ಪ್ರಾಸಿಕ್ಯೂಷನ್​ ಭೀತಿ: ತಮ್ಮ ಪ್ರಕರಣದ ಬಗ್ಗೆ ಸ್ಪಷ್ಟನೆ ನೀಡಿದ ಮುರುಗೇಶ್ ನಿರಾಣಿ

ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ (Siddaramaiah) ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್​ಗೆ ಅನುಮತಿ ಕೊಟ್ಟ ಬೆನ್ನಲ್ಲೇ ಕಾಂಗ್ರೆಸ್ ಪಡೆ ಕೆರಳಿ ಕೆಂಡವಾಗುವಂತೆ ಮಾಡಿತ್ತು. ಬಳಿಕ ಬಿಜೆಪಿ ಮಾಜಿ ಸಚಿವರಾದ ಮುರುಗೇಶ್ ನಿರಾಣಿ, ಹೆಚ್​ಡಿ ಕುಮಾರಸ್ವಾಮಿ ವಿರುದ್ಧದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕಾಂಗ್ರೆಸ್​ ವಾಗ್ದಾಳಿ ನಡೆಸಿತ್ತು. ಇದಕ್ಕೆ ಸಂಬಂಧಿಸಿ ಮುರುಗೇಶ್ ‌ನಿರಾಣಿ ಸ್ಪಷ್ಟನೆ ನೀಡಿದ್ದಾರೆ.

ಪ್ರಾಸಿಕ್ಯೂಷನ್​ ಭೀತಿ: ತಮ್ಮ ಪ್ರಕರಣದ ಬಗ್ಗೆ ಸ್ಪಷ್ಟನೆ ನೀಡಿದ ಮುರುಗೇಶ್ ನಿರಾಣಿ
ಮುರುಗೇಶ್ ನಿರಾಣಿ
Follow us
ರವಿ ಹೆಚ್ ಮೂಕಿ, ಕಲಘಟಗಿ
| Updated By: ಕಿರಣ್ ಹನುಮಂತ್​ ಮಾದಾರ್

Updated on:Aug 22, 2024 | 5:52 PM

ಬಾಗಲಕೋಟೆ, ಆ.22: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ದ ರಾಜ್ಯಪಾಲರು ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಿದ ಬೆನ್ನಲ್ಲೇ ಕಾಂಗ್ರೆಸ್ ಕೆರಳಿ ಕೆಂಡವಾಗಿತ್ತು. ಬಳಿಕ ಬಿಜೆಪಿ ಮಾಜಿ ಸಚಿವರಾದ ಮುರುಗೇಶ್ ನಿರಾಣಿ (Murugesh Nirani) ವಿರುದ್ಧದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕಾಂಗ್ರೆಸ್ ಕೂಡ​ ಕಿಡಿಕಾರಿತ್ತು. ಇದಕ್ಕೆ ಸಂಬಂಧಿಸಿ ಇದೀಗ ಬಿಜೆಪಿ ರಾಜ್ಯ ಉಪಾಧ್ಯಕ್ಷ ಮುರುಗೇಶ್ ‌ನಿರಾಣಿ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ತಾನು ಯಾಕೆ ನಿರ್ದೋಷಿ ಎಂದು ಸ್ಪಷ್ಟನೆ ನೀಡಿದ್ದಾರೆ.

1. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಒಂದೊಂದೇ ಹಗರಣಗಳು ಬಯಲಾಗುತ್ತಿವೆ. ಅದರಲ್ಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದವರೇ ಶಾಮೀಲಾಗಿರುವ ಮೂಡಾ ಹಗರಣ ಬಯಲಾದ ಮೇಲೆ ಕಾಂಗ್ರೆಸ್ಸಿಗರು ದಿಕ್ಕೆಟ್ಟಂತವರಾಗಿದ್ದಾರೆ.

2. ಅತ್ತ ತಮ್ಮ ನಾಯಕರನ್ನು ಸಮರ್ಥಿಸಿಕೊಳ್ಳಲು ಆಗದೆ ಅವರನ್ನು ಪಾರು ಮಾಡುವ ಉದ್ದೇಶದಿಂದ ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಹಗರಣಗಳಾಗಿವೆ. ಅವುಗಳನ್ನೂ ಬಯಲಿಗೆಳೆಯುತ್ತೇವೆ ಎಂದು ಬಡಬಡಿಸುತ್ತಿದ್ದಾರೆ. ಅಧಿಕಾರಕ್ಕೆ ಬರುವಾಗಲೇ ಈ ಪ್ರಯತ್ನ ಮಾಡಿದರಾದರೂ ಅವರಿಗೆ ಯಾವುದೇ ದಾಖಲೆಗಳು ಸಿಕ್ಕಿರಲಿಲ್ಲ.

3. ಇದೀಗ ಮೂಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೈವಾಡವಿದೆ ಎಂದು ಸ್ಪಷ್ಟವಾಗುತ್ತಿದ್ದಂತೆ ಧೃತಿಗೆಟ್ಟಿರುವ ಕಾಂಗ್ರೆಸ್ಸಿಗರು ತಮ್ಮ ಸುಳ್ಳುಗಳ ಸರಮಾಲೆಯನ್ನು ಮತ್ತೆ ಮುಂದುವರಿಸುತ್ತಿದ್ದಾರೆ. ಈ ಹಿಂದೆ ರಾಜ್ಯಪಾಲರಿಗೆ ನನ್ನ ವಿರುದ್ಧ ಸಲ್ಲಿಕೆಯಾಗಿರುವ ಸುಳ್ಳು ದೂರಿನ ವಿಚಾರವಾಗಿ ಅನಗತ್ಯವಾಗಿ ನನ್ನ ಹೆಸರು ಪ್ರಸ್ತಾಪಿಸುತ್ತಿದ್ದಾರೆ.

ಇದನ್ನೂ ಓದಿ:ಮುಡಾ ಹಗರಣ ಸಿಬಿಐ ತನಿಖೆಗೆ ನೀಡಬೇಕೆನ್ನುವ ನೈತಿಕತೆ ಬಿಜೆಪಿ ನಾಯಕರಿಗಿದೆಯಾ? ಸಿದ್ದರಾಮಯ್ಯ

4. ಹಿಂದಿನ ಬಿಜೆಪಿ ಸರ್ಕಾರದಲ್ಲಿ ನಾನು ಕೈಗಾರಿಕಾ ಸಚಿವನಾಗಿದ್ದಾಗ ಹಗರಣ ನಡೆದಿದೆ ಎಂದು ನನ್ನ ವಿರುದ್ಧ ಮಾಡಿರುವ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ ಎಂಬುದು ಈಗಾಗಲೇ ಸಾಬೀತಾಗಿದೆ. ಅದರೂ ಕಾಂಗ್ರೆಸ್ ನಾಯಕರು ನನ್ನ ಹೆಸರು ಪ್ರಸ್ತಾಪಿಸಿ ತೇಜೋವಧೆಗೆ ಪ್ರಯತ್ನಿಸುತ್ತಿದ್ದಾರೆ. ಇನ್ನೊಬ್ಬರ ಮೇಲೆ ಕೆಸರೆರಚಿ ತಮ್ಮ ನಾಯಕನನ್ನು ಕಾಪಾಡಲು ಹೊರಟಿದ್ದಾರೆ. ಅವರು ಈ ರೀತಿಯ ಸುಳ್ಳು ಆರೋಪಗಳನ್ನು ಮುಂದುವರಿಸಿದರೆ ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ. ಅಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ.

5. 2022ರಲ್ಲಿ ಬಿಜೆಪಿ ಸರ್ಕಾರದಲ್ಲಿ ನಾನು ಕೈಗಾರಿಕಾ ಸಚಿವನಾಗಿದ್ದ ಸಂದರ್ಭದಲ್ಲಿ ಟಿ.ಜೆ. ಅಬ್ರಾಹಂ ಎಂಬುವರು ಸುಳ್ಳು ಆರೋಪ ಮಾಡಿ ನನ್ನ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ರಾಜ್ಯಪಾಲರ ಬಳಿ ಮನವಿ ಸಲ್ಲಿಸಿದ್ದರು. ಆದರೆ, ಆ ಆರೋಪದಲ್ಲಿ ಹುರುಳಿಲ್ಲದ ಕಾರಣ ರಾಜ್ಯಪಾಲರು ದೂರನ್ನು ಪರಸ್ಕರಿಸಿರಲಿಲ್ಲ. ಈಗ ರಾಜಕೀಯವಾಗಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಕಾಂಗ್ರೆಸ್ಸಿಗರು ಅನಗತ್ಯವಾಗಿ ಆ ಪ್ರಕರಣ ಪ್ರಸ್ತಾಪಿಸಿ ನನ್ನ ಹೆಸರು ಎಳೆದು ತರುತ್ತಿದ್ದಾರೆ. ಇದು ಸರಿಯಲ್ಲ.

6. 2022ರ ನವೆಂಬರ್ 2ರಿಂದ 4ರವರೆಗೆ ನಡೆದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ 4.5 ಕೋಟಿ ರೂಪಾಯಿ ನಿರ್ಮಾಣ ವೆಚ್ಚದ 5 ನಿಮಿಷದ ಕಿರುಚಿತ್ರ ಪ್ರದರ್ಶಿಸಲು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಅಧಿಕಾರಿಗಳು ಸಜ್ಜಾಗಿದ್ದರು. ನನ್ನ ಗಮನಕ್ಕೆ ತರದೇ ಇಲಾಖೆ ಮಟ್ಟದಲ್ಲಿ ತೆಗೆದುಕೊಂಡಿದ್ದ ಈ ತೀರ್ಮಾನಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಚಿತ್ರ ಪ್ರದರ್ಶನಕ್ಕೆ ತಡೆಯೊಡ್ಡಿದ್ದೆ. ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯಲ್ಲಿ ಅಪರ ಮುಖ್ಯ ಕಾರ್ಯದರ್ಶಿಯಾಗಿದ್ದ ಇ.ವಿ.ರಮಣ ರೆಡ್ಡಿ ಅವರಿಗೆ 21-10-2022 ರಂದು ಪತ್ರ ಬರೆದು, ಕಿರುಚಿತ್ರ ನಿರ್ಮಾಣಕ್ಕೆ ನಿಗದಿಪಡಿಸಿರುವ ಮೊತ್ತ ಹೆಚ್ಚಿದ್ದು, ಇದು ಅನಗತ್ಯ ಮತ್ತು ಸೂಕ್ತವಲ್ಲ ಹಾಗಾಗಿ, ಇಲಾಖೆಯು ಚಿತ್ರ ನಿರ್ಮಾಪಕರ ಜತೆಗೆ ಒಪ್ಪಂದ ಮಾಡಿಕೊಂಡಿದ್ದಲ್ಲಿ ಅದನ್ನು ರದ್ದು ಪಡಿಸಬೇಕೆಂದು ನಿರ್ದೇಶಿಸಿದ್ದೆ.

7. ಇದೇ ವಿಚಾರವಾಗಿ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ 26-02-2024 ರಂದು ರಾಜ್ಯಪಾಲರ ಬಳಿ ಮನವಿ ಸಲ್ಲಿಸಲಾಗಿತ್ತು. ಬೃಹತ್ ಮೊತ್ತಕ್ಕೆ ಕಾರ್ಯಾದೇಶ ನೀಡಿ, ಅಕ್ರಮ ಲಾಭ ಮಾಡಿಕೊಂಡಿದ್ದಾರೆ ಎಂದು ಟಿ.ಜೆ.ಅಬ್ರಾಹಂ ಲೋಕಾಯುಕ್ತದಲ್ಲಿ ದೂರು ದಾಖಲಿಸಿದ್ದರು. ಆದರೆ, ನನ್ನ ಗಮನಕ್ಕೆ ಬರುತ್ತಿದ್ದಂತೆ, ಕಾರ್ಯದೇಶ ರದ್ದು ಪಡಿಸಿ, ಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡದಿದ್ದಾಗ, ಅಕ್ರಮದ ಪ್ರಶ್ನೆ ಎಲ್ಲಿ ಬಂತು?

ಇದನ್ನೂ ಓದಿ:ಮುಡಾ ಹಗರಣದಲ್ಲಿ ಪ್ರಾಸಿಕ್ಯೂಷನ್: ಹೈಕೋರ್ಟ್ ಮೆಟ್ಟಿಲೇರಲು ಸಿದ್ದರಾಮಯ್ಯ ಪರ ವಕೀಲರ ಸಿದ್ಧತೆ

8. ಚಿತ್ರ ನಿರ್ಮಿಸಲು ಕೈಗಾರಿಕೆ ಇಲಾಖೆ ಅಧಿಕಾರಿಗಳು ಬಿಬಿಪಿ ಸ್ಟುಡಿಯೋ ವರ್ಚುಯುಲ್‌ ಭಾರತ್‌ ಪ್ರೈ. ಲಿ. ಸಂಸ್ಥೆಗೆ ಮುಂಗಡವಾಗಿ 1.5 ಕೋಟಿ ರೂ. ಬಿಡುಗಡೆ ಮಾಡಿದ್ದರು.ಅದರಂತೆ ಸಂಸ್ಥೆ ಚಿತ್ರ ಪೂರ್ಣಗೊಳಿಸಿತ್ತು. ಆದರೆ, ನಂತರದ ಬೆಳವಣಿಗೆಯಲ್ಲಿ ಕಾರ್ಯದೇಶ ರದ್ದಾದರೂ, ಕೆಲಸ ಪೂರ್ಣಗೊಳಿಸಿದ್ದರಿಂದ ರಾಜ್ಯ ಸರ್ಕಾರ ಬಾಕಿ ಹಣ ನೀಡಬೇಕು. ಈ ಸಂಬಂಧ ನಿರ್ದೇಶನ ನೀಡುವಂತೆ ಕೋರಿ ಸಂಸ್ಥೆ ಹೈ ಕೋರ್ಟ್‌ ಮೆಟ್ಟಿಲೇರಿತ್ತು. ಆದರೆ, 2.5 ಕೋಟಿ ರೂ. ಪಾವತಿಸಲು ರಾಜ್ಯ ಸರ್ಕಾರಕ್ಕೆ ಸೂಚಿಸಿದ್ದ ಹೈಕೋರ್ಟ್‌ ಏಕ ಸದಸ್ಯ ಪೀಠದ ಆದೇಶ ರದ್ದು ಮಾಡಿ ವಿಭಾಗೀಯ ಪೀಠ ಆದೇಶ ನೀಡಿತ್ತು. ಎಂದು ಪ್ರಕಟಣೆ ಮೂಲಕ ಮುರುಗೇಶ್ ನಿರಾಣಿ ಸ್ಪಷ್ಟನೆ ನೀಡಿದ್ದಾರೆ.

ಏನಿದು ಪ್ರಕರಣ?

ಕರ್ನಾಟಕ ಸರ್ಕಾರವು ರಾಜ್ಯದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಮತ್ತು ರಾಜ್ಯದಲ್ಲಿ ದೊಡ್ಡ ಮಟ್ಟದ ಉದ್ಯೋಗ ಸೃಷ್ಟಿಸುವ ಸಲುವಾಗಿ ಹೂಡಿಕೆದಾರರನ್ನು ಆಕರ್ಷಿಸಲು ಮತ್ತು ಗ್ಲೋಬಲ್ ಇನ್‌ವೆಸ್ಟರ್ ಮೀಟ್‌ಗೆ ಬರುವ ವಿದೇಶಿ ಹೂಡಿಕೆದಾರರು ರಾಜ್ಯದಲ್ಲಿ ಉತ್ಪಾದನಾ ಕ್ಷೇತ್ರ, ಮೂಲಭೂತ ಸೌಕರ್ಯ, ಐ.ಟಿ. ವಿದ್ಯುತ್‌ಚ್ಛಕ್ತಿ, ಶಿಕ್ಷಣ, ಪ್ರವಾಸೋದ್ಯಮ ಕ್ಷೇತ್ರಗಳಲ್ಲಿ ಹಣ ಹೂಡಿಕೆ ಮಾಡಬಹುದೆಂಬ ನಿರೀಕ್ಷೆಯನ್ನಿಟ್ಟುಕೊಂಡು ನಿರಾಣಿ ಅವರ ಅಧ್ಯಕ್ಷತೆಯಲ್ಲಿ 2022 ನವೆಂಬರ್ 2, 3, 4ನೇ ದಿನಾಂಕಗಳಂದು ಬೆಂಗಳೂರಿನಲ್ಲಿ “ಇನ್‌ವೆಸ್ಟ್ ಕರ್ನಾಟಕ ಇವೆಂಟ್ ‌ನಡೆದಿತ್ತು.

ರಾಜ್ಯದಲ್ಲಿರುವ ಯಾವುದೇ ಕಂಪನಿಗೆ ವಿಡಿಯೋ ಚಿತ್ರೀಕರಣವನ್ನು ಒದಗಿಸುವ ಅವಕಾಶವನ್ನು ನೀಡದೇ ಮುಂಬೈ ಮೂಲದ ಚೆನೈನಲ್ಲಿ ಕಾರ್ಯನಿರ್ವಹಿಸುತ್ತಿದೆ ಎನ್ನಲಾದ ಸಂಸ್ಥೆಗೆ ಲಾಭ ಮಾಡಿಕೊಡುವ ಉದ್ದೇಶದಿಂದ ಟೆಂಡ‌ರ್ ಅನ್ನು ನೀಡಲಾಗಿರುತ್ತದೆ. ಇನ್‌ವೆಸ್ಟ್ ಕರ್ನಾಟಕ 2022 ಎಂಬ ಹೆಸರಿನ ಗ್ಲೋಬಲ್ ಇನ್‌ವೆಸ್ಟರ್ ಮೀಟ್‌ನಲ್ಲಿ ಪ್ರಚುರಪಡಿಸಲು ಉದ್ದೇಶಿಸಿದ್ದ 2 ನಿಮಿಷಗಳ ಕಾಲಾವಕಾಶದ 3ಡಿ ವಿಡಿಯೋವನ್ನು ಚಿತ್ರೀಕರಿಸಲು ಗುತ್ತಿಗೆ ನೀಡುವ ಸಮಯದಲ್ಲಿ ಸಚಿವರಾಗಿದ್ದ ಮುರಗೇಶ್ ನಿರಾಣಿ ಶಾಮೀಲಾಗಿ ಅರ್ಹತೆ ಇಲ್ಲದ 5 ಸಂಸ್ಥೆಗೆ ಗುತ್ತಿಗೆ ನೀಡಿ, ಕೇವಲ 2 ಲಕ್ಷರೂಗಳಲ್ಲಿ ಚಿತ್ರೀಕರಿಸಬಹುದಾದ ವಿಡಿಯೋಗೆ, ರೂ.4,08,87,000/- ಗಳ ಬೃಹತ್ ಮೊತ್ತಕ್ಕೆ ಕೆಲಸದ ಆದೇಶವನ್ನು ನೀಡಿ, ಹಣವನ್ನು ಸರ್ಕಾರದಿಂದ ಬಿಡುಗಡೆ ಮಾಡಿ ಅಕ್ರಮವೆಸಗಿ, ಅಕ್ರಮ ಲಾಭ ಮಾಡಿಕೊಂಡಿದ್ದಾರೆ ಎಂದು ಟಿ.ಜೆ. ಅಬ್ರಾಹಂ ಪ್ರಾಸಿಕ್ಯೂಷನ್ ಗೆ ಅನುಮತಿ ಕೋರಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:48 pm, Thu, 22 August 24