ಬಿಜೆಪಿ ಪಾದಯಾತ್ರೆಗೆ ಜೆಡಿಎಸ್​ ಅಪಸ್ವರ: ಕುಮಾರಸ್ವಾಮಿ ಹೇಳಿಕೆಗೆ ಅಶೋಕ್ ಹೇಳಿದ್ದಿಷ್ಟು​

| Updated By: ಕಿರಣ್ ಹನುಮಂತ್​ ಮಾದಾರ್

Updated on: Jul 31, 2024 | 4:24 PM

ಕಾಂಗ್ರೆಸ್​ ಸರ್ಕಾರದ ಹಗರಣದ ವಿರುದ್ದ ವಿಪಕ್ಷಗಳು ಸಿಡಿದೆದ್ದಿವೆ. ಈ ಹಿನ್ನಲೆ ಅಗಸ್ಟ್​ 3 ರಂದು ಬಿಜೆಪಿ. ಜೆಡಿಎಸ್​ ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ನಡೆಸಲು ಸಿದ್ದವಾಗಿದೆ. ಈ ಮಧ್ಯೆ ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಅವರು, ಇದಕ್ಕೆ ನನ್ನ ಬೆಂಬಲವಿಲ್ಲ ಎಂದು ಅಚ್ಚರಿ ಹೇಳಿಕೆ ಕೊಟ್ಟಿದ್ದರು. ಈ ಕುರಿತು ಪ್ರತಿಕ್ರಿಯಿಸಿರುವ ಆರ್​ ಅಶೋಕ, ‘ಸಂಜೆಯೊಳಗೆ ಚರ್ಚಿಸಿ ನಿರ್ಧಾರಕ್ಕೆ ಬರ್ತೇವೆ ಎಂದಿದ್ದಾರೆ.

ಬಿಜೆಪಿ ಪಾದಯಾತ್ರೆಗೆ ಜೆಡಿಎಸ್​ ಅಪಸ್ವರ: ಕುಮಾರಸ್ವಾಮಿ ಹೇಳಿಕೆಗೆ ಅಶೋಕ್ ಹೇಳಿದ್ದಿಷ್ಟು​
ಕುಮಾರಸ್ವಾಮಿ ಹೇಳಿಕೆಗೆ ಅಶೋಕ್ ಹೇಳಿದ್ದಿಷ್ಟು​
Follow us on

ದಕ್ಷಿಣ ಕನ್ನಡ, ಜು.31: ವಾಲ್ಮೀಕಿ, ಮುಡಾ ಹಗರಣವನ್ನು ಖಂಡಿಸಿ ಅಗಸ್ಟ್ 03 ರಂದು ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ನಡೆಸಲು ವಿಪಕ್ಷಗಳಾದ ಬಿಜೆಪಿ, ಜೆಡಿಎಸ್​ ಸಿದ್ದವಾಗಿದೆ. ಆದರೆ, ಇದಕ್ಕೆ ಆರಂಭದಲ್ಲಿಯೇ ವಿಘ್ನ ಎದುರಾಗಿದ್ದು, ದೋಸ್ತಿಗಳ ನಡುವೆ ವೈಮನಸ್ಸು ಮೂಡಿದೆ. ಹೌದು, ಇಂದು(ಬುಧವಾರ) ದೆಹಲಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ, ‘ ಈ ಪಾದಯಾತ್ರೆ ನಡೆಸಲು ಜೆಡಿಎಸ್​ನ್ನು ಬಿಜೆಪಿ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಹೀಗಾಗಿ ಇದಕ್ಕೆ ನಮ್ಮ ಬೆಂಬಲವಿಲ್ಲ ಎಂದಿದ್ದರು. ಈ ಕುರಿತು ಬಂಟ್ವಾಳದಲ್ಲಿ ಮಾತನಾಡಿದ ವಿಪಕ್ಷ ನಾಯಕ ಆರ್.ಅಶೋಕ್, ‘ನಾನು ಇದನ್ನ ಮಾಧ್ಯಮದಲ್ಲಿ ನೋಡಿದ್ದೇನೆ, ಕುಮಾರಸ್ವಾಮಿ ಕರೆ ಮಾಡಿದ್ರು, ಮತ್ತೆ ಮಾತನಾಡುತ್ತೇನೆ ಎಂದರು.

ಈ ಬಿಸಿಯಲ್ಲೇ ಹೋರಾಟ ಆಗಬೇಕು

‘ಇನ್ನು ನಮ್ಮ ಉದ್ದೇಶ ಈ ಬಿಸಿಯಲ್ಲೇ ಹೋರಾಟ ಆಗಬೇಕು, ಸಾವಿರಾರು ಕೋಟಿಯ ಭ್ರಷ್ಟಾಚಾರ ಆಗಿದೆ. ಸಂವಿಧಾನ ಕಾಪಾಡೋ ಸ್ಥಾನದಲ್ಲಿ ಸಿಎಂ ಇದ್ದಾರೆ. ನಾವು ಅನ್ಯಾಯ ಮಾಡಲ್ಲ ಎಂದು ಪ್ರಮಾಣ ವಚನ ಸ್ವೀಕರಿಸುತ್ತಾರೆ. ಆದರೆ, ಇಷ್ಟು ದೊಡ್ಡ ಹಗರಣ ಮಾಡಿ ಜನರ ಹಣವನ್ನು ಲೂಟಿ ಮಾಡಿದ್ದಾರೆ. ಸದನದ ಒಳಗೂ ಎಲ್ಲರ ಜೊತೆಗೂ ಮಾತನಾಡಿ ಕಾಂಗ್ರೆಸ್​ನವರು ಬಾಯಿ ಮುಚ್ಚೋ ರೀತಿಯಲ್ಲಿ ಹೋರಾಟ ಆಗಿದೆ.

ಇದನ್ನೂ ಓದಿ:ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ, ಬಿಜೆಪಿ ಪಾದಯಾತ್ರೆಗೆ ಬೆಂಬಲವಿಲ್ಲ; ಹೆಚ್​ಡಿ ಕುಮಾರಸ್ವಾಮಿ

ಸಂಜೆಯೊಳಗೆ‌ ನಿರ್ಧಾರಕ್ಕೆ ಬರ್ತೇವೆ

ಜೆಡಿಎಸ್ ರಾಜ್ಯಾಧ್ಯಕ್ಷ ಜಿ.ಟಿ.ದೇವೇಗೌಡರು ಕೂಡ ಪಾದಯಾತ್ರೆಗೆ ವಿರೋಧ ಮಾಡಿದ್ದಾರೆ. ಕೃಷಿ, ಮಳೆ ವಿಚಾರ ಇಟ್ಟುಕೊಂಡು ಪಾದಯಾತ್ರೆ ಮುಂದೂಡಿ ಅಂದಿದ್ದಾರೆ. ನಾವು ಕೂಡ ಕೇಂದ್ರದ ನಾಯಕರ ಜೊತೆ ಈ ಬಗ್ಗೆ ಮಾತನಾಡುತ್ತೇವೆ. ಜೆಡಿಎಸ್ ಕೂಡ ಎನ್​ಡಿಎ ಭಾಗ, ಹೀಗಾಗಿ ಅವರು ಹೋರಾಟದಲ್ಲಿ ಒಟ್ಟಿಗೆ ಇರಬೇಕು. ನಾನು ಕುಮಾರಸ್ವಾಮಿ ಜೊತೆ ಮಾತನಾಡಿ ಸಂಜೆಯೊಳಗೆ‌ ನಿರ್ಧಾರಕ್ಕೆ ಬರುತ್ತೆವೆ ಎಂದು ಹೇಳಿದರು. ಜೊತೆಗೆ ಇದರಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ, ಆದರೆ ಯಾವಾಗ ಪಾದಯಾತ್ರೆ ಆಗುತ್ತೆ ಅನ್ನೋದಷ್ಟೇ ಈಗಿರುವುದು. ಅದು ದಲಿತರೊಬ್ಬರ ಭೂಮಿ, ಆತ ಸತ್ತು 25 ವರ್ಷಗಳಾಗಿದೆ. ಅದು ಅಲ್ಲದೇ ಆತ ಸತ್ತು ಹೋದ.  ಬದುಕಿದ್ದರೆ ಅದು ಆತನ ಸ್ವಯಾರ್ಜಿತ ಆಸ್ತಿ. ಆದರೆ, ಅದು‌ ಆತನ ಹೆಂಡತಿ ಹೆಸರಿಗೆ ಬಂದು ಪಿತ್ರಾರ್ಜಿತ ಆಸ್ತಿಯಾಗಿದೆ.
ಅದನ್ನ ಮಾರಾಟ ಮಾಡಲು ಹೆಂಡತಿ, ಮಕ್ಕಳು ಎಲ್ಲರ ಒಪ್ಪಿಗೆ ಬೇಕು. ಪಹಣಿ ಯಾವುದೇ ದಾಖಲೆ ಆಗಲ್ಲ ಅಂತ ಸುಪ್ರೀಂ ಕೋರ್ಟ್ ಹೇಳಿದೆ. ನಿಂಗ ಒಬ್ಬ ಅನಕ್ಷರಸ್ಥ, ಹೀಗಿರೋವಾಗ ಡೀನೋಟಿಫಿಕೇಶನ್ ಹೇಗೆ ಆಗಿದೆ.

ಕೃಷಿ ಭೂಮಿಯಿಂದ ಅದು ಭೂ ಪರಿವರ್ತನೆ ಕೂಡ ಆಗಿದೆ. 2002-03ರಲ್ಲಿ ಮೂಡಾದಿಂದ ಲೇಔಟ್ ಅಪ್ರೂವ್ ಆಗಿ ಅಲ್ಲಿ ಲೇಔಟ್ ಆಗಿದೆ. 12 ಸೈಟ್ ಸಿದ್ದರಾಮಯ್ಯ ಪತ್ನಿಯ ಹೆಸರಿನಲ್ಲಿ ರಿಜಿಸ್ಟರ್ ಕೂಡ ಆಗಿದೆ. ದಲಿತರ ಜಮೀನನ್ನ ಇವರು ಒಳಗೆ ಹಾಕಿದ್ದಾರೆ. ಜಮೀನು ಕಬಳಿಕೆ ಆಗಿದ್ದರೆ ಸರ್ಕಾರ ಅದನ್ನ ರಕ್ಷಣೆ ಮಾಡಬೇಕು. ನಾವು ಪಾದಯಾತ್ರೆ ನಿರ್ಧಾರ ಮಾಡಿದಾಗ ವೈನಾಡ್ ಅಥವಾ ಬೇರೆ ಪ್ರಕೃತಿ ವಿಕೋಪ ಆಗಿರಲಿಲ್ಲ. ಈಗ ಅದರ ಬಗ್ಗೆ ಹೈಕಮಾಂಡ್ ನಾಯಕರ ಜೊತೆ ಚರ್ಚೆ ಮಾಡ್ತೇವೆ ಎಂದರು.

ಇದನ್ನೂ ಓದಿ: ಬಿಜೆಪಿಯ ಬೆಂಗಳೂರು-ಮೈಸೂರು ಪಾದಯಾತ್ರೆಗೆ ಆರಂಭದಲ್ಲೇ ವಿಘ್ನ, ಅಪಸ್ವರ ಎತ್ತಿದ ಜೆಡಿಎಸ್

ಕಾಂಗ್ರೆಸ್ ಅವರೆ ಸಿದ್ದರಾಮಯ್ಯ ಲೂಟಿ ಮಾಡಿದ್ದಾರೆ ಅಂತಿದಾರೆ

ಕಾಂಗ್ರೆಸ್ ನಾಯಕ ಬಿ.ಕೆ.ಹರಿಪ್ರಸಾದ್ ಕೂಡ ಸಿದ್ದರಾಮಯ್ಯ ಲೂಟಿ ಮಾಡಿದ್ದಾರೆ ಅಂತಿದಾರೆ. ಅವರೇ ಸಿದ್ದರಾಮಯ್ಯ ವಿರುದ್ದ ಆರೋಪ ಮಾಡುತ್ತಿದ್ದಾರೆ. ಮೊದಲು ಇವರ ಸರ್ಕಾರ ಉಳಿಯುತ್ತೋ ನೋಡೋಣ. ಇವರು ತಪ್ಪು ಮಾಡದೇ ದೆಹಲಿಗೆ ಹೋಗಿದ್ದಾರಾ?, ಭಿನ್ನಮತ ಇರೋದಕ್ಕೆ ದೆಹಲಿಗೆ ಹೋಗಿದ್ದಾರೆ ಎಂದು ಸಿದ್ದು ಸರ್ಕಾರದ ವಿರುದ್ದ ಕಿಡಿಕಾರಿದರು.

ನಾಯಕನ ಆಯ್ಕೆ ಮಾಡುವುದು ಶಾಸಕಾಂಗ ಸಭೆ ಕರೆದು ಅದರಲ್ಲಿ ಆಗಿರುವುದು, ವಿಜಯೇಂದ್ರ ಅವರ ಆಯ್ಕೆ ಕೂಡ ರಾಷ್ಟ್ರೀಯ ಅಧ್ಯಕ್ಷರದ್ದು, ಪಕ್ಷದಲ್ಲಿ ಗೊಂದಲ ಇದ್ದರೆ ಅದನ್ನ ಪಕ್ಷದ ಒಳಗೆ ಸರಿಪಡಿಸೋಣ. ಯತ್ನಾಳ್ ಮತ್ತು ಜಾರಕಿಹೊಳಿ ಹೈಕಮಾಂಡ್ ಒಕೆ ಅಂದ್ರೆ ಪಾದಯಾತ್ರೆ ಮಾಡುತ್ತೇವೆ ಎಂದಿದ್ದಾರೆ. ಹೈಕಮಾಂಡ್ ಓಕೆ ಅಂದ್ರೆ ನಾವು ಮತ್ತೆ ನೋಡೋಣ ಎಂದು ಹೇಳಿದರು.

ಇನ್ನು ಪ್ರೀತಂ ಗೌಡ ಬಗ್ಗೆ ಜೆಡಿಎಸ್​ಗೆ ಯಾಕೆ ವಿರೋಧ ಇದೆ ನನಗೆ ಗೊತ್ತಿಲ್ಲ. ಈ ಬಗ್ಗೆ ದೆಹಲಿ ಮಟ್ಟದ ನಾಯಕರು ನೋಡಿಕೊಳ್ಳುತ್ತಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:23 pm, Wed, 31 July 24