ತಾಯಿ ಸತ್ತ ನೋವಲ್ಲೂ ಪರೀಕ್ಷೆ ಬರೆದ ವಿದ್ಯಾರ್ಥಿ ಈಗ ಟಾಪರ್! ಸಾಧನೆಗೆ ಅಮ್ಮನ ಮಾತುಗಳೇ ಸ್ಪೂರ್ತಿಯಾಗಿದ್ದು ಹೇಗೆ?

ದ್ವಿತೀಯ ಪಿಯುಸಿ ಪರೀಕ್ಷೆಯ ಸಮಯದಲ್ಲೇ ತಾಯಿಯನ್ನು ಕಳೆದುಕೊಂಡ ದಿಶಾ, ಧೃತಿಗೆಡದೆ ಉಳಿದ ಪರೀಕ್ಷೆಗಳನ್ನು ಬರೆದು ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿದ್ದಾಳೆ. ಆಕೆ ಎದೆಗುಂದದಂತೆ ಯಾವಾಗಲೂ ಧೈರ್ಯ ಹೇಳುತ್ತಿದ್ದ ತಾಯಿಯ ಮಾತುಗಳೆ ತನ್ನನ್ನು ಈ ಸಾಧನೆ ಮಾಡುವಂತೆ ಪ್ರೇರೇಪಿಸಿತು ಎಂದು ದಿಶಾ ಹೇಳಿದ್ದಾಳೆ. ಸಿಎ ಮಾಡಬೇಕೆಂದ ಕನಸು ಹೊತ್ತಿರುವ ಈಕೆ ತಾಯಿಯನ್ನು ಕಳೆದುಕೊಂಡ ದುಃಖದಲ್ಲೂ ಸಾಧನೆ ಮಾಡಿರುವುದು ವಿದ್ಯಾರ್ಥಿಗಳಿಗೂ ಮಾದರಿಯಾಗಿದೆ.

ತಾಯಿ ಸತ್ತ ನೋವಲ್ಲೂ ಪರೀಕ್ಷೆ ಬರೆದ ವಿದ್ಯಾರ್ಥಿ ಈಗ ಟಾಪರ್! ಸಾಧನೆಗೆ ಅಮ್ಮನ ಮಾತುಗಳೇ ಸ್ಪೂರ್ತಿಯಾಗಿದ್ದು ಹೇಗೆ?
ತಾಯಿ ಸತ್ತ ನೋವಲ್ಲೂ ಪರೀಕ್ಷೆ ಬರೆದ ವಿದ್ಯಾರ್ಥಿ ಈಗ ಟಾಪರ್; ಸಾಧನೆಗೆ ಅಮ್ಮನ ಮಾತುಗಳೇ ಸ್ಪೂರ್ತಿಯಾಗಿದ್ದು ಹೇಗೆ?
Edited By:

Updated on: Apr 10, 2026 | 11:30 AM

ಮಂಗಳೂರು, ಏಪ್ರಿಲ್ 10: ಗುರುವಾರ ಪ್ರಕಟವಾದ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶದಲ್ಲಿ ವಾಣಿಜ್ಯ ವಿಭಾಗದಲ್ಲಿ ದಕ್ಷಿಣಕನ್ನಡ  ಜಿಲ್ಲೆಯ ಮೂಡಬಿದಿರೆಯ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ದಿಶಾ ರಾಜ್ಯಕ್ಕೆ ಪ್ರಥಮ ಸ್ಥಾನ (PUC Topper Disha) ಪಡೆದಿದ್ದಾಳೆ. ಈಕೆಯ ಈ ಸಾಧನೆಯ ಹಿಂದೆ ಒಂದು ನೋವಿನ ಕಥೆಯಿದೆ. ದ್ವಿತೀಯ ಪಿಯುಸಿ ಪರೀಕ್ಷೆ ನಡೆಯುತ್ತಿದ್ದ ಸಮಯದಲ್ಲೇ ಅಮ್ಮನನ್ನು ಕಳೆದುಕೊಂಡ ದಿಶಾಳಿಗೆ ಧೃತಿಗೆಡದೆ ತನ್ನ ಗುರಿ ಸಾಧಿಸಲು ಪ್ರೇರೇಪಿಸಿದ್ದು ಆಕೆಯ ತಾಯಿಯ ಮಾತುಗಳು.

ಪರೀಕ್ಷೆ ಮುಗಿಸಿ ಬಂದ ದಿಶಾಳಿಗೆ ಕಾದಿತ್ತು ಆಘಾತ!

ದಿನೇಶ್ ಹಾಗೂ ಸವಿತಾ ದಂಪತಿಯ ಇಬ್ಬರು ಮಕ್ಕಳಲ್ಲಿ ಹಿರಿಯವಳು ದಿಶಾ. ತಂಗಿ ದೀಕ್ಷಾ ಈಗಷ್ಟೇ ಎಸ್ಎಸ್ಎಲ್‌ಸಿ ಗೆ ಕಾಲಿಟ್ಟಿದ್ದಾಳೆ. ಅಂದು ದಿಶಾ ಗಣಿತ ಪರೀಕ್ಷೆಗೆ ರೂಂ ನಲ್ಲಿ ಕುಳಿತು ತಯಾರಿ ನಡೆಸುತ್ತಿದ್ದಳು. ರಾತ್ರಿಯಾಗುತ್ತಿದ್ದಂತೆ ರೂಂ ನ ಹೊರಗೆ ಯಾರೋ ಬಿದ್ದಂತೆ ಶಬ್ದ ಕೇಳಿ ಬಂದಿದೆ. ಹೊರಗೆ ಬಂದು ನೋಡಿದಾಗ ದಿಶಾ ತಾಯಿ ಆಕಸ್ಮಿಕವಾಗಿ ಜಾರಿ ಕೆಳಗೆ ಬಿದ್ದಿದ್ದರು. ತಕ್ಷಣಕ್ಕೆ ಏನೂ ಆಗಿಲ್ಲ ಎಂಬಂತೆ ಇದ್ದ ದಿಶಾ ತಾಯಿ ಮರುದಿನ ಬೆಳಗ್ಗಿನ ವೇಳೆಗೆ ಪ್ರಜ್ಞೆ ತಪ್ಪಿದ್ದರು. ಮನೆಯವರು ಮಂಗಳೂರಿನ ವೆನ್ಲಾಕ್ ಜಿಲ್ಲಾಸ್ಪತ್ರೆಗೆ ಅವರನ್ನು ದಾಖಲಿಸಿದ್ದರು. ಮರುದಿನ ಆಕೆಯನ್ನು ವೆನ್ಲಾಕ್ ಆಸ್ಪತ್ರೆಯಿಂದ ಮೂಡಬಿದಿರೆಯ ಖಾಸಗಿ ಆಸ್ಪತ್ರೆಗೆ ಕರೆ ತರಲಾಯಿತು.

ತಾಯಿಯ ಆರೋಗ್ಯ ಸಂಪೂರ್ಣ ಹದಗೆಟ್ಟಿದ್ದರಿಂದ ವೈದ್ಯರು ಹೆಚ್ಚು ದಿನ ಬದುಕೋದಿಲ್ಲ ಎಂದು ಹೇಳಿದ್ದರು. ಆದರೆ ಅದೇ ದಿನ ದಿಶಾ ಎಕನಾಮಿಕ್ಸ್ ಪರೀಕ್ಷೆ ಬರೆಯಬೇಕಿತ್ತು. ಪರೀಕ್ಷೆ ಬರೆದು ಅಮ್ಮನನ್ನು ನೋಡಲು ಆಸ್ಪತ್ರೆಗೆ ಒಡೋಡಿ ಬಂದಿಳು. ಆದರೆ ಅದೇ ದಿನ ರಾತ್ರಿ ದಿಶಾ ತಾಯಿ ಸವಿತಾ ಚಿಕಿತ್ಸೆ ಫಲಕಾರಿಯಾಗದೆ ಮೃತರಾದರು. ತಾಯಿಯನ್ನು ಕಳೆದುಕೊಂಡ ಸುದ್ದಿ ಕೇಳಿ ದಿಶಾಗೆ ತಲೆಯ ಮೇಲೆ ಆಕಾಶವೇ ಕಳಚಿ ಬಿದ್ದಂತೆ ಆಗಿತ್ತು. ಒಂದೆಡೆ ಹೆತ್ತ ತಾಯಿಯನ್ನು ಕಳೆದುಕೊಂಡ ದುಃಖ, ಇನ್ನೊಂದೆಡೆ ಭವಿಷ್ಯವನ್ನು ನಿರ್ಧರಿಸುವ ಇನ್ನುಳಿದ ಪರೀಕ್ಷೆಗಳು.

ಅಮ್ಮನಿಗಾಗಿ ಸಾಧನೆ ಮಾಡಿದೆ ಎಂದ ವಿದ್ಯಾರ್ಥಿನಿ

ದಿಶಾ ಪರೀಕ್ಷೆ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿದ್ದಾಗ ಆಕೆಯ ತಾಯಿ ನೀನು ಕಷ್ಟಪಟ್ಟಿದ್ದೀಯ, ದೇವರು ಇದ್ದಾನೆ, ಯಾರ ಹಣೆಯಲ್ಲಿ ಬರೆದಿದೆಯೋ ಅವರಿಗೆ ಸಿಗುತ್ತೆ. ಹೆದರಬೇಡ ಎಂದು ಧೈರ್ಯ ಹೇಳುತ್ತಿದ್ದರಂತೆ. ಹೀಗಾಗಿ ಅಮ್ಮನ ಆ ಮಾತುಗಳನ್ನೆ ಶಕ್ತಿಯಾಗಿಸಿ ದಿಶಾ ಪರೀಕ್ಷೆ ಬರೆದಿದ್ದಳು. ಆ ಸಮಯದಲ್ಲಿ ಏನು ಮಾಡಬೇಕೆಂದು ತಿಳಿಯದಾಗ ನನ್ನ ಅಮ್ಮನಿಗೋಸ್ಕರವಾದರೂ ನಾನು ಇದನ್ನು ಸಾಧಿಸಬೇಕಿತ್ತು ಎಂದು ದಿಶಾ ಈ ಸಾಧನೆಯ ಬಳಿಕ ಭಾವುಕರಾಗಿ ಹೇಳಿದ್ದಾಳೆ.

ಈ ಸಮಯದಲ್ಲಿ ಆಕೆಗೆ ಬೆಂಬಲವಾಗಿ ನಿಂತಿದ್ದು ಕಾಲೇಜಿನ ಆಡಳಿತ ಮಂಡಳಿ ಮತ್ತು ಉಪನ್ಯಾಸಕರು. ಕೌಟುಂಬಿಕ ಸಮಸ್ಯೆಯಿಂದಾಗಿ ಈಗ ದಿಶಾ ಮತ್ತು ಆಕೆಯ ತಂಗಿ ಶಿಕ್ಷಕಿ ವೀಣಾ ಎಂಬುವರ ಮನೆಯಲ್ಲಿದ್ದು, ಮುಂದೆ ಹಾಸ್ಟೆಲ್ ಅಥವಾ ಪಿಜಿಯಲ್ಲಿದ್ದು ವಿದ್ಯಾಭ್ಯಾಸ ಮುಂದುವರಿಸುವ ಬಗ್ಗೆ ಇನ್ನಷ್ಟೇ ನಿರ್ಧಾರವನ್ನು ಮಾಡಲಿದ್ದಾರೆ. ದಿಶಾ ತನ್ನ ತಾಯಿಯ ಕನಸಿನಂತೆಯೇ ಸಿಎ ಮಾಡಲು ಮುಂದಾಗಿದ್ದು, ಪ್ರಸ್ತುತ ಸಿ.ಎ ಫೌಂಡೇಷನ್ ಪರೀಕ್ಷೆಗೂ ಸಜ್ಜಾಗುತ್ತಿದ್ದಾಳೆ.

ಇದನ್ನೂ ಓದಿ ತಾಯಿ ನಿಧನದ ದುಃಖದಲ್ಲೇ ಪರೀಕ್ಷೆ ಬರೆದು ಈಗ ಕರ್ನಾಟಕಕ್ಕೆ ಟಾಪರ್:ನೋವಲ್ಲೂ ಸಾಧಿಸಿದ ದಿಶಾ

ತಾಯಿಯನ್ನು ಕಳೆದುಕೊಂಡ ದಿಶಾಳಿಗೆ ಆಳ್ವಾಸ್ ಸಂಸ್ಥೆ ವಿಶೇಷ ಬೆಂಬಲ ನೀಡಿದೆ. ಮುಂದೆ ಆಕೆಯ ಪಾಲಕನಾಗಿ ಆಕೆಯ ಜೊತೆ ನಿಲ್ಲುತ್ತೇನೆ, ಮುಂದಿನ ಎಲ್ಲಾ ಶಿಕ್ಷಣವನ್ನು ಉಚಿತವಾಗಿ ಹಂತ ಹಂತವಾಗಿ ಮಾಡಲು ಸಹಕಾರ ನೀಡುವುದಾಗಿ ಆಳ್ವಾಸ್ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಡಾ. ಮೋಹನ್ ಆಳ್ವ ಹೇಳಿದ್ದಾರೆ. ವಾಣಿಜ್ಯ ವಿಭಾಗದಲ್ಲಿ 600 ರಲ್ಲಿ 600 ಅಂಕ ಪಡೆದ ಸಾಧನೆಗಾಗಿ ಮೂರು ಲಕ್ಷ ನಗದು ಬಹುಮಾನ ನೀಡುವುದಾಗಿಯು ಘೋಷಿಸಿದ್ದಾರೆ. ಒಟ್ಟಿನಲ್ಲಿ ದಿಶಾ ಅವರ ಈ ಸಾಧನೆ ಎಲ್ಲಾ ವಿದ್ಯಾರ್ಥಿಗಳಿಗೂ ಮಾದರಿಯಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:30 am, Fri, 10 April 26

ಅಶೋಕ್​ ಪೂಜಾರಿ

ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ನಿವಾಸಿಯಾದ ಅಶೋಕ್ ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣ ಪೂರೈಸಿರುತ್ತಾರೆ. ಸ್ಥಳೀಯ ದಿನಪತ್ರಿಕೆಯ ಮೂಲಕ ವೃತ್ತಿರಂಗಕ್ಕೆ ಪಾದಾರ್ಪಣೆ ಮಾಡಿದ ಇವರು ಬಳಿಕ ಖಾಸಗಿ ಸುದ್ದಿ ವಾಹಿನಿಯಲ್ಲಿ ಉಡುಪಿ ಜಿಲ್ಲಾ ವರದಿಗಾರರಾಗಿ ಕೆಲಕಾಲ ಸೇವೆ ಸಲ್ಲಿಸಿರುತ್ತಾರೆ. ನಂತರ ಉಡುಪಿ ಹಾಗೂ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಆರು ವರ್ಷಗಳ ಕಾಲ ದಿಗ್ವಿಜಯ ನ್ಯೂಸ್ ನ ಜಿಲ್ಲಾ ವರದಿಗಾರರಾಗಿ ಕರ್ತವ್ಯ ನಿರ್ವಹಿಸಿ ನಂತರ ಟಿವಿ9 ಸುದ್ದಿ ವಾಹಿನಿಯಲ್ಲಿ ಉತ್ತರ ಕನ್ನಡ ಜಿಲ್ಲಾ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ರಂಗದಲ್ಲಿ ಇವರು ನೀಡಿದ ಸೇವೆಗೆ indiatelevision.com 2020ರಲ್ಲಿ ಅತ್ಯುತ್ತಮ ವರದಿಗಾರ ಎಂಬ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಿದೆ.

Read More
Loading...
Unable to load recommendations.
Follow Us