ದಕ್ಷಿಣ ಕನ್ನಡದಲ್ಲಿ ಹಲವೆಡೆ ಭೂಕಂಪನ ಅನುಭವ; ಸುಳ್ಯದಲ್ಲಿ 3-4 ಸೆಕೆಂಡುಗಳ ಕಾಲ ಭಾರಿ ಶಬ್ದ
ಸುಳ್ಯ ಪಟ್ಟಣ, ಸಂಪಾಜೆ, ಗೂನಡ್ಕ, ಮರ್ಕಂಜ, ಆಲೆಟ್ಟಿ, ತೊಡಿಕಾನ, ಪೆರಾಜೆ ಎಂಬಲ್ಲಿ ಇಂದು ಬೆಳಗ್ಗೆ 9.12 ರ ವೇಳೆಗೆ 3-4 ಸೆಕೆಂಡುಗಳ ಕಾಲ ಶಬ್ದದೊಂದಿಗೆ ಲಘು ಕಂಪನ ಆಗಿದೆ ಎಂಬ ಮಾಹಿತಿ ತಿಳಿದುಬಂದಿದೆ.
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ವಿವಿಧ ಕಡೆ ಭೂಮಿ ಕಂಪಿಸಿದ (Earthquake) ಅನುಭವವಾಗಿದ್ದು, ಜನರು ಆತಂಕಗೊಂಡಿದ್ದಾರೆ. ಸುಳ್ಯ (Sulya) ಪಟ್ಟಣ, ಸಂಪಾಜೆ, ಗೂನಡ್ಕ, ಮರ್ಕಂಜ, ಆಲೆಟ್ಟಿ, ತೊಡಿಕಾನ, ಪೆರಾಜೆ ಎಂಬಲ್ಲಿ ಇಂದು ಬೆಳಗ್ಗೆ 9.12 ರ ವೇಳೆಗೆ 3-4 ಸೆಕೆಂಡುಗಳ ಕಾಲ ಶಬ್ದದೊಂದಿಗೆ ಲಘು ಕಂಪನ ಆಗಿದೆ. ಕೆಲವರ ಮನೆಗಳಲ್ಲಿ ಪಾತ್ರೆಗಳು ಉರುಳಿವೆ ಎಂಬ ಮಾಹಿತಿ ತಿಳಿದುಬಂದಿದೆ. ಜೂನ್ 23ರಂದು ಕೊಡಗು ಮತ್ತು ಹಾಸನ ಜಿಲ್ಲೆಯ ವಿವಿಧೆಡೆ ಭೂಮಿ ಕಂಪಿಸಿದ ಅನುಭವವಾಗಿತ್ತು. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಆಯುಕ್ತರು ಭೂಕಂಪನ ಸಂಭವಿಸಿರುವುದನ್ನು ದೃಢಪಡಿಸಿದ್ದರು.
ಭೂಕಂಪನದಿಂದಾಗಿ ಕೊಡಗು-ದಕ್ಷಿಣ ಕನ್ನಡ ಜಿಲ್ಲೆ ಗಡಿಭಾಗವಾದ ಸಂಪಾಜೆಯಲ್ಲಿ ಮನೆ ಗೋಡೆಗಳು ಬಿರುಕು ಬಿಟ್ಟಿವೆ. ಸಂಪಾಜೆ ಗ್ರಾಮ ಪಂಚಾಯತಿ ಸದಸ್ಯ ಅಬುಶಾಲಿ ಎಂಬುವವರ ಮನೆ ಗೋಡೆಗಳು ಬೀರುಕು ಬಿಟ್ಟಿರುವ ಬಗ್ಗೆ ಮಾಹಿತಿ ಇದೆ.
ಇದನ್ನೂ ಓದಿ: ಡಿಕೆ ಶಿವಕುಮಾರ್ ವಿರುದ್ಧ ದೆಹಲಿ ಕೋರ್ಟ್ಗೆ ಸಲ್ಲಿಕೆಯಾಗಿರುವ ಇಡಿ ಚಾರ್ಜ್ ಶೀಟ್ನಲ್ಲಿ ಏನೆಲ್ಲಾ ಆರೋಪಗಳಿವೆ?
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರಾಮಸ್ಥರೊಬ್ಬರು, 9 ಗಂಟೆ ಸುಮಾರಿಗೆ ಭೂಮಿ ಕಂಪಿಸಿದ ಅನುಭವವಾಗಿದೆ. ನಮ್ಮ ಜೀವನದಲ್ಲಿ ಈ ರೀತಿ ಅನುಭವ ಆಗಿದ್ದು ಎರಡನೇ ಬಾರಿ. ನಾನು ಚಿಕ್ಕವನಿದ್ದಾಗ ಇದೇ ರೀತಿ ಕಂಪನವಾಗಿತ್ತು. ಮೊದಲ ಬಾರಿ ಪಾತ್ರೆಗಳು ಕೆಳಗೆ ಬಿದ್ದಿದ್ದವು. ಆದರೆ ಈ ಬಾರಿ ಅಷ್ಟರ ಮಟ್ಟಿಗೆ ಏನೂ ಆಗಿಲ್ಲ ಎಂದರು.
ಭೂಕಂಪನ ದೃಢ: ಜಿಲ್ಲೆಯಲ್ಲಿ ಹಲವು ಕಡೆ ಭೂಕಂಪನ ಆಗಿರುವ ಬಗ್ಗೆ ರಾಜ್ಯ ವಿಪತ್ತು ನಿರ್ವಹಣಾ ಕೋಶ ದೃಢಪಡಿಸಿದೆ. ರಿಕ್ಟರ್ ಮಾಪಕದಲ್ಲಿ 2.7ರಷ್ಟು ತೀವ್ರತೆ ದಾಖಲಾಗಿದ್ದು, ಬೆಳಗ್ಗೆ 9 ಗಂಟೆ 9 ನಿಮಿಷ 48 ಸೆಕೆಂಡ್ಗೆ ಭೂಕಂಪ ಆಗಿರುವ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ: ಹಳ್ಳದಲ್ಲಿ ಭ್ರೂಣ ಎಸೆದ ಪ್ರಕರಣ: ವೆಂಕಟೇಶ ಆಸ್ಪತ್ರೆ ಮತ್ತು ಸ್ಕ್ಯಾನಿಂಗ್ ಸೆಂಟರ್ ಜಪ್ತಿ ಮಾಡಿದ ಡಿಎಚ್ಒ
Published On - 10:11 am, Sat, 25 June 22