ಬಜೆಟ್ನಲ್ಲಿ ಘೋಷಣೆಯಾಗದ ಬ್ರಹ್ಮಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮ; ಬಿಲ್ಲವ ಮುಖಂಡರ ಆಕ್ರೋಶ
ಜ.29 ಕ್ಕೆ ಅಭಿವೃದ್ಧಿ ನಿಗಮ ಸ್ಥಾಪನೆಗೆ ಒತ್ತಾಯಿಸಿ ಸಮಾವೇಶ ನಡೆಸುವ ನಿರ್ಧಾರವಾಗಿತ್ತು. ಆದre ಸಮಾಜದ ಸಚಿವರುಗಳು ಬಿಲ್ಲವ ಅಭಿವೃದ್ಧಿ ನಿಗಮ ಸ್ಥಾಪಿಸುವ ಭರವಸೆ ನೀಡಿದ್ದರು. ಅಷ್ಟಾಗಿಯೂ ಬಜೆಟ್ನಲ್ಲಿ ನಿಗಮ ಸ್ಥಾಪನೆ ಬಗ್ಗೆ ಘೋಷಣೆ ಮಾಡದಿರುವುದು ಸಮುದಾಯದ ಮುಖಂಡರ ಆಕ್ರೋಶಕ್ಕೆ ಕಾರಣವಾಗಿದೆ.
ಮಂಗಳೂರು: ಕರ್ನಾಟಕ ರಾಜ್ಯ ಬಜೆಟ್ನಲ್ಲಿ (Karnataka Budget 2023) ಬ್ರಹ್ಮಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮ (Brahmasree Narayana Guru Development Corporation) ಘೋಷಣೆಯಾಗದ ಬಗ್ಗೆ ರಾಜ್ಯ ಸರ್ಕಾರದ (Karnataka Govt) ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಬಿಲ್ಲವ ಸಮಾಜದ ಮುಖಂಡರು (Billava Community Leaders), ಬಜೆಟ್ನಲ್ಲಿ ನಾರಾಯಣ ಗುರು ಅಭಿವೃದ್ಧಿ ನಿಗಮ ಘೋಷಣೆ ಮಾಡದೆ ಬಿಲ್ಲವ ಈಡಿಗರನ್ನು ಕಡೆಗಣನೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಮಂಗಳೂರಿನಲ್ಲಿ ಬಿಲ್ಲವ ಮುಖಂಡ ಪದ್ಮರಾಜ್.ಆರ್ ಮತ್ತು ಬಿಲ್ಲವ ಮುಖಂಡ ಸತ್ಯಜಿತ್ ಸುರತ್ಕಲ್ ಅವರು ಜಂಟಿ ಸುದ್ದಿಗೋಷ್ಠಿ ನಡೆಸಿ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದರು.
ಬ್ರಹ್ಮಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮ ಸ್ಥಾಪನೆಗೆ ಒತ್ತಾಯಿಸಿ ಜನವರಿ 29ರಂದು ಸಮಾವೇಶ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಸಮಾಜದ ಸಚಿವರುಗಳು ಬಿಲ್ಲವ ಅಭಿವೃದ್ಧಿ ನಿಗಮ ಸ್ಥಾಪಿಸುವ ಭರವಸೆ ನೀಡಿದ್ದರು. ಜ.5ರಂದು ಬಿಲ್ಲವ ಸಮಾಜದ ಮುಖಂಡರನ್ನು ಬೆಂಗಳೂರಿಗೆ ಕರೆಸಿಕೊಂಡಿದ್ದರು. ನಾರಾಯಣ ಗುರು ಅಭಿವೃದ್ಧಿ ನಿಗಮ ಸ್ಥಾಪನೆಗೆ ಒತ್ತಾಯಿಸಿ ಮುಖ್ಯಮಂತ್ರಿಗಳಿಗೆ ಮನವಿ ನೀಡಿದ್ದರು. ಈ ವೇಳೆ ಮುಖ್ಯಮಂತ್ರಿಯವರು ಮುಂದಿನ ಬಜೆಟ್ನಲ್ಲಿ ನಾರಾಯಣ ಗುರು ಅಭಿವೃದ್ಧಿ ನಿಗಮ ಘೋಷಿಸುವ ಭರವಸೆಯನ್ನು ನೀಡಿದ್ದರು ಎಂದು ಪದ್ಮರಾಜ್ ಹೇಳಿದರು.
ಇದನ್ನೂ ಓದಿ: ಕರ್ನಾಟಕ ಬಜೆಟ್ನ ಹಲವು ವಿಶೇಷಗಳು
ಅಭಿವೃದ್ಧಿ ನಿಗಮ ಘೋಷಿಸುವ ಮುಖ್ಯಮಂತ್ರಿಗಳ ಭರವಸೆಯನ್ನು ನಂಬಿ ಎಲ್ಲರೂ ಅಭಿನಂದನೆ ಸಲ್ಲಿಸಿದ್ದರು. ಆದರೆ ಇಂದು ಮುಖಂಡರನ್ನು ಕರೆಸಿಕೊಂಡು ಮೋಸ ಮಾಡಿದ್ದಾರೆ. ಬಜೆಟ್ನಲ್ಲಿ ನಾರಾಯಣ ಗುರು ಅಭಿವೃದ್ಧಿ ನಿಗಮ ಘೋಷಣೆ ಮಾಡಿಲ್ಲ. ಬಿಲ್ಲವ ಈಡಿಗರನ್ನು ಕಡೆಗಣನೆ ಮಾಡಲಾಗಿದೆ. ರಾಜ್ಯದಲ್ಲಿ ಬಿಲ್ಲವ ಈಡಿಗ ಸಮುದಾಯದ 60 ಲಕ್ಷ ಜನ ಇದ್ದಾರೆ. ಮುಂದಿನ ದಿನಗಳಲ್ಲಿ ಇದಕ್ಕೆ ತಕ್ಕುದಾದ ಉತ್ತರ ಸಿಗಲಿದೆ. ಸರ್ಕಾರದ ಭಾಗ ಆಗಿರುವ ಸಚಿವರು ಹಾಗೂ ಶಾಸಕರು ಇದಕ್ಕೆ ಉತ್ತರ ನೀಡಬೇಕು ಎಂದು ಆಗ್ರಹಿಸಿದರು.
ರಾಜ್ಯಾದ್ಯಂತ ಹೋರಾಟದ ಎಚ್ಚರಿಕೆ ನೀಡಿದ ಸತ್ಯಜಿತ್ ಸುರತ್ಕಲ್
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಲ್ಲವ ಮುಖಂಡ ಸತ್ಯಜಿತ್ ಸುರತ್ಕಲ್, ಬ್ರಹ್ಮಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮ ಸ್ಥಾಪನೆ ಆಗದಿದ್ದಲ್ಲಿ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಬಜೆಟ್ ಅಧಿವೇಶನದಲ್ಲಿ ಅಭಿವೃದ್ಧಿ ನಿಗಮ ಘೋಷಿಸಬೇಕು. 500 ಕೋಟಿ ಅನುದಾನ ನಿಗಮಕ್ಕೆ ಮೀಸಲಿಡಬೇಕು. ಒಂದು ವೇಳೆ ಅಧಿವೇಶನದಲ್ಲಿ ಅಭಿವೃದ್ಧಿ ನಿಗಮ ಘೋಷಣೆ ಮಾಡದಿದ್ದಲ್ಲಿ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:34 pm, Fri, 17 February 23