ಎಸ್‌ಐಆರ್ ಕಾರ್ಯಕ್ಕೆ ಶೇ.30ರಷ್ಟು ಶಿಕ್ಷಕರ ಬಳಕೆ: ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಮಾಡೋರಿಲ್ಲ ಪಾಠ ಪ್ರವಚನ!
ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR) ಕಾರ್ಯಕ್ಕೆ ಶೇ.30ರಷ್ಟು ಸರ್ಕಾರಿ ಶಿಕ್ಷಕರನ್ನು ನಿಯೋಜಿಸಿರುವುದರಿಂದ ರಾಜ್ಯದ ಸಾವಿರಾರು ಶಾಲೆಗಳಲ್ಲಿ ಬೋಧನೆ ಸ್ಥಗಿತಗೊಂಡಿದ್ದು, ವಿದ್ಯಾರ್ಥಿಗಳ ಕಲಿಕೆಯ ಮೇಲೆ ತೀವ್ರ ಪರಿಣಾಮ ಬೀರಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಉಂಟಾದ ಕಲಿಕಾ ನಷ್ಟ ಅನಿವಾರ್ಯವಾಗಿತ್ತು. ಆದರೆ ಇದು ಸರ್ಕಾರವೇ ಸೃಷ್ಟಿಸಿದ ಪರಿಸ್ಥಿತಿ ಎಂಬ ಮಾತುಗಳು ಕೇಳಿಬಂದಿವೆ.

ಮುಖ್ಯಾಂಶಗಳು
- ಕರ್ನಾಟಕದಲ್ಲಿ ವಿಶೇಷ ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆ
- SIR ಕಾರ್ಯಕ್ಕೆ ಅಂದಾಜು ಶೇ.30ರಷ್ಟು ಶಿಕ್ಷಕರ ನಿಯೋಜನೆ
- ಸಾವಿರಾರು ಶಾಲೆಗಳಲ್ಲಿ ಬೋಧನಾ ಚಟುವಟಿಕೆ ಬಹುತೇಕ ಸ್ಥಗಿತ
ಬೆಂಗಳೂರು, ಜುಲೈ 19: ಕರ್ನಾಟಕದಲ್ಲಿ ನಡೆಯುತ್ತಿರುವ ವಿಶೇಷ ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆ (Special Intensive Revision – SIR) ಕಾರ್ಯಕ್ಕೆ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಅಂದಾಜು ಶೇ.30ರಷ್ಟು ಶಿಕ್ಷಕರನ್ನು ನಿಯೋಜಿಸಿರುವುದರಿಂದ, ಸಾವಿರಾರು ಶಾಲೆಗಳಲ್ಲಿ ಬೋಧನಾ ಚಟುವಟಿಕೆಗಳು ಬಹುತೇಕ ಸ್ಥಗಿತಗೊಂಡಿವೆ. ಇದು ವಿದ್ಯಾರ್ಥಿಗಳ ಶಿಕ್ಷಣದ ಮೇಲೆ ಪರಿಣಾಮ ಬೀರುವ ಬಗ್ಗೆ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
ಅನೇಕ ಶಾಲೆಗಳಲ್ಲಿ ಒಂದೇ ಕೊಠಡಿಯಲ್ಲಿ ಮಕ್ಕಳಿಗೆ ಪಾಠ
ಜೂನ್ 30ರಿಂದ ಆಗಸ್ಟ್ 8ರವರೆಗೆ ಬೂತ್ ಮಟ್ಟದ ಅಧಿಕಾರಿಗಳಾಗಿ (BLO) ಮನೆ ಮನೆಗೆ ತೆರಳಿ ಮತದಾರರ ಮಾಹಿತಿ ಸಂಗ್ರಹಿಸುವ ಕಾರ್ಯ ನಡೆಯುತ್ತಿದ್ದು, ಇದಕ್ಕೂ ಮುನ್ನವೇ ಜೂನ್ 20ರಿಂದ ಶಿಕ್ಷಕರಿಗೆ ಎಸ್‌ಐಆರ್ ತರಬೇತಿ ನೀಡಲಾಗಿತ್ತು. ಪರಿಣಾಮವಾಗಿ, ಹೊಸ ಶೈಕ್ಷಣಿಕ ವರ್ಷದ ಮೂರನೇ ವಾರದಿಂದಲೇ ಮಕ್ಕಳಿಗೆ ಪಾಠ ಪ್ರವಚನ ಮಾಡಬೇಕಿದ್ದ ಬಹುತೇಕ ಶಿಕ್ಷಕರು ಅಲಭ್ಯರಾಗಿದ್ದಾರೆ. ಶಿಕ್ಷಕರ ಕೊರತೆಯಿಂದ ಅನೇಕ ಶಾಲೆಗಳಲ್ಲಿ ವಿವಿಧ ತರಗತಿಗಳ ವಿದ್ಯಾರ್ಥಿಗಳನ್ನು ಒಂದೇ ಕೊಠಡಿಯಲ್ಲಿ ಕುಳ್ಳಿರಿಸಿ, ಒಬ್ಬ ಅಥವಾ ಇಬ್ಬರು ಶಿಕ್ಷಕರಿಂದ ಮಾತ್ರ ಮೇಲ್ವಿಚಾರಣೆ ಮಾಡಲಾಗುತ್ತಿದೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಲೋಪ ಆರೋಪ; ಮುಖ್ಯ ಚುನಾವಣಾ ಆಯುಕ್ತರಿಗೆ ಮೈತ್ರಿ ನಾಯಕರಿಂದ ದೂರು
ಶಾಲೆಗಳಲ್ಲಿ ಶೈಕ್ಷಣಿಕ ವಾತಾವರಣವೇ ಮಾಯ
ಬೆಂಗಳೂರು ಉತ್ತರ ಶಿಕ್ಷಣ ಜಿಲ್ಲೆಯಲ್ಲಿ ಒಟ್ಟು 3,735 ಶಿಕ್ಷಕರ ಪೈಕಿ 1,304 ಮಂದಿ 535 ಸರ್ಕಾರಿ ಹಾಗೂ 220 ಅನುದಾನಿತ ಶಾಲೆಗಳಿಂದ ಎಸ್‌ಐಆರ್ ಕರ್ತವ್ಯಕ್ಕೆ ನಿಯೋಜನೆಯಾಗಿದ್ದಾರೆ. ಬೆಂಗಳೂರು ದಕ್ಷಿಣ ಶಿಕ್ಷಣ ಜಿಲ್ಲೆಯಲ್ಲಿ ಈ ಸಂಖ್ಯೆ 2,344ಕ್ಕೆ ಏರಿಕೆಯಾಗಿದೆ. ಮತ್ತೊಂದೆಡೆ ಕೆಲ ಶಾಲೆಗಳು ಎಸ್‌ಐಆರ್ ಕಾರ್ಯದ ಕೇಂದ್ರಗಳಾಗಿದ್ದು, ಶಾಲೆಗಳಲ್ಲಿ ಶೈಕ್ಷಣಿಕ ವಾತಾವರಣವೇ ಇಲ್ಲದಂತಾಗಿದೆ ಎಂದು ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ (SDMC) ಸದಸ್ಯರು ಆರೋಪಿಸಿದ್ದಾರೆ. ಮಕ್ಕಳು ಶಾಲೆಗೆ ಬಂದು ಮಧ್ಯಾಹ್ನದ ಊಟ ಮಾಡಿ ಮನೆಗೆ ಹೋಗುತ್ತಿದ್ದಾರೆ ಎಂಬ ಮಾತುಗಳೂ ಕೇಳಿಬಂದಿವೆ
ಪೋಷಕರಲ್ಲಿ ತಪ್ಪು ಕಲ್ಪನೆ ಮೂಡುವ ಬಗ್ಗೆ ತಜ್ಞರ ಎಚ್ಚರ
ಶಿಕ್ಷಣ ತಜ್ಞ ನಿರಂಜನಾರಾಧ್ಯ ವಿ.ಪಿ. ಮಾತನಾಡಿ, ಕೋವಿಡ್ ಸಂದರ್ಭದಲ್ಲಿ ಉಂಟಾದ ಕಲಿಕಾ ನಷ್ಟ ಅನಿವಾರ್ಯವಾಗಿತ್ತು. ಆದರೆ ಇದು ಸರ್ಕಾರವೇ ಸೃಷ್ಟಿಸಿದ ಪರಿಸ್ಥಿತಿ. ಈಗ ಸಂಪೂರ್ಣ ಶೈಕ್ಷಣಿಕ ವರ್ಷವನ್ನು ಮರುನಿಗದಿ ಮಾಡುವ ಅಗತ್ಯವಿದೆ, ಎಂದು ಅಭಿಪ್ರಾಯಪಟ್ಟಿದ್ದಾರೆ. ಇದರಿಂದ ಸರ್ಕಾರಿ ಶಾಲೆಗಳ ಬಗ್ಗೆ ಪೋಷಕರಲ್ಲಿ ತಪ್ಪು ಕಲ್ಪನೆ ಮೂಡಿ, ಕಡಿಮೆ ಶುಲ್ಕದ ಖಾಸಗಿ ಶಾಲೆಗಳತ್ತ ಮುಖ ಮಾಡುವ ಸಾಧ್ಯತೆಯೂ ಇದೆ ಎಂದು ಅವರು ಎಚ್ಚರಿಸಿದ್ದಾರೆ ಎಂದು ದಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:02 am, Sun, 19 July 26




