ಧರ್ಮಸ್ಥಳದಲ್ಲಿ ಮದುವೆ ಮುಗಿಸಿಕೊಂಡು ಬರುತ್ತಿರುವಾಗ ಚಾರ್ಮಾಡಿ ಘಾಟಿಯಲ್ಲಿ ಬಸ್​​​ ಪಲ್ಟಿ

ದಕ್ಷಿಣ ಕನ್ನಡ ಜಿಲ್ಲೆಯ ಚಾರ್ಮಾಡಿ ಘಾಟ್‌ನಲ್ಲಿ ಖಾಸಗಿ ಬಸ್ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಧರ್ಮಸ್ಥಳದಿಂದ ಮೂಡಿಗೆರೆಗೆ ಸಾಗುತ್ತಿದ್ದ ಬಸ್‌ನಲ್ಲಿದ್ದ 25 ಪ್ರಯಾಣಿಕರು ಗಾಯಗೊಂಡಿದ್ದಾರೆ. ಬಸ್ ಪ್ರಪಾತಕ್ಕೆ ಬೀಳುವ ಅಪಾಯದಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದು, ರಸ್ತೆಯಲ್ಲೇ ಪಲ್ಟಿಯಾದ ಕಾರಣ ಭೀಕರ ದುರಂತ ತಪ್ಪಿದಂತಾಗಿದೆ. ಗಾಯಾಳುಗಳನ್ನು ಸ್ಥಳೀಯ ಹಾಗೂ ಮಂಗಳೂರಿನ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

ಧರ್ಮಸ್ಥಳದಲ್ಲಿ ಮದುವೆ ಮುಗಿಸಿಕೊಂಡು ಬರುತ್ತಿರುವಾಗ ಚಾರ್ಮಾಡಿ ಘಾಟಿಯಲ್ಲಿ ಬಸ್​​​ ಪಲ್ಟಿ
Edited By:

Updated on: Apr 26, 2026 | 6:31 PM

ಬೆಳ್ತಂಗಡಿ, ಏ.26: ದಕ್ಷಿಣ ಕನ್ನಡ ಜಿಲ್ಲೆಯ ಚಾರ್ಮಾಡಿ ಘಾಟಿಯ ಅಪಾಯಕಾರಿ ತಿರುವಿನಲ್ಲಿ ಖಾಸಗಿ ಬಸ್ಸು ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ನಡೆದಿದೆ. ಧರ್ಮಸ್ಥಳದಲ್ಲಿ ಮದುವೆ ಮುಗಿಸಿಕೊಂಡು ಮೂಡಿಗೆರೆಯತ್ತ ಸಾಗುತ್ತಿದ್ದ ಬಸ್ ಅಪಘಾತಕ್ಕೀಡಾಗಿದ್ದು, ಬಸ್ಸಿನಲ್ಲಿದ್ದ 25 ಪ್ರಯಾಣಿಕರು ಗಾಯಗೊಂಡಿದ್ದಾರೆ. ಧರ್ಮಸ್ಥಳದಲ್ಲಿ ನಡೆದ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ, ಅಲ್ಲಿಂದ ಪ್ರಯಾಣಿಕರನ್ನು ಹೊತ್ತು ಮೂಡಿಗೆರೆಯತ್ತ ಖಾಸಗಿ ಬಸ್ಸು ಹೊರಟಿತ್ತು. ಚಾರ್ಮಾಡಿ ಘಾಟಿಯ ನಾಲ್ಕನೇ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಬಸ್ಸು ರಸ್ತೆಯಲ್ಲೇ ಪಲ್ಟಿಯಾಗಿದೆ. ಘಾಟಿ ಪ್ರದೇಶವಾದ್ದರಿಂದ ಬಸ್ ಪ್ರಪಾತಕ್ಕೆ ಬೀಳುವ ಅಪಾಯವಿತ್ತಾದರೂ, ರಸ್ತೆಯಲ್ಲೇ ಪಲ್ಟಿಯಾಗಿರುವುದರಿಂದ ಭೀಕರ ದುರಂತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದಂತಾಗಿದೆ.

ಬಸ್ಸಿನಲ್ಲಿ ಸುಮಾರು 25 ಮಂದಿ ಪ್ರಯಾಣಿಕರಿದ್ದರು. ಅಪಘಾತದ ರಭಸಕ್ಕೆ ಎಲ್ಲರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗಳಿಗೆ ಮತ್ತು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ: ಸಾಂಬಾರ್ ಮಾಡಿಲ್ಲವೆಂದು ಬೈದ ತಂದೆ: ಅಷ್ಟಕ್ಕೇ ಸಾವಿನ ಕದ ತಟ್ಟಿದ ಮಗಳು

ಘಟನೆ ನಡೆದ ತಕ್ಷಣ ಬೆಳ್ತಂಗಡಿ ಸಂಚಾರಿ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಪಲ್ಟಿಯಾದ ಬಸ್ಸನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಘಾಟಿ ಪ್ರದೇಶದ ಕಡಿದಾದ ತಿರುವುಗಳಲ್ಲಿ ಚಾಲಕರು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಲಿಸುವುದೇ ಇಂತಹ ಅಪಘಾತಗಳಿಗೆ ಕಾರಣ ಎಂದು ಶಂಕಿಸಲಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:16 pm, Sun, 26 April 26

ಅಶೋಕ್​ ಪೂಜಾರಿ

ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ನಿವಾಸಿಯಾದ ಅಶೋಕ್ ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣ ಪೂರೈಸಿರುತ್ತಾರೆ. ಸ್ಥಳೀಯ ದಿನಪತ್ರಿಕೆಯ ಮೂಲಕ ವೃತ್ತಿರಂಗಕ್ಕೆ ಪಾದಾರ್ಪಣೆ ಮಾಡಿದ ಇವರು ಬಳಿಕ ಖಾಸಗಿ ಸುದ್ದಿ ವಾಹಿನಿಯಲ್ಲಿ ಉಡುಪಿ ಜಿಲ್ಲಾ ವರದಿಗಾರರಾಗಿ ಕೆಲಕಾಲ ಸೇವೆ ಸಲ್ಲಿಸಿರುತ್ತಾರೆ. ನಂತರ ಉಡುಪಿ ಹಾಗೂ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಆರು ವರ್ಷಗಳ ಕಾಲ ದಿಗ್ವಿಜಯ ನ್ಯೂಸ್ ನ ಜಿಲ್ಲಾ ವರದಿಗಾರರಾಗಿ ಕರ್ತವ್ಯ ನಿರ್ವಹಿಸಿ ನಂತರ ಟಿವಿ9 ಸುದ್ದಿ ವಾಹಿನಿಯಲ್ಲಿ ಉತ್ತರ ಕನ್ನಡ ಜಿಲ್ಲಾ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ರಂಗದಲ್ಲಿ ಇವರು ನೀಡಿದ ಸೇವೆಗೆ indiatelevision.com 2020ರಲ್ಲಿ ಅತ್ಯುತ್ತಮ ವರದಿಗಾರ ಎಂಬ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಿದೆ.

Read More
Loading...
Unable to load recommendations.
Follow Us