ಧರ್ಮಸ್ಥಳ ಪ್ರಕರಣ: ‘ಬುರುಡೆ’ ಚಿನ್ನಯ್ಯನ ಮೂಲ ಕೆದಕಿದ ಎಸ್ಐಟಿ, ತಮಿಳುನಾಡಿಗೂ ಲಿಂಕ್!

ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂಳಲಾಗಿದೆ ಎಂಬ ಆರೋಪ ಸಂಬಂಧಿತ ಪ್ರಕರಣದ ತನಿಖೆಯಲ್ಲಿ ಎಸ್ಐಟಿ ಮಹತ್ವದ ಪ್ರಗತಿ ಸಾಧಿಸಿದೆ. ಸಾಕ್ಷಿಯಾಗಿ ಬಂದ ಚಿನ್ನಯ್ಯನನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಚಿನ್ನಯ್ಯನ ಹೇಳಿಕೆಗಳಿಂದ ದೆಹಲಿ, ಮಂಡ್ಯ ಮತ್ತು ತಮಿಳುನಾಡು ಸಂಪರ್ಕ ಬಯಲಾಗಿದೆ. ಆತನ ಎರಡನೇ ಪತ್ನಿ ಹಾಗೂ ಸಹೋದರರನ್ನು ಕೂಡ ವಿಚಾರಣೆಗೆ ಒಳಪಡಿಸಲಾಗಿದೆ.

ಧರ್ಮಸ್ಥಳ ಪ್ರಕರಣ: ‘ಬುರುಡೆ’ ಚಿನ್ನಯ್ಯನ ಮೂಲ ಕೆದಕಿದ ಎಸ್ಐಟಿ, ತಮಿಳುನಾಡಿಗೂ ಲಿಂಕ್!
ಮಾಸ್ಕ್​ಮ್ಯಾನ್ ಚಿನ್ನಯ್ಯನನ್ನು ಸೋಮವಾರ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಯಿತು.
Edited By:

Updated on: Aug 26, 2025 | 7:40 AM

ಮಂಗಳೂರು, ಆಗಸ್ಟ್ 26: ದೇಶಾದ್ಯಂತ ಭಾರೀ ಸದ್ದು ಮಾಡಿದ್ದ ಧರ್ಮಸ್ಥಳದಲ್ಲಿ (Dharmasthala) ನೂರಾರು ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣದ ಎಸ್​​ಐಟಿ ತನಿಖೆ ತೀವ್ರಗೊಂಡಿದೆ. ಶವಗಳನ್ನು ಹೂತಿದ್ದೇನೆ ಎಂದುಕೊಂಡು ಸಾಕ್ಷಿದಾರನಾಗಿ ಬಂದಿದ್ದ ಚಿನ್ನಯ್ಯನನ್ನು ಬಂಧಿಸಿ ವಶದಲ್ಲಿಟ್ಟುಕೊಂಡಿರುವ ಎಸ್​​ಐಟಿ ತೀವ್ರ ವಿಚಾರಣೆಗೆ ಒಳಪಡಿಸಿದೆ. ಪರಿಣಾಮವಾಗಿ ಒಂದೊಂದೇ ಅಸಲಿಯತ್ತು ಬಯಲಾಗತೊಡಗಿದೆ. ಆತನನ್ನು ಎರಡು ದಿನಗಳಿಂದದ ಬೆಂಡಿತ್ತಿರುವ ಎಸ್ಐಟಿ ವಿಚಾರಣೆ ತೀವ್ರಗೊಳಿಸಿದೆ. ಈಗಾಗಲೇ ಎಲ್ಲಾ ಸತ್ಯವನ್ನು ಕಕ್ಕಿರುವ ಚಿನ್ನಯ್ಯ, ಎಸ್‌ಐಟಿ ಕೇಳಿದ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸ್ತಿದ್ದಾನೆ. ಮೊದಲಿಗೆ ದೆಹಲಿ ಲಿಂಕ್ ಕೆದಕಿದ್ದ ಎಸ್ಐಟಿ ಇದೀಗ ಮಂಡ್ಯ, ತಮಿಳುನಾಡಿನಲ್ಲಿ ಆತನಿಗಿದ್ದ ಲಿಂಕ್​ ಪತ್ತೆ ಮಾಡಿದೆ.

ಬುರುಡೆಯನ್ನು ನಾನೇ ಅಗೆದು ತಂದೆ ಎಂದು ಕೋರ್ಟ್‌ ಮುಂದೆ ಹೇಳಿದ್ದ ಚಿನ್ನಯ್ಯ ಶನಿವಾರದ ವಿಚಾರಣೆ ವೇಳೆ, ‘ನಾನು ಅಗೆದು ತಂದಿಲ್ಲ’ ಎಂದಿದ್ದ. ಈ ಗೊಂದಲಕಾರಿ ಹೇಳಿಕೆ ನೀಡಿದ್ದರಿಂದಲೇ ಪೊಲೀಸರು ಆತನನ್ನು ಲಾಕ್ ಮಾಡಿದ್ದರು. ಬುರುಡೆ ಎಲ್ಲಿಂದ ತರಲಾಗಿದೆ ಎಂಬ ಬಗ್ಗೆ ಸೋಮವಾರ ತೀವ್ರ ವಿಚಾರಣೆ ನಡೆಸಲಾಗಿದ್ದು, ಚಿನ್ನಯ್ಯ ಹಲವು ವಿಚಾರಗಳನ್ನ ಬಯಲು ಮಾಡಿದ್ದಾನೆ. ಚಿನ್ನಯ್ಯಗೆ ಹೋರಾಟಗಾರ ಮಹೇಶ್ ತಿಮರೋಡಿ ಆಶ್ರಯ ನೀಡಿದ್ದರು ಎನ್ನಲಾಗಿದ್ದು, ಅವರಿಗೂ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.

ಚಿನ್ನಯ್ಯ 2 ನೇ ಪತ್ನಿಯಿಂದಲೂ ಮಾಹಿತಿ ಸಂಗ್ರಹ

ಚಿನ್ನಯ್ಯ ಎಲ್ಲೆಲ್ಲಿ ಸುತ್ತಾಡಿದ್ದನೋ, ಎಲ್ಲಿಲ್ಲಿ ವಾಸವಿದ್ದನೋ ಅಲ್ಲೆಲ್ಲ ತನಿಖೆ ನಡೆಸಲಾಗುತ್ತಿದೆ. ಚಿನ್ನಯ್ಯನ ಹುಟ್ಟೂರು ಮಂಡ್ಯದ ಚಿಕ್ಕಬಳ್ಳಿಗೆ ತೆರಳಿದ್ದ ಎಸ್​ಐಟಿ ಅಧಿಕಾರಿಗಳ ತಂಡ ಅಲ್ಲಿ ಆತನ ಸ್ನೇಹಿತರು, ಸಂಬಂಧಿಗಳಿಂದ ಮಾಹಿತಿ ಸಂಗ್ರಹಿಸಿದೆ. ಅಷ್ಟೇ ಅಲ್ಲ, ತಮಿಳುನಾಡಿನ ಚಿಕ್ಕರಸಿಪಾಳ್ಯಕ್ಕೂ ಅಧಿಕಾರಿಗಳು ತೆರಳಿದ್ದು, ಅಲ್ಲಿ ಚಿನ್ನಯ್ಯನ ಎರಡನೇ ಪತ್ನಿ ಹಾಗೂ ಮಕ್ಕಳಿಂದ ಮಾಹಿತಿ ಸಂಗ್ರಹಿಸಿದ್ದಾರೆ. ತಮಿಳುನಾಡಿನಲ್ಲಿ ಈ ಚಿನ್ನಯ್ಯ ಗಾರ್ಮೆಂಟ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ. ಎರಡು ವರ್ಷಗಳ ಹಿಂದಷ್ಟೇ ಉಜಿರೆಗೆ ಬಂದು ಸಫಾಯಿ ಕರ್ಮಚಾರಿ ಆಗಿ ಕೆಲಸಕ್ಕೆ ಸೇರಿದ್ದ.

ಹೆಣ ಹೂತಿದ್ದು ಗೊತ್ತಿಲ್ಲ ಎಂದ ಚಿನ್ನಯ್ಯ 2ನೇ ಪತ್ನಿ

‘ಟಿವಿ9’ ಜೊತೆ ಎಕ್ಸ್‌ಕ್ಲೂಸಿವ್‌ ಆಗಿ ಮಾತನಾಡಿದ ಚಿನ್ನಯ್ಯನ ಎರಡನೇ ಪತ್ನಿ, ಹೆಣ ಹೂತಿದ್ದರ ಬಗ್ಗೆ ಗೊತ್ತಿಲ್ಲ ಎಂದಿದ್ದಾರೆ. ಮತ್ತೊಂದೆಡೆ, ಚಿನ್ನಯ್ಯ ಸಹೋದರ ತಾನಾಸಿಯನ್ನೂ ವಿಚಾರಣೆ ನಡೆಸಲಾಗಿದೆ. ಈ ವೇಳೆ, ಚಿನ್ನಯ್ಯಗೆ ಸಹೋದರನ ಜತೆ ಮಾತನಾಡಲು ಅವಕಾಶ ನೀಡಲಾಗಿದೆ. ಈ ವೇಳೆ, ಎಲ್ಲ ಸತ್ಯವನ್ನು ಪೊಲೀಸರ ಮುಂದೆ ಹೇಳಿದ್ದಾಗಿ ಚಿನ್ನಯ್ಯ ಸಹೋದರನಿಗೆ ಹೇಳುತ್ತಾ ಕಣ್ಣೀರಿಟ್ಟಿದ್ದಾನೆ.

ಇದನ್ನೂ ಓದಿ: ನಿಮ್ಮ ಪ್ರೀತಿಯನ್ನು ಮಂಜುನಾಥಸ್ವಾಮಿಗೆ ಒಪ್ಪಿಸುತ್ತೇನೆ: ಧರ್ಮಸ್ಥಳ ಕೇಸ್​ ಬಗ್ಗೆ ವೀರೇಂದ್ರ ಹೆಗ್ಗಡೆ ಮೊದಲ ಮಾತು

ಎಸ್​ಐಟಿ ವಿಚಾರಣೆ ವೇಳೆ, ಗಿರೀಶ್ ಮಟ್ಟಣ್ಣನವರ್ ಮತ್ತು ಮಹೇಶ್ ಶೆಟ್ಟಿ ತಿಮರೋಡಿ ಜೊತೆಗಿನ ನಂಟಿನ ಬಗ್ಗೆಯೂ ಚಿನ್ನಯ್ಯ ಹೇಳಿಕೊಂಡಿದ್ದಾನೆ ಎನ್ನಲಾಗಿದೆ. ಹೀಗಾಗಿ ಎಸ್​ಐಟಿ ಇವರ ಮೇಲೂ ಹದ್ದಿನ ಕಣ್ಣಿಟ್ಟಿದ್ದು, ನೋಟಿಸ್ ನೀಡಿ ವಿಚಾರಣೆಗೆ ಕರೆಸುವ ಸಾಧ್ಯತೆ ಇದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ