹೆಂಗೆ ಹೇಳುತ್ತಾರೆ ನೋಡುವ. ಕಾಂಗ್ರೆಸ್ ಪ್ರತಿಭಟನೆಯಲ್ಲಿ ಯಾವುದೇ ಅರ್ಥ ಇಲ್ಲ ಎಂದರು.
Congress Protest Live: ನಾನು ಜೈಲಿಗೆ ಹೋಗಿ ಬಂದು ಮೂರು ವರ್ಷ ಆಯಿತು -ಡಿಕೆಶಿ
ನಾನು ಜೈಲಿಗೆ ಹೋಗಿ ಬಂದು ಮೂರು ವರ್ಷ ಆಯಿತು. ಈಗ ಮತ್ತೆ ಇಡಿ ಹಾಗೂ ಐಟಿ ಇಲಾಖೆಯಿಂದ ಪತ್ರ ಬರುತ್ತಿವೆ. ಒಂದು ವರ್ಷ ಬಿಟ್ಟು ಬಿಡ್ರಪ್ಪಾ ಎಂದು ಇಡಿ, ಐಟಿ ಅಧಿಕಾರಿಗಳಿಗೆ ನಾನೇ ಪತ್ರ ಬರೆದಿದ್ದೇನೆ. ನನ್ನ ವಿರುದ್ಧ 2-3 ವರ್ಷದ ಬಳಿಕ ಚಾರ್ಜ್‌ಶೀಟ್ ಹಾಕಿದ್ದಾರೆ. ನನ್ನ ಜೊತೆ ವ್ಯವಹಾರ ಮಾಡಿದವರಿಗೂ ನೋಟಿಸ್ ನೀಡಿದ್ದಾರೆ. ರಾಮನಗರದ ಅಭ್ಯರ್ಥಿ ಸೇರಿ ವ್ಯವಹಾರ ಮಾಡಿದವರಿಗೆ ನೋಟಿಸ್ ನೀಡಿ ವಿಚಾರಣೆಗೆ ಬರುವಂತೆ ಸೂಚನೆ ನೀಡುತ್ತಿದ್ದಾರೆ. ನನ್ನಂತವರಿಗೆ ಕಿರುಕುಳ ಕೊಡುತ್ತಿದ್ದಾರೆಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆರೋಪಿಸಿದ್ದಾರೆ.
Congress Protest Live: ಪೊಲೀಸ್ ಠಾಣೆಯಿಂದ ತೆರಳಿದ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್
ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರನ್ನು ಪ್ರತಿಭಟನೆ ವೇಳೆ ವಶಕ್ಕೆ ಪಡೆದು ಠಾಣೆಗೆ ಕರೆತಂದಿದ್ದರು. ಸದ್ಯ ಈಗ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಉಪ್ಪಾರಪೇಟೆ ಪೊಲೀಸ್ ಠಾಣೆಯಿಂದ ತೆರಳಿದ್ದಾರೆ.
Congress Protest Live: ಪ್ರತಿಭಟನೆಯ ಸ್ಥಳ ಶಿಫ್ಟ್ ಮಾಡುವಂತೆ ವಿದ್ಯಾರ್ಥಿನಿಯರ ಮನವಿ
ಪ್ರತಿಭಟನೆಯ ಸ್ಥಳ ಶಿಫ್ಟ್ ಮಾಡುವಂತೆ ವಿದ್ಯಾರ್ಥಿನಿಯರು ಮನವಿ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ನಾಯಕರು ರಾಜಭವನದ ಚಲೋ ಹೊರಟಿದ್ದು ಡಿಕೆ ಶಿವಕುಮಾರ್ ಬ್ಯಾರಿಕೇಡ್ ಹತ್ತಿದ್ದಾರೆ. ಹ್ಯಾರಿಸ್ ನಲಪಾಡ್, ಡಿಕೆಶಿ, ಸಿದ್ದರಾಮಯ್ಯರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
Congress Protest Live: ರೈಲು ತಡೆದು ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು
ಸೋನಿಯಾ ಗಾಂಧಿ ಇಡಿ ವಿಚಾರಣೆ ಖಂಡಿಸಿ ದೆಹಲಿಯಲ್ಲಿ ರೈಲು ತಡೆದು ‘ಕೈ’ ಕಾರ್ಯಕರ್ತರು ಪ್ರತಿಭಟನೆ ಮಾಡಿದರು. ದೆಹಲಿಯ ಶಿವಾಜಿ ಬ್ರಿಡ್ಜ್ ರೈಲ್ವೆ ನಿಲ್ದಾಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟಿಸಿದರು.
Congress Protest Live: ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯರನ್ನು ವಶಕ್ಕೆ ಪಡೆದ ಪೊಲೀಸರು
ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್‌ನಿಂದ ಫ್ರೀಡಂಪಾರ್ಕ್ನಿಂದ ರಾಜಭವನದತ್ತ ಪ್ರತಿಭಟನೆ ಮಾಡಲಾಗುತ್ತಿದ್ದು, ಫ್ರೀಡಂಪಾರ್ಕ್ ಬಳಿ ಬ್ಯಾರಿಕೇಡ್ ಹಾಕಿ ಕಾಂಗ್ರೆಸ್ ರ್ಯಾಲಿ ತಡೆಯಲಾಗಿದೆ. ಬ್ಯಾರಿಕೇಡ್ ಹತ್ತಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರತಿಭಟನೆ ಮಾಡಿದ್ದು, ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯರನ್ನು ಪೊಲೀಸರು ವಶಕ್ಕೆ ಪಡೆದರು.
Congress Protest Live: ‘ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟವರು ಯಾರು, ಕಾಂಗ್ರೆಸ್’
ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟವರು ಯಾರು ಕಾಂಗ್ರೆಸ್, ಅದಕ್ಕಾಗಿಯೇ ಇಂದು ನೀವು ಆಜಾದಿಕಾ ಅಮೃತ ಮಹೋತ್ಸವ. ಬಿಜೆಪಿಯವರು ಕೂಡ ಸ್ವಾತಂತ್ರ್ಯೋತ್ಸವ ಫಲಾನುಭವಿಗಳು ಎಂದು ಫ್ರೀಡಂಪಾರ್ಕ್ನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿದರು. ಆ.15ರಂದು ನಾವೆಲ್ಲರೂ ಸ್ವಾತಂತ್ರ್ಯೋತ್ಸವ ಆಚರಣೆ ಮಾಡೋಣ. ಬಿಜೆಪಿಯವರ ಕಿರುಕುಳ ಕೊನೆಗಾಣಿಸಲು ಹೋರಾಟ ಮಾಡೋಣ. ನಮ್ಮ ಹೋರಾಟ ಶಾಂತಿಯುತವಾಗಿರಬೇಕು ಎಂದು ಡಿ.ಕೆ ಶಿವಕುಮಾರ ಕರೆ ನೀಡಿದರು.
Congress Protest Live: ಕಾಂಗ್ರೆಸ್ ಪ್ರೊಟೆಸ್ಟ್, ಮಹಾರಾಣಿ ಕ್ಲಸ್ಟರ್ ವಿವಿಗೆ ಎಫೆಕ್ಟ್
ಕಾಂಗ್ರೆಸ್ ಪ್ರೊಟೆಸ್ಟ್ ಮಹಾರಾಣಿ ಕ್ಲಸ್ಟರ್ ವಿವಿಗೆ ಎಫೆಕ್ಟ್ ಆಗಿದ್ದು, ಬೆಳಗ್ಗೆಯಿಂದ ಭಾಷಣದ ಸೌಂಡ್ನಲ್ಲೇ ವಿದ್ಯಾರ್ಥಿಗಳು ಕ್ಲಾಸ್ ಕೇಳುವಂತ್ತಾಗಿದೆ. ಮಹಾರಾಣಿ ಕ್ಲಸ್ಟರ್ ವಿವಿ ಮುಂಭಾಗವೇ ಕಾಂಗ್ರೆಸ್ ಪ್ರತಿಭಟನೆ ಮಾಡುತ್ತಿದ್ದು, ಪಾಠ ಕೇಳೋಕೆ ಆಗೊಲ್ಲ, ಮೈಂಡ್ ಬೇರೆಡೆಗೆ ಡೈವರ್ಟ್ ಆಗುತ್ತೆ. ರ್ಯಾಲಿ, ಜಾಥಾ ಎಲ್ಲ ಮಾಡಿದ್ರೆ ಫುಲ್ ಟ್ರಾಫಿಕ್ ಜಾಮ್ ಆಗುತ್ತೆ. ಕಾಲೇಜಿನಿಂದ ಹೊರಗೆ ಕಾಲು ಇಡೋಕೆ ಆಗೊಲ್ಲ. ಇವತ್ತು ಕಲ್ಚರಲ್ ಪ್ರೋಗ್ರಾಂ ಇತ್ತು. ಕಾರ್ಯಕ್ರಮದ ಸೌಂಡ್ಗಿಂತ ಇವರ ಭಾಷಣದ ಸೌಂಡೇ ಜಾಸ್ತಿಯಾಗಿತ್ತು. ಕಿಟಕಿ ಕ್ಲೋಸ್ ಮಾಡಿದ್ರೂ ಸೌಂಡ್ ಬರುತ್ತೆ. ಕೆಲವೊಮ್ಮೆ ಕ್ಲಾಸ್ನ ಪೋಸ್ಟ್ ಪೋನ್ ಮಾಡ್ತಾರೆ. ಪ್ರತಿಭಟನೆಯ ಸ್ಥಳ ಶಿಫ್ಟ್ ಮಾಡುವಂತೆ ವಿದ್ಯಾರ್ಥಿನಿಯರ ಮನವಿ ಮಾಡಿದರು.
Congress Protest Live: ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದೆ
ನ್ಯಾಷನಲ್ ಹೆರಾಲ್ಡ್ ಕೇಸ್ನಲ್ಲಿ ಎಫ್ಐಆರ್ ದಾಖಲಿಸಿಲ್ಲ. ಎಫ್ಐಆರ್ ದಾಖಲಿಸದೆ ಸಮನ್ಸ್ ನೀಡಲು ಆಗುವುದಿಲ್ಲ. ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದೆ, ಇದಕ್ಕೆ ಹೆದರಲ್ಲ ಎಂದು ಎಂದು ಬೆಂಗಳೂರಿನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ನೀಡಿದರು.
Congress Protest Live: ಬಿಜೆಪಿ ಜನರಿಗೆ ತಪ್ಪು ಮಾಹಿತಿ ನೀಡುತ್ತಿದೆ
ರಾಹುಲ್ ಗಾಂಧಿ ಅವರನ್ನು ವಿಚಾರಣೆಗೆ ಕರೆದ ಇಡಿ ಕಚೇರಿಗೆ ಮುತ್ತಿಗೆ ಹಾಕಿದ್ದೀವಿ. ಜನರಿಗೆ ತುಪ್ಪ ಮಾಹಿತಿ ಕೊಡುವ ಕೆಲಸ ಬಿಜೆಪಿ ಮಾಡುತ್ತಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ನೀಡಿದರು. ನಾವು ಯಾರು ಕೂಡ ಕಾನೂನನ್ನು ಮೀರಿದವರಲ್ಲ. ಆದರೆ ತನಿಖಾ ಸಂಸ್ಥೆಗಳ ಮೋದಿ ಅವರು ಬಂದ ಮೇಲೆ ಕಾನೂನಿನ ಪ್ರಕಾರ ನಡೆಯುತ್ತಿಲ್ಲ. ಇಡಿ, ಐಟಿ ದುರ್ಬಳಕೆ ಮಾಡಿಕೊಂಡ ಕಾಂಗ್ರೆಸ್ವನ್ನು ಹೆದರಿಸುವ ಕೆಲಸ ಮಾಡುತ್ತಿದ್ದಾರೆ. ಬಿಜೆಪಿಗೆ ಪರ್ಯಾಯ ಕಾಂಗ್ರೆಸ್. ಹಾಗಾಗಿ ಕಾಂಗ್ರೆಸ್ನ್ನ ಮುಗಿಸಬೇಕು ಎಂದು ಹೊರಟಿದ್ದಾರೆ ಎಂದು ಹೇಳಿದರು.
Congress Protest Live: ಫ್ರೀಡಂಪಾರ್ಕ್ನಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ
ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿದರೆ ಬಂಧಿಸುತ್ತಾರೆ. ಬಂಧನ ನಂತರ ಬಿಜೆಪಿ ಸೇರಿಕೊಂಡರೆ ಎಲ್ಲ ಕೇಸ್ ಕೈಬಿಡುತ್ತಾರೆ ಎಂದು ಫ್ರೀಡಂಪಾರ್ಕ್ನಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ನೀಡಿದರು. ರಾಜಕಾರಣಿಗಳು, ಹೋರಾಟಗಾರರಿಗೆ ಬಿಜೆಪಿ ಹೀಗೆ ಎದುರಿಸುತ್ತೆ. ಬಿಜೆಪಿಯವರ ಕಿರುಕುಳ ಸಹಿಸಲಾಗದೆ ಎಷ್ಟೇ ಜನ ಸೇರಿದ್ದಾರೆ. ಬಿಜೆಪಿ ಸೇರಿರುವ ಹಲವು ನಾಯಕರು ನನ್ನ ಬಳಿ ಹೇಳಿಕೊಂಡಿದ್ದಾರೆ. ಬಿಜೆಪಿಯನ್ನೇ ಆಡಳಿತ ನಡೆಸಲು ಬಿಟ್ಟರೆ ದೇಶಕ್ಕೆ ಉಳಿಗಾಲವಿಲ್ಲ. ಮುಂದೊಂದು ದಿನ ಶ್ರೀಲಂಕಾ ಎದುರಿಸುವ ಸ್ಥಿತಿ ಭಾರತಕ್ಕೆ ಬರುತ್ತೆ ಎಂದು ಹೇಳಿದರು.
Congress Protest Live: ಕಾರಿಗೆ ಬೆಂಕಿ ಹಂಚಿ ಕೇಂದ್ರ ಸರ್ಕಾರದ ವಿರುದ್ದ ಆಕ್ರೋಶ
ಯೂತ್ ಕಾಂಗ್ರೆಸ್‌ನಿಂದ ಇಡಿ ಅಫೀಸ್ ಎದುರು ಪ್ರತಿಭಟನೆ ಮಾಡಿದ್ದು, ಕಾರಿಗೆ ಬೆಂಕಿ ಹಂಚಿ ಕೇಂದ್ರ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಲಾಯಿತು. ಶಾಂತಿನಗರದ ಇಡಿ ಆಫೀಸ್ ಕಚೇರಿ ಎದುರು ಕಾಂಗ್ರೆಸ್ ಕಾರ್ಯಕರ್ತರ ಕಾರಿಗೆ ಬೆಂಕಿ ಹಚ್ಚಿಕೊಂಡು ಆಕ್ರೋಶ ಹೊರಹಾಕಲಾಯಿತು.
Congress Protest Live: ಫ್ರೀಡಂಪಾರ್ಕ್ನಲ್ಲಿ ಮಾಜಿ ಸಚಿವ ಎಂ.ಬಿ.ಪಾಟೀಲ್ ವಾಗ್ದಾಳಿ
ಕೇಂದ್ರದಿಂದ ಕಾಂಗ್ರೆಸ್ ನಾಯಕರನ್ನ ಕುಗ್ಗಿಸುವ ಕೆಲಸ ನಡೀತಿದೆ ಎಂದು ಕೇಂದ್ರದ ವಿರುದ್ಧ ಮಾಜಿ ಸಚಿವ ಎಂ.ಬಿ.ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದರು. ಸೋನಿಯಾ ಗಾಂಧಿಗೆ ಪ್ರಧಾನಿಯಾಗುವ ಅವಕಾಶ ಒದಗಿ ಬಂದಿತ್ತು. ಆದರೆ ಪ್ರಧಾನಿಯಾಗದೆ ಆರ್ಥಿಕ ತಜ್ಞರಿಗೆ ಅವಕಾಶ ಮಾಡಿಕೊಟ್ರು. ಕೇಂದ್ರದಿಂದ ವಿರೋಧ ಪಕ್ಷಗಳನ್ನು ಹತ್ತಿಕ್ಕುವ ಕೆಲಸ ನಡೆಯುತ್ತಿದೆ.
Congress Protest Live: ಕಾಂಗ್ರೆಸ್ ವಿರುದ್ಧ ಇಂಧನ ಸಚಿವ ಸುನಿಲ್ ಕುಮಾರ್ ವಾಗ್ದಾಳಿ
ಪ್ರತಿಭಟನೆ ಮಾಡುತ್ತಿರುವ ಕಾಂಗ್ರೆಸ್ ದೇಶದ ಜನತೆ ಕ್ಷಮೆ ಕೇಳಲಿ. ಕಾನೂನಿಗೆ ಗೌರವ ಕೊಡಲ್ಲ ಅಂದರೆ ಕಾಂಗ್ರೆಸ್ ಸ್ಪಷ್ಟನೆ ಕೊಡಬೇಕು. ಬಿಜೆಪಿ ಕಿರುಕುಳ ಕೊಡುತ್ತಿದೆ ಎಂದು ಆರೋಪ ಮಾಡುವ ಕಾಂಗ್ರೆಸ್, ಇಷ್ಟು ವರ್ಷ ದೇಶದ ಜನರಿಗೆ ಕಿರುಕುಳ ನೀಡಿದೆ. ತಪ್ಪು ಮಾಡಿಲ್ಲ ಅಂದರೆ ಭಯ ಯಾಕೆ?, ತನಿಖೆ ಎದುರಿಸಲಿ ಎಂದು ಬೆಂಗಳೂರಿನಲ್ಲಿ ಕಾಂಗ್ರೆಸ್ ವಿರುದ್ಧ ಇಂಧನ ಸಚಿವ ಸುನಿಲ್ ಕುಮಾರ್ ವಾಗ್ದಾಳಿ ಮಾಡಿದರು.
ಇಡಿ ಅಧಿಕಾರಿಗಳಿಂದ ಸೋನಿಯಾ ಗಾಂಧಿ ವಿಚಾರಣೆಗೆ ಆಕ್ರೋಶ
ದೆಹಲಿ ಸೇರಿದಂತೆ ದೇಶಾದ್ಯಂತ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ ನಡಸುತ್ತಿದ್ದಾರೆ. ಮುಂಬೈ, ಜೈಪುರ, ಪಾಟ್ನಾ, ಲಖನೌ, ಚಂಡೀಗಢ, ಕೋಲ್ಕತ್ತಾ, ಹೈದರಾಬಾದ್, ಚೆನ್ನೈ, ಭೋಪಾಲ್ನಲ್ಲಿ ಕೇಂದ್ರದ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
Presidential Election Results 2022: ದ್ರೌಪದಿ ಮುರ್ಮು ವಿರುದ್ಧ ಚುನಾವಣಾ ಆಯೋಗಕ್ಕೆ ದೂರು
ಎರಡು ದಿನಗಳ ಹಿಂದೆ, ಜುಲೈ 18 ರಂದು ನಡೆದ ಚುನಾವಣೆಯಲ್ಲಿ ಕಾನೂನು ನಿಬಂಧನೆಗಳನ್ನು ಉಲ್ಲಂಘಿಸಲಾಗಿದೆ ಎಂದು ಆರೋಪಿಸಿ ಕರ್ನಾಟಕದಲ್ಲಿ ಕಾಂಗ್ರೆಸ್ (ಎನ್‌ಡಿಎ) ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಮತ್ತು ಇತರರ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ.
ಕಾಂಗ್ರೆಸ್ನ ನಿಜ ಬಣ್ಣ ಬೀದಿಗೆ ಬಂದಿದೆ
ಕಾಂಗ್ರೆಸ್ನ ನಿಜ ಬಣ್ಣ ಬೀದಿಗೆ ಬಂದಿದೆ. ಕೋರ್ಟ್ ತೀರ್ಪು ಬಂದ ತಕ್ಷಣ ಅವರ ಬಣ್ಣ ಇನ್ನೂ ಬಟಾ ಬಯಲಾಗುತ್ತದೆ. ಘನ ಕಾರ್ಯಕ್ಕೆ ವಿಚಾರಣೆ ಎದುರಿಸುತ್ತಿದ್ದರೆ ಜನರ ಸಿಂಪಥಿ ಸಿಗುತಿತ್ತು. ಅವ್ಯವಹಾರದ ಆರೋಪದಲ್ಲಿ ಸಿಲುಕಿದವರಿಗೆ ಜನರ ಸಿಂಪಥಿ ಸಿಗುವುದಿಲ್ಲ ಎಂದು ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ ಹೇಳಿಕೆ ನೀಡಿದ್ದಾರೆ.
ಇಡಿ ವಿಚಾರಣೆಗೆ ಹಾಜರಾದ ಸೋನಿಯಾ ಗಾಂಧಿ
ಇಡಿ ಕಚೇರಿ ತಲುಪಿದ ನಾಯಕಿ ಸೋನಿಯಾ ಗಾಂಧಿ, ವಿಚಾರಣೆಗೆ ಹಾಜರಾಗಿದ್ದಾರೆ.
Delhi | Congress interim president Sonia Gandhi arrives at ED office for questioning in National Herald case pic.twitter.com/1dBiAnRTZY
— ANI (@ANI) July 21, 2022
ಕಾಂಗ್ರೆಸ್ ದೇಶದ ಕ್ಷಮೆ ಕೇಳಬೇಕು
ಕಾಂಗ್ರೆಸ್ ದೇಶದ ಕ್ಷಮೆ ಕೇಳಬೇಕು. ಕಾನೂನಿಗೆ ಗೌರವ ಕೊಡಲ್ಲ ಅಂದರೆ ಕಾಂಗ್ರೆಸ್ ಸ್ಪಷ್ಟನೆ ಕೊಡಬೇಕು. ಕಾಂಗ್ರೆಸ್ ಕಾನೂನಿಗೆ ವಿರುದ್ಧವಾಗಿ ತುರ್ತು ಪರಿಸ್ಥಿತಿ ಹೇರಿತ್ತು. ಬಿಜೆಪಿ ಕಿರುಕುಳ ಕೊಡುತ್ತಿದೆ ಎಂದು ಆರೋಪ ಮಾಡುವ ಕಾಂಗ್ರೆಸ್, ಇಷ್ಟು ವರ್ಷ ದೇಶದ ಜನರಿಗೆ ಕಿರುಕುಳ ನೀಡಿದೆ. ಭ್ರಷ್ಟಾಚಾರ ಮಾಡಿದ್ದು ಕಾಂಗ್ರೆಸ್. ಮೋದಿ ಅವಧಿಯಲ್ಲಿ ಒಂದೇ ಒಂದು ಭ್ರಷ್ಟಾಚಾರ ಇಲ್ಲ. ತಪ್ಪು ಮಾಡಿಲ್ಲ ಅಂದರೆ ಭಯ ಯಾಕೆ? ಈ ಹಿಂದೆ ತಪ್ಪು ಮಾಡಿದವರು ಈಗ ತನಿಖೆ ಎದುರಿಸಲು ಸಹಜವಾಗಿ ಭಯ ಪಡುತ್ತಾರೆ. ತಪ್ಪು ಮಾಡಿಲ್ಲ ಅಂದರೆ ಭಯ ಯಾಕೆ? ತನಿಖೆ ಎದುರಿಸಲಿ ಎಂದು ಬೆಂಗಳೂರಿನಲ್ಲಿ ಸಚಿವ ಸುನೀಲ್ ಕುಮಾರ್ ಹೇಳಿಕೆ ನೀಡಿದ್ದಾರೆ.
ಸೋನಿಯಾ ಗಾಂಧಿಗೆ ಪ್ರಿಯಾಂಕ ಗಾಂಧಿ, ರಾಹುಲ್ ಸಾಥ್
ಸೋನಿಯಾ ಗಾಂಧಿಗೆ ಪ್ರಿಯಾಂಕ ಗಾಂಧಿ ಹಾಗೂ ರಾಹುಲ್ ಸಾಥ್ ನೀಡಿದ್ದಾರೆ.
Presidential Election Results 2022: ದ್ರೌಪದಿ ಮುರ್ಮು ಅವರ ನಿವಾಸಕ್ಕೆ ಅಲಂಕಾರ
ಇಂದು ಸಂಜೆ ವೇಳೆಗೆ ರಾಷ್ಟ್ರಪತಿ ಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ. ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ನಿವಾಸದಲ್ಲಿ ಸಿದ್ಧತೆ ನಡೆದಿದೆ.
ನಿವಾಸದಿಂದ ಇಡಿ ಕಚೇರಿಗೆ ತೆರಳಿದ ಸೋನಿಯಾ ಗಾಂಧಿ
ಕಾಂಗ್ರೆಸ್ ನಾಯಕಿ ಸೋನಿಯಾ ನಿವಾಸದಿಂದ ಇಡಿ ಕಚೇರಿಗೆ ತೆರಳಿದರು.
Delhi | Congress interim president Sonia Gandhi leaves from her residence for ED office to appear before it in the National Herald case pic.twitter.com/HRLoAug1G7
— ANI (@ANI) July 21, 2022
Presidential Election Results 2022: ಬುಡಕಟ್ಟು ಮುಖಂಡರು ದೆಹಲಿಗೆ
ಮುರ್ಮು ಅವರನ್ನು ಸ್ವಾಗತಿಸಲು ಎಲ್ಲಾ ಪ್ರಮುಖ ಬುಡಕಟ್ಟು ನಾಯಕರು ದೆಹಲಿಗೆ ಬರುತ್ತಾರೆ: ಕಿರಣ್ ರಿಜಿಜು
ಫ್ರೀಡಂ ಪಾರ್ಕ್ನಲ್ಲಿ ಕಾಂಗ್ರೆಸ್ ನಾಯಕರ ಧರಣಿ
ಬೆಂಗಳೂರಿನ ಫ್ರೀಡಂಪಾರ್ಕ್ನಲ್ಲಿ ಕಾಂಗ್ರೆಸ್ ನಾಯಕರ ಧರಣಿ ಆರಂಭವಾಗಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹ್ಮದ್, ಈಶ್ವರ್ ಖಂಡ್ರೆ, ಧ್ರುವನಾರಾಯಣ, ರಮೇಶ್ ಕುಮಾರ್, ಕೆ.ಎನ್.ರಾಜಣ್ಣ, ಶಾಸಕ ಜಮೀರ್, ಬಿ.ಕೆ.ಹರಿಪ್ರಸಾದ್, ವೀರಪ್ಪ ಮೊಯ್ಲಿ, ದಿನೇಶ್ ಗುಂಡೂರಾವ್ ಸೇರಿ ಹಲವು ನಾಯಕರು ಭಾಗಿಯಾಗಿದ್ದಾರೆ.
ಸೋನಿಯಾ ಗಾಂಧಿ ಸುಪ್ರೀಂ ಕೋರ್ಟ್, ಸಂವಿಧಾನಕ್ಕಿಂತ ದೊಡ್ಡವರಾ?
ಸೋನಿಯಾ ಗಾಂಧಿ ಸುಪ್ರೀಂ ಕೋರ್ಟ್, ಸಂವಿಧಾನಕ್ಕಿಂತ ದೊಡ್ಡವರಾ? ಮೋದಿ, ವಾಜಪೇಯಿ, ಅಡ್ವಾಣಿ, ಅಮಿತ್ ಶಾ ಕೂಡ ಕೋರ್ಟ್ ಮುಂದೆ ಹಾಜರಾಗಿದ್ದರು. ಸೋನಿಯಾ ಗಾಂಧಿಗೆ ತಪ್ಪು ಮಾಡಿಲ್ಲ ಅಂದ್ರೆ ಭಯ ಯಾಕೆ? ಯಾಕೆ ಪ್ರತಿಭಟನೆ ಮಾಡಬೇಕು? ಇದಕ್ಕೆ ಕಾಂಗ್ರೆಸ್, ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಉತ್ತರ ನೀಡಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಹೇಳಿಕೆ ನೀಡಿದ್ದಾರೆ.
ಕಾಂಗ್ರೆಸ್ ಪ್ರತಿಭಟನೆ ವಿರುದ್ಧ ಕೇಂದ್ರ ಸಚಿವ ಜೋಶಿ ವಾಗ್ದಾಳಿ
ಸೋನಿಯಾರನ್ನು ಇಡಿ ಅಧಿಕಾರಿಗಳು ವಿಚಾರಣೆಗೆ ಕರೆದಿದ್ದಾರೆ. ಆದರೆ ಕಾಂಗ್ರೆಸ್ ಬೀದಿಗಿಳಿದು ಪ್ರತಿಭಟನೆ ಮಾಡುವ ಅಗತ್ಯ ಏನಿದೆ? ಎಂದು ಕಾಂಗ್ರೆಸ್ ಪ್ರತಿಭಟನೆ ವಿರುದ್ಧ ಕೇಂದ್ರ ಸಚಿವ ಜೋಶಿ ವಾಗ್ದಾಳಿ ನಡೆಸಿದ್ದಾರೆ.
ನಮ್ಮ ನಾಯಕರಿಗೆ ನೀಡ್ತಿರುವ ಕಿರುಕುಳ ಖಂಡಿಸಿ ಪ್ರತಿಭಟನೆ
ವಿಚಾರಣೆ ಹೆಸರಲ್ಲಿ ಸೋನಿಯಾ ಗಾಂಧಿಗೆ ಕಿರುಕುಳ ನೀಡಲಾಗ್ತಿದೆ. ನಮ್ಮ ನಾಯಕರಿಗೆ ನೀಡ್ತಿರುವ ಕಿರುಕುಳ ಖಂಡಿಸಿ ಪ್ರತಿಭಟನೆ ಮಾಡುತ್ತಿದ್ದೇವೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.
ಫ್ರೀಡಂ ಪಾರ್ಕ್ ಸುತ್ತ ಟ್ರಾಫಿಕ್ ಜಾಮ್
ಪ್ರತಿಭಟನೆ ಹಿನ್ನೆಲೆ ಫ್ರೀಡಂ ಪಾರ್ಕ್ ಸುತ್ತ ಟ್ರಾಫಿಕ್ ಜಾಮ್ ಆಗಿದೆ. ಕಾಂಗ್ರೆಸ್ ಪ್ರತಿಭಟನೆಯಿಂದ ವಾಹನ ಸವಾರರಿಗೆ ಕಿರಿಕಿರಿ ಆಗುತ್ತಿದೆ.
ಫ್ರೀಡಂ ಪಾರ್ಕ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಆಗಮನ
ಧರಣಿಯಲ್ಲಿ ಭಾಗಿಯಾಗಲು ಸಿದ್ದರಾಮಯ್ಯ ಫ್ರೀಡಂ ಪಾರ್ಕ್ಗೆ ಆಗಮಿಸಿದ್ದಾರೆ.
ಸಂಸತ್ನ ಉಭಯ ಸದನಗಳಲ್ಲಿ ಕಾಂಗ್ರೆಸ್ ಸಂಸದರ ಧರಣಿ
ಸೋನಿಯಾ ಗಾಂಧಿ ಇಡಿ ವಿಚಾರಣೆ ಖಂಡಿಸಿ ಸಂಸತ್ನ ಉಭಯ ಸದನಗಳಲ್ಲಿ ಕಾಂಗ್ರೆಸ್ ಸಂಸದರು ಧರಣಿ ಆರಂಭಿಸಿದರು.
ಫ್ರೀಡಂ ಪಾರ್ಕ್ನಲ್ಲಿ ಕಾಂಗ್ರೆಸ್ ನಾಯಕರ ಧರಣಿ ಆರಂಭ
ಸೋನಿಯಾ ಗಾಂಧಿ ಇಡಿ ವಿಚಾರಣೆ ಖಂಡಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಕಾಂಗ್ರೆಸ್ ನಾಯಕರ ಧರಣಿ ಆರಂಭವಾಗಿದೆ.
ಆನಂದ್ ರಾವ್ ಸರ್ಕಲ್ ಮೂಲಕ ಆಗಮಿಸಿದ ಕಾಂಗ್ರೆಸ್ ನಾಯಕರು
ಕಾಂಗ್ರೆಸ್ ನಾಯಕರ ರ್ಯಾಲಿ ಇದೀಗ ಆನಂದ್ ರಾವ್ ಸರ್ಕಲ್ ಮೂಲಕ ಆಗಮಿಸಿದಿದೆ.
Presidential Election Results 2022: ಅಭಿನಂದನಾ ಯಾತ್ರೆ
ರಾಷ್ಟ್ರಪತಿ ಚುನಾವಣೆಯ ಮತ ಎಣಿಕೆ ನಂತರ ನಡ್ಡಾ ನೇತೃತ್ವದಲ್ಲಿ ಬಿಜೆಪಿ ಅಭಿನಂದನಅ ಯಾತ್ರೆ ಯೋಜನೆಗೆ ಚಾಲನೆ ದೊರೆಯಲಿದೆ. ಗುರುವಾರ ಸಂಜೆ ರಾಷ್ಟ್ರಪತಿ ಚುನಾವಣೆಯ ಮತ ಎಣಿಕೆಯ ನಂತರ ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ ನೇತೃತ್ವದಲ್ಲಿ ಸಾವಿರಾರು ನಾಯಕರು ಮತ್ತು ಕಾರ್ಯಕರ್ತರು ಪಾಲ್ಗೊಳ್ಳುವ ಬೃಹತ್ ಅಭಿನಂದನಾ ಯಾತ್ರೆಯನ್ನು ಪಕ್ಷವು ಯೋಜಿಸಿದೆ ಎಂದು ದೆಹಲಿ ಬಿಜೆಪಿ ನಾಯಕರು ತಿಳಿಸಿದ್ದಾರೆ.
Presidential Election Results 2022:ಪ್ರಧಾನಿ ಮೋದಿ ಮುರ್ಮು ಅವರನ್ನು ಭೇಟಿಯಾಗುವ ಸಾಧ್ಯತೆ
ಚುನಾವಣಾ ಫಲಿತಾಂಶ ಪ್ರಕಟವಾದ ನಂತರ ಪ್ರಧಾನಿ ನರೇಂದ್ರ ಮೋದಿಯವರು ಮುರ್ಮು ಅವರನ್ನು ತೀನ್ ಮೂರ್ತಿ ಮಾರ್ಗ್‌ನಲ್ಲಿರುವ ತಾತ್ಕಾಲಿಕ ವಸತಿಗೃಹಕ್ಕೆ ಭೇಟಿ ಮಾಡಿ ಅಭಿನಂದಿಸುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.
Presidential Election Results 2022: ಸಂಸತ್ ಭವನದ ಕೊಠಡಿ 63ರಲ್ಲಿ ಮತ ಎಣಿಕೆ
2022ರ ರಾಷ್ಟ್ರಪತಿ ಚುನಾವಣೆಯ ಮತ ಎಣಿಕೆ ನವದೆಹಲಿಯ ಸಂಸತ್ ಭವನದ ಕೊಠಡಿ 63 ರಲ್ಲಿ ಆರಂಭವಾಗಿದೆ.
Presidential Election Results 2022:ಮತ ಎಣಿಕೆ ಕಾರ್ಯ ಆರಂಭ
ಸಂಸತ್ತಿನಲ್ಲಿ ಮತ ಎಣಿಕೆ ಕಾರ್ಯ ಆರಂಭವಾಗಿದೆ
Presidential Election Results 2022: ಮೊದಲ ಮಹಿಳಾ ರಾಷ್ಟ್ರಪತಿ ಪ್ರತಿಭಾ ಪಾಟೀಲ್
ಇಂದು ಜುಲೈ 21, 15 ವರ್ಷಗಳ ಹಿಂದೆ ಇದೇ ದಿನ ದೇಶಕ್ಕೆ ಮೊದಲ ಮಹಿಳಾ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ದೇಶದ ರಾಷ್ಟ್ರಪತಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. 19 ಡಿಸೆಂಬರ್ 1934 ರಂದು ಜನಿಸಿದ ಪ್ರತಿಭಾ ದೇವಿಸಿಂಗ್ ಪಾಟೀಲ್ ಅವರು 2007-2012 ರ ಅವಧಿಯಲ್ಲಿ ದೇಶದ 12 ನೇ ರಾಷ್ಟ್ರಪತಿಯಾದರು, ಅವರು ದೇಶದ ಈ ಅತ್ಯುನ್ನತ ಸಾಂವಿಧಾನಿಕ ಹುದ್ದೆಯನ್ನು ಅಲಂಕರಿಸಿದ ಮೊದಲ ಮಹಿಳೆ. ಪ್ರತಿಭಾ ಜುಲೈ 21 ರಂದು ರಾಷ್ಟ್ರಪತಿ ಚುನಾವಣೆಯಲ್ಲಿ ಗೆದ್ದರು ಮತ್ತು 25 ಜುಲೈ 2007 ರಂದು ರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಬಿಜೆಪಿಯವರಿಗೆ ಗಾಂಧಿ ಕುಟುಂಬ ಅಂದರೆ ಭಯ- ಶಿವಕುಮಾರ್
ಕೇಂದ್ರ ಸರ್ಕಾರ ನಮ್ಮ ನಾಯಕರಿಗೆ ಕಿರುಕುಳ ನೀಡುತ್ತಿದೆ. ಬಿಜೆಪಿಯವರಿಗೆ ಗಾಂಧಿ ಕುಟುಂಬ ಅಂದರೆ ಭಯ ಎಂದು ಡಿಕೆಶಿ ಹೇಳಿಕೆ ನೀಡಿದ್ದಾರೆ.
Presidential Election Results 2022: ಕೆಲವೇ ಕ್ಷಣಗಳಲ್ಲಿ ಮತ ಎಣಿಕೆ ಕಾರ್ಯ ಶುರು
ಸಂಸತ್ತಿನ ಕೊಠಡಿ ನಂ.63ರಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ. ಮತ ಎಣಿಕೆ ಮುಗಿದ ತಕ್ಷಣವೇ ರಾಷ್ಟ್ರಪತಿ ಯಾರೆಂಬುದನ್ನು ಘೋಷಣೆ ಮಾಡಲಾಗುತ್ತದೆ.
ಗಾಂಧಿ ಪರಿವಾರದ ಮೇಲೆ ಅನಗತ್ಯವಾಗಿ ಕೇಸ್ ದಾಖಲಿಸಲಾಗಿದೆ
ಗಾಂಧಿ ಪರಿವಾರದ ಮೇಲೆ ಅನಗತ್ಯವಾಗಿ ಕೇಸ್ ದಾಖಲಿಸಲಾಗಿದೆ. ರಾಹುಲ್ ಗಾಂಧಿಯವರನ್ನ 50 ಗಂಟೆ ವಿಚಾರಿಸಿದರು. ಏನಾಯ್ತು? ಅದರ ವಿಡಿಯೋ ಬಿಡಲಿ ನೋಡೋಣ. ಸುಳ್ಳು ಕೇಸ್ ದಾಖಲಿಸಿ ತನಿಖೆ ಮಾಡ್ತಾ ಇದ್ದಾರೆ. ಈ ಹಿಂದೆ ಅರುಣ್ ಜೇಟ್ಲಿ ಅವರೇ ಹೇಳಿರಲಿಲ್ವಾ? ಪ್ರಾಥಮಿಕ ತನಿಖೆಯಲ್ಲಾದರೂ ತಪ್ಪಿ ಕಂಡು ಬಂದಿದೆಯಾ? ಹೀಗಾಗಿ ನಾವು ಇದನ್ನ ಖಂಡಿಸಿ ಪ್ರತಿಭಟನೆ ಮಾಡ್ತಾ ಇದಿವಿ ಅಂತ ಡಿಕೆ ಶಿವಕುಮಾರ್ ಹೇಳಿದರು.
ಫ್ರೀಡಂ ಪಾರ್ಕ್ಗೆ ತೆರಳಿದ ಡಿ ಕೆ ಶಿವಕುಮಾರ್
ಸದಾಶಿವ ನಿವಾಸದಿಂದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಫ್ರೀಡಂ ಪಾರ್ಕ್ಗೆ ತೆರಳಿದರು.
Presidential Election Results 2022: ಮುರ್ಮುವಿಗಾಗಿ ಬುಡಕಟ್ಟು ಜನ ಪ್ರಾರ್ಥನೆ
ಮತ ಎಣಿಕೆಗೂ ಮುನ್ನ ಬುಡಕಟ್ಟು ಜನರು ಮುರ್ಮುಗಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ.
More power to you, Droupadi Murmu ji. ?
Tribals praying ahead of result declaration of Presidential elections. pic.twitter.com/fbqCgzuV2S
— Piyush Goyal (@PiyushGoyal) July 20, 2022
Presidential Election Results 2022 : ಅಧ್ಯಕ್ಷೀಯ ಚುನಾವಣೆಯಲ್ಲಿ ಶೇ. 99 ಮತದಾನ: ಮತದಾನದಿಂದ ದೂರ ಉಳಿದವರು ಯಾರು?
ಬಿಜೆಪಿ ಸಂಸದರಾದ ಸನ್ನಿ ಡಿಯೋಲ್ ಮತ್ತು ಸಂಜಯ್ ಧೋತ್ರೆ ಸೇರಿದಂತೆ ಎಂಟು ಸಂಸದರು ಮತ ಚಲಾಯಿಸಿರಲಿಲ್ಲ. ನಟ-ರಾಜಕಾರಣಿ ಡಿಯೋಲ್ ಅವರು ವೈದ್ಯಕೀಯ ಚಿಕಿತ್ಸೆಗಾಗಿ ವಿದೇಶದಲ್ಲಿರುವುದರಿಂದ ಮತದಾನವನ್ನು ತಪ್ಪಿಸಿಕೊಂಡರು, ಆದರೆ ಧೋತ್ರೆ ಅವರು ಐಸಿಯುನಲ್ಲಿದ್ದ ಕಾರಣ ಪಾಸ್ ನೀಡಿದರು. ಸೋಮವಾರ ನಡೆದ ಚುನಾವಣೆಯಲ್ಲಿ ಬಿಜೆಪಿ ಮತ್ತು ಶಿವಸೇನೆಯ ತಲಾ ಇಬ್ಬರು ಸಂಸದರು ಮತ್ತು ಬಿಎಸ್‌ಪಿ, ಕಾಂಗ್ರೆಸ್, ಎಸ್‌ಪಿ ಮತ್ತು ಎಐಎಂಐಎಂನ ತಲಾ ಒಬ್ಬರು ಮತದಾನದಿಂದ ದೂರ ಉಳಿದಿದ್ದರು.
ಟಾರ್ಗೆಟ್ ಮಾಡಿ ಸೋನಿಯಾ ಗಾಂಧಿ ವಿಚಾರಣೆ ನಡೆಸ್ತಿದ್ದಾರೆ
ಟಾರ್ಗೆಟ್ ಮಾಡಿ ಸೋನಿಯಾ ಗಾಂಧಿ ವಿಚಾರಣೆ ನಡೆಸ್ತಿದ್ದಾರೆ ಎಂದು ಬೆಂಗಳೂರಿನಲ್ಲಿ ಕಾಂಗ್ರೆಸ್ ಶಾಸಕ ಜಮೀರ್ ಅಹಮ್ಮದ್ ಹೇಳಿಕೆ ನೀಡಿದ್ದಾರೆ. ಬಿಜೆಪಿಯವರು ನಮ್ಮನ್ನು ಹೆದರಿಸಲು ವಿಚಾರಣೆ ಮಾಡ್ತಿದ್ದಾರೆ. ಮುಚ್ಚೋಗಿದ್ದ ಪ್ರಕರಣವನ್ನು ಮತ್ತೆ ರಿ ಓಪನ್ ಮಾಡಿಸಿದ್ದಾರೆ ಎಂದು ಹೇಳಿದರು.
ಸೋನಿಯಾ ಗಾಂಧಿ ನಿವಾಸಕ್ಕೆ ಪುತ್ರಿ ಪ್ರಿಯಾಂಕಾ ಗಾಂಧಿ ಆಗಮನ
ದೆಹಲಿಯ 10 ಜನಪಥ್ನಲ್ಲಿರುವ ಸೋನಿಯಾ ಗಾಂಧಿ ನಿವಾಸಕ್ಕೆ ಪುತ್ರಿ ಪ್ರಿಯಾಂಕಾ ಗಾಂಧಿ ಆಗಮಿಸಿದ್ದಾರೆ.
ದ್ರೌಪದಿ ಮುರ್ಮು ಗೆದ್ದ ಬಳಿಕ ಬಿಜೆಪಿಯಿಂದ ರೋಡ್ ಶೋ
ದ್ರೌಪದಿ ಮುರ್ಮು ಅವರ ಗೆಲುವಿನ ನಂತರ ದೆಹಲಿ ಬಿಜೆಪಿ ಪಕ್ಷದ ಪ್ರಧಾನ ಕಚೇರಿಯಿಂದ ರಾಜ್‌ಪಥ್‌ವರೆಗೆ ರೋಡ್‌ಶೋ ನಡೆಸಲು ಯೋಜಿಸಲಾಗಿದೆ. ಈ ಸಂದರ್ಭದಲ್ಲಿ ಹಲವು ಹಿರಿಯ ನಾಯಕರು ಉಪಸ್ಥಿತರಿರುವರು ಎಂದು ಮೂಲಗಳು ತಿಳಿಸಿವೆ.
ಶೇಷಾದ್ರಿ ರೋಡ್ ರಸ್ತೆಯುದ್ದಕ್ಕೂ ರಾರಾಜಿಸುತ್ತಿದೆ ಕಾಂಗ್ರೆಸ್ ಬಾವುಟ
ಕಾಂಗ್ರೆಸ್ ಬಾವುಟ ಶೇಷಾದ್ರಿ ರೋಡ್ ರಸ್ತೆಯುದ್ದಕ್ಕೂ ರಾರಾಜಿಸುತ್ತಿದೆ.
ಮಹಾರಾಣಿ ವಿವಿ ಮುಂಭಾಗ ಸಾಲು ಸಾಲಾಗಿ ನಿಂತಿರುವ ಬಸ್ ಗಳು
ಕಾಂಗ್ರೆಸ್ ಪ್ರತಿಭಟನೆ ಹಿನ್ನೆಲೆ ಮಹಾರಾಣಿ ವಿವಿ ಮುಂಭಾಗ ಬಸ್ಗಳು ಸಾಲು ಸಾಲಾಗಿ ನಿಂತಿವೆ. 10 ಬಿಎಂಟಿಸಿ ಬಸ್ ಹಾಗೂ 5 ಕೆಎಸ್ ಆರ್ ಪಿ ತುಕಡಿ ನಿಯೋಜನೆ ಮಾಡಲಾಗಿದೆ. ಮಹಾರಾಣಿ ವಿವಿ ಬಳಿಯೇ ರಾಜಭವನ ಚಲೋ ಹತ್ತಿಕ್ಕಲು ಪೊಲೀಸರು ಎಲ್ಲ ರೀತಿಯ ಸಿದ್ದತೆಗಳನ್ನ ಮಾಡಿಕೊಂಡಿದ್ದಾರೆ.
ದೆಹಲಿಯಿಂದ ಬೆಂಗಳೂರಿಗೆ ಡಿ.ಕೆ ಸುರೇಶ್ ವಾಪಾಸ್
ಅನಾರೋಗ್ಯ ಹಿನ್ನೆಲೆ ಸಂಸದ ಡಿ.ಕೆ ಸುರೇಶ್ ದೆಹಲಿಯಿಂದ ಬೆಂಗಳೂರಿಗೆ ವಾಪಾಸ್ ಆಗಿದ್ದಾರೆ. ಇಂದು ಪ್ರತಿಭಟನೆಯಲ್ಲಿ ಸಂಸದ ಭಾಗಿಯಾಗಬೇಕಿತ್ತು.
ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಧರಣಿ ನಡೆಸಲಿರುವ ಕಾಂಗ್ರೆಸ್
ಕಾಂಗ್ರೆಸ್ ಇಂದು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಧರಣಿ ನಡೆಸಲಿದೆ. ನಂತರ ದೆಹಲಿಯ ಎಐಸಿಸಿ ಕಚೇರಿಯಿಂದ ಪ್ರತಿಭಟನಾ ಮೆರವಣಿಗೆ ನಡೆಸಲು ನಿರ್ಧರಿಸಿದೆ. ಇಡಿ ಕಚೇರಿವರೆಗೆ ಮೆರವಣಿಗೆ ನಡೆಸಲು ಸಂಸದರು ನಿರ್ಧರಿಸಿದ್ದಾರೆ. ಧರಣಿ ಹಿನ್ನೆಲೆ ಎಐಸಿಸಿ ಕಚೇರಿ ಸುತ್ತಾಮುತ್ತ ನಿಷೇಧಾಜ್ಞೆ ಜಾರಿ ಮಾಡಲಾಗಿದ್ದು, ಎಐಸಿಸಿ ಕಚೇರಿ ಬಳಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.
ಸಂಸತ್ನಲ್ಲಿ ಕಾಂಗ್ರೆಸ್ ಸಂಸದರಿಂದ ಧರಣಿಗೆ ನಿರ್ಧಾರ
ಇಂದು ಸಂಸತ್ನಲ್ಲಿ ಕಾಂಗ್ರೆಸ್ ಸಂಸದರು ಧರಣಿ ನಡೆಸಲು ನಿರ್ಧರಿಸಿದ್ದಾರೆ.
ಬೆಳಗ್ಗೆ 11 ಗಂಟೆಗೆ ಇಡಿ ವಿಚಾರಣೆಗೆ ಸೋನಿಯಾ ಹಾಜರು
ಅಕ್ರಮ ಹಣ ವರ್ಗಾವಣೆ ಮಾಡಿದ ಆರೋಪದಡಿ ಸೋನಿಯಾ ಬೆಳಗ್ಗೆ 11 ಗಂಟೆಗೆ ಇಡಿ ವಿಚಾರಣೆಗೆ ಹಾಜರಾಗುತ್ತಾರೆ.
11 ಗಂಟೆಗೆ ಪ್ರತಿಭಟನೆ ಆರಂಭ
ಇಂದು 11 ಗಂಟೆ ಹೊತ್ತಿಗೆ ಫ್ರೀಡಂ ಪಾರ್ಕ್ ಬಳಿ ಪ್ರತಿಭಟನೆ ಶುರುವಾಗಲಿದೆ. ಫ್ರೀಡಂಪಾರ್ಕ್ ಬಳಿ ಕಾಂಗ್ರೆಸ್ ಬಾವುಟಗಳು ರಾರಾಜಿಸುತ್ತಿವೆ. ರಸ್ತೆಯುದ್ದಕ್ಕೂ ಕಾರ್ಯಕರ್ತರು ಕಾಂಗ್ರೆಸ್ ಬಾವುಟಗಳನ್ನ ಕಟ್ಟುತ್ತಿದ್ದಾರೆ.
ಬೆಂಗಳೂರಿನಲ್ಲಿ 9 ಗಂಟೆ ಬಳಿಕ ವಾಹನ ಸಂಚಾರ ಮಾರ್ಗದಲ್ಲಿ ಬದಲಾವಣೆ
ಕಾಂಗ್ರೆಸ್‌ನಿಂದ ಬೃಹತ್ ಪ್ರತಿಭಟನೆ ನಡೆಯುತ್ತಿರುವ ಹಿನ್ನೆಲೆ 9 ಗಂಟೆ ಬಳಿಕ ವಾಹನ ಸಂಚಾರ ಮಾರ್ಗದಲ್ಲಿ ಬದಲಾವಣೆ ಆಗಲಿದೆ. ಮೆಜೆಸ್ಟಿಕ್ನಿಂದ ಬರುವ ವಾಹನಗಳು ಮೌರ್ಯ ಸರ್ಕಲ್, ಹಳೇ JDS ಕಚೇರಿ, ರೇಸ್ಕೋರ್ಸ್ ರಸ್ತೆ, ಸಿಐಡಿ ಜಂಕ್ಷನ್, ಮಹಾರಾಣಿ ಜಂಕ್ಷನ್, K.R.ಸರ್ಕಲ್ ಮೂಲಕ ಸಂಚಾರ ಮಾಡಬೇಕಾಗುತ್ತದೆ.
3 ಸಾವಿರಕ್ಕೂ ಅಧಿಕ ಮಂದಿ ಪ್ರತಿಭಟನೆಯಲ್ಲಿ ಭಾಗಿ ಸಾಧ್ಯತೆ
ಸುಮಾರು 3 ಸಾವಿರಕ್ಕೂ ಅಧಿಕ ಮಂದಿ ಪ್ರತಿಭಟನೆಯಲ್ಲಿ ಭಾಗಿಯಾಗುವ ಸಾಧ್ಯತೆಯಿದೆ. ಪ್ರತಿಭಟನೆ ವೇಳೆ ಟ್ರಾಫಿಕ್ ಆಗುವ ಸಾಧ್ಯತೆಯಿದ್ದು, ಸಂಚಾರಿ ಪೊಲೀಸರು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದಾರೆ.
ಫ್ರೀಡಂ ಪಾರ್ಕ್ ಸುತ್ತ ಪೊಲೀಸ್ ಸರ್ಪಗಾವಲು
ಕಾಂಗ್ರೆಸ್ ಪ್ರತಿಭಟನೆ ಹಿನ್ನೆಲೆ ಫ್ರೀಡಂ ಪಾರ್ಕ್ ಸುತ್ತ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಪಶ್ಚಿಮ ವಿಭಾಗದ ಡಿಸಿಪಿ ನೇತೃತ್ವದಲ್ಲಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ. 5 ಎಸಿಪಿ, 15 ಇನ್ಸ್ಪೆಕ್ಟರ್, 30 ಪಿಎಸ್ಐ, 600 ಮಂದಿ ಪೊಲೀಸ್ ಸಿಬ್ಬಂದಿಗಳ ನಿಯೋಜನೆ ಮಾಡಲಾಗಿದೆ. ಹೆಚ್ಚುವರಿಯಾಗಿ 5 ಕೆಎಸ್ಆರ್ಪಿ ತುಕಡಿಗಳು ಬಂದೊಬಸ್ತ್ನಲ್ಲಿ ನಿಯೋಜನೆ ಮಾಡಲಾಗಿದೆ.
Published On - Jul 21,2022 8:23 AM