ವಿಧಾನ ಪರಿಷತ್ ಚುನಾವಣೆ: ಬಿಜೆಪಿ ಬೆನ್ನಲ್ಲೇ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ
Karnataka Legislative Council Elections 2024: ಲೋಕಸಭಾ ಚುನಾವಣಾ ಬೆನ್ನಲ್ಲೆ ವಿಧಾನಸಭೆಯಿಂದ ವಿಧಾನ ಪರಿಷತ್‌ನ 11 ಸ್ಥಾನಗಳಿಗೆ ಇದೇ ಜೂನ್ 13ರಂದು ನಡೆಯಲಿರುವ ಚುನಾವಣೆಗೆ ಆಡಳಿತರೂಢ ಕಾಂಗ್ರೆಸ್ ಪಕ್ಷದಲ್ಲಿ ಆಕಾಂಕ್ಷಿಗಳ ಲಾಬಿ ತೀವ್ರವಾಗಿದ್ದು, ಅಂತಿಮವಾಗಿ ಕಾಂಗ್ರೆಸ್ ಹೈಕಮಾಂಡ್ ಅಳೆದು ತೂಗಿ ಏಳು ಜನರನ್ನು ಆಯ್ಕೆ ಮಾಡಿ ಪಟ್ಟಿ ಬಿಡುಗಡೆ ಮಾಡಿದೆ. ಇನ್ನು ಇದರ ಜೊತೆ ವಿಧಾನ ಪರಿಷತ್ ಉಪಚುನಾವಣೆಗೆ ದಿನಾಂಕ ಘೋಷಣೆಗೂ ಮುನ್ನವೇ ಅಭ್ಯರ್ಥಿಯನ್ನು ಆಯ್ಕೆ ಮಾಡಿದೆ. ಹಾಗಾದ್ರೆ, ಆ ಮೇಲ್ಮನೆಗೆ ಹೋಗುವ ಆ ಏಳು ಜನರು ಯಾರು-ಯಾರು? ಇಲ್ಲಿದೆ ವಿವರ
ಬೆಂಗಳೂರು, (ಜೂನ್ 02): ಲೋಕಸಭಾ ಚುನಾವಣಾ (Loksabha Elections 2024) ಬೆನ್ನಲ್ಲೆ ವಿಧಾನಸಭೆಯಿಂದ ವಿಧಾನ ಪರಿಷತ್ ಚುನಾವಣೆಗೆ (Karnataka Legislative Council Elections 2024) ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿದೆ. ಸಂಖ್ಯಾಬಲದ ಮೇಲೆ ಒಟ್ಟು 11ರಲ್ಲಿ ಏಳು ಸ್ಥಾನಗಳು ಕಾಂಗ್ರೆಸ್ಗೆ ಸಿಗಲಿದ್ದು, ಆ ಸ್ಥಾನಗಳಿಗೆ ಇದೀಗ ತನ್ನ ಅಭ್ಯರ್ಥಿಯನ್ನು ಘೋಷಣೆ ಮಾಡಿದೆ. ಸುಮಾರು ಆಕಾಂಕ್ಷಿಗಳಲ್ಲಿ ಕೊನೆಗೂ ಹೈಕಮಾಂಡ್ ಅಳೆದು ತೂಗಿ 7 ಜನರಿಗೆ ಮಣೆ ಹಾಕಿದೆ. ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ, ಹಾಲಿ ಸಚಿವ ಎನ್.ಎಸ್.ಬೋಸರಾಜು, ಸಿಎಂ ರಾಜಕೀಯ ಕಾರ್ಯದರ್ಶಿ ಡಾ.ಕೆ.ಗೋವಿಂದರಾಜು, ವಸಂತಕುಮಾರ್, ಜಗದೇವ್ ಗುತ್ತೇದಾರ್, ಐವನ್ ಡಿಸೋಜಾ ಮತ್ತು ಬಿಲ್ಕಿಸ್ ಬಾನೊ ಅವರನ್ನು ಕಾಂಗ್ರೆಸ್ ಅಭ್ಯರ್ಥಿಗಳನ್ನಾಗಿ ಘೋಷಿಸಲಾಗಿದೆ. ಇನ್ನು ಜಗದೀಶ್ ಶೆಟ್ಟರ್ ಅವರ ರಾಜೀನಾಮೆಯಿಂದ ತೆರವಾಗಿರುವ ಸ್ಥಾನಕ್ಕೆ ಬಸನಗೌಡ ಬಾದರ್ಲಿ ಅವರನ್ನ ಆಯ್ಕೆ ಮಾಡಿದೆ.
ಕಾಂಗ್ರೆಸ್ ಜಾತಿವಾರು ಲೆಕ್ಕಾಚಾರ
- ಯತೀಂದ್ರ ಸಿದ್ದರಾಮಯ್ಯ (ಕುರುಬ)
- ಗೋವಿಂದರಾಜು (ಒಕ್ಕಲಿಗ)
- ಐವಾನ್ ಡಿಸೋಜ (ಕ್ರಿಶ್ಚಿಯನ್)
- ಬಿಲ್ಕಿಸ್ ಬಾನು (ಮುಸ್ಲಿಂ)
- ಬೋಸರಾಜು (ಕ್ಷತ್ರಿಯ)
- ಜಗದೇವ ಗುತ್ತೇದಾರ್ (ಈಡಿಗ)
- ವಸಂತ ಕುಮಾರ್ (ಎಸ್‌ಸಿ)
- ಬಸನಗೌಡ ಬಾದರ್ಲಿ(ಲಿಂಗಾಯತ)
ಯಾರು ಯಾವ ಕೋಟದಡಿಯಲ್ಲಿ ಆಯ್ಕೆ
ನಾಮಪತ್ರ ಸಲ್ಲಿಕೆಗೆ ನಾಳೆ (ಜೂನ್ 03) ಕೊನೆ ದಿನವಾಗಿದ್ದು, ಕೊನೆ ಕ್ಷಣದಲ್ಲಿ ಕಾಂಗ್ರೆಸ್ ವಿಧಾನ ಪರಿಷತ್ ಸ್ಥಾನಕ್ಕೆ ತನ್ನ ಅಭ್ಯರ್ಥಿ ಗಳನ್ನು ಘೋಷಿಸಿದೆ. ಹೈಕಮಾಂಡ್ ಕೋಟದ ಅಡಿ ಎನ್ ಎಸ್ ಭೋಸರಾಜು, ಕಾರ್ಯಾಧ್ಯಕ್ಷ ವಸಂತ್ ಕುಮಾರ್, ಜಗದೇವ್ ಗುತ್ತೇದಾರ್ ಗೆ ಟಿಕೇಟ್ ಘೋಷಿಸಲಾಗಿದೆ. ರಾಯಚೂರು ನಾಯಕರ ವಿರೋಧದ ನಡುವೆಯೂ ಎನ್ ಎಸ್ ಭೋಸರಾಜು ಮರು ಆಯ್ಕೆ ಆಗಲಿದ್ದಾರೆ.
ಇನ್ನು ಸಿಎಂ ಸಿದ್ದರಾಮಯ್ಯಗೆ ಕ್ಷೇತ್ರ ಬಿಟ್ಟುಕೊಟ್ಟಿದ್ದ ಯತೀಂದ್ರ ಕೂಡ ಮೇಲ್ಮನೆ ಪ್ರವೇಶ ಮಾಡಲಿದ್ದಾರೆ. ಡಾ.ಕೆ ಗೋವಿಂದರಾಜು ಮೂರನೇ ಬಾರಿಗೆ ಆಯ್ಕೆ ಆಗುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ. ಅಲ್ಪಸಂಖ್ಯಾತ ಕೋಟದಡಿ ಐವಾನ್ ಡಿಸೋಜ ಹಾಗೂ ಅಚ್ಚರಿ ಆಯ್ಕೆ ಎಂಬಂತೆ ಬಲ್ಕಿಸ್ ಬಾನು ಆಯ್ಕೆಯಾಗಿದೆ. ಜಗದೀಶ್ ಶೆಟ್ಟರ್ ರಾಜೀನಾಮೆಯಿಂದ ತೆರವಾಗಿರುವ ಪರಿಷತ್ ಸ್ಥಾನಕ್ಕ ಉಪ ಚುನಾವಣೆ ನಡೆಯಲಿದ್ದು ಬಸನಗೌಡ ಬಾದರ್ಲಿ ಅಭ್ಯರ್ಥಿಯಾಗಿ ಘೋಷಣೆ ಮಾಡಲಾಗಿದೆ. ನಾಳೆ ಎಲ್ಲ ಅಭ್ಯರ್ಥಿ ಗಳೂ ನಾಮಪತ್ರ ಸಲ್ಲಿಕೆ ಮಾಡಲಿದ್ದು, ಜೂನ್ 13ರಂದು ಚುನಾವಣೆ ನಡೆಯಲಿದೆ.
ಇದನ್ನೂ ಓದಿ: ವಿಧಾನ ಪರಿಷತ್ ಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ, ಸಿಟಿ ರವಿಗೆ ಬಂಪರ್ ಗಿಫ್ಟ್
ಬೈ ಎಲೆಕ್ಷನ್ ಘೋಷಣೆಗೂ ಮುನ್ನವೇ ಅಭ್ಯರ್ಥಿ ಆಯ್ಕೆ
ಇನ್ನು ಈ ಏಳು ಪರಿಷತ್ ಸ್ಥಾನಗಳಿಗೆ ಮಾತ್ರವಲ್ಲದೇ ಜಗದೀಶ್ ಶೆಟ್ಟರ್ ರಾಜೀನಾಮೆಯಿಂದ ತೆರವಾಗಿರುವ ವಿಧಾನ ಪರಿಷತ್ ಸ್ಥಾನಕ್ಕೂ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಘೋಷಣೆ ಮಾಡಿದೆ. ಆದ್ರೆ, ಉಪಚುನಾವಣೆಗೆ ಇನ್ನೂ ದಿನಾಂಕ ನಿಗದಿಯಾಗಿಲ್ಲ. ಮುಂಚಿತವಾಗಿಯೇ ಕಾಂಗ್ರೆಸ್ ಹೈಕಮಾಂಡ್ ಮಾಜಿ ರಾಜ್ಯ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಬಸನಗೌಡ ಬಾದರ್ಲಿ ಅವರನ್ನು ಆಯ್ಕೆ ಮಾಡಿದೆ.
ಈ ಹಿಂದೆ ವಿಧಾನಸಭೆ ಟಿಕೆಟ್ ಕೈತಪ್ಪಿದ್ದರಿಂದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಕಾಂಗ್ರೆಸ್ ಸೇರಿದ್ದರು. ಹೀಗಾಗಿ ಅವರಿಗೆ ಹೈಕಮಾಂಡ್ ವಿಧಾನಪರಿಷತ್ ಸದಸ್ಯರನ್ನಾಗಿ ಮಾಡಿತ್ತು. ಬಳಿಕ ಬದಲಾದ ರಾಜಕೀಯ ವಿದ್ಯಾಮಾನಗಳಿಂದ ಜಗದೀಶ್ ಶೆಟ್ಟರ್ ಅವರು ವಿಧಾನಪರಿಷತ್ಗೆ ರಾಜೀನಾಮೆ ನೀಡಿ ವಾಪಸ್ ಬಿಜೆಪಿ ಸೇರಿದ್ದರು. ಇದೀಗ ಈ ಸ್ಥಾನಕ್ಕೆ ಉಪಚುನಾವಣೆ ನಡೆಯಬೇಕಿದ್ದು, ಅದಕ್ಕೂ ಮೊದಲು ಬಸನಗೌಡ ಬಾದರ್ಲಿ ಹೆಸರು ಪ್ರಕಟಿಸಲಾಗಿದೆ.
ರಾಯಚೂರು ಜಿಲ್ಲೆಗೆ ಬಂಪರ್
ಹೌದು ಈಗ ಪ್ರಕಟಗೊಂಡಿರುವ 8 ವಿಧಾನಪರಿಷತ್ ಅಭ್ಯರ್ಥಿಗಳ ಪಟ್ಟಿಯಲ್ಲಿ ಮೂವರ ರಾಯಚೂರು ಜಿಲ್ಲೆಗೆ ಸೇರಿದವರು. ರಾಯಚೂರು ವಿಧಾನಸಭೆ ಟಿಕೆಟ್ ಕೈತಪ್ಪಿದ್ದರಿಂದ ಎನ್ಎಸ್ ಬೋಸರಾಜು ಅವರನ್ನು ಎಂಎಲ್ಸಿ ಮಾಡಲಾಗಿತ್ತು. ಅಲ್ಲದೇ ಸಚಿವರನ್ನಾಗಿ ಸಹ ಮಾಡಲಾಗಿದ್ದು, ಇದೀಗ ಅವರನ್ನು ಮುಂದುರೆಸಲಾಗಿದೆ. ಇನ್ನು ಹಿಂದೆ ಸಿಂಧನೂರು ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಬಸನಗೌಡ ಬಾದರ್ಲಿಯವರನ್ನು ಮನವೊಲಿಸಿ ಇದೀಗ ಪರಿಷತ್ ನೀಡಲಾಗಿದೆ.
ಇನ್ನು ರಾಯಚೂರು ಜಿಲ್ಲಾ ಘಟಕದಲ್ಲಿ ವಿವಿಧ ಹುದ್ದೆ ನಿಭಾಹಿಸಿದ ಅನುಭವ ಹೊಂದಿರುವ ವಸಂತಕುಮಾರ್ ಅವರಿಗೂ ಸಹ ಈ ಬಾರಿ ಎಐಸಿಸಿ ಮಣೆಹಾಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:39 pm, Sun, 2 June 24