ವಾಲ್ಮೀಕಿ ನಿಗಮದ ಹಗರಣ: ಬಿ ನಾಗೇಂದ್ರ ಫ್ಲ್ಯಾಟ್ನಲ್ಲಿ ಇಬ್ಬರನ್ನು ವಶಕ್ಕೆ ಪಡೆದ ಇಡಿ
ವಾಲ್ಮೀಕಿ ನಿಗಮದ ಹಗರಣದಲ್ಲಿ ಕೋಟಿ ಕುಳಗಳು ಸಿಕ್ಕಿಬಿದ್ದಾರೆ. ಇಡಿ ಅಧಿಕಾರಿಗಳು ಇಂಚಿಂಚೂ ಜಾಲಾಡುತ್ತಿದ್ದಾರೆ. ಈ ಮಧ್ಯೆ ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ಮಾಜಿ ಸಚಿವ ನಾಗೇಂದ್ರ ಫ್ಲ್ಯಾಟ್ನಿಂದ ಇಬ್ಬರು ವ್ಯಕ್ತಿಗಳನ್ನು ಇಡಿ ಅಧಿಕಾರಿಗಳು ಇಂದು ವಶಕ್ಕೆ ಪಡೆದುಕೊಂಡು ಕರೆದುಕೊಂಡು ಹೋಗಿದ್ದಾರೆ.
ಬೆಂಗಳೂರು, ಜುಲೈ 11: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ (Valmiki Corporation Scam) ಸಂಬಂಧಿಸಿದಂತೆ ಸದ್ಯ ಬಿ.ನಾಗೇಂದ್ರ ಪಿಎ ಹರೀಶ್ ಮತ್ತು ಮತ್ತೋರ್ವನನ್ನು ಇಡಿ ಅಧಿಕಾರಿಗಳು ಇಂದು ವಶಕ್ಕೆ ಪಡೆದುಕೊಂಡಿದ್ದಾರೆ. ಡಾಲರ್ಸ್ ಕಾಲೋನಿಯಲ್ಲಿರುವ ಮಾಜಿ ಸಚಿವ ನಾಗೇಂದ್ರ ಫ್ಲ್ಯಾಟ್ನಿಂದವಶಕ್ಕೆ ಪಡೆದು ಕರೆದುಕೊಂಡು ಹೋಗಿದ್ದಾರೆ. ನಿನ್ನೆಯಷ್ಟೇ ನಾಗೇಂದ್ರ ಪಿಎ ಹರೀಶ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿ ಬಿಟ್ಟು ಕಳುಹಿಸಿದ್ದರು. ಇದೀಗ ಮತ್ತೆ ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಇಡಿ ಕಚೇರಿಗೆ ಶಿಫ್ಟ್
ನಾಗೇಂದ್ರ ಫ್ಲ್ಯಾಟ್ನಿಂದ ಕರೆದೊಯ್ದ ಇಬ್ಬರನ್ನು ವಶಕ್ಕೆ ಪಡೆದು ಶಾಂತಿನಗರದ ಇಡಿ ಕಚೇರಿಗೆ ಅಧಿಕಾರಿಗಳು ಕರೆತಂದಿದ್ದಾರೆ. ಕಚೇರಿಯಲ್ಲಿ ಇಬ್ಬರನ್ನು ಅಧಿಕಾರಿಗಳು ವಿಚಾರಣೆ ಮಾಡಲಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ವಸಂತನಗರದಲ್ಲಿರುವ ವಾಲ್ಮೀಕಿ ಅಭಿವೃದ್ಧಿ ನಿಗಮದ ಕಚೇರಿಯಲ್ಲಿ ಇಡಿ ಶೋಧ ಕಾರ್ಯ ಮುಂದುವರೆದಿದೆ. ನಿಗಮದಲ್ಲಿ ಆಡಿಟ್ ಮಾಡುತ್ತಿದ್ದವನನ್ನು ಕರೆಸಿಕೊಂಡು ಇಡಿ ಪರಿಶೀಲನೆ ಮಾಡಿದ್ದು, ಆಡಿಟರ್ ಬಳಿ ಮಾಹಿತಿ ಪಡೆದುಕೊಂಡಿದೆ.
ಇದನ್ನೂ ಓದಿ: ವಾಲ್ಮೀಕಿ ಹಗರಣ: ಶಾಸಕ ಬಸನಗೌಡ ದದ್ದಲ್ ಮಾಜಿ ಪಿಎ ಪಂಪಣ್ಣ ಇಡಿ ವಶಕ್ಕೆ
ಪ್ರಭಾರ ಎಂಡಿ ರಾಜ್ಕುಮಾರ್ ನಿಗಮದ ಕಚೇರಿಯಲ್ಲಿದ್ದು, ಇಡಿ ಅಧಿಕಾರಿಗಳು ಊಟ ತರಿಸಿಕೊಂಡಿದ್ದಾರೆ. ನಿನ್ನೆ ಸಂಜೆಯಿಂದಲೂ ಇಡಿ ತಂಡ ಕಚೇರಿಯಲ್ಲೇ ಬೀಡುಬಿಟ್ಟಿತ್ತು.
ವಾಲ್ಮೀಕಿ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ವಿಲ್ಲಾದಲ್ಲಿ, ಇಡಿ ಅಧಿಕಾರಿಗಳು ಇಂಚಿಂಚೂ ಜಾಲಾಡಿದ್ರು. ಯಲಹಂಕದ ಶ್ರೀನಿವಾಸಪುರ ಬಳಿಯ ವಿಲ್ಲಾ ಖರೀದಿಯ ಬಗ್ಗೆ ದದ್ದಲ್ ದಂಪತಿಯನ್ನ ವಿಚಾರಣೆ ಮಾಡಲಾಗಿದೆ. ಆದರೆ ದದ್ದಲ್ ಮಾತ್ರ ಯಾವುದನ್ನೂ ಒಪ್ಪಿಕೊಂಡಿಲ್ಲ. ಎಲ್ಲವೂ ಮಾಜಿ ಪಿಎ ಪಂಪಣ್ಣನತ್ತಲೇ ಬೊಟ್ಟು ಮಾಡಿ ತೋರಿಸಿದ್ದಾರೆ. ಇನ್ನು ಪಂಪಣ್ಣ ಪಡೆದುಕೊಂಡಿರೋ 55 ಲಕ್ಷ ರೂ. ಹಣದ ಬಗ್ಗೆ ಪ್ರಶ್ನೆ ಮಾಡಿದ್ರೂ ಆ ವಿಚಾರ ನನಗೆ ಗೊತ್ತಿಲ್ಲ ಅಂದಿದ್ದಾರೆ.
ಇದನ್ನೂ ಓದಿ: ವಾಲ್ಮೀಕಿ ನಿಗಮ ಹಗರಣ: ಕನ್ನಡ ಕೋಟ್ಯಧಿಪತಿಯಲ್ಲಿ 50 ಲಕ್ಷ ರೂ. ಗೆದ್ದಿದ್ದ ಪಂಪಣ್ಣ ಹಿನ್ನೆಲೆಯೇ ರೋಚಕ!
ವಾಲ್ಮೀಕಿ ನಿಗಮ ಹಗರಣ ಸಂಬಂಧ ಸರ್ಕಾರದ ವಿರುದ್ಧ ಬಿಜೆಪಿ ಬೀದಿಗಿಳಿಯಲು ನಿರ್ಧರಿಸಿದೆ. ಜುಲೈ 15ಕ್ಕೆ ವಿಧಾನಸೌಧ ಮುತ್ತಿಗೆಗೆ ಬಿಜೆಪಿ ಕರೆ ನೀಡಲಾಗಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ. ಸುನಿಲ್ ಕುಮಾರ್ ಹೇಳಿದ್ದಾರೆ. ಬಿಜೆಪಿ ನಡೆಗೆ ಸಿಎಂ ಸಿದ್ದರಾಮಯ್ಯ ಗರಂ ಆಗಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:47 pm, Thu, 11 July 24