ಬಾಗಲಕೋಟೆ, ಆಗಸ್ಟ್ 23: ನಗರದಲ್ಲಿ ಕಳೆದ ಒಂದು ವರ್ಷದ ಹಿಂದೆ ಶಿವಾಜಿ ಪ್ರತಿಮೆ (Shivaji statue) ವಿವಾದ ಶುರುವಾಗಿತ್ತು. ರಾತ್ರೋರಾತ್ರಿ ಶಿವಾಜಿ ಪ್ರತಿಮೆ ಕೂರಿಸಿದ್ದನ್ನು ಪೊಲೀಸರು ಅನುಮತಿ ಇಲ್ಲ ಅಂತ ತೆರವು ಮಾಡಿದ್ದರು. ಈ ವೇಳೆ ಗದ್ದಲ, ಪ್ರತಿಭಟನೆ ನಡೆದಿದ್ದರು. ಈಗ ಮತ್ತೆ ಪ್ರತಿಮೆ ಕೂರಿಸೋದಕ್ಕೆ ಮುಂದಾಗಿದ್ದು ಮತ್ತೆ ವಿವಾದದ ಹೊಗೆಯಾಡುತ್ತಿದೆ.
ಛತ್ರಪತಿ ಶಿವಾಜಿ ದೇಶ ಕಂಡ ಮಹಾನ್ ಶೂರ. ಇಂತಹ ಮಹಾನ್ ವೀರನ ಪ್ರತಿಮೆ ಕೂರಿಸುವ ಕಾಲ ಬಾಗಲಕೋಟೆಯಲ್ಲಿ ಇಂದಿಗೂ ಕೂಡಿ ಬರುತ್ತಿಲ್ಲ. ಕಳೆದ ವರ್ಷ ಇದೆ ಶಿವಾಜಿ ಪ್ರತಿಮೆಯನ್ನು ಕಾಂಚನ ಪಾರ್ಕ್ ಬಳಿಯ ಜಾಗದಲ್ಲಿ ರಾತ್ರೋರಾತ್ರಿ ಅಪರಿಚಿತರು ಕೂರಿಸಿದ್ದರು. ಇದನ್ನು ತೆರವುಗೊಳಿಸಲು ಪೊಲೀಸರು ಮುಂದಾದಾಗ ಹಿಂದು ಹಾಗೂ ಬಿಜೆಪಿ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದರು. ಆದರೆ ಕೊನೆಗೂ ಪೊಲೀಸರು ಪ್ರತಿಮೆಯನ್ನು ತೆರವುಗೊಳಿಸಿದ್ದರು.
ಇದನ್ನೂ ಓದಿ: ಪ್ರಾಸಿಕ್ಯೂಷನ್ ಭೀತಿ: ತಮ್ಮ ಪ್ರಕರಣದ ಬಗ್ಗೆ ಸ್ಪಷ್ಟನೆ ನೀಡಿದ ಮುರುಗೇಶ್ ನಿರಾಣಿ
ಇಷ್ಟು ದಿನ ಸುಮ್ಮನಿದ್ದ, ಶಿವಾಜಿ ಪ್ರತಿಮೆ ಪ್ರತಿಷ್ಠಾಪನಾ ಸಮಿತಿ ಸದಸ್ಯರು, ಈಗ ಅದೇ ಪ್ರತಿಮೆಯನ್ನು ಅದೇ ಜಾಗದಲ್ಲಿ ಕೂರಿಸಲು ಮುಂದಾಗಿದ್ದಾರೆ. ಆದರೆ ಅನುಮತಿ ಇಲ್ಲ ನಾವು ಕೂರಿಸಲು ಅನುಮತಿ ಕೊಡೋದಿಲ್ಲ ಎಂದು ಪೊಲೀಸರು ಹೇಳುತ್ತಿದ್ದಾರೆ.
ಕಳೆದ ವರ್ಷ ಪ್ರತಿಮೆ ತೆರವುಗೊಳಿಸುವಾಗ ಬಾರಿ ಹೈಡ್ರಾಮಾ ನಡೆದಿತ್ತು. ಹಿಂದು ಕಾರ್ಯಕರ್ತರು, ಶಿವಾಜಿ ಪ್ರತಿಮೆ ಪ್ರತಿಷ್ಠಾಪನಾ ಸದಸ್ಯರು ಬಾರಿ ವಿರೋಧ ಮಾಡಿದ್ದರು. ಈ ವೇಳೆ ಪೊಲೀಸರು ಖಾಕಿ ಸರ್ಪಗಾವಲಿನ ಮೂಲಕ ಪ್ರತಿಮೆ ತೆರವುಗೊಳಿಸಿದ್ದರು. ಅಂದು ಇದರ ಮುಂದಾಳತ್ವವನ್ನು ನಾರಾಯಣಸಾ ಬಾಂಡಗೆ ವಹಿಸಿಕೊಂಡಿದ್ದರು.
ಇದನ್ನೂ ಓದಿ: ಸ್ವಾತಂತ್ರ್ಯ ಹೋರಾಟದಲ್ಲಿ ಎಂದಿಗೂ ಅಮರ ಈ ಹಲಗಲಿ ಬೇಡರು; ಇವರ ಬಗ್ಗೆ ನಿಮಗೆಷ್ಟು ಗೊತ್ತು?
ಇದೀಗ ಮತ್ತೆ ಅದೇ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಆಗಸ್ಟ್ 25 ರಂದು ಅದೇ ಜಾಗದಲ್ಲಿ ಶಿವಾಜಿ ಪ್ರತಿಮೆ ಪ್ರತಿಷ್ಠಾಪನೆ ಮಾಡಿಯೆ ತೀರುತ್ತೇವೆ. ಬಾಗಲಕೋಟೆ ಉಸ್ತುವಾರಿ ಸಚಿವ ಆರ್ ಬಿ ತಿಮ್ಮಾಪುರ, ಬಾಗಲಕೋಟೆ ಶಾಸಕ ಎಚ್ ವೈ ಮೇಟಿ ಅವರಿಂದಲೇ ಪ್ರತಿಮೆ ಅನಾವರಣಗೊಳಿಸುತ್ತೇವೆ. ಮುಂದೆ ಸಿಎಂ ಅವರನ್ನು ಕರೆತಂದು ದೊಡ್ಡದಾಗಿ ಲೋಕಾರ್ಪಣೆ ಮಾಡುತ್ತೇವೆ ಅಂತಿದ್ದಾರೆ.
ಪೊಲೀಸರು ಅನುಮತಿ ಇರದೆ ಪ್ರತಿಮೆ ಕೂರಿಸಲು ಬಿಡೋದಿಲ್ಲ ಅಂತ ಹೇಳ್ತಿದ್ದಾರೆ. ಸದಸ್ಯರು ಶಿವಾಜಿ ಪ್ರತಿಮೆ ಪ್ರತಿಷ್ಠಾಪನೆ ಮಾಡಿಯೇ ತೀರುತ್ತೇವೆ ಅಂತಿದ್ದಾರೆ. ಇಲ್ಲಿ ಯಾರ ಕೈ ಮೇಲಾಗುತ್ತೊ ನೋಡಬೇಕು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:33 pm, Fri, 23 August 24