
ಮಂಗಳೂರು, ಫೆಬ್ರವರಿ 25: ಮಂಗಳೂರು-ಬೆಂಗಳೂರು ರೈಲು ಮಾರ್ಗದಲ್ಲಿ ಬಾಕಿಯಿದ್ದ ಘಾಟ್ ಸೆಕ್ಷನ್‌ನ ಹಳಿ ವಿದ್ಯುದೀಕರಣ ಪೂರ್ತಿ ಆಗಿದೆ. ಇನ್ನೇನು ಕಡಲನಗರಿಗೆ ವಂದೇ ಭಾರತ್ ರೈಲು (Vande Bharat) ಸಂಚಾರ ಮಾಡುತ್ತೆ ಎಂದು ಚಾತಕ ಪಕ್ಷಿಯಂತೆ ಕಾಯುತ್ತಿದ್ದ ಮಂಗಳೂರಿಗೆ (Mangaluru) ರೈಲ್ವೆ ಇಲಾಖೆ ಬಿಗ್ ಶಾಕ್ ನೀಡಿದೆ. ವಂದೇ ಭಾರತ್ ರೈಲು ಮಂಗಳೂರು ಮೂಲಕವೇ ಹಾದು ಹೋದರೂ ಇಲ್ಲಿ ನಿಲುಗಡೆ ನೀಡದಿರುವುದು ರೈಲು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಕರಾವಳಿ ತೀರದಲ್ಲಿ ಕರ್ನಾಟಕದ ಹೆಬ್ಬಾಗಿಲೆಂದೇ ಪ್ರಸಿದ್ಧಿ ಪಡೆದ ಮಂಗಳೂರಿಗೆ ಎರಡು ವಂದೇ ಭಾರತ್ ರೈಲು ನೀಡುವುದಾಗಿ ಇತ್ತಿಚೇಗೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಭರವಸೆ ನೀಡಿದ್ದರು. ಆದರೆ ಇದೀಗ ಮಂಗಳೂರು ಉಡುಪಿಗೆ ಈ ವಂದೇ ಭಾರತ್ ರೈಲು ಕೈ ತಪ್ಪುವ ಶಂಕೆ ಎದುರಾಗಿದೆ. ಯಶವಂತಪುರ-ಮಡಗಾಂವ್ ನಡುವೆ ಪ್ರಸ್ತಾವಿತ ವಂದೇ ಭಾರತ್ ರೈಲು ಮಂಗಳೂರು ವ್ಯಾಪ್ತಿಯಲ್ಲಿ ಹಾದು ಹೋಗುತ್ತಿದ್ದರೂ ನಗರದಲ್ಲಿ ನಿಲುಗಡೆ ನೀಡದಿರುವುದು ರೈಲ್ವೆ ಪ್ರಯಾಣಿಕರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ನಾವು ರೈಲು ನಿಲ್ದಾಣದಲ್ಲಿ ನಿಂತು ಕೇವಲ ಟಾಟಾ ಮಾತ್ರ ಮಾಡಬೇಕಾ ಎಂದು ಪ್ರಯಾಣಿಕರು ಪ್ರಶ್ನಿಸುತ್ತಿದ್ದಾರೆ.
ದಕ್ಷಿಣ-ಪಶ್ಚಿಮ ರೈಲ್ವೆಯ ಕಾರ್ಯಾಚರಣೆ ವಿಭಾಗ ಹೊರಡಿಸಿದ ಅಧಿಕೃತ ಪತ್ರದ ಪ್ರಕಾರ ಯಶವಂತಪುರ ಮತ್ತು ಮಡಗಾಂವ್ ನಡುವೆ ವಂದೇ ಭಾರತ್ ರೈಲು ಸೇವೆಗೆ ತಾತ್ಕಾಲಿಕ ವೇಳಾಪಟ್ಟಿ ರೂಪಿಸಲಾಗಿದೆ. ಪ್ರಸ್ತಾವನೆಯಂತೆ ರೈಲು ಬೆಳಗ್ಗೆ 6.05ಕ್ಕೆ ಯಶವಂತಪುರದಿಂದ ಹೊರಟು ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ಮಾರ್ಗವಾಗಿ ಪಡೀಲ್ ಹಾಗೂ ತೋಕೂರು ಮೂಲಕ ಸಂಜೆ 7.15ಕ್ಕೆ ಮಡಗಾಂವ್ ತಲುಪಲಿದೆ.
ಮರಳಿ ಮಡಗಾಂವ್‌ನಿಂದ ಬೆಳಗ್ಗೆ 5.30ಕ್ಕೆ ಹೊರಟು ಸಂಜೆ 6.40ಕ್ಕೆ ಯಶವಂತಪುರ ತಲುಪುವಂತೆ ಯೋಜಿಸಲಾಗಿದೆ. ಆದರೆ ಈ ವೇಳಾಪಟ್ಟಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಬ್ರಹ್ಮಣ್ಯ ನಿಲ್ದಾಣಕ್ಕೆ ಮಾತ್ರ ನಿಲುಗಡೆ ಸೂಚಿಸಲಾಗಿದೆ. ಮಂಗಳೂರು ಜಂಕ್ಷನ್ ಅಥವಾ ಮಂಗಳೂರು ಸೆಂಟ್ರಲ್ ನಿಲ್ದಾಣಗಳಲ್ಲಿ ಯಾವುದೇ ನಿಲುಗಡೆ ಇಲ್ಲ. ಬದಲಾಗಿ ಪಡೀಲ್ ಮೂಲಕ ರೈಲು ಹಾದು ಹೋಗಲಿದೆ. ಹೀಗಾಗಿ ಕರಾವಳಿಯ ಪ್ರಮುಖ ವಾಣಿಜ್ಯ, ಶಿಕ್ಷಣ ಹಾಗೂ ಆರೋಗ್ಯ ಕೇಂದ್ರವಾದ ಮಂಗಳೂರಿಗೆ ನಿಲ್ದಾಣ ನೀಡದಿರುವುದು ಪ್ರಯೋಜನವಿಲ್ಲದ ಸೇವೆ ಎಂಬ ಟೀಕೆಗೆ ಕಾರಣವಾಗಿದೆ.
ಇದನ್ನೂ ಓದಿ: ಶಿರಸಿ ಮಾರಿಕಾಂಬಾ ಜಾತ್ರೆಗೆ ಹೋಗುವ ಭಕ್ತರಿಗೆ ಡಬಲ್ ಗುಡ್ ನ್ಯೂಸ್ ನೀಡಿದ ರೈಲ್ವೆ ಇಲಾಖೆ
ಕೇವಲ ಮಂಗಳೂರು ಮಾತ್ರವಲ್ಲ ಉಡುಪಿ, ಕಾರವಾರಗಳಂತಹ ಜಿಲ್ಲಾ ಕೇಂದ್ರಗಳಲ್ಲು ನಿಲುಗಡೆ ನೀಡದಿರುವುದು ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ಹೀಗಾಗಿ ಉಭಯ ಜಿಲ್ಲೆಗಳ ರೈಲು ಬಳಕೆದಾರರು, ಸಂಸದರು ಹಾಗೂ ರೈಲ್ವೆ ಸಚಿವರಿಗೆ ಟ್ವಿಟ್ಟರ್ ಮೂಲಕ ಹಕ್ಕೊತ್ತಾಯ ಆರಂಭಿಸಿದ್ದಾರೆ.
ಒಟ್ಟಿನಲ್ಲಿ ಅಂತಿಮ ವೇಳಾಪಟ್ಟಿ ಪ್ರಕಟಿಸುವ ಮುನ್ನ ರೈಲ್ವೆ ಇಲಾಖೆ ಸ್ಥಳೀಯ ಜನಪ್ರತಿನಿಧಿಗಳು, ಹೋರಾಟಗಾರರು ಮತ್ತು ಸಾರ್ವಜನಿಕ ಅಭಿಪ್ರಾಯವನ್ನು ಪರಿಗಣಿಸಿ ನ್ಯಾಯಯುತ ಬೇಡಿಕೆಯನ್ನು ಈಡೇರಿಸಬೇಕಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.