ಬೆಂಗಳೂರು: ಅಂಗಡಿಗಳ ಶೆಟರ್ ಮುರಿದು ನಗದು ದೋಚಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನಲ್ಲಿ ನಡೆದಿದೆ. ತಾಲೂಕಿನ ದಾಬಸ್‌ಪೇಟೆಯ 3 ಅಂಗಡಿಗಳಲ್ಲಿ ಸರಣಿ ಕಳ್ಳತನ ನಡೆದಿದ್ದು, ಗೋವರ್ಧನ್, ಚಿಕ್ಕಣ್ಣ, ಪ್ರಸನ್ನ ಅವರಿಗೆ ಸೇರಿದ ಅಂಗಡಿಗಳಲ್ಲಿ ಕಳ್ಳತನವಾಗಿದೆ. ದಾಬಸ್‌ಪೇಟೆಯ 3 ಅಂಗಡಿಗಳ ರೋಲಿಂಗ್ ಶೆಟರ್ ಮುರಿದು 30 ಸಾವಿರ ನಗದು ದೋಚಿ ಕಳ್ಳರು ಪರಾರಿಯಾಗಿದ್ದಾರೆ. ಗೋವರ್ಧನ್ ಹಾಗೂ ಚಿಕ್ಕಣ್ಣಗೆ ಸೇರಿದ ಹಾರ್ಡ್‌ವೇರ್, ಪ್ರಸನ್ನ ಅವರ ಟೈಲ್ಸ್ ಅಂಗಡಿಯಲ್ಲಿ ಕಳ್ಳತನವಾಗಿದೆ. ಈ ಸಂಬಂಧ ದಾಬಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರಿನಲ್ಲಿ ಕಾರು ಕಳ್ಳನ ಬಂಧನ
ರಿಪೇರಿಗಾಗಿ ಗ್ಯಾರೇಜ್‌ಗೆ ಬಿಟ್ಟಿದ್ದ ಕಾರುಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬ್ಯಾಟರಾಯನಪುರ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದ್ದು, ಬಂಧಿತನಿಂದ ಪೊಲೀಸರು 25 ಲಕ್ಷ ಬೆಲೆ ಬಾಳುವ 4 ಕಾರು ವಶಪಡಿಸಿಕೊಂಡಿದ್ದಾರೆ.
ಕಾರಿನ ಡಿಕ್ಕಿಯಲ್ಲಿ ಅವಿತು ದರೋಡೆಗೆ ಯತ್ನ; ಓರ್ವನ ಬಂಧನ
ಕಾರಿನ ಡಿಕ್ಕಿಯಲ್ಲಿ ಅವಿತು ದರೋಡೆಗೆ ಯತ್ನಿಸುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ ಘಟನೆ ಬೆಂಗಳೂರು ಉತ್ತರ ತಾಲೂಕಿನ ಬಾಗಲೂರು ಬಳಿ ನಡೆದಿದೆ. ದೆಹಲಿಯಿಂದ ಬಂದ ಕರ್ನಲ್ ಬಳಿ ರಾಬರಿ ಮಾಡಲು ಯತ್ನಿಸಿದ ಆರೋಪಿ ಸದ್ಯ ಪೊಲೀಸರ ಅತಿಥಿಯಾಗಿದ್ದಾನೆ. ನೆನ್ನೆ ಮುಂಜಾನೆ ದೆಹಲಿಯಿಂದ ಕೆಂಪೇಗೌಡ ಏರ್ಪೋಟ್ಗೆ ಬಂದಿದ್ದ ಕರ್ನಲ್, ನಂತರ ಏರ್ಪೋಟ್ನಿಂದ ಒಲಾ ಕ್ಯಾಬ್ ಬುಕ್ ಮಾಡಿಕೊಂಡು ಬೆಂಗಳೂರಿಗೆ ಪ್ರಯಾಣ ನಡೆಸಿದ್ದಾರೆ. ಈ ವೇಳೆ ಸಿಟಿಗೆ ಟೋಲ್ ರಸ್ತೆಯಲ್ಲಿ ಹೋಗದೆ ಬಾಗಲೂರು ಬಳಿ ಕರೆದುಕೊಂಡು ಹೋಗಿದ್ದ ಚಾಲಕ, ನಂತರ ಡಿಕ್ಕಿಯಲ್ಲಿ ಶಬ್ಧ ಬರುತ್ತಿದೆ ಎಂದು ನಿರ್ಜನ ಪ್ರದೇಶದಲ್ಲಿ ಗಾಡಿ ನಿಲ್ಲಿಸಿ ದಾಳಿಗೆ ಮುಂದಾಗಿದ್ದಾನೆ.
ಡಿಕ್ಕಿಯಲ್ಲಿದ್ದ ಮತ್ತೋರ್ವನ ಜೊತೆ ಸೇರಿ ಚಾಕು ತೋರಿಸಿ ಹಣಕ್ಕೆ ಬೆದರಿಕೆ ಹಾಕಿದ್ದು, ಈ ವೇಳೆ ದರೋಡೆಕೋರರನ್ನು ತಳ್ಳಿ ಕರ್ನಲ್ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಇದೇ ವೇಳೆ ರಸ್ತೆಯಲ್ಲಿ ಬಂದ ಹೊಯ್ಸಳ ಪೊಲೀಸರಿಗೆ ನಡೆದ ಘಟನೆ ಬಗ್ಗೆ ಮಾಹಿತಿ ನೀಡಿದ್ದು, ಕೂಡಲೆ ಅಲರ್ಟ್ ಆದ ಪಿಐ ಪ್ರಶಾಂತ್ ನೇತೃತ್ವದ ತಂಡ ಓರ್ವ ಆರೋಪಿಯನ್ನು ಬಂಧಿಸಿದೆ, ತಪ್ಪಿಸಿಕೊಂಡ ಮತ್ತೊಬ್ಬನಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
ಇದನ್ನೂ ಓದಿ:
ಯಾದಗಿರಿಯಲ್ಲಿ ಡಿಸೇಲ್ ಕಳವು; 30 ಮೀಟರ್ ದೂರದಿಂದಲೇ 5 ಸಾವಿರ ಲೀಟರ್ ಡಿಸೇಲ್ ಕಳ್ಳತನ
ಲಾಕ್ ಡೌನ್ನಲ್ಲಿ ಕೆಲಸ ಇಲ್ಲದೆ ಕಳ್ಳತನ ಮಾಡಿ ಸಿಕ್ಕಿ ಬಿದ್ದ ಖ್ಯಾತ ಸೀರಿಯಲ್ ನಟಿಯರು
Published On - 10:56 am, Sat, 3 July 21