
ಮಂಗಳೂರು, ಏಪ್ರಿಲ್ 2: ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಉದ್ಯೋಗದಲ್ಲಿರುವ ದಕ್ಷಿಣ ಭಾರತದ ಪ್ರಯಾಣಿಕರಿಗೆ, ಅದರಲ್ಲೂ ವಿಶೇಷವಾಗಿ ಕರಾವಳಿ ಭಾಗದ ಜನರಿಗೆ ಜಜೀರಾ ಏರ್‌ವೇಸ್ (Jazeera Airways) ಭರ್ಜರಿ ಸಿಹಿ ಸುದ್ದಿ ನೀಡಿದೆ. ಏಪ್ರಿಲ್ 8ರಿಂದ ಸೌದಿ ಅರೇಬಿಯಾದ ದಮ್ಮಮ್ ಮೂಲಕ ಕುವೈತ್ ಮತ್ತು ಮಂಗಳೂರು (Mangalore) ನಡುವೆ ವಾರಕ್ಕೆ ಎರಡು ಬಾರಿ ವಿಶೇಷ ವಿಮಾನಯಾನ ಸೇವೆ ಆರಂಭವಾಗಲಿದೆ.
ಜಜೀರಾ ಏರ್‌ವೇಸ್ ಭಾರತದ ನಾಲ್ಕು ಪ್ರಮುಖ ನಗರಗಳಾದ ಮಂಗಳೂರು, ಕೋಝಿಕ್ಕೋಡ್ (ಕ್ಯಾಲಿಕಟ್), ತಿರುಚಿರಾಪಳ್ಳಿ ಮತ್ತು ಕಣ್ಣೂರಿಗೆ ದಮ್ಮಮ್ ವಿಮಾನ ನಿಲ್ದಾಣದ ಮೂಲಕ ಹೊಸ ವಿಮಾನ ಸೇವೆಗಳನ್ನು ಘೋಷಿಸಿದೆ. ಮಂಗಳೂರಿಗೆ ಏಪ್ರಿಲ್ 9ರಿಂದ ಪ್ರತಿ ಸೋಮವಾರ ಮತ್ತು ಗುರುವಾರ ವಿಮಾನಗಳು ಸಂಚರಿಸಲಿವೆ.
ವಿಮಾನ ಜೆ9 3417 ಕುವೈತ್‌ನಿಂದ ಸ್ಥಳೀಯ ಕಾಲಮಾನ ಬೆಳಿಗ್ಗೆ 8:40ಕ್ಕೆ ಹೊರಟು, ದಮ್ಮಮ್ ಮೂಲಕ ಸಂಜೆ 4:10ಕ್ಕೆ ಮಂಗಳೂರು ತಲುಪಲಿದೆ. ಹಿಂದಿರುಗುವ ವಿಮಾನ ಜೆ9 3418 ಮಂಗಳೂರಿನಿಂದ ಸಂಜೆ 4:55ಕ್ಕೆ ಹೊರಟು, ಸ್ಥಳೀಯ ಕಾಲಮಾನ ರಾತ್ರಿ 7:40ಕ್ಕೆ ಕುವೈತ್ ತಲುಪಲಿದೆ. ಇಡೀ ಪ್ರಯಾಣದ ಅವಧಿ ಸುಮಾರು 6 ಗಂಟೆಗಳು ಇಲಿದೆ.
ಕೋವಿಡ್ ಸಮಯದಲ್ಲಿ ಮಂಗಳೂರಿಗೆ ವಿಶೇಷ ವಿಮಾನಗಳ ಸೇವೆ ಒದಗಿಸಿದ್ದ ಜಜೀರಾ ಏರ್‌ವೇಸ್, ಈಗ ಮಧ್ಯಪ್ರಾಚ್ಯದ ಪ್ರಸ್ತುತ ಉದ್ವಿಗ್ನ ಪರಿಸ್ಥಿತಿಯ ನಡುವೆಯೂ ಸೇವೆ ಪುನರಾರಂಭಿಸಲು ನಿರ್ಧರಿಸಿದೆ. ಈ ಹೊಸ ಮಾರ್ಗಗಳ ಸೇರ್ಪಡೆಯೊಂದಿಗೆ ಭಾರತದಲ್ಲಿ ಜಜೀರಾ ಏರ್‌ವೇಸ್‌ನ ಜಾಲವು ಒಟ್ಟು 12 ನಗರಗಳಿಗೆ ವಿಸ್ತರಿಸಿದಂತಾಗಿದೆ. ಅಹಮದಾಬಾದ್, ಬೆಂಗಳೂರು, ಚೆನ್ನೈ, ದೆಹಲಿ, ಹೈದರಾಬಾದ್, ಕೊಚ್ಚಿ, ಮುಂಬೈ ಮತ್ತು ತಿರುವನಂತಪುರಂಗೆ ಈಗಾಗಲೇ ಸಂಸ್ಥೆಯು ವಿಮಾನಯಾನ ಸೇವೆ ಒದಗಿಸುತ್ತಿದೆ.
ಇದನ್ನೂ ಓದಿ: ಬಂಟ್ವಾಳ: ಕಾರು ಡಿಕ್ಕಿಯಾದ ರಭಸಕ್ಕೆ ಮೇಲೆ ಹಾರಿ ಹತ್ತಾರು ಅಡಿ ದೂರಕ್ಕುರುಳಿದ ಮಹಿಳೆ, ಮೈಜುಂ ಎನ್ನಿಸೋ ವಿಡಿಯೋ ವೈರಲ್
ದಕ್ಷಿಣ ಭಾರತದ ಪ್ರಯಾಣಿಕರಿಗೆ ತಮ್ಮ ತವರು ನಗರಗಳಿಗೆ ಹತ್ತಿರವಾಗಲು ಈ ವಿಮಾನಯಾನ ಸೇವೆ ವಿಸ್ತರಣೆ ಸಹಕಾರಿಯಾಗಲಿದೆ ಎಂದು ಜಜೀರಾ ಏರ್‌ವೇಸ್ ಸಿಇಒ ಭರತನ್ ಪಶುಪತಿ ತಿಳಿಸಿದ್ದಾರೆ.