ವಿಜಯನಗರ, ಆಗಸ್ಟ್ 12: ತುಂಗಭದ್ರಾ ಜಲಾಶಯದ (Tungabhadra Dam) ಕ್ರಸ್ಟ್ ಗೇಟ್ ಕೊಚ್ಚಿಹೋಗಿದ್ದರಿಂದಾಗಿ ಅಪಾರ ಪ್ರಮಾಣದಲ್ಲಿ ನೀರು ಹರಿದು ಹೋಗುತ್ತಿದೆ. ಹೀಗಾಗಿ, ಕಂಪ್ಲಿ ಸೇತುವೆ ಸೇರಿ ಹಲವು ಸೇತುವೆಗಳು ಮುಳುಗಡೆ ಆಗುವ ಆತಂಕ ಎದುರಾಗಿದೆ. ಕೊಪ್ಪಳ, ವಿಜಯನಗರ, ಬಳ್ಳಾರಿ ಜಿಲ್ಲೆಯ ಜನರಿಗೆ ಸಂಕಷ್ಟ ಶುರುವಾಗಿದೆ. ಇ ಮಧ್ಯೆ ಹೊಸ ಕ್ರಸ್ಟ್ ಗೇಟ್ (new Gate) ನಿರ್ಮಾಣಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ. ಜಿಲ್ಲೆಯ ಹೊಸಪೇಟೆಯಲ್ಲಿ ಹೊಸ ಗೇಟ್ ಸಿದ್ಧಗೊಳ್ಳುತ್ತಿದೆ. ಆದಷ್ಟು ಬೇಗನೆ ಜಲಾಶಯಕ್ಕೆ ಗೇಟ್ ಅಳವಡಿಸಲು ಸರ್ಕಾರ ಪ್ರಯತ್ನಿಸುತ್ತಿದೆ.
ಜಿಲ್ಲೆಯ ಹೊಸಪೇಟೆಯ ಇಂಡಸ್ಟ್ರಿಯಲ್ ಏರಿಯಾದ ನಾರಾಯಣ ಇಂಜಿನಿಯರಿಂಗ್ ವರ್ಕ್ಸ್ನಲ್ಲಿ ಗೇಟ್ ನಿರ್ಮಾಣ ಕಾರ್ಯ ನಡೆಯುತ್ತಿದೆ. ಕೊಪ್ಪಳ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ನೇತೃತ್ವದಲ್ಲಿ ಗೇಟ್ ತಯಾರಾಗುತ್ತಿದ್ದು, 10ಕ್ಕೂ ಹೆಚ್ಚು ತಾಂತ್ರಿಕ ಸಿಬ್ಬಂದಿಯಿಂದ ಮೂರ್ನಾಲ್ಕು ದಿನಗಳಲ್ಲಿ ಹೊಸ ಗೇಟ್‌ಗಳ ನಿರ್ಮಾಣಕ್ಕೆ ಸಿದ್ಧತೆ ಮಾಡಲಾಗುತ್ತಿದೆ. 19. 230 ಮೀಟರ್ ಉದ್ದ, 1.250 ಮೀಟರ್ ಅಗಲ ಮತ್ತು ದಪ್ಪ ಗಾತ್ರದ ಕಬ್ಬಿಣದ ಗೇಟ್ ನಿರ್ಮಾಣವಾಗಿದ್ದು, 10 ದಿನದೊಳಗೆ ಗೇಟ್ ಕುರಿಸಲು ಪ್ಲ್ಯಾನ್ ಮಾಡಲಾಗುತ್ತಿದೆ.
ಇದನ್ನೂ ಓದಿ: ತುಂಗಭದ್ರಾ ಜಲಾಶಯ ಖಾಲಿಯಾದ್ರೆ ನಾಲ್ಕು ಜಿಲ್ಲೆ ಜನರಿಗೆ ಸಂಕಷ್ಟ, ಆಂಧ್ರಕ್ಕೂ ಇದೇ ಪಾಲು
ತುಂಗಭದ್ರಾ ಜಲಾಶಯ ಬಳಿ ಸಚಿವ ಶಿವರಾಜ ತಂಗಡಗಿ ಪ್ರತಿಕ್ರಿಯಿಸಿದ್ದು, ಕೊಪ್ಪಳ ತಾಲೂಕಿನ ಮುನಿರಾಬಾದ್ ಬಳಿ ಇರುವ ತುಂಗಭದ್ರಾ ಜಲಾಶಯ ಕೇಂದ್ರದ ಅಧೀನದಲ್ಲಿ ಬೋರ್ಡ್ ಕಂಟ್ರೋಲ್ ಇರೋದು. ಎರಡು ರೀತಿಯಲ್ಲಿ ದುರಸ್ತಿ ಕಾರ್ಯದ ಬಗ್ಗೆ ಚಿಂತನೆ ನಡೆಸಿದ್ದೇವೆ. ಒಂದು ಡ್ಯಾಂ ನೀರನ್ನು ಖಾಲಿ ಮಾಡಿ ಹೊಸ ಗೇಟ್ ಅಳವಡಿಸೋದು, ಇನ್ನೊಂದು ನೀರಿನಲ್ಲೇ ಹೊಸ ಗೇಟ್ ಅಳವಡಿಸುವುದಕ್ಕೆ ಚಿಂತನೆ ಮಾಡಲಾಗುತ್ತಿದೆ ಎಂದರು.
ಇದನ್ನೂ ಓದಿ: ತುಂಗಭದ್ರಾ ಡ್ಯಾಂನಲ್ಲಿ 50 ಟಿಎಂಸಿ ನೀರು ಉಳಿಸಿಕೊಳ್ಳಲು ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಸೂಚನೆ
ನೀರು ಇರುವಾಗಲೇ ದುರಸ್ತಿಗಾಗಿ ಗೇಟ್ ಕೂಡ ರೆಡಿಯಾಗುತ್ತಿದೆ. ಹೊಸಪೇಟೆಯಲ್ಲಿ ಗೇಟ್ ರೆಡಿ ಮಾಡುವ ಕೆಲಸ ಆಗ್ತಿದೆ. ಅನೇಕ ತಜ್ಞರು ಡ್ಯಾಂಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಮುಖ್ಯಮಂತ್ರಿ ಕೂಡ ಪ್ರತಿನಿತ್ಯ ಮೂರು ಸಲ ಮಾಹಿತಿ ಪಡೆಯುತ್ತಿದ್ದಾರೆ. ಇನ್ನು ಬಿಜೆಪಿ ನಾಯಕರು ಡ್ಯಾಂಗೆ ಭೇಟಿ ನೀಡಿ ಸಲಹೆ ನೀಡಲಿ. ಬಿಜೆಪಿ ನಾಯಕರ ಸಲಹೆಯನ್ನೂ ಸಹ ಸ್ವೀಕಾರ ಮಾಡುತ್ತೇವೆ. ಆದರೆ ಡ್ಯಾಂಗೆ ಬಂದು ರಾಜಕೀಯ ಮಾಡಬಾರದು. ಅವರು ರಾಜಕೀಯ ಮಾತನಾಡಿದ್ರೆ ನಾವು ಮಾತನಾಡುತ್ತೇವೆ. ಡ್ಯಾಂ ದುರಸ್ತಿ ಸೇರಿದಂತೆ ಎಲ್ಲಾ ಕೆಲಸ ಅವರೇ ಮಾಡಬೇಕು. ನಾವು ಪ್ರತಿವರ್ಷ ಬೋರ್ಡ್ನವರು ಕೇಳಿದಷ್ಟು ಹಣ ಕೊಡುತ್ತೇವೆ ಎಂದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.