- TV9 Kannada Kannada News Photos Cricket Photos Bhuvneshwar Kumar's India Comeback Doubtful: Ashwin Questions Future After NZ Performance
ಭುವನೇಶ್ವರ್ ಕುಮಾರ್ಗೆ ಟೀಂ ಇಂಡಿಯಾ ಬಾಗಿಲು ಬಂದ್? ಅಶ್ವಿನ್ ಭವಿಷ್ಯವಾಣಿ
ಮಾಜಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಪ್ರಕಾರ, ಭುವನೇಶ್ವರ್ ಕುಮಾರ್ಗೆ ಭಾರತ ತಂಡದಲ್ಲಿ ಮರಳುವುದು ಕಷ್ಟ. ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಭುವಿ ಕಳಪೆ ಪ್ರದರ್ಶನ ನೀಡಿದ್ದು, ಐಪಿಎಲ್ 2026ರ ಉತ್ತಮ ಫಾರ್ಮ್ ಅನ್ನು ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಫಿಟ್ನೆಸ್ ಕೊರತೆ ಮತ್ತು ವೇಗದ ಕೊರತೆ ಮುಖ್ಯ ಕಾರಣವಾಗಿವೆ. ಇದು ಅವರ ಅಂತರರಾಷ್ಟ್ರೀಯ ವೃತ್ತಿಜೀವನದ ಅಂತ್ಯವನ್ನು ಸೂಚಿಸುತ್ತಿರಬಹುದು ಎಂದು ಅಶ್ವಿನ್ ಅಭಿಪ್ರಾಯಪಟ್ಟಿದ್ದಾರೆ.
Updated on: Nov 03, 2026 | 6:10 PM

ಟೀಂ ಇಂಡಿಯಾದ ಅನುಭವಿ ವೇಗದ ಬೌಲರ್ ಭುವನೇಶ್ವರ್ ಕುಮಾರ್ ಅವರಿಗೆ ಇನ್ನು ಮುಂದೆ ಭಾರತ ತಂಡದಲ್ಲಿ ಅವಕಾಶ ಸಿಗುವುದು ಕಷ್ಟವಾಗಬಹುದು ಎಂದು ಮಾಜಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅಭಿಪ್ರಾಯಪಟ್ಟಿದ್ದಾರೆ. ನಾಲ್ಕು ವರ್ಷಗಳ ಬಳಿಕ ಭಾರತ ಟಿ20 ತಂಡಕ್ಕೆ ಮರಳಿದ್ದ ಭುವನೇಶ್ವರ್ ಕುಮಾರ್, ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ.

ನ್ಯೂಜಿಲೆಂಡ್ ವಿರುದ್ಧದ ನಾಲ್ಕು ಪಂದ್ಯಗಳಲ್ಲಿ ಆಡಿದ 36 ವರ್ಷದ ವೇಗದ ಬೌಲರ್ ಕೇವಲ ಒಂದು ವಿಕೆಟ್ ಪಡೆಯಲಷ್ಟೇ ಶಕ್ತರಾಗಿದ್ದಾರೆ. ಐಪಿಎಲ್ 2026ರಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ್ದ ಭುವಿ, ನ್ಯೂಜಿಲೆಂಡ್ ವಿರುದ್ಧ ಸಂಪೂರ್ಣ ವಿಭಿನ್ನ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಮಾತನಾಡಿರುವ ಅಶ್ವಿನ್, ಈ ಕಳಪೆ ಪ್ರದರ್ಶನದ ಬಳಿಕ ಭುವನೇಶ್ವರ್ ಮತ್ತೆ ಭಾರತ ತಂಡಕ್ಕೆ ಮರಳುವುದು ಸುಲಭವಲ್ಲ ಎಂದು ಹೇಳಿದ್ದಾರೆ.

ಭುವನೇಶ್ವರ್ ಕುಮಾರ್ ಅಷ್ಟೇನೂ ಉತ್ತಮವಾಗಿ ಬೌಲಿಂಗ್ ಮಾಡಿಲ್ಲ. ತಮ್ಮ ಫಾರ್ಮ್ ಅನ್ನು ಸಾಬೀತುಪಡಿಸುವಲ್ಲಿ ಅವರು ವಿಫಲರಾಗಿದ್ದಾರೆ. ಐಪಿಎಲ್ನಲ್ಲಿದ್ದ ಅವರ ಬೌಲಿಂಗ್ ಮತ್ತು ನ್ಯೂಜಿಲೆಂಡ್ ಸರಣಿಯಲ್ಲಿನ ಬೌಲಿಂಗ್ ನಡುವೆ ಅಜಗಜಾಂತರ ವ್ಯತ್ಯಾಸವಿತ್ತು. ಬಹುಶಃ ಅವರ ಭಾರತ ತಂಡದ ಅಧ್ಯಾಯ ಮುಗಿದಿರಬಹುದು. ಈಗ ಅವರು ಮತ್ತೆ ತಂಡಕ್ಕೆ ಹೇಗೆ ಮರಳುತ್ತಾರೆ ಎಂಬುದೇ ದೊಡ್ಡ ಪ್ರಶ್ನೆ ಎಂದು ಅಶ್ವಿನ್ ಹೇಳಿದ್ದಾರೆ.

ಐಪಿಎಲ್ 2026ರಲ್ಲಿ ಭುವನೇಶ್ವರ್ ಕುಮಾರ್ 16 ಪಂದ್ಯಗಳಿಂದ 28 ವಿಕೆಟ್ ಕಬಳಿಸಿದ್ದರು. ಟೂರ್ನಿಯ ಅತ್ಯುತ್ತಮ ಬೌಲರ್ಗಳಲ್ಲಿ ಒಬ್ಬರೆನಿಸಿಕೊಂಡಿದ್ದ ಅವರು, ಇದೇ ಪ್ರದರ್ಶನದ ಆಧಾರದಲ್ಲಿ ನಾಲ್ಕು ವರ್ಷಗಳ ಬಳಿಕ ಭಾರತ ಟಿ20 ತಂಡದಲ್ಲಿ ಸ್ಥಾನ ಪಡೆದಿದ್ದರು. ಆದರೆ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ನಾಲ್ಕು ಪಂದ್ಯಗಳಿಂದ ಕೇವಲ ಒಂದು ವಿಕೆಟ್ ಪಡೆದ ಅವರು, ಪ್ರತಿ ಓವರ್ಗೆ ಬರೋಬ್ಬರಿ 11.50 ರನ್ ಬಿಟ್ಟುಕೊಟ್ಟಿದ್ದರು.

ಭುವನೇಶ್ವರ್ ಅವರ ವೈಫಲ್ಯಕ್ಕೆ ಕಾರಣವೇನು ಎಂಬುದನ್ನೂ ವಿವರಿಸಿರುವ ಅಶ್ವಿನ್, ‘ಅವರು ಹೆಚ್ಚು ರನ್ ಬಿಟ್ಟುಕೊಟ್ಟರು ಅಥವಾ ಉತ್ತಮ ಪ್ರದರ್ಶನ ನೀಡಲಿಲ್ಲ ಎಂಬುದಷ್ಟೇ ನನ್ನ ಬೇಸರವಲ್ಲ. ಐಪಿಎಲ್ನಲ್ಲಿ ಬೌಲಿಂಗ್ ಮಾಡುವಾಗ ಅವರಲ್ಲಿದ್ದ ವೇಗ, ರನ್ಅಪ್ನಲ್ಲಿದ್ದ ಚುರುಕುತನ ಮತ್ತು ಬೌಲಿಂಗ್ ವೇಗ ನ್ಯೂಜಿಲೆಂಡ್ ಸರಣಿಯಲ್ಲಿ ಕಾಣಿಸಲಿಲ್ಲ. ಇದನ್ನು ಗಮನಿಸಿದಾಗ, ಈ ಸರಣಿಗೆ ಬರುವ ಮುನ್ನ ಅವರು ಅತ್ಯುತ್ತಮ ಫಿಟ್ನೆಸ್ ಹಾಗೂ ಅಭ್ಯಾಸದೊಂದಿಗೆ ಸಿದ್ಧರಾಗಿರಲಿಲ್ಲ ಎನಿಸುತ್ತದೆ’ ಎಂದು ಅಶ್ವಿನ್ ಅಭಿಪ್ರಾಯಪಟ್ಟಿದ್ದಾರೆ.

‘ಇಂತಹ ಪರಿಸ್ಥಿತಿಯಲ್ಲಿ ಆಯ್ಕೆಗಾರರೂ ಕೂಡ ಯೋಚನೆ ಮಾಡುತ್ತಾರೆ. ಯುವ ಆಟಗಾರನಾಗಿದ್ದರೆ ಹತ್ತು ಅವಕಾಶಗಳನ್ನು ನೀಡಬಹುದು. ಆದರೆ ಈಗಾಗಲೇ ಸಾಕಷ್ಟು ಅನುಭವ ಹೊಂದಿರುವ ಆಟಗಾರನಾಗಿ ತಂಡಕ್ಕೆ ಮರಳಿದಾಗ, ತನ್ನ ಸಾಮರ್ಥ್ಯವನ್ನು ಪ್ರದರ್ಶಿಸುವ ಜವಾಬ್ದಾರಿ ಹೆಚ್ಚಿರುತ್ತದೆ’ ಎಂದು ಹೇಳಿದ್ದಾರೆ.

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್ ಪ್ರೊಡ್ಯೂಸರ್ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.
Read More



