ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೊರೊನಾ ಸೋಂಕು ಹರಡುವ ವೇಗಕ್ಕೆ ಕಡಿವಾಣ ಹಾಕಲು ರಾಜ್ಯ ಸರ್ಕಾರದಿಂದ ಹೊಸ ಮಾರ್ಗಸೂಚಿ ಪ್ರಕಟವಾಗಿದೆ. 8 ಜಿಲ್ಲೆಗಳಲ್ಲಿ ಸಿನಿಮಾ ಹಾಲ್, ಬಾರ್, ಪಬ್, ಕ್ಲಬ್, ರೆಸ್ಟೊರೆಂಟ್ಗೆ ಶೇ 50ರಷ್ಟು ನಿರ್ಬಂಧ ವಿಧಿಸಲಾಗಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಉಡುಪಿ, ಕಲಬುರಗಿ, ದಕ್ಷಿಣ ಕನ್ನಡ, ಬೀದರ್, ಧಾರವಾಡ ಜಿಲ್ಲೆಗಳಲ್ಲಿ ಈ ನಿಯಮಗಳು ಅನ್ವಯವಾಗಲಿದೆ.
ಅಲ್ಲದೆ, ರಾಜ್ಯಾದ್ಯಂತ ಜಿಮ್, ಸ್ವಿಮ್ಮಿಂಗ್ ಪೂಲ್ಗಳು ಬಂದ್ ಆಗಲಿವೆ. 6ರಿಂದ 9ನೇ ತರಗತಿಯವರೆಗೆ ಶಾಲೆಗಳು ಕಾರ್ಯನಿರ್ವಹಿಸುವುದಿಲ್ಲ. ವಿದ್ಯಾಗಮ ಸೇರಿದಂತೆ ಎಲ್ಲಾ ಶೈಕ್ಷಣಿಕ ಚಟುವಟಿಕೆ ಬಂದ್ ಆಗಲಿದೆ. ಏಪ್ರಿಲ್ 20ರವರೆಗೆ ಪ್ರಸ್ತುತ ಮಾರ್ಗಸೂಚಿ ಅನ್ವಯವಾಗಲಿದೆ. ಉಳಿದಂತೆ ಇತರ ನಗರಗಳ ಪಬ್, ಬಾರ್‌ಗಳಲ್ಲಿ ಮಾಸ್ಕ್, ಸ್ಯಾನಿಟೈಸರ್ ಕಡ್ಡಾಯ ಮಾಡಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಧಾರ್ಮಿಕ ಆಚರಣೆಗಳು, ಜಾತ್ರೆ, ಮೇಳಗಳು, ಗುಂಪು ಸೇರುವುದು ನಿಷೇಧ ಮುಂದುವರಿಯಲಿದೆ. ಸಭೆ, ಸಮಾರಂಭ ಆಚರಣೆಗೆ ಮಾರ್ಚ್ 12ರ ಸುತ್ತೋಲೆ ಅನ್ವಯವಾಗಲಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಬಳಕೆ ಕಡ್ಡಾಯ. ಅಂತರ ಕಾಪಾಡಿಕೊಳ್ಳುವ ವಿಚಾರದಲ್ಲಿ ಜನರು ಎಚ್ಚರ ವಹಿಸಬೇಕು. ಈ ನಿಯಮಗಳನ್ನು ಪೊಲೀಸರು, ಸ್ಥಳೀಯ ಆಡಳಿತ ಕಟ್ಟುನಿಟ್ಟಾಗಿ ಜಾರಿ ಮಾಡಬೇಕು ಎಂದು ಸೂಚಿಸಲಾಗಿದೆ. ಕೊರೊನಾ ತಡೆಗೆ ರಾಜ್ಯ ಸರ್ಕಾರದಿಂದ ಮಾರ್ಗಸೂಚಿ ಪ್ರಕಟವಾಗಿದ್ದು, ಅದರನ್ವಯ ಯಾವುದೇ ರೀತಿಯ ಜಾಥಾ, ಮುಷ್ಕರ, ಧರಣಿ ನಡೆಸುವುದನ್ನು ನಿಷೇಧ ಮಾಡಲಾಗಿದೆ. ಸಾರಿಗೆ ಬಸ್‌ಗಳಲ್ಲಿ ನಿಗದಿತ ಆಸನದಷ್ಟೇ ಜನರನ್ನು ಕೊಂಡೊಯ್ಯಬೇಕು. ಸಾಧ್ಯವಾದ ಮಟ್ಟಿಗೂ ಮನೆಯಿಂದಲೇ ಕಚೇರಿ ಕೆಲಸ (ವರ್ಕ್ಫ್ರಂ) ಸೌಲಭ್ಯ ಬಳಸಿಕೊಳ್ಳಬೇಕು ಎಂದು ಸರ್ಕಾರ ಸೂಚಿಸಿದೆ.
ಉನ್ನತ ಶಿಕ್ಷಣ ಹಾಗೂ ವೃತ್ತಿಪರ ಕೋರ್ಸ್‌ಗಳ ತರಗತಿಗಳಲ್ಲಿ, ಪರೀಕ್ಷೆ ಬರೆಯುವ ಹಾಗೂ ವೈದ್ಯ ಶಿಕ್ಷಣ ತರಗತಿ ಹೊರತುಪಡಿಸಿ ಇತರ ಎಲ್ಲಾ ರೀತಿಯ ತರಗತಿಗಳನ್ನು ಸ್ಥಗಿತಗೊಳಿಸಲಾಗಿದೆ. ವಸತಿ ಶಾಲೆಗಳಲ್ಲಿ 10, 11, 12ನೇ ತರಗತಿಯ ಬೋರ್ಡ್ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು, ಉನ್ನತ ಶಿಕ್ಷಣ, ವೃತ್ತಿಪರ ಕೋರ್ಸ್ ಪರೀಕ್ಷೆ ಬರೆಯುವವರು, ವೈದ್ಯ ಶಿಕ್ಷಣ ತರಗತಿ ಹೊರತುಪಡಿಸಿ ಉಳಿದ ಎಲ್ಲಾ ತರಗತಿಗಳನ್ನು ಸ್ಥಗಿತಗೊಳಿಸಲಾಗಿದೆ.
ಮಾಲ್, ಮಾರ್ಕೆಟ್, ಡಿಪಾರ್ಟ್‌ಮೆಂಟ್ ಸ್ಟೋರ್‌ಗಳಲ್ಲಿ ಕೊವಿಡ್ ಮುನ್ನೆಚ್ಚರಿಕೆ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ನಿಯಮ ಉಲ್ಲಂಘಿಸಿದರೆ ಮಾಲ್, ಮಾರ್ಕೆಟ್ಗಳನ್ನು ಕೊವಿಡ್ ಪರಿಸ್ಥಿತಿ ಕೊನೆಗೊಳ್ಳುವವರೆಗೂ ಮುಚ್ಚಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಪೂಜಾಸ್ಥಳಗಳಿಗೆ ವೈಯಕ್ತಿಕವಾಗಿ ಭೇಟಿ ನೀಡಿ, ಪ್ರಾರ್ಥನೆ ಸಲ್ಲಿಸಬಹುದು. ಆದರೆ ಗುಂಪುಗೂಡುವುದು, ಸಮಾರಂಭ ನಡೆಸುವಂತಿಲ್ಲ. ಅಪಾರ್ಟ್ಮೆಂಟ್ ಸಮುಚ್ಚಯಗಳಲ್ಲಿಯೂ ಸಾಮಾನ್ಯ ಸ್ಥಳಗಳೆಸಿದ ಜಿಮ್, ಪಾರ್ಟಿ ಹಾಲ್, ಕ್ಲಬ್ ಹೌಸ್, ಸ್ವಿಮಿಂಗ್ ಪೂಲ್ ಬಳಸುವಂತಿಲ್ಲ.
In view of increasing COVID-19 cases Karnataka Government has issued Guidelines to contain the spread.@CMofKarnataka @mla_sudhakar @WHO @UNICEFIndia @UNDP_India @MoHFW_INDIA @PIBBengaluru @CovidKarnataka pic.twitter.com/lJGlY0HY7z
— K’taka Health Dept (@DHFWKA) April 2, 2021
ನಿಯಮ ಉಲ್ಲಂಘಿಸಿದ್ರೆ ವಿಪತ್ತು ನಿರ್ವಹಣಾ ಕಾಯ್ದೆ, ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯ್ದೆಯಡಿ ಕಠಿಣ ಕ್ರಮ ಕೈಗೊಳ್ಳಲಾಗುವುದು. ಸರ್ಕಾರದ ಪ್ರಸ್ತುತ ಮಾರ್ಗಸೂಚಿ ಏಪ್ರಿಲ್ 20ರವರೆಗೆ ಅನ್ವಯವಾಗಲಿದೆ ಎಂದು ತಿಳಿಸಲಾಗಿದೆ.
ಮದುವೆ, ಬರ್ತ್ಡೇ, ಸಮಾರಂಭಗಳಲ್ಲಿ ಹೆಚ್ಚು ಜನ ಸೇರುವಂತಿಲ್ಲ
ಸಭೆ ಸಮಾರಂಭಗಳಿಗೆ ಮಾರ್ಚ್ 12ರಂದು ವಿಧಿಸಿದ್ದ ನಿರ್ಬಂಧವನ್ನೇ ಮುಂದುವರಿಸಲು ಸರ್ಕಾರ ನಿರ್ಧರಿಸಿದೆ. ಮದುವೆಯು ತೆರೆದ ಪ್ರದೇಶದಲ್ಲಾದರೆ 500 ಜನರಿಗೆ ಅವಕಾಶವಿರುತ್ತದೆ, ಕಲ್ಯಾಣ ಮಂಟಪದಲ್ಲಾದರೆ 200 ಜನರಿಗೆ ಅವಕಾಶವಿದೆ. ಹಾಲ್, ಸಭಾಂಗಣದಲ್ಲಿ ಮದುವೆಗೆ 200 ಜನಕ್ಕೆ ಅವಕಾಶವಿದೆ. ಬರ್ತಡೇ ಪಾರ್ಟಿಯು ತೆರೆದ ಪ್ರದೇಶದಲ್ಲಿ ನಡೆಯುವಂತಿದ್ದರೆ 100 ಜನರು ಮೀರಬಾರದು. ಹಾಲ್, ಸಭಾಂಗಣಗಳಲ್ಲಿ ಆಗುವಂತಿದ್ದರೆ 50 ಜನರಿಗೆ ಅವಕಾಶವಿದೆ.
ಇದನ್ನೂ ಓದಿ: ಕೊರೊನಾ ನಡುವೆ ರಾಜ್ಯದಲ್ಲಿ ಭರ್ಜರಿ ಮದ್ಯ ಮಾರಾಟ
ಇದನ್ನೂ ಓದಿ: ಸಿಲಿಕಾನ್ ಸಿಟಿಯಲ್ಲಿ ಹೆಚ್ಚಾಗುತ್ತಿದೆ ಕೊರೊನಾ.. ಇದಕ್ಕೆ ಸರ್ಕಾರವೇ ಕಾರಣನಾ?
(Coronavirus Covid 19 New Guidelines by Karnataka Govt in 8 districts till April 20)
Published On - 6:32 pm, Fri, 2 April 21