ದಕ್ಷಿಣ ಕನ್ನಡದಲ್ಲಿ ದಸರಾ ರಜೆ ವಿಸ್ತರಣೆ, ಇಂದೂ ಶಾಲೆಗಳಿಗೆ ರಜೆ! ಅ. 23ರಿಂದ ಪುನರಾರಂಭ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಸರಾ ರಜೆಯನ್ನು ಅಕ್ಟೋಬರ್ 22ರವರೆಗೆ ಒಂದು ದಿನ ವಿಸ್ತರಿಸಲಾಗಿದೆ. ಪೋಷಕರು, ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳ ಮನವಿಯನ್ನು ಪರಿಗಣಿಸಿ ಶಾಲಾ ಶಿಕ್ಷಣ ಇಲಾಖೆ ಈ ನಿರ್ಧಾರ ಕೈಗೊಂಡಿದೆ. ಹೀಗಾಗಿ ಜಿಲ್ಲೆಯ ಎಲ್ಲ ಶಾಲೆಗಳಿಗೆ ಇಂದು ರಜೆ ಇರಲಿದ್ದು, ಅಕ್ಟೋಬರ್ 23ರಂದು ಪುನರಾರಂಭಗೊಳ್ಳಲಿದೆ.

ದಕ್ಷಿಣ ಕನ್ನಡದಲ್ಲಿ ದಸರಾ ರಜೆ ವಿಸ್ತರಣೆ, ಇಂದೂ ಶಾಲೆಗಳಿಗೆ ರಜೆ! ಅ. 23ರಿಂದ ಪುನರಾರಂಭ
ಸಾಂದರ್ಭಿಕ ಚಿತ್ರ

Updated on: Oct 22, 2026 | 6:42 AM

ಮಂಗಳೂರು, ಅಕ್ಟೋಬರ್ 22: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲಾ ಮಕ್ಕಳ ದಸರಾ ರಜೆಯನ್ನು ಒಂದು ದಿನ ವಿಸ್ತರಿಸಿ ಶಾಲಾ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಪೋಷಕರು, ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳ ಮನವಿಯನ್ನು ಪರಿಗಣಿಸಿ ಅಕ್ಟೋಬರ್ 22ರವರೆಗೆ ರಜೆ ಮುಂದುವರಿಸಲು ನಿರ್ಧರಿಸಲಾಗಿದೆ. ಹೀಗಾಗಿ ಜಿಲ್ಲೆಯ ಶಾಲೆಗಳಿಗೆ ಇಂದು ರಜೆ ಇರಲಿದ್ದು, ಅಕ್ಟೋಬರ್ 23ರಂದು ಪುನರಾರಂಭಗೊಳ್ಳಲಿವೆ. ಅಕ್ಟೋಬರ್ 21ರಂದು ಹೊರಡಿಸಲಾದ ಅಧಿಕೃತ ಜ್ಞಾಪನ ಪತ್ರದಲ್ಲಿ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ರಜೆ ವಿಸ್ತರಣೆಯ ನಿರ್ಧಾರವನ್ನು ತಿಳಿಸಿದ್ದಾರೆ. ದಸರಾ ಹಬ್ಬದ ಹಿನ್ನೆಲೆಯಲ್ಲಿ ಮಕ್ಕಳಿಗೆ ರಜೆ ವಿಸ್ತರಿಸುವಂತೆ ಪೋಷಕರು, ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳಿಂದ ದೂರವಾಣಿ ಕರೆಗಳ ಮೂಲಕ ಮನವಿಗಳು ಬಂದಿದ್ದವು.

ಐತಿಹಾಸಿಕ ದಸರಾ ಉತ್ಸವದ ಕೊನೆಯ ದಿನವಾದ ಅಕ್ಟೋಬರ್ 21ರಂದು ಪೂಜಾ ವಿಧಿವಿಧಾನಗಳು ಹಾಗೂ ಮೆರವಣಿಗೆಗಳು ತಡರಾತ್ರಿಯವರೆಗೂ ನಡೆಯಲಿವೆ. ಈ ಆಚರಣೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಮತ್ತು ಅವರ ಪೋಷಕರು ಭಾಗವಹಿಸುವುದರಿಂದ ಮರುದಿನವೇ ಶಾಲೆಗೆ ಹಾಜರಾಗುವುದು ಕಷ್ಟವಾಗಬಹುದು ಎಂಬುದು ರಜೆ ವಿಸ್ತರಣೆಗೆ ಪ್ರಮುಖ ಕಾರಣವಾಗಿದೆ.

ಇದಲ್ಲದೆ, ದೂರದ ಜಿಲ್ಲೆಗಳಿಂದ ದಸರಾ ಆಚರಣೆಗೆ ಬಂದಿರುವ ಕುಟುಂಬಗಳು ವಾಪಸ್ ಮನೆಗೆ ತಲುಪಲು ವಿಳಂಬವಾಗುವ ಸಾಧ್ಯತೆಯೂ ಇದೆ. ಈ ಹಿನ್ನೆಲೆಯಲ್ಲಿ ಅಕ್ಟೋಬರ್ 22ರಂದು ಶಾಲೆಗಳನ್ನು ಪುನರಾರಂಭಿಸುವ ಬದಲು ಒಂದು ದಿನ ರಜೆ ವಿಸ್ತರಿಸುವಂತೆ ಮನವಿ ಮಾಡಲಾಗಿತ್ತು.

ಜಿಲ್ಲಾಡಳಿತದೊಂದಿಗೆ ಚರ್ಚಿಸಿ ನಿರ್ಧಾರ

ಪೋಷಕರು ಮತ್ತು ಜನಪ್ರತಿನಿಧಿಗಳ ಮನವಿಗಳನ್ನು ಪರಿಶೀಲಿಸಿದ ಅಧಿಕಾರಿಗಳು, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹಾಗೂ ಜಿಲ್ಲಾಡಳಿತದೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ರಜೆ ವಿಸ್ತರಣೆಯ ಆದೇಶ ಹೊರಡಿಸಿದ್ದಾರೆ. ಈ ಮೊದಲು ಅಕ್ಟೋಬರ್ 3ರಿಂದ 21ರವರೆಗೆ ದಸರಾ ರಜೆ ಘೋಷಿಸಲಾಗಿತ್ತು.

ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆಯಾಗದಂತೆ ಸೂಚನೆ

ಒಂದು ದಿನದ ಹೆಚ್ಚುವರಿ ರಜೆಯಿಂದ ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲು ಇಲಾಖೆ ಸೂಚಿಸಿದೆ. ಮುಖ್ಯ ಶಿಕ್ಷಕರಿಗೆ ತಮ್ಮ ವಿವೇಚನೆಯಂತೆ ನೀಡಲು ಅಧಿಕಾರವಿರುವ ನಾಲ್ಕು ಸ್ಥಳೀಯ ರಜೆಗಳಲ್ಲಿ ಒಂದನ್ನು ಬಳಸಿಕೊಂಡು ಹೆಚ್ಚುವರಿ ರಜೆಯ ದಿನದ ಬೋಧನಾ ಕಾರ್ಯವನ್ನು ಸರಿದೂಗಿಸಬೇಕು ಎಂದು ತಿಳಿಸಲಾಗಿದೆ.

ಜತೆಗೆ, ಪರಿಷ್ಕೃತ ಆದೇಶವು ತಮ್ಮ ವ್ಯಾಪ್ತಿಯ ಎಲ್ಲ ಶಾಲೆಗಳ ಮುಖ್ಯ ಶಿಕ್ಷಕರಿಗೆ ತಲುಪುವಂತೆ ನೋಡಿಕೊಳ್ಳಲು ಬ್ಲಾಕ್ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More
Loading...
Unable to load recommendations.
Follow Us