ಮೈಸೂರು: ಕೊರೊನಾ ಎರಡನೇ ಅಲೆ ತೀವ್ರತೆ ಕೊಂಚ ತಗ್ಗುತ್ತಿರುವಂತೆ ಕಾಣುತ್ತಿದ್ದು, ಇದೀಗ ಮೂರನೇ ಅಲೆ ಬಾರದಂತೆ ನೋಡಿಕೊಳ್ಳುವ ಹೊಣೆಗಾರಿಕೆ ಎಲ್ಲರ ಮೇಲಿದೆ. ಇದಕ್ಕಾಗಿ ಆಡಳಿತ ವ್ಯವಸ್ಥೆ ಲಸಿಕೆ ವಿತರಣೆಗೆ ಹೆಚ್ಚು ಮಹತ್ವ ನೀಡುತ್ತಿದ್ದು, ಸಮಾಜದಲ್ಲಿ ಎಲ್ಲಾ ಸ್ತರದವರಿಗೂ ಲಸಿಕೆ ತಲುಪಿಸುವ ಮೂಲಕ ಸೋಂಕು ನಿಯಂತ್ರಿಸಲು ನಿರ್ಧರಿಸಿದೆ. ಅದರಂತೆಯೇ, ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕೊರೊನಾ ನಿಯಂತ್ರಣಕ್ಕೆ ಲಸಿಕಾ ಅಭಿಯಾನ ಆರಂಭಿಸಲಾಗುತ್ತಿದ್ದು, ಈ ಅಭಿಯಾನದಡಿಯಲ್ಲಿ ಬೀದಿಬದಿ ವ್ಯಾಪಾರಿಗಳು, ವಿಶೇಷ ಚೇತನರಿಗೆ ಲಸಿಕೆ ನೀಡಲು ಮೈಸೂರು ಮಹಾನಗರ ಪಾಲಿಕೆ ನಿರ್ಧರಿಸಿದೆ.
ಜೂನ್ 16ರಿಂದ 20ರವರೆಗೆ ಬೀದಿ ಬದಿ ವ್ಯಾಪಾರಿಗಳಿಗೆ ಲಸಿಕೆ ನೀಡಲು ಹಾಗೂ ಜೂನ್ 17ರಿಂದ 19ರವರೆಗೆ ವಿಶೇಷ ಚೇತನರಿಗೆ ಲಸಿಕೆ ನೀಡಲು ಯೋಜನೆ ರೂಪಿಸಲಾಗಿದೆ. ಪುರಭವನ ಹಾಗೂ ತಿಲಕ್‌ನಗರದ ಅಂಧಮಕ್ಕಳ ಪಾಠಶಾಲೆಯಲ್ಲಿ ಲಸಿಕೆ ನೀಡಲು ವ್ಯವಸ್ಥೆ ಮಾಡಲಾಗಿದ್ದು, ಪಾಲಿಕೆ ವತಿಯಿಂದ ವಾರ್ಡ್‌ವಾರು ಉಚಿತ ವಾಹನ ಸೌಲಭ್ಯವನ್ನೂ ಕಲ್ಪಿಸಲಾಗುತ್ತಿದೆ. ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಲಸಿಕೆ ನೀಡಲಾಗುವುದು ಅರ್ಹರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮೈಸೂರು ಮಹಾನಗರ ಪಾಲಿಕೆ ಪ್ರಕಟಣೆ ಹೊರಡಿಸಿದೆ.
ಬೀದಿ ಬದಿ ವ್ಯಾಪಾರಿಗಳಿಗೆ ಜೂನ್ 16 ರಿಂದ 20ರ ತನಕ ಬೆಳಗ್ಗೆ 10 ರಿಂದ ಸಂಜೆ 4ರವರೆಗೆ ಪುರಭವನದಲ್ಲಿ ಲಸಿಕೆ ನೀಡಲು ನಿರ್ಧರಿಸಲಾಗಿದ್ದು ನೋಂದಾಯಿತ ಹಾಗೂ ನೋಂದಾಯಿಸಲ್ಪಡದ ಬೀದಿ ಬದಿ ವ್ಯಾಪರಿಗಳಿಗೂ ಲಸಿಕೆ ನೀಡಲಾಗುವುದು ಅರ್ಹರು ಆಧಾರ್ ಕಾರ್ಡ್ ಹಾಗೂ ವ್ಯಾಪಾರದ ಗುರುತಿನ ಚೀಟಿ ತೆಗೆದುಕೊಂಡು ಬರಬೇಕು ಎಂದು ಮಹಾನಗರ ಪಾಲಿಕೆ ತಿಳಿಸಿದೆ.
ವಿಶೇಷ ಚೇತನರಿಗೆ ಜೂನ್ 17 ರಿಂದ 19 ರವರೆಗೆ ಬೆಳಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಲಸಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ತಿಲಕನಗರದ ಅಂಧಮಕ್ಕಳ ಪಾಠಶಾಲೆಯಲ್ಲಿ ಲಸಿಕೆ ನೀಡಲು ನಿರ್ಧರಿಸಲಾಗಿದೆ. ವಿಶೇಷ ಚೇತನರು ಆಧಾರ್ ಕಾರ್ಡ್ ಹಾಗೂ ಸರ್ಕಾರದ ಪ್ರಮಾಣಪತ್ರವನ್ನು ಕಡ್ಡಾಯವಾಗಿ ತರಬೇಕಿದ್ದು, ವಾರ್ಡ್‌ವಾರು ಉಚಿತ ವಾಹನದ ಸೌಲಭ್ಯ ಸಹಾ ಮಾಡಲಾಗಿದೆ ಎಂದು ಮೈಸೂರು ಮಹಾನಗರ ಪಾಲಿಕೆ ನೀಡಿದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ:
ಕೊರೊನಾ ಲಸಿಕೆ ಎರಡನೇ ಡೋಸ್ ಪಡೆಯುವವರ ಗಮನಕ್ಕೆ: ನಿಮಗೆ ನಿಗದಿಪಡಿಸಿರುವ ದಿನಾಂಕವನ್ನು ಹೆಚ್ಚು ಮುಂದೂಡಬೇಡಿ
Fact Check: ಕೊರೊನಾ ಲಸಿಕೆಯಿಂದ ದೇಹದಲ್ಲಿ ಮ್ಯಾಗ್ನೆಟಿಕ್ ಗುಣ ಉಂಟಾಗುತ್ತದೆಯೇ? ಇಲ್ಲಿದೆ ವಿವರ