
ಮಂಗಳೂರು, ಜೂ.13 : ತಮಿಳುನಾಡು ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಅವರು ಪಕ್ಷ ತೊರೆದಿರುವ ವಿಚಾರ ಸೇರಿದಂತೆ ಕರ್ನಾಟಕ ರಾಜಕಾರಣದ ಹಲವು ಮಹತ್ವದ ವಿದ್ಯಮಾನಗಳ ಕುರಿತು ರಾಜ್ಯ ಬಿಜೆಪಿ ಉಸ್ತುವಾರಿ ಹಾಗೂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಧಾ ಮೋಹನ್ ದಾಸ್ ಅಗರ್ವಾಲ್ ಅವರು ಮಂಗಳೂರಿನಲ್ಲಿ ಮಹತ್ವದ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.
ತಮಿಳುನಾಡಿನಲ್ಲಿ ಬಿಜೆಪಿಯನ್ನು ಮುನ್ನಡೆಸಿದ್ದ ಅಣ್ಣಾಮಲೈ ಅವರು ಪಕ್ಷ ತೊರೆದಿರುವ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, “ಬಿಜೆಪಿ ಒಂದು ದೊಡ್ಡ ರಾಷ್ಟ್ರೀಯ ಪಕ್ಷ. ನಮಗೆ ನಮ್ಮದೇ ಆದ ಒಂದು ಸ್ಪಷ್ಟ ಕಾರ್ಯಪದ್ಧತಿ ಹಾಗೂ ದೀರ್ಘಾವಧಿಯ ಯೋಜನೆಗಳಿವೆ. ದೇಶದ ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ನಾವು ಮುನ್ನಡೆಯುತ್ತಿದ್ದೇವೆಯೇ ಹೊರತು, ಅಲ್ಪಾವಧಿ ರಾಜಕಾರಣದ ಬಗ್ಗೆ ನಾವು ಹೆಚ್ಚಿನ ಗಮನ ನೀಡುವುದಿಲ್ಲ. ಅಣ್ಣಾಮಲೈ ಪಕ್ಷ ತೊರೆದಿರುವುದು ಅದು ಅವರ ವೈಯಕ್ತಿಕ ನಿರ್ಧಾರ. ಈ ಸಂದರ್ಭದಲ್ಲಿ ನಾನು ಇಷ್ಟು ಮಾತ್ರ ಹೇಳಬಲ್ಲೆ” ಎಂದು ಜಾಣ್ಮೆಯ ಉತ್ತರ ನೀಡಿದರು.
ಇನ್ನು ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಕುರಿತು ರಾಜ್ಯದಲ್ಲಿ ಕೇಳಿಬರುತ್ತಿರುವ ಚರ್ಚೆಗಳಿಗೆ ತೆರೆ ಎಳೆದ ಅವರು, “ಈ ಕುರಿತು ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ. ಕರ್ನಾಟಕದ ಪ್ರಸ್ತುತ ರಾಜಕೀಯ ಸ್ಥಿತಿಗತಿಗಳ ಬಗ್ಗೆ ಪಕ್ಷದ ಹೈಕಮಾಂಡ್‌ಗೆ ಸಂಪೂರ್ಣ ಮಾಹಿತಿ ಇದೆ. ಈಗಿನ ಅಧ್ಯಕ್ಷರ ಒಳ್ಳೆಯ ಕೆಲಸಗಳು ಹಾಗೂ ಅವರ ಕಾರ್ಯವೈಖರಿಯ ಬಗ್ಗೆಯೂ ವರಿಷ್ಠರು ಅರಿತಿದ್ದಾರೆ” ಎಂದು ಹೇಳಿದರು.
ಮಾಜಿ ಸಂಸದೆ ಸುಮಲತಾ ಅವರಿಗೆ ರಾಜ್ಯಸಭಾ ಟಿಕೆಟ್ ಕೈತಪ್ಪಿರುವ ಕುರಿತು ಮಾತನಾಡಿದ ಅವರು, “ಸುಮಲತಾ ಅವರೊಂದಿಗೆ ಬಿಜೆಪಿಯ ಒಡನಾಟ ಅತ್ಯಂತ ಚೆನ್ನಾಗಿದೆ. ಅವರು ದೀರ್ಘಕಾಲದಿಂದ ಬಿಜೆಪಿಯ ಸಮರ್ಥಕರಾಗಿದ್ದಾರೆ. ಮುಂಬರುವ ದಿನಗಳಲ್ಲಿ ಅವರಿಗೆ ಖಂಡಿತವಾಗಿಯೂ ಸೂಕ್ತ ಸ್ಥಾನಮಾನ ದೊರಕಲಿದೆ” ಎಂದು ಭರವಸೆ ನೀಡಿದ್ದಾರೆ.
ಪಕ್ಷದಿಂದ ಹೊರಗುಳಿದಿರುವ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಕೆ.ಎಸ್. ಈಶ್ವರಪ್ಪ ಅವರನ್ನು ವಾಪಸ್ ಸೇರಿಸಿಕೊಳ್ಳುವ ಕುರಿತು ಉತ್ತರಿಸಿ ಅವರು, “ಯಾರನ್ನೂ ಪಕ್ಷದಿಂದ ಉಚ್ಛಾಟಿಸುವ ಇಚ್ಛೆ ನಮಗಿರುವುದಿಲ್ಲ. ಆದರೆ ಅವರ ಕೆಲವು ವರ್ತನೆ ಹಾಗೂ ನಡವಳಿಕೆಗಳ ಕಾರಣದಿಂದ ಶಿಸ್ತು ಕ್ರಮ ಅನಿವಾರ್ಯವಾಗಿತ್ತು. 6 ವರ್ಷಗಳ ಅವಧಿಯಲ್ಲಿ ಅವರ ವರ್ತನೆಯನ್ನು ವರಿಷ್ಠರು ಗಮನಿಸುತ್ತಾರೆ. ಅವರನ್ನು ಮತ್ತೆ ಪಕ್ಷಕ್ಕೆ ಪುನಃ ಕರೆತರುವ ಅವಕಾಶಗಳು ಯಾವಾಗಲೂ ಇದ್ದೇ ಇರುತ್ತವೆ. ಅಂತಿಮ ನಿರ್ಧಾರವನ್ನು ವರಿಷ್ಠರೇ ಕೈಗೊಳ್ಳಲಿದ್ದಾರೆ” ಎಂದು ತಿಳಿಸಿದರು.
ಇದನ್ನೂ ಓದಿ: ‘ಯತ್ನಾಳ್ ಯಾವುದೋ ಒಂದು ಕೋತಿಯ ಬ್ರೀಡ್’: ಪ್ರದೀಪ್ ಈಶ್ವರ್ ವಾಗ್ದಾಳಿ
ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ರಾಧಾ ಮೋಹನ್ ದಾಸ್ ಅಗರ್ವಾಲ್, “ಪ್ರಸ್ತುತ ರಾಜ್ಯ ಸರ್ಕಾರದ ಕಾರ್ಯವೈಖರಿಯ ಬಗ್ಗೆ ಜನರಲ್ಲಿ ಭಾರಿ ಆಕ್ರೋಶವಿದೆ. ಮುಂಬರುವ 2028 ರ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕದ ಜನತೆ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಲಿದ್ದಾರೆ. ಈ ಆಕ್ರೋಶ ಚುನಾವಣೆಯ ಫಲಿತಾಂಶದಲ್ಲಿ ಗೋಚರಿಸಲಿದೆ. ನಾವು ತಲ್ಲಣ ಮೂಡಿಸುವ ಅಥವಾ ಸಂವೇದನಾತ್ಮಕ ರಾಜಕಾರಣ ಮಾಡುವುದಿಲ್ಲ. ಸರ್ಕಾರದ ಜನವಿರೋಧಿ ನೀತಿ ಹಾಗೂ ವೈಫಲ್ಯಗಳ ವಿರುದ್ಧ ರಾಜ್ಯದ ಬಿಜೆಪಿ ನಾಯಕರು ನಿರಂತರವಾಗಿ ಧ್ವನಿಯೆತ್ತಿ, ಹೋರಾಟ ಮಾಡುತ್ತಿದ್ದಾರೆ” ಎಂದು ಹೇಳಿದರು.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ