ಸಿಎಂ ವಿರುದ್ಧದ ಮುಡಾ ಪ್ರಕರಣದ ಆದೇಶ ಕಾಯ್ದಿರಿಸಿದ ಕೋರ್ಟ್: ವಾದ-ಪ್ರತಿವಾದ ಹೇಗಿತ್ತು? ಇಲ್ಲಿದೆ ನೋಡಿ

| Updated By: ಗಂಗಾಧರ​ ಬ. ಸಾಬೋಜಿ

Updated on: Aug 09, 2024 | 5:52 PM

ಮುಡಾ ಸೈಟ್ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ಸ್ನೇಹಮಯಿ ಕೃಷ್ಣ ಎಂಬುವರು ದಾಖಲಿಸಿದ್ದ ಖಾಸಗಿ ಪ್ರಕರಣದ ವಿಚಾರಣೆ ಇಂದು ಜನಪ್ರತಿನಿಧಿಗಳ ನ್ಯಾಯಾಲಯ ನಡೆಸಿದೆ. ಆದ್ರೆ, ಈ ಖಾಸಗಿ ದೂರು ವಿಚಾರಣೆಗೆ ಸ್ವೀಕರಿಸುವ ಬಗ್ಗೆ ಕೋರ್ಟ್​, ಆದೇಶ ಕಾಯ್ದಿರಿಸಿದೆ. ಹಾಗಾದ್ರೆ, ವಾದ-ಪ್ರತಿವಾದ ಹೇಗಿತ್ತು? ಅರ್ಜಿದಾರರ ಪರ ವಕೀಲರು ಏನೆಲ್ಲಾ ಹೇಳಿದ್ರು ಎನ್ನುವ ವಿವರ ಇಲ್ಲಿದೆ.

ಸಿಎಂ ವಿರುದ್ಧದ ಮುಡಾ ಪ್ರಕರಣದ ಆದೇಶ ಕಾಯ್ದಿರಿಸಿದ ಕೋರ್ಟ್: ವಾದ-ಪ್ರತಿವಾದ ಹೇಗಿತ್ತು? ಇಲ್ಲಿದೆ ನೋಡಿ
ಸಿಎಂ ವಿರುದ್ಧದ ಮುಡಾ ಪ್ರಕರಣದ ಆದೇಶ ಕಾಯ್ದಿರಿಸಿದ ಕೋರ್ಟ್, ವಾದ-ಪ್ರತಿವಾದ ಹೇಗಿತ್ತು? ಇಲ್ಲಿದೆ ನೋಡಿ
Follow us on

ಬೆಂಗಳೂರು, ಆಗಸ್ಟ್​ 09: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ವಿರುದ್ಧ ಮುಡಾ ಹಗರಣ (muda scam) ಆರೋಪಕ್ಕೆ ಸಂಬಂಧಿಸಿದಂತೆ ಸ್ನೇಹಮಯಿ ಕೃಷ್ಣ ಎಂಬುವರ ಖಾಸಗಿ ದೂರು ಬಗ್ಗೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್​ ಆದೇಶ ಕಾಯ್ದಿರಿಸಿ​ ವಿಚಾರಣೆಯನ್ನು ಆಗಸ್ಟ್ 13ಕ್ಕೆ ಮುಂದೂಡಿದೆ. ಖಾಸಗಿ ದೂರು ವಿಚಾರಣೆಗೆ ಸ್ವೀಕರಿಸುವ ಬಗ್ಗೆ  ಅಂದು ಆದೇಶ ಸಾಧ್ಯತೆ ಇದೆ. ಈ ವೇಳೆ ದೂರುದಾರರ ಪರ ಹಿರಿಯ ವಕೀಲೆ ಲಕ್ಷ್ಮೀ ಐಯ್ಯಂಗಾರ್ ವಾದ ಮಾಡಿಸಿದ್ದು, ಏನೆಲ್ಲಾ ಪ್ರಸ್ತಾಪಿದರು ಎನ್ನುವ ವಿವರ ಈ ಕೆಳಗಿನಂತಿದೆ.

ಹಿರಿಯ ವಕೀಲೆ ಲಕ್ಷ್ಮೀ ಐಯ್ಯಂಗಾರ್ ವಾದ 

ಸಿದ್ದರಾಮಯ್ಯ ಡಿಸಿಎಂ ಆದಾಗ ಮಾಲೀಕರೇ ಅಲ್ಲದ ವ್ಯಕ್ತಿ ಪರವಾಗಿ ಡಿನೋಟಿಫಿಕೇಷನ್ ಮಾಡಿದ್ದಾರೆ. ಈ ಜಮೀನಿನಲ್ಲಿ ದೇವನೂರು ಬಡಾವಣೆ ರಚನೆಯಾಗಿದೆ. 2004ರಲ್ಲಿ ಮುಖ್ಯಮಂತ್ರಿ ಪತ್ನಿಯ ಸಹೋದರ ದೇವರಾಜುನಿಂದ ಜಮೀನು ಖರೀದಿಸಲಾಗಿದೆ. ಆಗಲೂ ಸಿದ್ದರಾಮಯ್ಯ ಡಿಸಿಎಂ ಆಗಿದ್ದರು. ಖರೀದಿಗೆ ಹಣದ ಮೂಲದ ಬಗ್ಗೆ ಪ್ರಶ್ನೆಯಿದೆ. ದೇವನೂರು ಬಡಾವಣೆಯಲ್ಲಿ ಈಗಲೂ ಖಾಲಿ‌ ನಿವೇಶನಗಳಿವೆ. ಆದರೆ ದುಬಾರಿ ಬೆಲೆಯ ವಿಜಯನಗರ ಬಡಾವಣೆಯಲ್ಲಿ ಬದಲಿ ನಿವೇಶನ ನೀಡಲಾಗಿದೆ.

ಇದನ್ನೂ ಓದಿ: ಸುಪ್ರೀಂ ಕೋರ್ಟ್​ ಮೆಟ್ಟಿಲೇರಿದ ಕೈ ನಾಯಕರ ಪ್ರಕರಣ: ಡಿಕೆಶಿ, ಸಿದ್ದರಾಮಯ್ಯಗೆ ಸದ್ಯಕ್ಕಿಲ್ಲ ರಿಲೀಫ್

2006 ರಿಂದ 2010ರ ನಡುವೆ ಈ ಜಮೀನಿನಲ್ಲಿ ಬಡಾವಣೆ ರಚನೆಯಾಗಿ ಸೈಟುಗಳನ್ನೂ ಹಂಚಲಾಗಿತ್ತು. 2004ಕ್ಕೂ ಮುನ್ನವೇ ಬಡಾವಣೆಯಲ್ಲಿ ಮುಡಾ ಅಭಿವೃದ್ಧಿಪಡಿಸಿತ್ತು, ಆದರೂ ಈ ಜಮೀನನ್ನು ಭೂ ಪರಿವರ್ತನೆ ಮಾಡಲಾಗಿದೆ.

2010 ರಲ್ಲಿ ಮುಖ್ಯಮಂತ್ರಿ ಪತ್ನಿ ಸಹೋದರನಿಂದ‌ ದಾನಪತ್ರ ಪಡೆದರು. ನಂತರ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗುವವರೆಗೂ ಸುಮ್ಮನಿದ್ದರು. 2014 ರಲ್ಲಿ ಮುಖ್ಯಮಂತ್ರಿ ಆದಾಗ ಪರಿಹಾರದ ನಿವೇಶನ ಕೇಳಿದರು. ಮಾರಾಟ ಮಾಡಿದ ದೇವರಾಜು ಜಮೀನು ಮಾಲೀಕರಲ್ಲ. ಅವರಿಂದ ಖರೀದಿಸಿದ ಮಲ್ಲಿಕಾರ್ಜುನ ಸ್ವಾಮಿ ಮಾಲೀಕರಾಗುವುದಿಲ್ಲ. ಹೀಗಾಗಿ ಮುಖ್ಯಮಂತ್ರಿ ಪತ್ನಿ ಪಾರ್ವತಿ ಬಿ.ಎಂ ಕೂಡಾ ಮಾಲೀಕರಾಗುವುದಿಲ್ಲ, ಆದರೂ ಜಮೀನಿಗೆ ಬದಲಿ ನಿವೇಶನ‌ ಕೇಳುತ್ತಾರೆ ಎಂದು ದೂರುದಾರರ ಪರ ಹಿರಿಯ ವಕೀಲೆ ಲಕ್ಷ್ಮೀ ಐಯ್ಯಂಗಾರ್ ವಾದ ಮಂಡಿಸಿದ್ದಾರೆ.

ಇದನ್ನೂ ಓದಿ: ಸಿಎಂಗೆ ಮತ್ತಷ್ಟು ಸಂಕಷ್ಟ ತಂದಿಟ್ಟ ಮುಡಾ ಹಗರಣ: ಸಿದ್ದರಾಮಯ್ಯ ವಿರುದ್ಧ ಕೋರ್ಟ್‌ಗೆ ದೂರು ದಾಖಲು!

ಕಾನೂನು ಪ್ರಕಾರ ಸಿಎಂ ಪತ್ನಿಗೆ 14 ನಿವೇಶನದ ಹಕ್ಕಿರಲಿಲ್ಲ. ಹಕ್ಕಿದ್ದಿದ್ದರೂ ಗರಿಷ್ಠ 4800 ಚದರಡಿ ಜಾಗ ಮಾತ್ರ ಪಡೆಯಬಹುದಿತ್ತು. ಆದರೆ 14 ಸೈಟ್ ಪಡೆದಿರುವುದು ಕಾನೂನುಬಾಹಿರ. ಸಿಎಂ ಸಿದ್ದರಾಮಯ್ಯ ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ. ಸ್ವಾಧೀನವಾದ ಜಮೀನಿನಲ್ಲಿ ಮಾತ್ರ 4800 ಅಡಿ ನಿವೇಶನ ಪಡೆಯಬಹುದು. ಆದರೆ ದುಬಾರಿ ಮೌಲ್ಯದ ಬಡಾವಣೆಯಲ್ಲಿ 14 ಸೈಟ್ ಹಂಚಲಾಗಿದೆ ಎಂದಿದ್ದಾರೆ.

ಜಡ್ಜ್ ಸಂತೋಷ್ ಗಜಾನನ ಭಟ್ ಪ್ರಶ್ನೆ

ಖಾಸಗಿ ದೂರು ಸಲ್ಲಿಕೆಗೂ ಮೊದಲು ಪೂರ್ವಾನುಮತಿ ಬೇಕಲ್ಲವೇ ಎಂದು ದೂರುದಾರರ ಪರ ವಕೀಲರಿಗೆ ಜಡ್ಜ್ ಸಂತೋಷ್ ಗಜಾನನ ಭಟ್ ಪ್ರಶ್ನೆ ಮಾಡಿದ್ದಾರೆ. ಕೋರ್ಟ್ ತನಿಖೆಗೆ ಅದೇಶ ನೀಡಲು ಪೂರ್ವಾನುಮತಿ ಬೇಕಿಲ್ಲ. ಕೋರ್ಟ್ ಅಪರಾಧವನ್ನು ಪರಿಜ್ಞಾನಕ್ಕೆ ತೆಗೆದುಕೊಳ್ಳುವಾಗ ಮಾತ್ರ ಪೂರ್ವಾನುಮತಿ ಬೇಕು. 156(3) ಅಡಿಯಲ್ಲಿ ತನಿಖೆಗೆ ಆದೇಶಿಸುವಾಗ ಪೂರ್ವಾನುಮತಿ ಬೇಡ. ಭ್ರಷ್ಟಾಚಾರ ತಡೆ ಕಾಯ್ದೆ, ಸುಪ್ರೀಂಕೋರ್ಟ್ ತೀರ್ಪು ಉಲ್ಲೇಖಿಸಿ ವಾದ ಮಂಡಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಸಿಎಂ ಸಿದ್ದರಾಮಯ್ಯಗೆ ತಳವಳ ಶುರುವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:03 pm, Fri, 9 August 24