IPL ಟ್ರೇಡಿಂಗ್ ಅಂದರೆ ಏನು? ಇದರ ನಿಯಮಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-20ರ ಮಿನಿ ಹರಾಜಿಗೂ ಮುನ್ನ ಫ್ರಾಂಚೈಸಿಗಳ ನಡುವೆ ಆಟಗಾರರ ಟ್ರೇಡಿಂಗ್ ಪ್ರಕ್ರಿಯೆ ತಾರಕಕ್ಕೇರಿದೆ. ಈಗಾಗಲೇ ಪಂಜಾಬ್ ಕಿಂಗ್ಸ್, ಲಕ್ನೋ ಸೂಪರ್ ಜೈಂಟ್ಸ್, ಮುಂಬೈ ಇಂಡಿಯನ್ಸ್, ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿಗಳು ತೆರೆಮರೆಯಲ್ಲಿ ಆಟಗಾರರ ಅದಲು-ಬದಲಿಗೆ ಮಾತುಕತೆ ಆರಂಭಿಸಿವೆ. ಹಾಗಿದ್ದಲ್ಲಿ, ಈ ಐಪಿಎಲ್ ಟ್ರೇಡಿಂಗ್ ಎಂದರೇನು? ಬಿಸಿಸಿಐ ನಿಯಮಾವಳಿಗಳ ಪ್ರಕಾರ ಇದು ಹೇಗೆ ನಡೆಯುತ್ತದೆ? ಆಟಗಾರರ ವರ್ಗಾವಣೆಯ ಕಟ್ಟುನಿಟ್ಟಿನ ನಿಯಮಗಳೇನು ಎಂಬುದರ ಸಂಪೂರ್ಣ ವಿವರ ಇಲ್ಲಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ ಎಂದ ತಕ್ಷಣ ನಮಗೆ ನೆನಪಾಗುವುದು ಕೋಟಿ ಕೋಟಿ ರೂಪಾಯಿಗಳ ಆಟಗಾರರ ಹರಾಜು. ಆದರೆ, ಹರಾಜಿನಲ್ಲಿ ಮಾತ್ರವಲ್ಲದೆ ಆ ಬಳಿಕ ಕೂಡ ಫ್ರಾಂಚೈಸಿಗಳು ಆಟಗಾರರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಬಹುದು. ಈ ಪ್ರಕ್ರಿಯೆಯನ್ನು ‘ಆಟಗಾರರ ಟ್ರೇಡಿಂಗ್’ ಎನ್ನಲಾಗುತ್ತದೆ. ಬಿಸಿಸಿಐ ನಿಯಮಾವಳಿಗಳ ಪ್ರಕಾರ ಐಪಿಎಲ್ ಟ್ರೇಡ್ ಹೇಗೆ ನಡೆಯುತ್ತದೆ? ಇದರ ಹಿಂದಿರುವ ಪ್ರಮುಖ ನಿಯಮಗಳೇನು? ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಟ್ರೇಡಿಂಗ್ ಎಂದರೇನು?
ಯಾವುದೇ ಒಬ್ಬ ಆಟಗಾರ ಹರಾಜಿಗೆ ಹೋಗದೆ, ಫ್ರಾಂಚೈಸಿಗಳ ನಡುವಿನ ಒಪ್ಪಂದದ ಮೂಲಕ ಒಂದು ತಂಡದಿಂದ ಮತ್ತೊಂದು ತಂಡಕ್ಕೆ ವರ್ಗಾವಣೆಯಾಗುವುದನ್ನು ಟ್ರೇಡಿಂಗ್ ಎನ್ನಲಾಗುತ್ತದೆ. ಇದರಲ್ಲಿ ಮುಖ್ಯವಾಗಿ ಎರಡು ವಿಧಾನಗಳಿವೆ:
- ಕ್ಯಾಶ್ ಡೀಲ್: ಒಂದು ತಂಡವು ಮತ್ತೊಂದು ತಂಡದಲ್ಲಿರುವ ಆಟಗಾರನನ್ನು ಸಂಪೂರ್ಣ ನಗದು ಹಣ ನೀಡಿ ಖರೀದಿಸುವುದು. (ಉದಾಹರಣೆಗೆ: ಗುಜರಾತ್ ಟೈಟನ್ಸ್ ತಂಡದಿಂದ ಮುಂಬೈ ಇಂಡಿಯನ್ಸ್‌ಗೆ ಹಾರ್ದಿಕ್ ಪಾಂಡ್ಯ ಬಂದಿದ್ದು ಇದೇ ನಿಯಮದಡಿ).
- ಪ್ಲೇಯರ್ ಸ್ವಾಪ್: ಎರಡು ತಂಡಗಳು ತಮ್ಮ ನಡುವೆ ಆಟಗಾರರನ್ನು ಅದಲು-ಬದಲು ಮಾಡಿಕೊಳ್ಳುವುದು. ಒಂದು ವೇಳೆ ಇಬ್ಬರು ಆಟಗಾರರ ಹರಾಜು ಮೊತ್ತದಲ್ಲಿ ವ್ಯತ್ಯಾಸವಿದ್ದರೆ, ಬಾಕಿ ಹಣವನ್ನು ನೀಡಿ ಸರಿದೂಗಿಸಲಾಗುತ್ತದೆ.
ಟ್ರೇಡಿಂಗ್ ನಿಯಮಗಳೇನು?
ಐಪಿಎಲ್‌ನಲ್ಲಿ ಆಟಗಾರರನ್ನು ಟ್ರೇಡ್ ಮಾಡಲು ಬಿಸಿಸಿಐ ಕೆಲವು ಕಠಿಣ ನಿಯಮಗಳನ್ನು ವಿಧಿಸಿದೆ. ಆ ನಿಯಮಗಳೆಂದರೆ…
- ಆಟಗಾರನ ಒಪ್ಪಿಗೆ ಕಡ್ಡಾಯ: ಎರಡು ಫ್ರಾಂಚೈಸಿಗಳು ಆಟಗಾರನ ವರ್ಗಾವಣೆಗೆ ಒಪ್ಪಿದರೂ, ಸ್ವತಃ ಆ ಆಟಗಾರನ ಲಿಖಿತ ಒಪ್ಪಿಗೆ ಇಲ್ಲದೆ ಟ್ರೇಡ್ ಮಾಡಲು ಸಾಧ್ಯವಿಲ್ಲ. ಆಟಗಾರನಿಗೆ ಇಷ್ಟವಿಲ್ಲದಿದ್ದರೆ ಆತ ವರ್ಗಾವಣೆಯನ್ನು ತಿರಸ್ಕರಿಸಬಹುದು.
- ವೇತನ ನಿಯಮ: ಟ್ರೇಡ್ ಆದ ಆಟಗಾರನಿಗೆ ಹಳೆಯ ತಂಡದಲ್ಲಿದ್ದಷ್ಟೇ ಮೊತ್ತದ ವೇತನವನ್ನು ಹೊಸ ತಂಡದಲ್ಲೂ ನೀಡಬೇಕಾಗುತ್ತದೆ. ಆತನ ಕಾಂಟ್ರಾಕ್ಟ್ ಮೊತ್ತದಲ್ಲಿ ಯಾವುದೇ ಕಡಿತ ಮಾಡುವಂತಿಲ್ಲ. ಒಂದು ವೇಳೆ ಆಟಗಾರನ ಒಪ್ಪಿಗೆ ಮೇಲೆ ವೇತನವನ್ನು ಕಡಿತಗೊಳಿಸಬಹುದು.
- ಹೊಸ ಖರೀದಿಗೆ ಟ್ರೇಡ್ ಇಲ್ಲ: ಹರಾಜಿನಲ್ಲಿ ಹೊಸದಾಗಿ ಖರೀದಿಸಲಾದ ಆಟಗಾರರನ್ನು ಆ ಸೀಸನ್ ಆರಂಭಕ್ಕೂ ಮುನ್ನ ಟ್ರೇಡ್ ಮಾಡಲು ಅವಕಾಶವಿರುವುದಿಲ್ಲ.
ಟ್ರಾನ್ಸ್‌ಫರ್ ಫೀ:
ಟ್ರೇಡಿಂಗ್ ಸಮಯದಲ್ಲಿ ಎರಡು ಫ್ರಾಂಚೈಸಿಗಳ ನಡುವೆ ಹಣದ ವಹಿವಾಟು ಹೇಗೆ ನಡೆಯುತ್ತದೆ ಎಂಬುದು ಅತ್ಯಂತ ರೋಚಕವಾಗಿದೆ.
- ಟ್ರಾನ್ಸ್‌ಫರ್ ಫೀ: ಆಟಗಾರನನ್ನು ಖರೀದಿಸಲು ಆತನ ಮೂಲ ಬೆಲೆಗಿಂತ ಹೆಚ್ಚಿನ ಹಣವನ್ನು ಫ್ರಾಂಚೈಸಿಗಳು ಪರಸ್ಪರ ಒಪ್ಪಂದದ ಮೇರೆಗೆ ನೀಡಬಹುದು. ಇದಕ್ಕೆ ಯಾವುದೇ ಗರಿಷ್ಠ ಮಿತಿ ಇರುವುದಿಲ್ಲ. ಅಂದರೆ ಒಬ್ಬ ಆಟಗಾರನನ್ನು ಬಿಟ್ಟು ಕೊಟ್ಟರೆ, ನಿಮಗೆ ಇಷ್ಟು ಕೋಟಿ ರೂ. ನೀಡುತ್ತೇವೆ ಎಂದು ಫ್ರಾಂಚೈಸಿ ಮತ್ತೊಂದು ಫ್ರಾಂಚೈಸಿಗೆ ಆಫರ್ ನೀಡಬಹುದು.
- ಆಟಗಾರನಿಗೆ 50% ಪಾಲು: ನಿಯಮಗಳ ಪ್ರಕಾರ, ಫ್ರಾಂಚೈಸಿಗಳು ಪರಸ್ಪರ ಒಪ್ಪಂದ ಮಾಡಿಕೊಂಡ ಹೆಚ್ಚುವರಿ ಟ್ರಾನ್ಸ್‌ಫರ್ ಫೀ ಮೊತ್ತದಲ್ಲಿ ಆಟಗಾರನಿಗೆ ಶೇಕಡಾ 50 ರವರೆಗೆ ಪಾಲು ಸಿಗಬಹುದು. ಇದು ಆಟಗಾರ ಮತ್ತು ಫ್ರಾಂಚೈಸಿ ನಡುವಿನ ಒಪ್ಪಂದದ ಮೇಲೆ ನಿರ್ಧಾರವಾಗುತ್ತದೆ.
ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ, ಟ್ರಾನ್ಸ್‌ಫರ್ ಆಕ್ಷನ್ ಪ್ರೈಸ್ನಿಂದ ಕಡಿತವಾಗುವುದಿಲ್ಲ ಎಂಬುದು. ಅಂದರೆ ಆಟಗಾರನ ಮೂಲ ಹರಾಜು ಮೊತ್ತ ಮಾತ್ರ ಆಯಾ ತಂಡದ ಹರಾಜು ಪರ್ಸ್‌ನಿಂದ ಕಡಿತ ಅಥವಾ ಜಮೆಯಾಗುತ್ತದೆ. ಆದರೆ ಹೆಚ್ಚುವರಿಯಾಗಿ ನೀಡುವ ಟ್ರಾನ್ಸ್‌ಫರ್ ಫೀ ಮೊತ್ತವು ತಂಡದ ಅಧಿಕೃತ ಹರಾಜು ಪರ್ಸ್ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ. ಅದನ್ನು ಫ್ರಾಂಚೈಸಿಗಳು ತಮ್ಮ ಸ್ವಂತ ಲಾಭದಿಂದ ಭರಿಸಬೇಕಾಗುತ್ತದೆ.
ಟ್ರೇಡಿಂಗ್ ಯಾವಾಗ ನಡೆಯುತ್ತದೆ?
ಐಪಿಎಲ್ ಟ್ರೇಡಿಂಗ್ ಪ್ರಕ್ರಿಯೆಯು ವರ್ಷದಲ್ಲಿ ಎರಡು ಅವಧಿಗಳಲ್ಲಿ ಮಾತ್ರ ನಡೆಯಲು ಬಿಸಿಸಿಐ ಅವಕಾಶ ಕಲ್ಪಿಸುತ್ತದೆ:
- ಮೊದಲ ಅವಧಿ: ಐಪಿಎಲ್ ಸೀಸನ್ ಮುಗಿದ ಒಂದು ತಿಂಗಳ ನಂತರ ಆರಂಭವಾಗಿ, ಮುಂದಿನ ಹರಾಜು ಪ್ರಕ್ರಿಯೆ ನಡೆಯುವ ಒಂದು ವಾರದ ಮುಂಚಿನವರೆಗೆ ಚಾಲ್ತಿಯಲ್ಲಿರುತ್ತದೆ.
- ಎರಡನೇ ಅವಧಿ: ಹರಾಜು ಪ್ರಕ್ರಿಯೆ ಮುಗಿದ ಮರುದಿನದಿಂದ ಆರಂಭವಾಗಿ, ಮುಂದಿನ ಐಪಿಎಲ್ ಟೂರ್ನಿ ಆರಂಭವಾಗುವ ಒಂದು ತಿಂಗಳ ಮುಂಚಿನವರೆಗೆ ಮತ್ತೆ ಅವಕಾಶವಿರುತ್ತದೆ.
ಈ ಎರಡು ಅವಧಿಯನ್ನು ಐಪಿಎಲ್ನ ಟ್ರೇಡ್ ವಿಂಡೋ ಎಂದು ಕರೆಯಲಾಗುತ್ತದೆ. ಅಂದರೆ ಈ ಅವಧಿಯಲ್ಲಿ ಮಾತ್ರ ಆಟಗಾರರನ್ನು ಅದಲು-ಬದಲು ಮಾಡಿಕೊಳ್ಳಬಹುದು ಅಥವಾ ಖರೀದಿಸಬಹುದು.
ಬಿಸಿಸಿಐ ಒಪ್ಪಿಗೆ ಕಡ್ಡಾಯ:
ಎರಡು ತಂಡಗಳು ಮತ್ತು ಆಟಗಾರ ಒಪ್ಪಂದಕ್ಕೆ ಬಂದ ನಂತರ, ಈ ಪ್ರಸ್ತಾವನೆಯನ್ನು ಬಿಸಿಸಿಐಗೆ ಸಲ್ಲಿಸಲಾಗುತ್ತದೆ. ಬಿಸಿಸಿಐನ ತಾಂತ್ರಿಕ ಸಮಿತಿಯು ಎಲ್ಲಾ ನಿಯಮಗಳನ್ನು ಪರಿಶೀಲಿಸಿ ಅಂತಿಮ ಅನುಮೋದನೆ ನೀಡಿದ ನಂತರವೇ ಟ್ರೇಡ್ ಅಧಿಕೃತಗೊಳ್ಳುತ್ತದೆ.
ಇದನ್ನೂ ಓದಿ: ನೆಚ್ಚಿನ ನಾಯಕ ಯಾರೆಂದು ತಿಳಿಸಿದ ಸಚಿನ್ ತೆಂಡೂಲ್ಕರ್
ಒಟ್ಟಾರೆಯಾಗಿ ಹೇಳುವುದಾದರೆ, ಐಪಿಎಲ್‌ನಲ್ಲಿ ಕೇವಲ ಮೈದಾನದ ಆಟ ಮಾತ್ರವಲ್ಲ, ಮೈದಾನದ ಹೊರಗೆ ನಡೆಯುವ ಈ ತಂತ್ರಗಾರಿಕೆಗಳು ಮತ್ತು ಆಟಗಾರರ ಖರೀದಿ ಪ್ರಕ್ರಿಯೆಯೂ ಅಷ್ಟೇ ರೋಚಕವಾಗಿರುತ್ತದೆ. ಬಿಸಿಸಿಐನ ಈ ಕಠಿಣ ಟ್ರೇಡಿಂಗ್ ನಿಯಮಗಳು ಫ್ರಾಂಚೈಸಿಗಳ ನಡುವೆ ಸಮತೋಲನವನ್ನು ಕಾಯ್ದುಕೊಳ್ಳಲು ಮತ್ತು ಆಟಗಾರರ ಹಿತಾಸಕ್ತಿಯನ್ನು ರಕ್ಷಿಸಲು ನೆರವಾಗುತ್ತವೆ.
ಹರಾಜಿನ ಹೊರತಾಗಿಯೂ ತಂಡದ ಬಲವನ್ನು ಹೆಚ್ಚಿಸಿಕೊಳ್ಳಲು ಈ ‘ಟ್ರೇಡಿಂಗ್ ವಿಂಡೋ’ ಫ್ರಾಂಚೈಸಿಗಳಿಗೆ ಸಿಗುವ ಅತ್ಯುತ್ತಮ ಅವಕಾಶವಾಗಿದೆ. ಮುಂಬರುವ ಸೀಸನ್‌ನಲ್ಲಿ ಯಾವೆಲ್ಲಾ ಸ್ಟಾರ್ ಆಟಗಾರರು ಈ ನಿಯಮಗಳ ಅಡಿಯಲ್ಲಿ ತಂಡ ಬದಲಾಯಿಸಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ.




