
ಮಂಗಳೂರು, ಜುಲೈ 20: ರಾಷ್ಟ್ರೀಯ ಹೆದ್ದಾರಿ 75 ಬೆಂಗಳೂರಿನಿಂದ ಮಂಗಳೂರಿಗೆ (Bengaluru-Mangaluru NH 75) ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಾಗಿದೆ. ಹೆದ್ದಾರಿ ಅಗಲೀಕರಣ ಕಾಮಗಾರಿ ಆರಂಭವಾಗಿ 10 ವರ್ಷ ಕಳೆದರೂ ಇನ್ನೂವರೆಗೂ ಮುಗಿದಿಲ್ಲ. ಈ ನಡುವೆ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಭೂಕುಸಿತ (Landslide) ಉಂಟಾಗುತ್ತಿದೆ. ಅಗಲೀಕರಣದ ವೇಳೆ ಸ್ಲೋಪ್ ಆಗಿ ಗುಡ್ಡವನ್ನು ಕಡಿಯುವ ಬದಲಿಗೆ, ಕಡಿದಾಗಿ ಗುಡ್ಡವನ್ನು ಕಡಿಯಲಾಗಿದೆ. ಇದರಿಂದ ಸ್ವಲ್ವ ಮಳೆ ಬಂದರೆ ಸಾಕು ಗುಡ್ಡ ಕುಸಿತವಾಗುತ್ತಿದೆ. ರಸ್ತೆ ಮೇಲೆ ಗುಡ್ಡ ಬಂದು ಬೀಳುತ್ತಿದೆ.
ಇದರಿಂದ ಪ್ರಯಾಣಿಕರು ಜೀವ ಕೈಯಲ್ಲಿ ಹಿಡಿದುಕೊಂಡು ಓಡಾಡುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕಿನ ಕೌಕ್ರಾಡಿ ಬಳಿಯ ಕಲ್ಲುಗುಂಡಿ ಪ್ರದೇಶದಲ್ಲಿ ಅತೀ ಹೆಚ್ಚಿನ ಕುಸಿತದ ಭೀತಿ ಇದೆ. ಅತಿ ಕಡಿದಾಗಿ ಗುಡ್ಡ ಕಡಿದು ಕಾಮಗಾರಿ ಮಾಡಿದ್ದರಿಂದ ಇಲ್ಲಿ ಅಪಾಯದ ಸಾಧ್ಯತೆ ಹೆಚ್ಚಾಗಿದೆ.
ಇದನ್ನೂ ಓದಿ: ಶಿರಾಡಿ ಘಾಟ್ ಅಧ್ವಾನ, ಹಲವೆಡೆ ಭೂಕುಸಿತ: ಬೆಂಗಳೂರು ಮಂಗಳೂರು ಪ್ರಯಾಣಕ್ಕೆ ಸಂಚಕಾರ
ಇಲ್ಲಿ ಗುಡ್ಡು ಕುಸಿತ ಆಗೇ ಆಗುತ್ತದೆ ಎಂಬ ಮಾಹಿತಿಯನ್ನು ಉಪ್ಪಿನಂಗಡಿ ಠಾಣೆ ಪೊಲೀಸರು ಈ ಮೊದಲೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ನೀಡಿದ್ದರು. ಇದಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಉತ್ತರ ನೀಡಿದ್ದು, ಅಗಲೀಕರಣಕ್ಕೆ ಬೇಕಾಗುವಷ್ಟು ಜಾಗವನ್ನು ಅರಣ್ಯ ಇಲಾಖೆ ನೀಡಿರಲಿಲ್ಲ. ಜಾಗದ ಸಮಸ್ಯೆಯಿಂದಾಗಿ ಕಡಿದಾಗಿ ಗುಡ್ಡ ಕಡಿದು ಕಾಮಾಗಾರಿ ಮಾಡಲಾಗಿದೆ ಎಂದು ಉತ್ತರ ನೀಡಿತ್ತು. ಇದು ಸತ್ಯ ಕೂಡ, ಅರಣ್ಯ ಇಲಾಖೆ ಅಗಲೀಕರಣಕ್ಕೆ ಬೇಕಾದಷ್ಟು ಜಾಗ ಕೊಡದ ಕಾರಣ ಇಲ್ಲಿ ಕಡಿದಾಗಿ ಗುಡ್ಡ ಕಡಿದು ಕಾಮಗಾರಿ ಮಾಡಲಾಗಿದೆ.
ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಪ್ರತಿಕ್ರಿಯಿಸಿ ನಮಗೆ ಜಾಗ ನೀಡಲು ಅಸಾಧ್ಯ ಎಂದು ಹೇಳಿದ್ದರು. ಇಲಾಖೆಗಳ ತಮ್ಮ ಸಮಜಾಯಿಷಿಗಳನ್ನು ನೀಡತ್ತಾ ಕೈ ತೊಳೆದುಕೊಳ್ಳುತ್ತಿವೆ. ಆದರೆ, ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣ ಸಂಕಟ ಎಂಬಂತಾಗಿದೆ ಪ್ರಯಾಣಿಕರ ಪಾಡು.
Published On - 11:46 am, Sun, 20 July 25