Karnataka Budget 2023: ಹಲವು ವಿಶೇಷಗಳಿಗೆ ಸಾಕ್ಷಿಯಾದ ಬೊಮ್ಮಾಯಿ ಬಜೆಟ್; ಇಲ್ಲಿದೆ ಡಿಟೇಲ್ಸ್

ಈ ಬಾರಿಯ ಕರ್ನಾಟಕ ಬಜೆಟ್ ಹಲವು ವಿಶೇಷಗಳಿಗೂ ಸಾಕ್ಷಿಯಾಗಿದೆ. ಅವುಗಳ ಕುರಿತು ಮಾಹಿತಿ ಇಲ್ಲಿದೆ.

Karnataka Budget 2023: ಹಲವು ವಿಶೇಷಗಳಿಗೆ ಸಾಕ್ಷಿಯಾದ ಬೊಮ್ಮಾಯಿ ಬಜೆಟ್; ಇಲ್ಲಿದೆ ಡಿಟೇಲ್ಸ್
ಬಜೆಟ್ ಪ್ರತಿ ಜತೆ ಬೊಮ್ಮಾಯಿ
Follow us
Ganapathi Sharma
|

Updated on:Feb 17, 2023 | 3:55 PM

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಮಂಡಿಸಿದ ಎರಡನೇ ಬಜೆಟ್ (Karnataka Budget 2023) ಹಾಗೂ ಬಿಜೆಪಿ ಸರ್ಕಾರದ ಕೊನೆಯ ಮುಂಗಡಪತ್ರ ಹಲವು ವಿಶೇಷಗಳಿಗೆ ಸಾಕ್ಷಿಯಾಯಿತು. ನಿರೀಕ್ಷೆಯಂತೆಯೇ ಚುನಾವಣೆ ಸಮೀಪಿಸುತ್ತಿರುವ ಸಂದರ್ಭವಾದದ್ದರಿಂದ ಹಲವು ಜನಪ್ರಿಯ ಯೋಜನೆಗಳನ್ನು ಬಜೆಟ್​​​ನಲ್ಲಿ ಪ್ರಕಟಿಸಲಾಗಿದೆ. ಈ ಮಧ್ಯೆ, ಕಳೆದ ವರ್ಷದ ಬಜೆಟ್ ಯೋಜನೆಗಳನ್ನೇ ಅನುಷ್ಠಾನಗೊಳಿಸಿಲ್ಲ, ಸರ್ಕಾರ ಜನರ ಕಿವಿ ಮೇಲೆ ಹೂ ಇಡುತ್ತಿದೆ ಎಂಬ ಆರೋಪ ಪ್ರತಿಪಕ್ಷಗಳಿಂದ ಕೇಳಿಬಂದಿದೆ. ಅದಾಗ್ಯೂ, ಸರ್ಕಾರ ಇದನ್ನು ಅಲ್ಲಗಳೆದಿದ್ದು, ಕಳೆದ ಬಾರಿಯ ಬಜೆಟ್​​ನ ಶೇ 90ರಷ್ಟು ಯೋಜನೆಗಳು ಅನುಷ್ಠಾನಗೊಂಡಿದೆ ಎಂದು ಸಮರ್ಥಿಸಿಕೊಂಡಿದೆ. ಈ ಎಲ್ಲವುಗಳ ಮಧ್ಯೆ ಈ ಬಾರಿಯ ಬಜೆಟ್ ಹಲವು ವಿಶೇಷಗಳಿಗೂ ಸಾಕ್ಷಿಯಾಯಿತು. ಅವುಗಳ ಮಾಹಿತಿ ಇಲ್ಲಿದೆ.

ಬಜೆಟ್ ಮಂಡನೆ ಆರಂಭದಲ್ಲೇ ಗದ್ದಲ

ಬಸವರಾಜ ಬೊಮ್ಮಾಯಿ ಅವರಿಗೆ ಬಜೆಟ್ ಭಾಷಣ ಓದಲು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅನುಮತಿ ನೀಡುತ್ತಿದ್ದಂತೆಯೇ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಟೀಕೆ ಮಾಡಿದರು. ಅಷ್ಟರಲ್ಲಿ ಪ್ರತಿಪಕ್ಷಗಳ ಸದಸ್ಯರು ಅದಕ್ಕೆ ದನಿಗೂಡಿಸಿದರು. ಸರ್ಕಾರ ಜನರ ಕಿವಿ ಮೇಲೆ ಹೂ ಇಡುತ್ತಿದೆ ಎಂದು ಪ್ರತಿಪಕ್ಷ ಸದಸ್ಯರು ಟೀಕಿಸಿದರು. ಆಡಳಿತ ಪಕ್ಷದ ಸದಸ್ಯರೂ ಪ್ರತಿಪಕ್ಷಗಳ ಮೇಲೆ ಮುಗಿಬಿದ್ದರು. ಪರಿಣಾಮವಾಗಿ ಗದ್ದಲದ ವಾತಾವರಣ ಸೃಷ್ಟಿಯಾಯಿತು. ನಂತರ ಬಜೆಟ್ ಮಂಡನೆ ಆರಂಭವಾಯಿತು.

ಇದನ್ನೂ ಓದಿ: Karnataka Budget PDF Download: ಕರ್ನಾಟಕ ಬಜೆಟ್​ ಪಿಡಿಎಫ್ ಕಾಪಿ ಇಲ್ಲಿ ಲಭ್ಯ

ದೊಡ್ಡ ಗಾತ್ರದ ಬಜೆಟ್

ಈ ಬಾರಿಯ ಕರ್ನಾಟಕ ಬಜೆಟ್ ಗಾತ್ರ 3.09 ಲಕ್ಷ ಕೋಟಿ ರೂ. ಬಜೆಟ್​​ ಗಾತ್ರ ಮೂರು ಲಕ್ಷ ಕೋಟಿ ರೂ. ದಾಟಿದ ಕೆಲವೇ ಕೆಲವು ರಾಜ್ಯಗಳ ಪೈಕಿ ಕರ್ನಾಟಕವೂ ಒಂದಾಗಿದೆ. ಈ ಹಿಂದಿನ ಬಜೆಟ್​​ಗಳ ಲೆಕ್ಕಾಚಾರ ಪ್ರಕಾರ, ಮಹಾರಾಷ್ಟ್ರ, ಉತ್ತರ ಪ್ರದೇಶ ಮತ್ತು ರಾಜಸ್ಥಾನ ಮಾತ್ರ 3 ಲಕ್ಷ ಕೋಟಿ ರೂ.ಗಿಂತಲೂ ದೊಡ್ಡ ಗಾತ್ರದ ಬಜೆಟ್ ಮಂಡಿಸಿವೆ.

ಮಿಗತೆ ಬಜೆಟ್

ಕೊರೊನಾ ನಂತರ ಆರ್ಥಿಕ ಸ್ಥಿತಿ ಸುಧಾರಣೆಗೆ ಕಷ್ಟ ಎಂದು ತಜ್ಞರು ಹೇಳಿದ್ದರು. ಆರ್ಥಿಕ ಕೊರತೆ ನೀಗಲು 5 ವರ್ಷ ಬೇಕಾಗಬಹುದು ಎಂದಿದ್ದರು. ಆದರೆ, ನಾವು ಕೇವಲ ಎರಡನೇ ವರ್ಷದಲ್ಲಿ ರೆವಿನ್ಯೂ ಸರ್​​​ಪ್ಲಸ್​ ಬಜೆಟ್​ ಮಂಡಿಸಿದ್ದೇವೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ. ಸಾಮಾನ್ಯವಾಗಿ ಪ್ರತಿ ವರ್ಷ ಬಜೆಟ್ ಗಾತ್ರ ಶೇ 6ರಿಂದ 7ರಷ್ಟು ಹೆಚ್ಚಾಗುತ್ತದೆ. ಆದರೆ ಈ ಬಾರಿ ಶೇ 16ರಷ್ಟು ಹೆಚ್ಚಳವಾಗಿದೆ. ಬಜೆಟ್ ಗಾತ್ರ 43,462 ಕೋಟಿ ರೂ.ನಷ್ಟು ಹೆಚ್ಚಾಗಿದೆ ಎಂದು ಅವರು ಹೇಳಿದ್ದಾರೆ. ಇದು ಈ ಬಾರಿಯ ಬಜೆಟ್​​ನ ಮತ್ತೊಂದು ವಿಶೇಷವಾಗಿದೆ.

ಕವಿತೆಗಳ ಮೂಲಕ ಗಮನ ಸೆಳೆದ ಬೊಮ್ಮಾಯಿ

ಬಜೆಟ್ ಭಾಷಣ ಮಂಡಿಸುವ ನಡುನಡುವೆ ಬೊಮ್ಮಾಯಿ ಅವರು ಕೆಲವು ಕವನಗಳ ಸಾಲುಗಳನ್ನು ಉಲ್ಲೇಖಿಸಿದ್ದು ಗಮನ ಸೆಳೆಯಿತು. ಬಜೆಟ್​ಗೂ ಪ್ರಾರಂಭಿಸುವಾಗ ಬೊಮ್ಮಾಯಿ ರಾಷ್ಟ್ರಕವಿ ಕುವೆಂಪು ಅವರ, ‘ಹೋಗುತಿದೆ ಹಳೆಯ ಕಾಲ, ಹೊಸ ಕಾಲ ಬರುತಲಿದೆ ಬರುತಲಿದೆ ಹೊಸ ದೃಷ್ಟಿ’ ಕವನವನ್ನು ಉಲ್ಲೇಖಿಸಿದರು. ನಂತರ ‘ಮಣ್ಣಿನ ಕೊಡುಗೆಗೆ ನೋವಿಗೆ ನಲಿವಿಗೆ ಕನ್ನಡಿ ಹಿಡಿವಾಸೆ ಮಾನವ ಹೃದಯದ ಕರುಣೆಗೆ ಒಲವಿಗೆ ದನಿಗೂಡಿಸುವಾಸೆ’ ಎಂಬ ಕೆ. ಎಸ್​ ನರಸಿಂಹಸ್ವಾಮಿ ಅವರ ಸಾಲುಗಳನ್ನು ಉಲ್ಲೇಖಿಸಿದರು. ಕೊನೆಯಲ್ಲಿ ‘ಸುತ್ತಲು ಕವಿಯುವ ಕತ್ತಲೆಯೊಳಗೆ ಪ್ರೀತಿಯ ಹಣತೆಯ ಹಚ್ಚೋಣ’ ಎಂಬ ಡಾ. ಜಿ. ಎಸ್​ ಶಿವರುದ್ರಪ್ಪ ಅವರ ಕವನವನ್ನು ವಾಚಿಸಿದರು.

ಕರ್ನಾಟಕ ಬಜೆಟ್ ಹೈಲೈಟ್ಸ್

ಕರ್ನಾಟಕ ಬಜೆಟ್ ಮತ್ತಷ್ಟು ಸುದ್ದಿಗಳು

Published On - 3:51 pm, Fri, 17 February 23