ನೈತಿಕ ಶಿಕ್ಷಣಕ್ಕೆ ಹೊಸ ರೂಪ: ಲೈಂಗಿಕ, ಆರೋಗ್ಯ ಶಿಕ್ಷಣ ಸೇರಿ ಹಲವು ವಿಷಯಗಳ ಪರಿಚಯಿಸಲು ನಿರ್ಧಾರ
ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಮೌಲ್ಯಗಳನ್ನು ಧಾರೆ ಎರೆಯಲು ಶಿಕ್ಷಣ ಇಲಾಖೆ ಮಹತ್ವದ ಹೆಜ್ಜೆಯನ್ನಿಟ್ಟಿದೆ. ಇದೇ ಶೈಕ್ಷಣಿಕ ವರ್ಷದಿಂದ ನೈತಿಕ ಶಿಕ್ಷಣಕ್ಕೆ ಹೊಸ ರೂಪ ನೀಡಲು ಇಲಾಖೆ ಮುಂದಾಗಿದ್ದು, ನೈತಿಕ ಪಠ್ಯದ ಅಡಿಯಲ್ಲಿ ಲೈಂಗಿಕ, ಆರೋಗ್ಯ ಶಿಕ್ಷಣ ಸೇರಿದಂತೆ ಹಲವು ಹೊಸ ವಿಷಯಗಳನ್ನು ಪರಿಚಯಿಸಲು ಸರ್ಕಾರ ನಿರ್ಧರಿಸಿದೆ.

ಮುಖ್ಯಾಂಶಗಳು
- ಶಾಲೆಗಳಲ್ಲಿ ನೈತಿಕ ಶಿಕ್ಷಣಕ್ಕೆ ಹೊಸ ರೂಪ
- ಪಠ್ಯದಲ್ಲಿ ಲೈಂಗಿಕ, ಸೈಬರ್ ಸುರಕ್ಷತೆ ಬಗ್ಗೆ ಶಿಕ್ಷಣ
- ಇದೇ ವರ್ಷದಿಂದ ನೈತಿಕ ಶಿಕ್ಷಣ ಜಾರಿ
ಬೆಂಗಳೂರು, ಜುಲೈ 20: ರಾಜ್ಯದ ಶಾಲೆಗಳಲ್ಲಿ ಇದೇ ಶೈಕ್ಷಣಿಕ ವರ್ಷದಿಂದ ನೈತಿಕ ಶಿಕ್ಷಣಕ್ಕೆ ಹೊಸ ರೂಪ ನೀಡಲು ಶಿಕ್ಷಣ ಇಲಾಖೆ (Education Department) ಮುಂದಾಗಿದೆ. ನೈತಿಕ ಪಠ್ಯದಡಿ ಲೈಂಗಿಕ, ಆರೋಗ್ಯ, ಸಂಗೀತ, ಜೀವನ ಕೌಶಲ್ಯ, ಮೌಲ್ಯ ಶಿಕ್ಷಣ ಸೇರಿದಂತೆ ಹಲವು ಹೊಸ ವಿಷಯಗಳನ್ನು ಪರಿಚಯಿಸಲು ಸರ್ಕಾರ ನಿರ್ಧರಿಸಿದೆ. ಮಕ್ಕಳ ವಯೋಮಾನ ಹಾಗೂ ತರಗತಿಗೆ ಅನುಗುಣವಾಗಿ ಡಿಎಸ್‌ಇಆರ್‌ಟಿ (DSERT) ಪ್ರತ್ಯೇಕ ಪಠ್ಯ ಸಿದ್ಧಪಡಿಸಿದ್ದು, ವಾರಕ್ಕೆ ಎರಡು ತರಗತಿಗಳ ಮೂಲಕ ಬೋಧನೆ ನಡೆಸಲು ಯೋಜನೆ ರೂಪಿಸಲಾಗಿದೆ.
ಇದೇ ವರ್ಷದಿಂದ ನೈತಿಕ ಶಿಕ್ಷಣ ಜಾರಿ
ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಇದೇ ಶೈಕ್ಷಣಿಕ ವರ್ಷದಿಂದ ನೈತಿಕ ಶಿಕ್ಷಣವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಶಿಕ್ಷಣ ಇಲಾಖೆ ಮುಂದಾಗಿದೆ. ವಿದ್ಯಾರ್ಥಿಗಳ ವಯೋಮಾನ, ಮಾನಸಿಕ ಬೆಳವಣಿಗೆ ಹಾಗೂ ತರಗತಿಗೆ ಅನುಗುಣವಾಗಿ ಡಿಎಸ್‌ಇಆರ್‌ಟಿ ವಿಶೇಷ ಪಠ್ಯಕ್ರಮ ಸಿದ್ಧಪಡಿಸಿದೆ. ಆರಂಭದಲ್ಲಿ 8ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಮಾತ್ರ ಲೈಂಗಿಕ ಶಿಕ್ಷಣ ಪರಿಚಯಿಸುವ ಬಗ್ಗೆ ಚಿಂತನೆ ನಡೆದಿದ್ದರೂ, ಈಗ ವಯೋಮಿತಿಗೆ ಅನುಗುಣವಾಗಿ ಹಂತಹಂತವಾಗಿ ನೈತಿಕ ಶಿಕ್ಷಣದ ಭಾಗವಾಗಿ ವಿವಿಧ ವಿಷಯಗಳನ್ನು ಬೋಧಿಸಲು ಮಂದಾಗಿದೆ.
ಯಾವೆಲ್ಲಾ ವಿಷಯಗಳ ಬೋಧನೆ?
ನೈತಿಕ ಶಿಕ್ಷಣದಡಿ ಲೈಂಗಿಕ, ವೈಯಕ್ತಿಕ ಸ್ವಚ್ಛತೆ, ಆರೋಗ್ಯ ಮತ್ತು ಪೌಷ್ಟಿಕತೆ, ಸಾಂಕ್ರಾಮಿಕ ರೋಗಗಳ ಬಗ್ಗೆ ಅರಿವು, ಸೈಬರ್ ಸುರಕ್ಷತೆ, ಮಾದಕ ವಸ್ತುಗಳ ದುಷ್ಪರಿಣಾಮ, ಜೀವನ ಕೌಶಲ್ಯಗಳು, ಮೌಲ್ಯ ಶಿಕ್ಷಣ, ಸಂಗೀತ ಹಾಗೂ ಸಾಮಾಜಿಕ ಜವಾಬ್ದಾರಿಗಳಂತಹ ವಿಷಯಗಳಿಗೆ ಒತ್ತು ನೀಡಲಾಗಿದೆ. ವಿದ್ಯಾರ್ಥಿಗಳ ವಯಸ್ಸು ಮತ್ತು ತರಗತಿಗೆ ತಕ್ಕಂತೆ ಯಾವ ವಿಷಯಗಳನ್ನು ಯಾವ ಹಂತದಲ್ಲಿ ಬೋಧಿಸಬೇಕು ಎಂಬುದನ್ನು ಡಿಎಸ್‌ಇಆರ್‌ಟಿ ಪ್ರತ್ಯೇಕವಾಗಿ ರೂಪಿಸಿರುವ ಪಠ್ಯದಲ್ಲಿ ವಿವರಿಸಲಾಗಿದೆ.
ವಾರಕ್ಕೆ ಎರಡು ಅವಧಿಗಳಲ್ಲಿ ನೈತಿಕ ಶಿಕ್ಷಣ ಬೋಧನೆ
ಈ ಪಠ್ಯಕ್ರಮದಡಿ ಮಕ್ಕಳಲ್ಲಿ ಉತ್ತಮ ಮೌಲ್ಯಗಳನ್ನು ಬೆಳೆಸುವುದು, ದೈಹಿಕ ಹಾಗೂ ಮಾನಸಿಕ ಆರೋಗ್ಯದ ಬಗ್ಗೆ ಅರಿವು ಮೂಡಿಸುವುದು, ಲೈಂಗಿಕ ಶಿಕ್ಷಣದ ಕುರಿತು ವೈಜ್ಞಾನಿಕ ಮಾಹಿತಿ ನೀಡುವುದು, ಸೈಬರ್ ಅಪರಾಧಗಳಿಂದ ರಕ್ಷಣೆ ಪಡೆಯುವ ಅರಿವು ಮೂಡಿಸುವುದು ಹಾಗೂ ಮಾದಕ ವ್ಯಸನಗಳಿಂದ ದೂರವಿರುವ ಬಗ್ಗೆ ಜಾಗೃತಿ ಮೂಡಿಸುವುದು ಮುಖ್ಯ ಉದ್ದೇಶವಾಗಿದೆ. ಇದೇ ಶೈಕ್ಷಣಿಕ ವರ್ಷದಿಂದ ವಾರಕ್ಕೆ ಎರಡು ಅವಧಿಗಳಲ್ಲಿ ನೈತಿಕ ಶಿಕ್ಷಣ ಬೋಧನೆ ನಡೆಸಲು ಸರ್ಕಾರ ನಿರ್ಧರಿಸಿದ್ದು, ಇದಕ್ಕಾಗಿ ಅಗತ್ಯ ಮಾರ್ಗಸೂಚಿಗಳನ್ನು ಶಾಲೆಗಳಿಗೆ ನೀಡಲಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆ ಆಯುಕ್ತ ಸುರಳ್ಳಕರ್ ವಿಕಾಸ್ ಕಿಶೋರ್ ಮಾಹಿತಿ ನೀಡಿದರು.
ಇದನ್ನೂ ಓದಿ: ಎಸ್ಐಆರ್ ಕಾರ್ಯಕ್ಕೆ ಶೇ.30ರಷ್ಟು ಶಿಕ್ಷಕರ ಬಳಕೆ: ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಮಾಡೋರಿಲ್ಲ ಪಾಠ ಪ್ರವಚನ!
ನೈತಿಕ ಶಿಕ್ಷಣವನ್ನು ಕೇವಲ ಪಠ್ಯಕ್ಕೆ ಸೀಮಿತಗೊಳಿಸದೆ, ಮಕ್ಕಳಲ್ಲಿ ಉತ್ತಮ ವ್ಯಕ್ತಿತ್ವ, ಜವಾಬ್ದಾರಿ, ಸಾಮಾಜಿಕ ಮೌಲ್ಯಗಳು ಹಾಗೂ ಆರೋಗ್ಯಕರ ಜೀವನಶೈಲಿಯನ್ನು ಬೆಳೆಸುವ ಉದ್ದೇಶದಿಂದ ಶಿಕ್ಷಣ ಇಲಾಖೆ ಈ ಹೊಸ ಕ್ರಮಕ್ಕೆ ಮುಂದಾಗಿದೆ. ಈ ಪಠ್ಯಕ್ರಮದ ಮೂಲಕ ಮಕ್ಕಳಲ್ಲಿ ಆತ್ಮವಿಶ್ವಾಸ, ಸಾಮಾಜಿಕ ಹೊಣೆಗಾರಿಕೆ ಮತ್ತು ಉತ್ತಮ ನಾಗರಿಕ ಗುಣಗಳನ್ನು ಬೆಳೆಸುವ ಗುರಿಯನ್ನು ಇಲಾಖೆ ಹೊಂದಿದೆ.
ಮತ್ತಷ್ಟು ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




