ಮಂಗಳೂರಿನಲ್ಲಿ ಅಧಿಕಾರಿಗಳ ಎಡವಟ್ಟು! ಉಲ್ಟಾ ಹಾರಿದ ರಾಷ್ಟ್ರ ಬಾವುಟ
ಸಚಿವ ಅಂಗಾರ ನಾಡದೇವಿ ಭುವನೇಶ್ವರಿಗೆ ಪೂಜೆ ಸಲ್ಲಿಸಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಬಳಿಕ ರಾಷ್ಟ್ರ ಧ್ವಜ ತಲೆಕೆಳಗಾಗಿ ಹಾರಿರುವುದು ತಿಳಿದುಬಂದಿದೆ.

ಮಂಗಳೂರು: ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅಧಿಕಾರಿಗಳಿಂದ ಎಡವಟ್ಟು ಆಗಿದೆ. ಕಾರ್ಯಕ್ರಮದಲ್ಲಿ ತಲೆಕೆಳಗಾಗಿ ರಾಷ್ಟ್ರ ಧ್ವಜ ಹಾರಿದೆ. ಸಚಿವ ಎಸ್ ಅಂಗಾರ ಧ್ವಜಾರೋಹಣ ಮಾಡಿದ ಬಳಿಕ ಎಡವಟ್ಟು ಬೆಳಕಿಗೆ ಬಂದಿದ್ದು, ನಂತರ ಅಧಿಕಾರಿಗಳು ಧ್ವಜವನ್ನು ಸರಿಪಡಿಸಿದ್ದಾರೆ. ಮಂಗಳೂರಿನ ಕೇಂದ್ರ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ.
ಸಚಿವ ಅಂಗಾರ ನಾಡದೇವಿ ಭುವನೇಶ್ವರಿಗೆ ಪೂಜೆ ಸಲ್ಲಿಸಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಬಳಿಕ ರಾಷ್ಟ್ರ ಧ್ವಜ ತಲೆಕೆಳಗಾಗಿ ಹಾರಿರುವುದು ತಿಳಿದುಬಂದಿದೆ.
ಇನ್ನು ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಅಂಗಾರ, ಕರ್ನಾಟಕದ ಭವ್ಯ ಪರಂಪರೆ, ಸಂಸ್ಕೃತಿಯನ್ನು ಉಳಿಸಿ, ಬೆಳೆಸಿಕೊಂಡು ಹೋಗುವತ್ತ ನಾವೆಲ್ಲರೂ ಶ್ರಮಿಸಬೇಕು. ಜಾತಿ, ಪಂಗಡಗಳ ಸಂಕುಚಿತ ಭಾವನೆಯಿಂದ ಹೊರ ಬರಬೇಕು. ಸ್ನೇಹ ಹಾಗೂ ಸೌಹಾರ್ದತೆಯ ವಾತಾವರಣ ನಿರ್ಮಿಸಬೇಕು. ದೇಶದ ಒಗ್ಗಟ್ಟು ಮತ್ತು ಏಕತೆಯನ್ನು ಕಾಪಾಡಿ ಬಲಿಷ್ಠ ರಾಷ್ಟ್ರ ನಿರ್ಮಾಣ ಮಾಡಲು ಒಟ್ಟಾಗಿ ಸೇರಿ ಶ್ರಮಿಸಬೇಕು ಎಂದು ಸಂದೇಶ ನೀಡಿದರು.
ಈ ಸಂದರ್ಭದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ವೇದವ್ಯಾಸ ಕಾಮತ್, ಮೇಯರ್ ಪ್ರೇಮಾನಂದ ಶೆಟ್ಟಿ, ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷರು, ಜಿಲ್ಲಾಧಿಕಾರಿ ಡಾ.ರಾಜೇಂದ್ರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕುಮಾರ್, ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೋನಾವಣೆ, ಮಂಗಳೂರು ಮಹಾನಗರಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್ ಸೇರಿದಂತೆ ಅಧಿಕಾರಿಗಳು ಹಾಗೂ ಕನ್ನಡ ಅಭಿಮಾನಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಂದ ಜನ ಸ್ಪಂದನ ವೆಬ್ ಪೋರ್ಟಲ್ ಉದ್ಘಾಟನೆ
Published On - 2:53 pm, Mon, 1 November 21




