ದಕ್ಷಿಣ ಕನ್ನಡ, ಜು.03: ಮಂಗಳೂರು(Mangalore) ನಗರದ ಬಲ್ಮಠ ಬಳಿ ಖಾಸಗಿ ಕಟ್ಟಡ ನಿರ್ಮಾಣ ಕಾಮಗಾರಿ ವೇಳೆ ಭೂಕುಸಿತವಾಗಿದ್ದು, ಇಬ್ಬರು ಕಾರ್ಮಿಕರು ಮಣ್ಣಿನಡಿ ಸಿಲುಕಿದ್ದಾರೆ. ಈ ಹಿನ್ನಲೆ ಎಸ್.ಡಿ.ಆರ್.ಎಫ್, ಅಗ್ನಿಶಾಮಕ ದಳದ ಸಿಬ್ಬಂದಿಗಳಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಈಗಾಗಲೇ ಮಣ್ಣಿನಡಿಯಲ್ಲಿರುವ ಕಾರ್ಮಿಕರ ಜೊತೆ ರಕ್ಷಣಾ ತಂಡದ ಸಿಬ್ಬಂದಿಗಳು ಸಂಪರ್ಕ ಸಾಧಿಸಿದ್ದು, ಅವಶೇಷದಡಿ ಸಿಲುಕಿದ್ದ ಓರ್ವ ಕೂಲಿ ಕಾರ್ಮಿಕನನ್ನು ರಕ್ಷಣೆ ಮಾಡಲಾಗಿದೆ. ಇನ್ನು ಘಟನೆ ವಿಷಯ ತಿಳಿಯುತ್ತಿದ್ದಂತೆ ದಕ್ಷಿಣಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಕಳೆದ ಮೂರು ದಿನದ ಹಿಂದೆ ಸುರಿದ ಮಳೆಯಿಂದ ಮಣ್ಣಿನ ದಿಬ್ಬ ಸಡಿಲಗೊಂಡಿದ್ದು, ರಿಟೇನಿಂಗ್ ವಾಲ್ ಹಾಗೂ ಹಾಕಲಾದ ಶೀಟ್‌ಗಳ ಮೇಲೆ ಮಣ್ಣು ಬಿದ್ದಿದೆ. ಇದರಿಂದ ರಿಟೇನಿಂಗ್ ವಾಲ್ ಹಾಗೂ ಶೀಟ್ ಮಧ್ಯೆ ಕಾರ್ಮಿಕರು ಸಿಲುಕಿದ್ದು, ಕೋರ್ ಕಟ್ಟಿಂಗ್ ಮೂಲಕ ರಕ್ಷಣ ಕಾರ್ಯ ನಡೆಸಲಾಗುತ್ತಿದೆ. ಅದರಂತೆ ಓರ್ವನನ್ನು ರಕ್ಷಣೆ ಮಾಡಲಾಗಿದ್ದು, ಮತ್ತೋರ್ವನಿಗಾಗಿ ಕಾರ್ಯಾಚರಣೆ ಮುಂದವರೆದಿದೆ.
ಇದನ್ನೂ ಓದಿ:ಸಿಕ್ಕಿಂನಲ್ಲಿ ಭೂಕುಸಿತ: 70 ಅಡಿ ಬೈಲಿ ಸೇತುವೆಯನ್ನು 72 ಗಂಟೆಗಳೊಳಗೆ ನಿರ್ಮಿಸಿದ ಭಾರತೀಯ ಸೇನೆ
ಮಣ್ಣಿನಡಿ ಸಿಲುಕಿದವರು ಬಿಹಾರ ಮೂಲದವರಾದ ಚಂದನ್ ಮತ್ತು ರಾಜಕುಮಾರ್ ಆಗಿದ್ದು, ಘಟನಾ ಸ್ಥಳದ ಬಳಿ ಇತರ ಕಾರ್ಮಿಕರ ಅಳಲು ಮುಗಿಲುಮುಟ್ಟಿದೆ. ಇನ್ನು ಸ್ಟ್ರೆಚ್ಚರ್ ಜೊತೆ ಆಗಮಿಸಿದ ಆರೋಗ್ಯ ಇಲಾಖೆ ಸಿಬ್ಬಂದಿಗಳು, ಓರ್ವ ಕಾರ್ಮಿಕನನ್ನು ಮೇಲೆ ಎತ್ತುತ್ತಿದ್ದಂತೆ ಆಸ್ಪತ್ರೆಗೆ ಸಾಗಿಸಿದ್ದಾರೆ. ಇನ್ನುಳಿದ ಓರ್ವನಿಗಾಗಿ ಕಾರ್ಯಾಚರಣೆ ಶುರುವಾಗಿದೆ. ಆದರೆ,
ರಕ್ಷಣೆಗೆ ಮಳೆ ಅಡ್ಡಿಯಾಗಿದೆ. ಇನ್ನು ರಕ್ಷಣಾ ಕಾರ್ಯಾಚರಣೆಗೆ ಎನ್.ಡಿ.ಆರ್.ಎಫ್ ಸಿಬ್ಬಂದಿಗಳು ಆಗಮಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:39 pm, Wed, 3 July 24