ಬೆಂಗಳೂರು: ಕೊರೊನಾ ಸೋಂಕು ಮೂರನೆಯ ಅಲೆ ಆತಂಕದ ನಡುವೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ನೇತೃತ್ವದಲ್ಲಿ ಉನ್ನತಮಟ್ಟದ ಸಭೆಯೊದು ವಿಧಾನಸೌಧದಲ್ಲಿ ನಡೆದಿದೆ. ಕೊರೊನಾ ರೂಪಾಂತರಿ ‘ಒಮಿಕ್ರಾನ್’ ತಂದಿರುವ ಆತಂಕದ ವಿಚಾರವೂ ಸಭೆಯಲ್ಲಿ ಚರ್ಚೆಗೆ ಗ್ರಾಸವಾಗಿದೆ. ಸಭೆಯಲ್ಲಿ ಸಚಿವರ ಜೊತೆ ಆರೋಗ್ಯ ಇಲಾಖೆ ಉನ್ನತಾಧಿಕಾರಿಗಳು, ತಾಂತ್ರಿಕ ಸಲಹಾ ಸಮಿತಿಯ ಡಾ.ಎಂ.ಕೆ.ಸುದರ್ಶನ್, ಡಾ.ರವಿ ಮತ್ತು ಆರೋಗ್ಯ ಇಲಾಖೆ ಆಯುಕ್ತ ರಂದೀಪ್ ಹಾಜರಿದ್ದರು. ರವಿ, ಜಿನೋಮಿಕ್ ಸೀಕ್ವೆನ್ಸ್ ಲ್ಯಾಬ್ಗಳ ನೋಡಲ್ ಆಫೀಸರ್ ಸಹ ಉಪಸ್ಥತರಿದ್ದರು. ಸಭೆಯಲ್ಲಿ ಪ್ರಧಾನವಾಗಿ ತಾಂತ್ರಿಕ ಸಲಹಾ ಸಮಿತಿಯಿಂದ ಕೆಲ ಶಿಫಾರಸುಗಳು ಸಲ್ಲಿಕೆಯಾಗಿವೆ. ಜನಸಂದಣಿ ಇರುವಲ್ಲಿ ರಾಂಡಮ್ ಟೆಸ್ಟ್ ಕಡ್ಡಾಯ ಮಾಡಬೇಕು. ವಾರಕ್ಕೆ ಕನಿಷ್ಠ 5% ಮಕ್ಕಳಿಗೆ ಕೊವಿಡ್ ಪರೀಕ್ಷೆ ನಡೆಸಬೇಕು. ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಕೊವಿಡ್ ಪರೀಕ್ಷೆ ನಡೆಸಬೇಕು ಎಂಬ ಸಲಹೆಗಳೂ ಕೇಳಿಬಂದಿವೆ.
ಸದ್ಯ ಸಚಿವ ಸುಧಾಕರ್ ತಾಂತ್ರಿಕ ಸಲಹಾ ಸಮಿತಿ ಸದಸ್ಯ ಸಭೆ ಮುಕ್ತಾಯವಾಗುತ್ತಿದ್ದಂತೆ ತಾಂತ್ರಿಕ ಸಲಹಾ ಸಮಿತಿ ಶಿಫಾರಸುಗಳನ್ನ ಸಿಎಂ ಬಸವರಾಜ ಬೊಮ್ಮಾಯಿ ಗಮನಕ್ಕೆ ತಂದಿದ್ದಾರೆ. ಸಚಿವ ಸುಧಾಕರ್ ಸಭೆ ಮುಗಿದ ಕೂಡಲೇ ಸಿಎಂಗೆ ಕರೆ ಮಾಡಿ ತಜ್ಞರ ಸಮಿತಿ ನೀಡಿದ ಎಲ್ಲಾ ಶಿಫಾರಸ್ಸುಗಳ ಪ್ರಾರಂಭಿಕ ಮಾಹಿತಿ ನೀಡಿದ್ದಾರೆ.
ತಾಂತ್ರಿಕ ಸಲಹಾ ಸಮಿತಿಯ ಶಿಫಾರಸುಗಳು ಹೀಗಿವೆ:
ಸಾರ್ವಜನಿಕ ಸಭೆ ಸಮಾರಂಭ ಗಳಿಗೆ ಸಂಖ್ಯೆ ನಿಗದಿ ಮಾಡಬೇಕು. 500ಕ್ಕಿಂತ ಕಡಿಮೆ ಮಂದಿಗೆ ಮಾತ್ರ ಅವಕಾಶ ಕೊಡಬೇಕು. ಒಳಾಂಗಣ ಕಾರ್ಯಕ್ರಮಗಳಿಗೆ 200 ಮಂದಿಗೆ ಮಾತ್ರ ಅವಕಾಶ ಕೊಡಬೇಕು. ಮಾಲ್, ಬಸ್ ನಿಲ್ದಾಣ, ರೈಲ್ವೇ ನಿಲ್ದಾಣ ಲಾಡ್ಜ್ಗಳಲ್ಲಿ ವಿಶೇಷ ಲಸಿಕಾ ಅಭಿಯಾನ ನಡೆಸುವಂತೆಯೂ ಸಲಹೆ ಕೇಳಿಬಂದಿದೆ. ಸೋಷಿಯಲ್ ಮೀಡಿಯಾ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿ ಹರಡುವುದನ್ನು ತಪ್ಪಿಸಬೇಕು. ಲಾಕ್ ಡೌನ್, ಒಮಿಕ್ರಾನ್ ಸಾವು ಕುರಿತಾದ ಸುಳ್ಳು ಸುದ್ದಿ ಹರಡುವುದನ್ನು ತಡೆಗಟ್ಟಬೇಕು.
ಶಾಲಾ ಕಾಲೇಜುಗಳನ್ನು ಪ್ಯಾನಿಕ್ ಆಗಿ ತಕ್ಷಣ ಮುಚ್ಚುವ ಅಗತ್ಯವಿಲ್ಲ. ಆನ್ ಲೈನ್ ಮತ್ತು ಆಫ್ ಲೈನ್ ಎರಡೂ ರೀತಿಯ ತರಗತಿಗಳನ್ನು ಕೋವಿಡ್ ಮುನ್ನೆಚ್ಚರಿಕೆಯೊಂದಿಗೆ ನಡೆಸಬೇಕು. ಅಂತರಾಷ್ಟ್ರೀಯ ಪ್ರಯಾಣಿಕರಿಗೆ ಏಳು ದಿನಗಳ ಕಡ್ಡಾಯ ಕ್ವಾರಂಟೈನ್ ವಿಧಿಸಬೇಕು. ಕೊರೊನಾ ಗಂಡಾಂತರದ ದೇಶಗಳಿಂದ ಬರುವ ಪ್ರಯಾಣಿಕರಿಗೆ ಏಳು ದಿನಗಳ ಬಳಿಕ ಮತ್ತೆ ಕೋವಿಡ್ ಟೆಸ್ಟ್ ಮಾಡಬೇಕು. ನೆಗೆಟಿವ್ ರಿಪೋರ್ಟ್ ಇದ್ದರೆ ಮಾತ್ರ ಮುಂದಿನದಕ್ಕೆ ಅವಕಾಶ ನೀಡಬೇಕು. ಅಂತರಾಷ್ಟ್ರೀಯ ಪ್ರಯಾಣಿಕರಿಗೆ ಕ್ವಾರಂಟೈನ್ ಮುಗಿದ ಬಳಿಕವೂ ಕ್ವಾರಂಟೈನ್ ಆ್ಯಪ್ ಮೂಲಕ ನಿಗಾ ವಹಿಸಬೇಕು. ಅಂತರಾಷ್ಟ್ರೀಯ ಪ್ರಯಾಣಿಕರಿಗೆ ಪಾಸಿಟಿವ್ ಬಂದರೆ, ಕಡ್ಡಾಯವಾಗಿ ಜೆನೊಮಿಕ್ಸ್ ಸಿಕ್ವೇನ್ಸ್ ಒಳಪಡಿಸಬೇಕು.
• ಕಳೆದ 14 ದಿನಗಳ ಹಿಂದೆ ಬಂದಂತಹ ಅಂತರಾಷ್ಟ್ರೀಯ ಪ್ರಯಾಣಿಕರಿಗೆ ಕಡ್ಡಾಯ ಆರ್‌ಟಿಪಿಸಿಆರ್.
• ಬೌರಿಂಗ್ ಆಸ್ಪತ್ರೆಯಲ್ಲಿ ಒಮಿಕ್ರಾನ್ ಟ್ರೀಟ್‌ಮೆಂಟ್‌ಗೆ ಮೀಸಲಿಡಬೇಕು.
• ಅಂತರಾಷ್ಟ್ರೀಯ ಪ್ರಯಾಣಿಕರಿಗೆ ರೋಗ ಲಕ್ಷಣಗಳ ಉಳ್ಳಂತಹ ಪ್ರಯಾಣಿಕರನ್ನ ಪ್ರತ್ಯೇಕವಾಗಿ ಚಿಕಿತ್ಸೆ.
• ಸರ್ಕಾರಿ ಸೌಲಭ್ಯ ಪಡೆಯಲು ವ್ಯಾಕ್ಸಿನ್ ಕಡ್ಡಾಯ ಮಾಡಿ. ವಿದ್ಯುತ್, ನೀರು, ಗ್ಯಾಸ್ ಸಿಲಿಂಡರ್, ಪೆಟ್ರೋಲ್, ಡಿಸೇಲ್, ಸಂಬಳ, ಪಿಂಚಣಿ ಇದನ್ನ ಪಡೆಯಲು ವ್ಯಾಕ್ಸಿನ್ ಕಡ್ಡಾಯ ಮಾಡಿ.
• ಸಾರ್ವಜನಿಕ ಸ್ಥಳಗಳ ಬಳಕೆ ವೇಳೆ ಎರಡು ಡೋಸ್ ಕಡ್ಡಾಯ ಮಾಡಿ.
• ಮೆಟ್ರೋ ಟ್ರೈನ್, ಸಾರ್ವಜನಿಕ ಸೌಲಭ್ಯ ಬಳಕೆಗೆ, ಶಾಪಿಂಗ್ ಕಾಂಪ್ಲೆಕ್ಸ್, ಮಾಲ್‌ಗಳ ಬಳಕೆ, ಪಡಿತರ ಬಳಕೆಗೆ ವ್ಯಾಕ್ಸಿನ್ ಕಡ್ಡಾಯ
ಇದನ್ನೂ ಓದಿ: ಪೋಷಕರ ಕಾಡುತಿದೆ ಮೂರನೇ ಅಲೆ ಕೊರೊನಾ, ಒಮಿಕ್ರಾನ್ ಭೀತಿ; ಮಕ್ಕಳನ್ನು ಶಾಲೆಗೆ ಕಳಿಸಲು ಹಿಂದೇಟು
Published On - 2:07 pm, Tue, 30 November 21