ಭಾರತದಲ್ಲಿ ಗಲಭೆ ಎಬ್ಬಿಸಲು ವಿದೇಶಿಗನ ಜೊತೆ ಸಂಪರ್ಕ: ರಾಯಚೂರಲ್ಲಿ ಯುವಕನ ಬಂಧನ
Raichur News: ಭಾರತದಲ್ಲಿ ಗಲಭೆ ಹಾಗೂ ಅಶಾಂತಿ ಸೃಷ್ಟಿಸಲು ಅರಬ್ ಮೂಲದ ವಿದೇಶಿ ವ್ಯಕ್ತಿಯೊಂದಿಗೆ ಸಂಪರ್ಕ ಸಾಧಿಸಿ ಪ್ರಚೋದನೆ ಪಡೆಯುತ್ತಿದ್ದ ಯುವಕನೊಬ್ಬನನ್ನು ರಾಯಚೂರಿನ ಸದರಬಜಾರ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರಲು ಯತ್ನಿಸಿದ ಆರೋಪದಡಿ ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಮುಖ್ಯಾಂಶಗಳು
- ವಿದೇಶಿಗನ ಜೊತೆ ಸೇರಿ ಭಾರತದಲ್ಲಿ ಗಲಭೆಗೆ ಸಂಚು
- ರಾಯಚೂರಲ್ಲಿ ಯುವಕನ ಬಂಧಿಸಿದ ಪೊಲೀಸರು
- ಮೊಹಮ್ಮದ್ ಶಾಹಿಲ್(24) ಬಂಧಿತ ಆರೋಪಿ
ರಾಯಚೂರು, ಆಗಸ್ಟ್ 09: ಭಾರತದಲ್ಲಿ ಗಲಭೆ ಎಬ್ಬಿಸಲು ವಿದೇಶಿಗನ ಜೊತೆ ಸಂಪರ್ಕ ಹಿನ್ನೆಲೆ ರಾಯಚೂರಿನ ವ್ಯಕ್ತಿಯೋರ್ವನನ್ನು ಸದರಬಜಾರ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೊಹಮ್ಮದ್ ಶಾಹಿಲ್(24) ಬಂಧಿತ ಆರೋಪಿಯಾಗಿದ್ದು, ಈತ ಟೀ ಸ್ಟಾಲ್ ಇಟ್ಟಿಕೊಂಡಿದ್ದ. ಭಾರತದಲ್ಲಿ ಗಲಭೆ ಎಬ್ಬಿಸಲು ಸ್ಕೆಚ್ ಹಾಕಿದ್ದ ಅರಬ್ ಮೂಲದ ವ್ಯಕ್ತಿ ಈ ಸಂಬಂಧ ಶಾಹಿಲ್ಗೆ ಮೈಂಡ್ವಾಷ್ ಮಾಡಿದ್ದ ಎಂಬುದು ಗೊತ್ತಾಗಿದೆ.
ಮೆಸೇಜ್ ಮೂಲಕ ಪಿಸ್ತೂಲ್ ಕೇಳಿದ್ದ ಆರೋಪಿ
ಇನ್ಸ್ಟಾಗ್ರಾಂನಲ್ಲಿ ರಾಣಾ ಭಾಯ್ ಹೆಸರಲ್ಲಿ ವಿದೇಶಿ ವ್ಯಕ್ತಿಯ ಜೊತೆಗೆ ಮೊಹಮ್ಮದ್ ಶಾಹಿಲ್ ಚಾಟಿಂಗ್ ಮಾಡುತ್ತಿದ್ದ. ಅಲ್ಲದೆ ರಾಣಾ ಭಾಯ್ ಅಕೌಂಟ್ನ ಪೋಸ್ಟ್ಗಳಿಗೆ ಲೈಕ್ ಮಾಡ್ತಿದ್ದ. ಕಮೆಂಟ್, ಶೇರ್ ಮಾಡುತ್ತ ಆತನ ಜೊತೆ ಸಂಪರ್ಕ ಸಾಧಿಸಿದ್ದ. ಅನಾಮಧೇಯ ವ್ಯಕ್ತಿಯ ಪೋಸ್ಟ್ ನೋಡಿ ಪ್ರಭಾವಿತನಾಗಿದ್ದ ಶಾಹಿಲ್, ರಾಣಾ ಭಾಯ್ಗೆ ಮೆಸೇಜ್ ಮೂಲಕ ಪಿಸ್ತೂಲ್ ಕೂಡ ಕೇಳಿದ್ದ. ಭಾಯ್ ಮುಝೇ ಏಕ್ ಪಿಸ್ತೂಲ್ ಚಾಹಿಯೇ ಥೀ, ಮಿಲೇಗಿ ಕ್ಯಾ ಎಂದು ಪ್ರಶ್ನಿಸಿದ್ದ ಎನ್ನಲಾಗಿದೆ.
ಇದನ್ನೂ ಓದಿ: ನೀವು ಭಯೋತ್ಪಾದಕರಾ ಎಂದು ಪ್ರಶ್ನಿಸಿ ಟೆಕ್ಕಿಗಳ ಮೇಲೆ ಹಲ್ಲೆ ನಡೆಸಿದ ದುಷ್ಕರ್ಮಿ
ಗಲಭೆ ಎಬ್ಬಿಸಿದರೆ ಹಣ, ಪಿಸ್ತೂಲ್ ಆಮಿಷ
ಆ ಬಳಿಕ ಅರಬ್ ಮೂಲದ ವ್ಯಕ್ತಿ ಮೊಹಮ್ಮದ್ ಶಾಹಿಲ್ ವಾಟ್ಸಾಪ್ ನಂಬರ್ ಪಡೆದಿದ್ದ. ಜುಲೈ 14ರಿಂದ ಇಬ್ಬರ ನಡುವೆ ಹತ್ತಾರು ವಿಚಾರಗಳ ಕುರಿತು ಚರ್ಚೆಯಾಗಿದ್ದು, ಈ ವೇಳೆ ಗಲಭೆ ಎಬ್ಬಿಸಲು ರಾಣಾ ಭಾಯ್ ಎಂಬಾತ ಪ್ರಚೋದನೆ ನೀಡಿದ್ದ. ಗಲಭೆ ಎಬ್ಬಿಸಲು ಎಷ್ಟು ಬೇಕಾದರೂ ಹಣ ಕೊಡುವುದಾಗಿ ಹಾಗೂ ಶಾಹಿಲ್ ಕೇಳಿದಂತೆ ಪಿಸ್ತೂಲ್ ಕೊಡೋದಾಗಿ ಭರವಸೆ ನೀಡಿದ್ದ ಎನ್ನಲಾಗಿದೆ. ರಾಷ್ಟ್ರೀಯ ಭದ್ರತೆಗೆ ಧಕ್ಕೆ ತಂದ ಆರೋಪದಡಿ ಮೊಹಮ್ಮದ್ ಶಾಹಿಲ್ ವಿರುದ್ಧ ರಾಯಚೂರಿನ ಸದರ್ಬಜಾರ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಗಲಭೆ ಎಬ್ಬಿಸಲು ಸಂಚಿನ ಸಂಬಂಧ ಆರೋಪಿ ಬೇರೆ ಯಾರನ್ನಾದರೂ ಸಂಪರ್ಕಿಸಿದ್ದನಾ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:43 am, Sun, 9 August 26




