ಮಂಗಳೂರಿನಲ್ಲಿ ರಾಜಾರೋಷವಾಗಿ ನಡೆಯುತ್ತಿದೆ ಜೂಜು ಕೇಂದ್ರ; ಕೈಕಟ್ಟಿ ಕುಳಿತ ಜಿಲ್ಲಾಡಳಿತ
ಕಡಲನಗರಿಯಲ್ಲಿ ಕೆಲ ದಿನಗಳ ಹಿಂದಷ್ಟೇ ಡಾಕ್ಟರ್ಸ್ಗಳ ನಶಾ ಲೋಕಾದ ಕಹಾನಿ ಬೆಳಕಿಗೆ ಬಂದಿದ್ದು, ಇದೀಗ ಸ್ಕಿಲ್ ಗೇಮ್, ರಿಕ್ರಿಯೇಶನ್ ಕ್ಲಬ್ ಹೆಸರಲ್ಲಿ ಜೂಜು ಅಡ್ಡೆಗಳು ನಡೆಯುತ್ತಿರುವುದು ಗೊತ್ತಾಗಿದೆ.
ಮಂಗಳೂರು: ಕೆಲದಿನಗಳ ಹಿಂದೆ ನಗರದಲ್ಲಿ ಡಾಕ್ಟ್ರರ್ಸ್ ಮತ್ತು ವೈದ್ಯಕೀಯ ವಿದ್ಯಾರ್ಥಿಗಳ ಅಮಲಿನ ಲೋಕ ಬೆಳಕಿಗೆ ಬಂದಿತ್ತು. ಈ ಅಮಲಿನ ಲೋಕದ ಜೊತೆ ರಿಕ್ರಿಯೇಶನ್ ಕ್ಲಬ್‌ಗಳ ಹೆಸರಿನಲ್ಲಿ ರಾಜಾರೋಷವಾಗಿ ಜೂಜು ಕೇಂದ್ರಗಳು ನಡೆಯುತ್ತಿದೆ. ಆದರೆ ಈ ಜೂಜು ಕೇಂದ್ರಗಳನ್ನು ಮಟ್ಟ ಹಾಕುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಹೀಗಾಗಿ ಈ ಅಕ್ರಮ ಜೂಜು ಕೇಂದ್ರಗಳಿಗೆ ಡಿ.ವೈ.ಎಫ್.ಐ ಸಂಘಟನೆ ದಾಳಿ ಮಾಡಿದ್ದು ಈ ಸಂದರ್ಭದಲ್ಲಿ ಮನೋರಂಜನಾ ಕ್ರೀಡೆಯನ್ನ ಮಾತ್ರ ನಡೆಸಬೇಕಾದ ಕೇಂದ್ರಗಳಲ್ಲಿ ಹಣವನ್ನು ಪಣಕ್ಕಿಟ್ಟು ಆಟ ಏರ್ಪಡಿಸುತ್ತಿರುವುದು ಗೊತ್ತಾಗಿದೆ.
ಈ ರೀತಿಯ ಕ್ಲಬ್ಗಳಲ್ಲಿ ಮನೋರಂಜನೆಗಷ್ಟೇ ಕ್ಯಾರಂ, ಶೂಟಿಂಗ್ ಸೇರಿದಂತೆ ಇತರ ಒಳಾಂಗಣ ಕ್ರೀಡೆಗಳನ್ನು ಮಾಡಬೇಕು. ಜೊತೆಗೆ ಕ್ಲಬ್ನ ಸದಸ್ಯರಿಗಷ್ಟೇ ಇಲ್ಲಿ ಆಟ ಆಡೋದಕ್ಕೆ ಅವಕಾಶವಿರುತ್ತದೆ. ಆದರೆ ಇದೀಗ ಮಂಗಳೂರಿನ ಹಲವು ಕಡೆ ಈ ಕೇಂದ್ರಗಳು ತಲೆ ಎತ್ತಿದೆ. ರಿಕ್ರಿಯೇಷನ್ ಕ್ಲಬ್ ಹೆಸರಿನಲ್ಲಿ ಸ್ಕಿಲ್‌ಗೇಮ್, ಮಟ್ಕಾ, ಜೂಜು ದಂಧೆಯನ್ನಾಗಿ ನಡೆಸಿ ಮಂಗಳೂರು ನಗರ ಜೂಜು ನಗರವಾಗಿ ಪರಿವರ್ತಿತವಾಗುತ್ತಿದೆ. ಈ ದಂಧೆಗೆ ಬಲಿಯಾದ ಅದೆಷ್ಟೋ ಯುವಕರು ಹೊರಬರಲಾಗದೆ ಕುಟುಂಬಗಳು ಬೀದಿಪಾಲಾಗುತ್ತಿವೆ. ಜೂಜು ದಂಧೆಗೆ ವ್ಯಾಪಾರಿಗಳು, ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳು ಸೇರಿದಂತೆ ಮಧ್ಯಮ ವರ್ಗದ ಕೂಲಿ ಕಾರ್ಮಿಕರು ಬಲಿಯಾಗುತ್ತಿದ್ದಾರೆ. ಈ ಬಗ್ಗೆ ಆಡಳಿತ ಯಂತ್ರಕ್ಕೆ ದೂರು ನೀಡಿ ಪ್ರಯೋಜನವಾಗದ ಹಿನ್ನಲೆಯಲ್ಲಿ ಜೂಜು ಕೇಂದ್ರ, ಸ್ಕಿಲ್‌ಗೇಮ್ ಕೇಂದ್ರಗಳನ್ನು ಮುಚ್ಚುವಂತೆ ಆಗ್ರಹಿಸಿ ಡಿವೈಎಫ್‌ಐ ಬೀದಿಗಿಳಿದಿದ್ದು, ನಗರದ ಈ ಜೂಜು ಕೇಂದ್ರಗಳಿಗೆ ಸಂಘಟನೆ ಕಾರ್ಯಕರ್ತರೇ ಮುತ್ತಿಗೆ ಹಾಕಿ ಪ್ರತಿಭಟಿಸಿ ಬಾಗಿಲು ಮುಚ್ಚಿಸಿದ್ದಾರೆ.
ಇದನ್ನೂ ಓದಿ:ಮಂಗಳೂರು: ಕರಾವಳಿಯಲ್ಲಿ ಮುಂದುವರೆದ ಧರ್ಮಸಂಘರ್ಷ; ಅನ್ಯಧರ್ಮೀಯರಿಗಿಲ್ಲ ವ್ಯಾಪಾರ ಅನುಮತಿ
ಈ ಸೆಂಟರ್ಗಳ ಮೋಸದಾಟಕ್ಕೆ ಸಿಲುಕಿದ ಬಹಳಷ್ಟು ಕುಟುಂಬಗಳು ತಮ್ಮ ಮನೆ, ಆಸ್ತಿ ಸಹಿತ ಅಮೂಲ್ಯ ಸೊತ್ತುಗಳನ್ನು ಕಳದುಕೊಂಡು ಬೀದಿಗೆ ಬಿದ್ದಿವೆ. ಒಟ್ಟಿನಲ್ಲಿ ಕಡಲನಗರಿ ಸಂಪೂರ್ಣ ಜೂಜಿನ ನಗರ ಆಗುವ ಮೊದಲು ಕೂಡಲೇ ಇಂತಹ ಅಡ್ಡೆಗಳ ವಿರುದ್ಧ ಕ್ರಮಕೈಗೊಳ್ಳಬೇಕಾಗಿದೆ.
ವರದಿ: ಅಶೋಕ್ ಟಿವಿ9 ಮಂಗಳೂರು
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:28 pm, Sun, 15 January 23