- TV9 Kannada Kannada News Photos Cricket Photos Hardik Pandya Fitness: Gill Confirms Domestic Return for Team India Comeback
ದೇಶೀಯ ಕ್ರಿಕೆಟ್‌ನಲ್ಲಿ ಆಡಿದರೆ ಮಾತ್ರ ತಂಡದಲ್ಲಿ ಸ್ಥಾನ: ಹಾರ್ದಿಕ್‌ಗೆ ಗಿಲ್ ಸಂದೇಶ
ಗಾಯದಿಂದ ಬಳಲುತ್ತಿರುವ ಟೀಂ ಇಂಡಿಯಾ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಫಿಟ್ನೆಸ್ ಕುರಿತು ಶುಭ್ಮನ್ ಗಿಲ್ ಪ್ರಮುಖ ಮಾಹಿತಿ ನೀಡಿದ್ದಾರೆ. ಪಾಂಡ್ಯ ಚೇತರಿಸಿಕೊಳ್ಳುತ್ತಿದ್ದು, ತಂಡಕ್ಕೆ ಮರಳುವ ಮೊದಲು ದೇಶೀಯ ಕ್ರಿಕೆಟ್‌ನಲ್ಲಿ ಆಡಬೇಕಿದೆ ಎಂದು ಗಿಲ್ ಹೇಳಿದ್ದಾರೆ. 2026ರ ಐಪಿಎಲ್‌ನಿಂದ ಗಾಯದ ಸಮಸ್ಯೆಗಳನ್ನು ಎದುರಿಸುತ್ತಿರುವ ಪಾಂಡ್ಯ, 2027ರ ವಿಶ್ವಕಪ್‌ಗೆ ತಂಡಕ್ಕೆ ಅವಶ್ಯಕ.
Updated on: Nov 03, 2026 | 3:25 PM

2026 ರ ಐಪಿಎಲ್ ಬಳಿಕ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಟೀಂ ಇಂಡಿಯಾದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರ ಅನುಪಸ್ಥಿತಿ ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ. ಈ ನಡುವೆ ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದ ಮುನ್ನಾದಿನ ನಡೆದ ಸುದ್ದಿಗೋಷ್ಠಿಯಲ್ಲಿ ನಾಯಕ ಶುಭ್ಮನ್ ಗಿಲ್, ಹಾರ್ದಿಕ್ ಪಾಂಡ್ಯ ಅವರ ಫಿಟ್ನೆಸ್ ಹಾಗೂ ತಂಡಕ್ಕೆ ಮರಳುವ ವಿಚಾರವಾಗಿ ಮಹತ್ವದ ಮಾಹಿತಿ ನೀಡಿದ್ದಾರೆ(PC-PTI).

ಹಾರ್ದಿಕ್ ಪಾಂಡ್ಯ ಕೊನೆಯ ಬಾರಿಗೆ ಮೇ 24ರಂದು ಸ್ಪರ್ಧಾತ್ಮಕ ಕ್ರಿಕೆಟ್‌ನಲ್ಲಿ ಕಾಣಿಸಿಕೊಂಡಿದ್ದರು. ಆ ಬಳಿಕ ಸತತ ಗಾಯದ ಸಮಸ್ಯೆಗಳು ಅವರ ಕ್ರಿಕೆಟ್ ಜೀವನಕ್ಕೆ ಅಡ್ಡಿಯಾಗಿವೆ. ಸದ್ಯ ಬೆಂಗಳೂರಿನಲ್ಲಿರುವ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರು, ವಿವಿಧ ದೈಹಿಕ ಸಮಸ್ಯೆಗಳಿಂದ ಚೇತರಿಸಿಕೊಳ್ಳಲು ಪುನಶ್ಚೇತನ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ(PC-PTI).

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶುಭ್ಮನ್ ಗಿಲ್, ಹಾರ್ದಿಕ್ ಪಾಂಡ್ಯ ಅವರ ಸಾಮರ್ಥ್ಯವನ್ನು ಮುಕ್ತಕಂಠದಿಂದ ಹೊಗಳಿದ್ದಾರೆ. ಹೊಸ ಚೆಂಡು ಹಾಗೂ ಹಳೆಯ ಚೆಂಡಿನಲ್ಲೂ ಪರಿಣಾಮಕಾರಿಯಾಗಿ ಬೌಲಿಂಗ್ ಮಾಡುವ ಸಾಮರ್ಥ್ಯ ಹಾರ್ದಿಕ್ ಅವರಿಗಿದೆ. ಪಂದ್ಯದ ವಿವಿಧ ಹಂತಗಳಲ್ಲಿ ತಂಡಕ್ಕೆ ನೆರವಾಗಬಲ್ಲ ಅಪರೂಪದ ಆಲ್‌ರೌಂಡರ್ ಅವರು ಎಂದು ಗಿಲ್ ಹೇಳಿದ್ದಾರೆ(PC-PTI).

ಇದೇ ವೇಳೆ, ಟೀಂ ಇಂಡಿಯಾಗೆ ಮರಳುವ ಮೊದಲು ಹಾರ್ದಿಕ್ ದೇಶೀಯ ಕ್ರಿಕೆಟ್‌ನಲ್ಲಿ ಆಡಬೇಕಾಗುತ್ತದೆ ಎಂಬ ಸುಳಿವನ್ನೂ ಗಿಲ್ ನೀಡಿದ್ದಾರೆ. ತಮ್ಮ ಫಿಟ್ನೆಸ್ ಸಾಬೀತುಪಡಿಸಿದ ಬಳಿಕವಷ್ಟೇ ರಾಷ್ಟ್ರೀಯ ತಂಡದ ಆಯ್ಕೆಗೆ ಪರಿಗಣಿಸಲಾಗುತ್ತದೆ. ಹೀಗಾಗಿ ಮುಂಬರುವ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಅಥವಾ ವಿಜಯ್ ಹಜಾರೆ ಟ್ರೋಫಿಯಲ್ಲಿ ಹಾರ್ದಿಕ್ ಕಣಕ್ಕಿಳಿಯುವ ಸಾಧ್ಯತೆಯಿದೆ. ಈ ಟೂರ್ನಿಗಳು ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ನಡೆಯಲಿವೆ(PC-PTI).

2026ರ ಐಪಿಎಲ್ ವೇಳೆಯೇ ಹಾರ್ದಿಕ್ ಅವರ ಗಾಯದ ಸಮಸ್ಯೆ ಆರಂಭವಾಗಿತ್ತು. ಬೆನ್ನು ಸೆಳೆತದ ಕಾರಣ ಟೂರ್ನಿಯ ಹಲವು ಪಂದ್ಯಗಳಿಂದ ಅವರು ಹೊರಗುಳಿದಿದ್ದರು. ಟೂರ್ನಿಯ ಅಂತಿಮ ಹಂತದಲ್ಲಿ ಮತ್ತೆ ಕಣಕ್ಕಿಳಿದರೂ ಸಂಪೂರ್ಣ ಫಿಟ್ನೆಸ್ ಮರಳಿ ಪಡೆಯಲು ಸಾಧ್ಯವಾಗಿರಲಿಲ್ಲ. ಜೂನ್‌ನಲ್ಲಿ ತೊಡೆಯ ಸ್ನಾಯು ಸೆಳೆತದ ಸಮಸ್ಯೆಯಿಂದಾಗಿ ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಗೂ ಅಲಭ್ಯರಾಗಿದ್ದರು. ಬಳಿಕ ಮೊಣಕಾಲಿನ ನೋವು ಸೇರಿದಂತೆ ಹಲವು ಸಮಸ್ಯೆಗಳು ಅವರನ್ನು ಕಾಡಿದ್ದರಿಂದ ನ್ಯೂಜಿಲೆಂಡ್ ವಿರುದ್ಧದ ವೈಟ್‌ಬಾಲ್ ಸರಣಿಯಿಂದಲೂ ದೂರ ಉಳಿಯಬೇಕಾಯಿತು(PC-PTI).

2027ರ ಏಕದಿನ ವಿಶ್ವಕಪ್‌ಗೆ ಸಿದ್ಧತೆ ನಡೆಸುತ್ತಿರುವ ಭಾರತ ತಂಡಕ್ಕೆ ಹಾರ್ದಿಕ್ ಪಾಂಡ್ಯ ಅವರ ಫಿಟ್ನೆಸ್ ಅತ್ಯಂತ ಮಹತ್ವದ್ದಾಗಿದೆ. ಪ್ರಮುಖ ಆಟಗಾರರ ಅಲಭ್ಯತೆಯ ನಡುವೆ ತಂಡದ ಸಮತೋಲನ ಕಾಪಾಡಿಕೊಳ್ಳುವುದು ಸವಾಲಾಗಿದೆ. ಹೀಗಾಗಿ ಹಾರ್ದಿಕ್ ಆದಷ್ಟು ಬೇಗ ಸಂಪೂರ್ಣ ಫಿಟ್ನೆಸ್ ಪಡೆದು ತಂಡಕ್ಕೆ ಮರಳಲಿ ಎಂಬುದು ಅಭಿಮಾನಿಗಳು ಹಾಗೂ ಟೀಂ ಮ್ಯಾನೇಜ್‌ಮೆಂಟ್‌ನ ಆಶಯವಾಗಿದೆ(PC-PTI).

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್ ಪ್ರೊಡ್ಯೂಸರ್ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.
Read More



