- TV9 Kannada Kannada News Photos Cricket Photos Australia's Glenn Maxwell Retires From International Cricket
‘ಮ್ಯಾಡ್ ಮ್ಯಾಕ್ಸ್’ ಯುಗಾಂತ್ಯ: ದಿಢೀರ್ ನಿವೃತ್ತಿ ಘೋಷಿಸಿದ ಗ್ಲೆನ್ ಮ್ಯಾಕ್ಸ್‌ವೆಲ್
ಕ್ರಿಕೆಟ್ ಮೈದಾನದಲ್ಲಿ ಅಸಾಧ್ಯವಾದುದನ್ನು ಸಾಧ್ಯವಾಗಿಸಿ, ತಮ್ಮ ವಿಶಿಷ್ಟ ಬ್ಯಾಟಿಂಗ್ ಶೈಲಿಯಿಂದಲೇ ಜಾಗತಿಕ ಕ್ರಿಕೆಟ್ ಅಭಿಮಾನಿಗಳನ್ನು ಮಂತ್ರಮುಗ್ಧರನ್ನಾಗಿಸಿದ್ದ ಆಸ್ಟ್ರೇಲಿಯಾದ ದಂತಕಥೆ ಗ್ಲೆನ್ ಮ್ಯಾಕ್ಸ್‌ವೆಲ್ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಅಧಿಕೃತವಾಗಿ ವಿದಾಯ ಹೇಳಿದ್ದಾರೆ. ಕಳೆದ 14 ವರ್ಷಗಳಿಂದ ಆಸ್ಟ್ರೇಲಿಯಾ ತಂಡದ ಬೆನ್ನೆಲುಬಾಗಿ, ಮೂರು ಐಸಿಸಿ ವಿಶ್ವಕಪ್ ಟ್ರೋಫಿಗಳನ್ನು ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ "ಮ್ಯಾಡ್ ಮ್ಯಾಕ್ಸ್" ಅವರ ಈ ನಿರ್ಧಾರ, ಕ್ರಿಕೆಟ್ ಲೋಕದ ಸುವರ್ಣ ಅಧ್ಯಾಯವೊಂದಕ್ಕೆ ತೆರೆ ಎಳೆದಿದೆ.
Updated on: Nov 03, 2026 | 7:27 AM

ಆಸ್ಟ್ರೇಲಿಯಾದ ಸ್ಟಾರ್ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ತಮ್ಮ 14 ವರ್ಷಗಳ ಭವ್ಯ ಅಂತರರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನಕ್ಕೆ ಅಧಿಕೃತವಾಗಿ ವಿದಾಯ ಘೋಷಿಸಿದ್ದಾರೆ. ತಮ್ಮ ವಿಶಿಷ್ಟ ಬ್ಯಾಟಿಂಗ್ ಶೈಲಿ ಹಾಗೂ ಸ್ಫೋಟಕ ಆಟದ ಮೂಲಕ ಜಾಗತಿಕ ಕ್ರಿಕೆಟ್‌ನಲ್ಲಿ "ಮ್ಯಾಡ್ ಮ್ಯಾಕ್ಸ್" ಎಂದೇ ಖ್ಯಾತರಾಗಿದ್ದ ಮ್ಯಾಕ್ಸ್‌ವೆಲ್, ಎಲ್ಲಾ ಸ್ವರೂಪದ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಪ್ರಕಟಿಸುವ ಮೂಲಕ ಅಭಿಮಾನಿಗಳಿಗೆ ಆಘಾತ ನೀಡಿದ್ದಾರೆ. (PC: Gettyimages)

ನವೆಂಬರ್ 2, 2026 ರಂದು ಪ್ರಸಾರವಾದ ಪ್ರಸಿದ್ಧ 'ದಿ ಫೈನಲ್ ವರ್ಡ್' ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ಅವರು ಈ ಮಹತ್ವದ ನಿರ್ಧಾರವನ್ನು ಹಂಚಿಕೊಂಡಿದ್ದಾರೆ. 2025ರ ಜೂನ್ ತಿಂಗಳಲ್ಲೇ ಏಕದಿನ ಕ್ರಿಕೆಟ್‌ಗೆ ನಿವೃತ್ತಿ ಹೇಳಿದ್ದ ಮ್ಯಾಕ್ಸ್‌ವೆಲ್, ಇದೀಗ ಟಿ20 ಹಾಗೂ ಟೆಸ್ಟ್ ಕ್ರಿಕೆಟ್ ಒಳಗೊಂಡಂತೆ ಅಂತರರಾಷ್ಟ್ರೀಯ ಮಟ್ಟದಿಂದ ಸಂಪೂರ್ಣವಾಗಿ ಹಿಂದೆ ಸರಿದಿದ್ದಾರೆ. 2026ರ ಫೆಬ್ರವರಿಯಲ್ಲಿ ಒಮಾನ್ ವಿರುದ್ಧ ನಡೆದ ಟಿ20 ಪಂದ್ಯವು ಅವರ ವೃತ್ತಿಜೀವನದ ಕೊನೆಯ ಅಂತರರಾಷ್ಟ್ರೀಯ ಪಂದ್ಯವಾಗಿದೆ. (PC: Gettyimages)

ಆಸ್ಟ್ರೇಲಿಯಾ ಪರ 7 ಟೆಸ್ಟ್, 149 ಏಕದಿನ ಹಾಗೂ 130 ಟಿ20 ಪಂದ್ಯಗಳನ್ನು ಆಡಿರುವ ಮ್ಯಾಕ್ಸ್‌ವೆಲ್, ಅಪಾರ ದಾಖಲೆಗಳನ್ನು ಬರೆದಿದ್ದಾರೆ. ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಜಂಟಿ ಗರಿಷ್ಠ ಅಂದರೆ 5 ಶತಕಗಳನ್ನು ಬಾರಿಸಿದ ದಾಖಲೆ ಮ್ಯಾಕ್ಸಿ ಹೆಸರಿನಲ್ಲಿದೆ. ಜೊತೆಗೆ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಟ್ಟು 136 ವಿಕೆಟ್‌ಗಳನ್ನು ಕಬಳಿಸಿ ಅತ್ಯುತ್ತಮ ಆಲ್ರೌಂಡರ್ ಆಗಿ ಗುರುತಿಸಿಕೊಂಡಿದ್ದಾರೆ. (PC: Gettyimages)

ಇನ್ನು ಆಸ್ಟ್ರೇಲಿಯಾ ತಂಡದ ಸುವರ್ಣ ಯುಗದ ಭಾಗವಾಗಿದ್ದ ಮ್ಯಾಕ್ಸ್‌ವೆಲ್ ಮೂರು ಪ್ರಮುಖ ಐಸಿಸಿ ಟ್ರೋಫಿಗಳನ್ನು ಗೆದ್ದ ತಂಡದ ಪ್ರಮುಖ ಸದಸ್ಯರಾಗಿದ್ದಾರೆ. 2015 ಮತ್ತು 2023ರ ಏಕದಿನ ವಿಶ್ವಕಪ್ ಹಾಗೂ 2021ರ ಟಿ20 ವಿಶ್ವಕಪ್ ವಿಜೇತ ಆಸ್ಟ್ರೇಲಿಯಾ ತಂಡದಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದರು. 2023ರ ಏಕದಿನ ವಿಶ್ವಕಪ್‌ನಲ್ಲಿ ಅಫ್ಘಾನಿಸ್ತಾನ್ ವಿರುದ್ಧದ ಪಂದ್ಯದಲ್ಲಿ ಗಾಯದ ನಡುವೆಯೂ ಮ್ಯಾಕ್ಸ್‌ವೆಲ್ ಬಾರಿಸಿದ ಅಜೇಯ 201* ರನ್‌ಗಳ ಇನಿಂಗ್ಸ್ ಕ್ರಿಕೆಟ್ ಇತಿಹಾಸದ ಸಾರ್ವಕಾಲಿಕ ಶ್ರೇಷ್ಠ ಇನಿಂಗ್ಸ್‌ಗಳಲ್ಲಿ ಒಂದಾಗಿ ದಾಖಲಾಗಿದೆ. (PC: Gettyimages)

ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಮತ್ತು ವಿಕ್ಟೋರಿಯಾ ಪರ ದೇಶಿ ಕ್ರಿಕೆಟ್‌ಗೆ ವಿದಾಯ ಹೇಳಿದ್ದರೂ, ಮ್ಯಾಕ್ಸ್‌ವೆಲ್ ವಿವಿಧ ದೇಶಗಳ ಟಿ20 ಫ್ರಾಂಚೈಸಿ ಕ್ರಿಕೆಟ್‌ನಲ್ಲಿ ಸಕ್ರಿಯರಾಗಿರಲಿದ್ದಾರೆ. ಬಿಗ್ ಬ್ಯಾಷ್ ಲೀಗ್ನಲ್ಲಿ ಮೆಲ್ಬೋರ್ನ್ ಸ್ಟಾರ್ಸ್ ತಂಡದೊಂದಿಗೆ 2027-28ರ ಸೀಸನ್‌ವರೆಗೆ ಒಪ್ಪಂದ ಹೊಂದಿದ್ದು, ಲೀಗ್ ಕ್ರಿಕೆಟ್‌ನಲ್ಲಿ ಅಭಿಮಾನಿಗಳನ್ನು ರಂಜಿಸುವುದನ್ನು ಮುಂದುವರಿಸಲಿದ್ದಾರೆ. ಕ್ರಿಕೆಟ್ ಮೈದಾನದಲ್ಲಿ ತಮ್ಮ ಅಸಂಪ್ರದಾಯಿಕ ಶಾಟ್‌ಗಳು ಹಾಗೂ ಅದ್ಭುತ ಫೀಲ್ಡಿಂಗ್ ಮೂಲಕ ಹೊಸ ಕ್ರಾಂತಿ ಸೃಷ್ಟಿಸಿದ ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಅನುಪಸ್ಥಿತಿ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಖಂಡಿತವಾಗಿಯೂ ಎದ್ದು ಕಾಣಲಿದೆ. (PC: Gettyimages)

ಟಿವಿ9 ಡಿಜಿಟಲ್ ಚೀಫ್ ಸಬ್ ಎಡಿಟರ್. 10 ವರ್ಷಗಳಿಂದ ಕನ್ನಡ ಡಿಜಿಟಲ್ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.
Read More



