ಸಿಎಂ ಸ್ಥಾನದಿಂದ ಬಿಎಸ್ವೈ ಇಳಿಸಿದ್ದೇ ಕಟೀಲ್ಗೆ ಮುಳುವಾಯ್ತಾ? ಟಿಕೆಟ್ ಕೈತಪ್ಪಲು ಕಾರಣ ಏನು ಗೊತ್ತಾ?
ಲೋಕಸಭೆ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್ಗೆ ಬಿಜೆಪಿ ಟಿಕೆಟ್ ಕೈತಪ್ಪುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿತ್ತು. ಅದರಂತೆ ಟಿಕೆಟ್ ಮಿಸ್ ಆಗಿದ್ದು, ಕ್ಷೇತ್ರದಲ್ಲಿ ಕ್ಯಾ.ಬ್ರಿಜೇಶ್ ಚೌಟ ಅವರಿಗೆ ಮಣೆ ಹಾಕಲಾಗಿದೆ. ಹಾಗಿದ್ದರೆ, ಹ್ಯಾಟ್ರಿಕ್ ಗೆಲುವು ಸಾಧಿಸಿದ ಕಟೀಲ್ಗೆ ಟಿಕೆಟ್ ಕೈತಪ್ಪಲು ಕಾರಣವೇನು?
ಮಂಗಳೂರು, ಮಾ.14: ಲೋಕಸಭೆ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್ಗೆ (Nalin Kumar Kateel) ಬಿಜೆಪಿ ಟಿಕೆಟ್ ಕೈತಪ್ಪುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿತ್ತು. ಅದರಂತೆ ಟಿಕೆಟ್ ಮಿಸ್ ಆಗಿದ್ದು, ಕ್ಷೇತ್ರದಲ್ಲಿ ಕ್ಯಾ.ಬ್ರಿಜೇಶ್ ಚೌಟ ಅವರಿಗೆ ಮಣೆ ಹಾಕಲಾಗಿದೆ. ಹಾಗಿದ್ದರೆ, ಹ್ಯಾಟ್ರಿಕ್ ಗೆಲುವು ಸಾಧಿಸಿದ ಕಟೀಲ್ಗೆ ಟಿಕೆಟ್ ಕೈತಪ್ಪಲು ಕಾರಣವೇನು? ಬಿಎಸ್ ಯಡಿಯೂರಪ್ಪ (BS Yediyurappa) ಅವರಿಗೆ ಕೊಟ್ಟ ಭರವಸೆಯನ್ನು ಕಟೀಲ್ ಈಡೇರಿಸಿಲ್ವಾ? ಯಡಿಯೂರಪ್ಪ ಅಧಿಕಾರದಿಂದ ಕೆಳಗಿಳಿದಿದ್ದೇ ಕಟೀಲ್ಗೆ ಟಿಕೆಟ್ ಮಿಸ್ ಆಯ್ತಾ?
ತಳಮಟ್ಟದಿಂದ ಪಕ್ಷ ಕಟ್ಟಿ ಬೆಳೆಸಿದ್ದ ಹಾಗೂ ರಾಜ್ಯ ರಾಜಕಾರಣದಲ್ಲಿ ರಾಜಹುಲಿ ಎಂದೇ ಕರೆಯಲ್ಪಡುವ ಬಿಎಸ್ ಯಡಿಯೂರಪ್ಪ ಅವರು ಐದು ವರ್ಷ ಅಧಿಕಾರ ಪೂರ್ಣಗೊಳಿಸದೆ ಎರಡೂವರೆ ವರ್ಷಕ್ಕೇ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದಿದ್ದರು. ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಸುವಲ್ಲಿ ಬಿಎಲ್ ಸಂತೋಷ್ ಆ್ಯಂಡ್ ಟೀಂ ಯಶಸ್ವಿಯಾಗಿತ್ತು ಎನ್ನುವ ಮಾತುಗಳು ಹರಿದಾಡಿದ್ದವು.
ಯಡಿಯೂರಪ್ಪ ಅಧಿಕಾರಾವಧಿಯಲ್ಲಿ ರಾಜ್ಯಾಧ್ಯಕ್ಷರಾಗಿದ್ದ ಹಾಗೂ ಬಿಎಲ್ ಸಂತೋಷ್ ಬಣದಲ್ಲಿ ಗುರುತಿಸಿಕೊಂಡಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೆ ಈ ಬಾರಿ ಟಿಕೆಟ್ ಕೈತಪ್ಪಲು ಇರುವ ಕಾರಣಗಳಲ್ಲಿ ಇದು ಕೂಡ ಒಂದಾಗಿದೆ ಎಂದು ಹೇಳಲಾಗುತ್ತಿದೆ.
2018 ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಬಹುಮತ ಪಡೆಯುವಲ್ಲಿ ವಿಫಲವಾಗಿತ್ತು. ಅದರಂತೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ರಚನೆಯಾಗಿತ್ತು. ಬಳಿಕ ಆಪರೇಷನ್ ಕಮಲದ ಮೂಲಕ ಬಿಜೆಪಿ ಅಧಿಕಾರ ಹಿಡಿದಿತ್ತು. ಅಂದು ಐದು ವರ್ಷ ಮುಖ್ಯಮಂತ್ರಿ ಸ್ಥಾನ ನಿಮಗೆ ಎಂದು ಯಡಿಯೂರಪ್ಪಗೆ ಕಟೀಲ್ ಮಾತುಕೊಟ್ಟಿದ್ದರು.
ಇದನ್ನೂ ಓದಿ: ಲೋಕಸಭಾ ಟಿಕೆಟ್ ಕೈತಪ್ಪಿದ್ದಕ್ಕೆ ನಳಿನ್ ಕುಮಾರ್ ಕಟೀಲ್, ಪ್ರತಾಪ್ ಸಿಂಹ ಹೇಳಿದ್ದೇನು?
ಆದರೆ, ಎರಡೂವರೆ ವರ್ಷ ಆಗುತ್ತಿದ್ದಂತೆ ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಗಿಳಿಸಲಾಗಿತ್ತು. ಇದರ ಹಿಂದೆ ನಳಿನ್ ಕುಮಾರ್ ಕಟೀಲ್ ಕೈವಾಡವೂ ಇದೆ ಎಂಬುದು ಯಡಿಯೂರಪ್ಪ ಪುತ್ರ ಬಿವೈ ವಿಜಯೇಂದ್ರ ಅವರ ಅನುಮಾನವಾಗಿದೆ.
ಅದರಂತೆ, ತಾನು ಬಿಜೆಪಿ ರಾಜ್ಯಾಧ್ಯಕ್ಷನಾದ ಮೇಲೆ ಬಿವೈ ವಿಜಯೇಂದ್ರ ಅವರು ನಳಿನ್ ಕುಮಾರ್ ಕಟೀಲ್ ಮನೆಗೆ ಭೇಟಿಕೊಟ್ಟು ಮಾತುಕತೆ ನಡೆಸಿದ್ದರು. ಬಳಿಕ ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆಯ ಟಿಕೆಟ್ ಮತ್ತೆ ಕಟೀಲ್ಗೆ ಎಂದು ವಿಜಯೇಂದ್ರ ಘೋಷಣೆ ಮಾಡುತ್ತಾರೆ. ಇದೀಗ ಆಶ್ವಾಸನೆ ಈಡೇರಿಸದೆ ಕಟೀಲ್ ಬದಲು ಕ್ಯಾ. ಬ್ರಿಜೇಶ್ ಚೌಟ ಅವರಿಗೆ ಮಣೆ ಹಾಕಿದ್ದಾರೆ. ಆ ಮೂಲಕ ಕಟೀಲ್ ವಿರುದ್ಧ ವಿಜಯೇಂದ್ರ ಸೇಡು ತೀರಿಸಿಕೊಂಡಿದ್ದಾರೆ.
ಕಟೀಲ್ ವಿರುದ್ಧ ಕ್ಷೇತ್ರದಲ್ಲಿ ಅಸಮಾಧಾನ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತರ ಆಕ್ರೋಶವೇ ನಳಿನ್ ಕುಮಾರ್ ಕಟೀಲ್ ಅವರಿಗೆ ಟಿಕೆಟ್ ಕೈತಪ್ಪಲು ಮತ್ತೊಂದು ಕಾರಣ. ಹೌದು, ಅಭಿವೃದ್ಧಿ ವಿಚಾರದಲ್ಲಿ ಆಡಳಿತ ವಿರೋಧಿ ಅಲೆ ಎದುರಿಸುತ್ತಿರುವ ಕಟೀಲ್ ವಿರುದ್ಧವೇ ಬಿಜೆಪಿ ಕಾರ್ಯಕರ್ತರೇ ತಿರುಗಿಬಿದ್ದಿದ್ದಾರೆ. ಯಾವುದೇ ಕಾರಣಕ್ಕೂ ಕಟೀಲ್ಗೆ ಟಿಕೆಟ್ ಕೊಡದಂತೆ ಎಚ್ಚರಿಕೆಯ ಸಂದೇಶಗಳನ್ನು ಕಾರ್ಯಕರ್ತರು ರವಾನಿಸುತ್ತಲೇ ಬಂದಿದ್ದರು. ಅಲ್ಲದೆ, ಪುತ್ತೂರು ವಿಧಾನಸಭೆ ಕ್ಷೇತ್ರದ ಬಿಜೆಪಿ ಟಿಕೆಟ್ ಅನ್ನು ಅರುಣ್ ಕುಮಾರ್ ಪುತ್ತಿಲ ಅವರಿಗೆ ತಪ್ಪಿಸುವಲ್ಲಿ ಯಶಸ್ವಿಯಾದ ನಾಯಕರಲ್ಲಿ ಕಟೀಲ್ ಕೂಡ ಸೇರಿದ್ದಾರೆ ಎಂಬ ಆರೋಪವಿದೆ. ಹೀಗಾಗಿ ಹಿಂದೂ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಕಟೀಲ್ ವಿರುದ್ಧ ಮುನಿಸಿಕೊಂಡಿದ್ದು, ಪುತ್ತಿಲ ಪರಿವಾರ ಎಂಬ ಸಂಘಟನೆ ಕಟ್ಟಿಕೊಂಡು ಕ್ಷೇತ್ರದಲ್ಲಿ ಬಿಜೆಪಿ ವಿರುದ್ಧವೇ ಸಮರ ಸಾರಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:21 am, Thu, 14 March 24