AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಧಿಕಾರಿಗಳ ಆಟಕ್ಕೆ ಬಿತ್ತು ಬ್ರೇಕ್! ಮೊಬೈಲ್ ಹಿಡಿದು ರೈತರು ಮಾಡ್ತಿರೋದೇನು ಗೊತ್ತಾ?

ಹಾವೇರಿ:ಇಷ್ಟು ದಿನ ಬೆಳೆ ಸಮೀಕ್ಷೆ ಅಂದರೆ ಸಾಕು ಅಧಿಕಾರಿಗಳು ಆಡಿದ್ದೇ ಆಟ ಎನ್ನುವ ಹಾಗಾಗಿತ್ತು. ಇಷ್ಟು ವರ್ಷಗಳ ಕಾಲ ಅಧಿಕಾರಿಗಳು ಎಲ್ಲಿಯೋ ಕುಳಿತು ಬೆಳೆ ಸಮೀಕ್ಷೆ ಮಾಡುತ್ತಿದ್ದರು. ಇದರಿಂದ ರೈತರು ಜಮೀನಿನಲ್ಲಿ ಬೆಳೆದದ್ದೊಂದು ಬೆಳೆ, ಅಧಿಕಾರಿಗಳು ದಾಖಲಿಸುವುದೊಂದು ಬೆಳೆ ಆಗುತ್ತಿತ್ತು. ಅಧಿಕಾರಿಗಳ ಈ ಯಡವಟ್ಟಿನಿಂದ ಅದೆಷ್ಟೋ ರೈತರಿಗೆ ಸರಕಾರದ ಯೋಜನೆಗಳ ಲಾಭ ಸಿಗುತ್ತಿರಲಿಲ್ಲ. ಆದರೆ ಈಗ ಅಧಿಕಾರಿಗಳ ಆಟಕ್ಕೆ ಬ್ರೇಕ್ ಹಾಕಲು ಕೃಷಿ ಇಲಾಖೆ ಹೊಸದೊಂದು ಪ್ಲಾನ್ ಮಾಡಿದೆ. ಅಧಿಕಾರಿಗಳ ಆಟಕ್ಕೆ ಬ್ರೇಕ್​.. ಪ್ರತಿವರ್ಷ ರೈತರು ಒಂದಿಲ್ಲೊಂದು […]

ಅಧಿಕಾರಿಗಳ ಆಟಕ್ಕೆ ಬಿತ್ತು ಬ್ರೇಕ್! ಮೊಬೈಲ್ ಹಿಡಿದು ರೈತರು ಮಾಡ್ತಿರೋದೇನು ಗೊತ್ತಾ?
ಸಾಧು ಶ್ರೀನಾಥ್​
|

Updated on: Aug 17, 2020 | 1:24 PM

Share

ಹಾವೇರಿ:ಇಷ್ಟು ದಿನ ಬೆಳೆ ಸಮೀಕ್ಷೆ ಅಂದರೆ ಸಾಕು ಅಧಿಕಾರಿಗಳು ಆಡಿದ್ದೇ ಆಟ ಎನ್ನುವ ಹಾಗಾಗಿತ್ತು. ಇಷ್ಟು ವರ್ಷಗಳ ಕಾಲ ಅಧಿಕಾರಿಗಳು ಎಲ್ಲಿಯೋ ಕುಳಿತು ಬೆಳೆ ಸಮೀಕ್ಷೆ ಮಾಡುತ್ತಿದ್ದರು. ಇದರಿಂದ ರೈತರು ಜಮೀನಿನಲ್ಲಿ ಬೆಳೆದದ್ದೊಂದು ಬೆಳೆ, ಅಧಿಕಾರಿಗಳು ದಾಖಲಿಸುವುದೊಂದು ಬೆಳೆ ಆಗುತ್ತಿತ್ತು. ಅಧಿಕಾರಿಗಳ ಈ ಯಡವಟ್ಟಿನಿಂದ ಅದೆಷ್ಟೋ ರೈತರಿಗೆ ಸರಕಾರದ ಯೋಜನೆಗಳ ಲಾಭ ಸಿಗುತ್ತಿರಲಿಲ್ಲ. ಆದರೆ ಈಗ ಅಧಿಕಾರಿಗಳ ಆಟಕ್ಕೆ ಬ್ರೇಕ್ ಹಾಕಲು ಕೃಷಿ ಇಲಾಖೆ ಹೊಸದೊಂದು ಪ್ಲಾನ್ ಮಾಡಿದೆ.

ಅಧಿಕಾರಿಗಳ ಆಟಕ್ಕೆ ಬ್ರೇಕ್​.. ಪ್ರತಿವರ್ಷ ರೈತರು ಒಂದಿಲ್ಲೊಂದು ರೀತಿಯ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಆದರೆ ಬೆಳೆ ಸಮೀಕ್ಷೆಯಲ್ಲಾದ ಯಡವಟ್ಟುಗಳಿಂದ ಬಹುತೇಕ ರೈತರಿಗೆ ಸರಕಾರದ ಯೋಜನೆಗಳ ಲಾಭ ಸಿಗುತ್ತಿರಲಿಲ್ಲ. ಕಾರಣ ರೈತರು ಮೆಕ್ಕೆಜೋಳ, ಹತ್ತಿ, ಸೋಯಾಬಿನ್ ಬೆಳೆ ಬೆಳೆದಿದ್ದರೂ ಸಮೀಕ್ಷೆ ಮಾಡುತ್ತಿದ್ದ ಅಧಿಕಾರಿಗಳು ಎಲ್ಲ ರೈತರ ಜಮೀನಿಗೆ ಭೇಟಿ ಕೊಡುತ್ತಿರಲಿಲ್ಲ.

ಎಲ್ಲೋ, ಯಾರದೋ.. ಜಮೀನಿನಲ್ಲಿ ಕುಳಿತು ಯಾವ್ಯಾವುದೋ ಬೆಳೆಗಳ ಹೆಸರನ್ನು ರೈತರ ಜಮೀನಿನ ದಾಖಲೆಗಳಲ್ಲಿ ನಮೂದು ಮಾಡುತ್ತಿದ್ದರು. ಇದರಿಂದ ರೈತರು ತಮ್ಮ ಜಮೀನಿನಲ್ಲಿ ಬೆಳೆದದ್ದೊಂದು ಬೆಳೆ, ಅಧಿಕಾರಿಗಳು ದಾಖಲಿಸುವುದು ಮತ್ತೊಂದು ಬೆಳೆ ಎನ್ನುವಂತಾಗಿ ರೈತರಿಗೆ ಬರಬೇಕಾದ ಸರಕಾರದ ಯೋಜನೆಗಳ ಲಾಭ ಸಿಗುತ್ತಿರಲಿಲ್ಲ. ಹೀಗಾಗಿ ಕೃಷಿ ಇಲಾಖೆ ಈಗ ರೈತರ ಕೈಗೆ ಮೊಬೈಲ್‌ ಆಪ್ ನೀಡಿದೆ.

ಏನಿದು ಮೊಬೈಲ್‌ ಆ್ಯಪ್.. ರೈತರು ತಮ್ಮ ತಮ್ಮ ಮೊಬೈಲಿನಲ್ಲಿರುವ ಪ್ಲೇ ಸ್ಟೋರ್‌ನಲ್ಲಿ ರೈತರ ಬೆಳೆ ಸಮೀಕ್ಷೆ ಆಪ್ 2020-21 ಎಂಬ ಆಯಾಪ್ ಡೌನ್ ಲೋಡ್ ಮಾಡಿಕೊಳ್ಳಬೇಕು. ಆಪ್ ಡೌನ್ ಲೋಡ್ ಮಾಡಿಕೊಂಡ ನಂತರ ಸರ್ವೇ ನಂಬರ್ ಹಾಕಿ ತಾವೇ ತಮ್ಮ ಜಮೀನಿನಲ್ಲಿ ಬೆಳೆದ ಬೆಳೆಗಳನ್ನು ದಾಖಲು ಮಾಡಬೇಕು. ರೈತರು ಈಗಾಗಲೇ ತಾವು ಬೆಳೆದ ಬೆಳೆಯೊಂದಿಗೆ ನಿಂತು ಫೋಟೋ ಕ್ಲಿಕ್ಕಿಸಿ ಹಾಕುತ್ತಿದ್ದಾರೆ. ಇದರಿಂದ ಬೆಳೆ ಸಮೀಕ್ಷೆ ಪಾರದರ್ಶಕವಾಗಿ ರೈತರಿಗೆ ಸರಕಾರದ ಯೋಜನೆಗಳ ಲಾಭ ಸಿಗಲಿದೆ.

ಅಂಡ್ರಾಯಿಡ್ ಮೊಬೈಲ್​ಗಳಲ್ಲಿ ಆ್ಯಪ್ ಲಭ್ಯ.. ಬಹುತೇಕ ರೈತರು ಈಗ ಅಂಡ್ರಾಯಿಡ್ ಮೊಬೈಲ್ ಗಳನ್ನು ಉಪಯೋಗ ಮಾಡುತ್ತಿದ್ದಾರೆ. ಹೀಗಾಗಿ ರೈತರು ತಮ್ಮ ಮೊಬೈಲ್ ನಲ್ಲಿ ಕೃಷಿ ಇಲಾಖೆಯ ಬೆಳೆ ಸಮೀಕ್ಷೆ ಅಪ್ಲಿಕೇಶನ್ ಡೌನ್ ಲೋಡ್ ಮಾಡಿಕೊಂಡು ಬೆಳೆಗಳನ್ನು ದಾಖಲಿಸಬಹುದಾಗಿದೆ. ಈಗಾಗಲೆ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಕಾರ್ಯ ಆರಂಭವಾಗಿದೆ. ಆಗಸ್ಟ್ 24ರವರೆಗೆ ಮೊಬೈಲ್ ಯಾಪ್ ಮೂಲಕ ರೈತರು ಬೆಳೆ ಸಮೀಕ್ಷೆಯಲ್ಲಿ ಭಾಗವಹಿಸಬಹುದು.

ಆಪ್ ಡೌನ್ ಲೋಡ್ ಮಾಡಿಕೊಂಡು ಓಪನ್ ಮಾಡಿದ ನಂತರ ಜಿಪಿಎಸ್ ಆನ್ ಆಗುತ್ತದೆ. ಆಗ ರೈತರು ತಮ್ಮ ಜಮೀನಿನ‌ ಸರ್ವೇ ನಂಬರ್ ಅದರಲ್ಲಿ ದಾಖಲಿಸಬೇಕು. ನಂತರ ತಾವು ತಮ್ಮ ಜಮೀನಿನಲ್ಲಿ ಬೆಳೆದ ಬೆಳೆಗಳ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಆಪ್‌ನಲ್ಲಿ ಅಪಲೋಡ್ ಮಾಡಬಹುದು.

ರೈತರೇ‌ ಆಪ್​ನಲ್ಲಿ ಬೆಳೆಗಳ ಫೋಟೋ ಅಪಲೋಡ್ ಮಾಡುವುದರಿಂದ ಬೆಳೆಗಳ ವ್ಯತ್ಯಾಸ ಆಗುವುದು ತಪ್ಪಲಿದೆ. ಜಿಪಿಎಸ್ ವ್ಯವಸ್ಥೆ ಇರುವುದರಿಂದ ರೈತರು ತಮ್ಮ ಜಮೀನಿನಲ್ಲೇ ನಿಂತು ತಾವೇ ಬೆಳೆಗಳ ಫೋಟೋಗಳನ್ನು ಕ್ಲಿಕ್ಕಿಸಿ, ಅಪಲೋಡ್ ಮಾಡಬಹುದಾಗಿದೆ.

ಅಂಡ್ರಾಯಿಡ್ ಮೊಬೈಲ್ ಇಲ್ಲದವರಿರಗೆ ಬೇರೆ ಪ್ಲಾನ್‌.. ಅಂಡ್ರಾಯಿಡ್ ಮೊಬೈಲ್ ಉಪಯೋಗ ಮಾಡಲಾರದ ರೈತರ ನೆರವಿಗೆ ಎಂದು ಕೆಲವು ಪಿಆರ್ ಗಳನ್ನು ನೇಮಕ‌ ಮಾಡಲಾಗಿದೆ. ಅವರು ರೈತರಿಗೆ ಬೆಳೆ ಸಮೀಕ್ಷೆ ಕಾರ್ಯ ಕೈಗೊಳ್ಳಲು ನೆರವಾಗಲಿದ್ದಾರೆ. ಕೃಷಿ ಇಲಾಖೆಯ ಈ ಕಾರ್ಯದಿಂದ ಎಲ್ಲಿಯೋ ಕುಳಿತು ಯಾವುದೋ ಬೆಳೆಯನ್ನು ದಾಖಲು ಮಾಡುವುದು ತಪ್ಪಲಿದೆ. ರೈತರೆ ನೇರವಾಗಿ ತಾವೆ ಬೆಳೆದ ಬೆಳೆಯನ್ನು ತಾವೇ ಫೋಟೋ ಕ್ಲಿಕ್ಕಿಸಿ ಅಪಲೋಡ್ ಮಾಡುವುದರಿಂದ ಅಧಿಕಾರಿಗಳು ಮಾಡುತ್ತಿದ್ದ ಯಡವಟ್ಟಿಗೆ ಬ್ರೇಕ್ ಬೀಳಲಿದೆ.

ಬೆಳೆ ಸಮೀಕ್ಷೆ ಬಂದಾಗೊಮ್ಮೆ ರೈತರು ಎಲ್ಲಿಲ್ಲದ ಪೇಚಿಗೆ ಸಿಲುಕುತ್ತಿದ್ದರು. ಕೃಷಿ ಕೆಲಸ ಬಿಟ್ಟು ಗ್ರಾಮ ಲೆಕ್ಕಿಗ, ಕೃಷಿ ಇಲಾಖೆ ಕಚೇರಿ ಎಂದು ಅಲೆದಾಡುತ್ತಿದ್ದರು. ಆದರೆ ಈಗ ಕೃಷಿ ಇಲಾಖೆ ಮಾಡಿದ ಪ್ಲಾನ್‌ನಿಂದ ಇದಕ್ಕೆ ಬ್ರೇಕ್ ಬೀಳಲಿದೆ. ರೈತರು ತಾವೆ ತಮ್ಮ ಜಮೀನಿನಲ್ಲಿ ಬೆಳೆದ ಬೆಳೆಯನ್ನು ದಾಖಲು ಮಾಡುವುದರಿಂದ ತಾವು ಬೆಳೆದ ಬೆಳೆಗೆ ಬರಬೇಕಾದ ಸರಕಾರದ ಸೌಲಭ್ಯಗಳು ರೈತರಿಗೆ ಸಿಗಲಿವೆ. ಒಟ್ಟಿನಲ್ಲಿ ಕೃಷಿ ಇಲಾಖೆ‌ ಮಾಡಿದ ಈ ಪ್ಲಾನ್ ನಿಂದ ರೈತರ ಅಲೆದಾಟ ತಪ್ಪುವುದಲ್ಲದೆ ರೈತರಿಗೆ ಸಿಗಬೇಕಾದ ಸರಕಾರದ ಸೌಲಭ್ಯಗಳು ದೊರೆಯಲಿವೆ. -ಪ್ರಭುಗೌಡ.ಎನ್.ಪಾಟೀಲ