ನವದೆಹಲಿ, (ಜುಲೈ 11): ಕರ್ನಾಟಕದ ಕೆಲ ಭಾಗಗಳಲ್ಲಿ ಮುಂಗಾರು ಮಳೆ ಅಬ್ಬರಿಸುತ್ತಿದ್ದರಿಂದ ಬತ್ತಿ ಹೋಗಿದ್ದ ಜಲಾಶಯಗಳಿಗೆ ಜೀವ ಕಳೆ ಬಂದಿದೆ. ಅದರಂತೆ ಸಂಪೂರ್ಣವಾಗಿ ಖಾಲಿ ಡೆತ್ ಸ್ಟೋರೇಜ್ ತಲುಪಿದ್ದ ಕಾವೇರಿಗೆ ನೀರು ಹರಿದುಬರುತ್ತಿದ್ದು, ಈ ಭಾಗದ ಜನರಲ್ಲಿ ಸಂತಸ ಮನೆ ಮಾಡಿದೆ. ಇದರ ಮಧ್ಯ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು, ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಆದೇಶ ಹೊರಡಿಸಿದೆ. ಜುಲೈ 12ರಿಂದ 31ರವರೆಗೆ ಪ್ರತಿನಿತ್ಯ ತಮಿಳುನಾಡಿಗೆ 1 ಟಿಎಂಸಿ ಕಾವೇರಿ ನೀರು ಹರಿಸಲು ಆದೇಶಿಸಿದೆ.
ಇಂದು (ಜುಲೈ 11) ನವದೆಹಲಿಯಲ್ಲಿ ನಡೆದ ಸಭೆಯಲ್ಲಿ ನೀರು ಬಿಡುವಂತೆ ತಮಿಳುನಾಡು ವಾದ ಮಾಡಿದೆ. ಇದಕ್ಕೆ ಪ್ರತಿಯಾಗಿ ಕರ್ನಾಟಕವೂ ಸಹ ಕಾವೇರಿಯಲ್ಲಿ ನೀರಿನ ಕೊರತೆ ಇದೆ. ಈ ಮಾನ್ಸೂನ್ ಸಾಮಾನ್ಯವಾಗಿಲ್ಲ, 28% ಮಳೆ ಕೊರತೆಯಾಗಿದೆ. ಹೀಗಾಗಿ ನೀರು ಬಿಡಲು ಆಗುವುದಿಲ್ಲ ಎಂದು ಕರ್ನಾಟಕದ ಪರ ಅಧಿಕಾರಿಗಳು ವಾದ ಮಂಡಿಸಿದ್ದಾರೆ. ಎರಡೂ ರಾಜ್ಯಗಳ ವಾದ-ಪ್ರತಿವಾದ ಆಲಿಸಿದ CWRC, ಪ್ರತಿನಿತ್ಯ 1 ಟಿಎಂಸಿ ನೀರು ಹರಿಸುವಂತೆ ಕರ್ನಾಟಕಕ್ಕೆ ಸೂಚಿಸಿ ಆದೇಶ ಹೊರಡಿಸಿದೆ.
ಕಳೆದ ಜಲವರ್ಷದಲ್ಲಿ ಕರ್ನಾಟಕ ನೀರು ಸರಿಯಾಗಿ ಹರಿಸಿಲ್ಲ. ಪ್ರಸಕ್ತ ಜಲವರ್ಷದಲ್ಲಿ ಮನ್ಸೂನ್ ಸಾಮಾನ್ಯವಾಗಿದೆ. ಕಾವೇರಿ ಕೊಳ್ಳದ ಡ್ಯಾಂಗಳಲ್ಲಿ ಸಾಕಷ್ಟು ನೀರು ಸಂಗ್ರಹವಾಗಿದೆ. ಹೀಗಾಗಿ ನೀರು ಬಿಡುವಂತೆ ಶಿಫಾರಸು ಮಾಡುವಂತೆ ತಮಿಳುನಾಡು ಪರ ಅಧಿಕಾರಿಗಳು CWRC ಗೆ ಮನವಿ ಮಾಡಿದ್ದಾರೆ.
ಜೂನ್ 1ರಿಂದ ಇಲ್ಲಿಯವರಗೆ 41 ಟಿಎಂಸಿ ನೀರು ಸೇರಿದೆ. ಈ ಮಾನ್ಸೂನ್ ಸಾಮಾನ್ಯವಾಗಿಲ್ಲ, 28% ಮಳೆ ಕೊರತೆಯಾಗಿದೆ/ ಕಾವೇರಿ ಕೊಳ್ಳದ ನಾಲ್ಕು ಜಲಾಶಯಗಳಲ್ಲಿ ಒಟ್ಟು 58 ಟಿಎಂಸಿ ನೀರಿದೆ . ತಮಿಳುನಾಡಿನ ಮೂರು ಜಲಾಶಯಗಳಲ್ಲಿ 24.705 ಟಿಎಂಸಿ ಸಂಗ್ರಹವಿದೆ. ಸದ್ಯಕ್ಕೆ ನೀರು ಬಿಡುವ ಬಗ್ಗೆ ಯಾವುದೆ ಶಿಫಾರಸು ಮಾಡಬೇಡಿ. ಜುಲೈ25ರ ವರೆಗೆ ಮಳೆಯ ಪ್ರಮಾಣ ನೋಡಿಕೊಂಡು ಶಿಫಾರಸು ಮಾಡಿ. ಈಗಲೇ ನೀರು ಬಿಡುವಂತೆ ಶಿಫಾರಸ್ಸು ಮಾಡಬೇಡಿ ಎಂದು ಕರ್ನಾಟಕ ಮನವಿ ಮಾಡಿದೆ.
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೃಷ್ಣರಾಜ ಸಾಗರ ಆಣೆಕಟ್ಟು 124.80 ಅಡಿ ಗರಿಷ್ಠ ಮಟ್ಟದ ಸಾರ್ಮರ್ಥ ಹೊಂದಿದ್ದು, ಡ್ಯಾಂಗೆ 6,146 ಕ್ಯೂಸೆಕ್ ಒಳಹರಿವು ಬರುತ್ತಿದೆ. ಈ ಪೈಕಿ ಕುಡಿಯುವುದಕ್ಕಾಗಿ 1972 ಕ್ಯೂಸೆಕ್ ನೀರನ್ನು ನಾಲೆಗೆ ಹರಿಸಲಾಗುತ್ತಿದೆ. 49.452 ಟಿಎಂಸಿ ಸಾಮರ್ಥ್ಯದ ಡ್ಯಾಂನಲ್ಲಿ ಸದ್ಯ 26.372 ಟಿಎಂಸಿ ನೀರು ಸಂಗ್ರಹವಾಗಿದೆ.
ಕರ್ನಾಟಕದಲ್ಲಿ ಹಲವೆಡೆ ಮಳೆ ಸುರಿಯುತ್ತಿದೆ. ಅದರಲ್ಲೂ ಮಲೆನಾಡು, ಕರಾವಳಿ ಮತ್ತು ಕಾವೇರಿ ಜಲಾನಯನ ಪ್ರದೇಶದಲ್ಲೂ ಮಳೆ ಮುಂದುವರೆದಿದೆ. ಹೀಗಾಗಿ ಕೆಆರ್‌ಎಸ್ ಅಣೆಕಟ್ಟೆಗೆ ನೀರು ಹರಿದುಬರುತ್ತಿದ್ದು, ಡ್ಯಾಂನ ನೀರಿನ ಮಟ್ಟ ದಿನೇ ದಿನೇ ಹೆಚ್ಚುತ್ತಿದೆ. ಸದ್ಯ ಕೆಆರ್‌ಎಸ್ ಡ್ಯಾಂನ ನೀರಿನ ಮಟ್ಟ 104.30 ಅಡಿಗೆ ತಲುಪಿದೆ.
ಇತ್ತ ಕೆಆರ್‌ಎಸ್ ನದಿಯಲ್ಲಿ ನೀರಿನ ಪ್ರಮಾಣ ಏರಿಕೆಯಾಗುತ್ತಿರುವುದರಿಂದ ನಾಲೆಗಳಿಗೆ ನೀರು ಹರಿಸಬೇಕೆಂದು ಈ ಭಾಗದಲ್ಲಿ ರೈತರು ಆಗ್ರಹಿಸುತ್ತಿದ್ದಾರೆ. ಆದ್ರೆ, ನದಿ ಭರ್ತಿಯಾಗುವವರೆಗೂ ನಾಲೆಗೆ ನೀರು ಬಿಡುವುದಿಲ್ಲ ಎನ್ನಲಾಗುತ್ತಿದೆ. ಇದರ ಮಧ್ಯ ಇದೀಗ ತಮಿಳುನಾಡಿಗೆ ನಿತ್ಯ ಬರೋಬ್ಬರಿ 1 ಟಿಎಂಸಿ ನೀರು ಬಿಡಬೇಕೆಂದು ಕಾವೇರಿ ನೀರು ನಿರ್ವಹಣ ಪ್ರಾಧಿಕಾರ ಆದೇಶ ಹೊರಡಿಸಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:37 pm, Thu, 11 July 24