Lok Sabha Elections 2024: ದಕ್ಷಿಣ ಕನ್ನಡ ಕಾಂಗ್ರೆಸ್ನಲ್ಲಿ ಟಿಕೆಟ್ಗೆ ಪೈಪೋಟಿ, ಮುನ್ನೆಲೆಗೆ ಬಂತು ಯುಟಿ ಖಾದರ್ ಹೆಸರು!
Dakshina Kannada Lok Sabha Constituency: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಯುಟಿ ಖಾದರ್ ಕಣಕ್ಕಿಳಿಲಿದ್ದಾರೆಯೇ? ಅಂಥದ್ದೊಂದು ಚರ್ಚೆ ಈಗ ಆರಂಭವಾಗಿದೆ. ಈ ವಿಚಾರವಾಗಿ ಕೆಪಿಸಿಸಿಯಲ್ಲಿ ಚರ್ಚೆಯೂ ನಡೆದಿದೆ ಎನ್ನಲಾಗಿದೆ. ಆದರೆ, ಯುಟಿ ಖಾದರ್ ಅವರು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಒಪ್ಪುತ್ತಾರೆಯೇ ಎಂಬುದೇ ಸದ್ಯದ ಕುತೂಹಲವಾಗಿದೆ.
ಮಂಗಳೂರು, ಫೆಬ್ರವರಿ 9: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಲೋಕಸಭೆ ಚುನಾವಣೆಗೆ (Lok Sabha Elections 2024) ಕಾಂಗ್ರೆಸ್ ಪಕ್ಷದಲ್ಲಿ ಪೈಪೋಟಿ ಮುಂದುವರಿದಿದ್ದು, ಅಚ್ಚರಿಯ ರೀತಿಯಲ್ಲಿ ವಿಧಾನಸಭೆ ಸ್ಪೀಕರ್ ಯುಟಿ ಖಾದರ್ (UT Khader) ಹೆಸರು ಪ್ರಸ್ತಾಪವಾಗಿದೆ. ಒಂದೆಡೆ ಕಾಂಗ್ರೆಸ್ (Congress) ಮುಖಂಡರು ಜಾತಿ ಲೆಕ್ಕಾಚಾರ ಹಾಕುತ್ತಿದ್ದರೆ, ಮತ್ತೊಂದೆಡೆ ಖಾದರ್ ಹೆಸರು ಪ್ರಸ್ತಾಪವಾಗಿದೆ. ಹಿಂದುತ್ವದ ಭದ್ರಕೋಟೆಯಲ್ಲಿ ಯುಟಿಖಾದರ್ಗೆ ಟಿಕೆಟ್ ನೀಡಲು ಕೆಪಿಸಿಸಿಯಲ್ಲಿ ಚರ್ಚೆ ನಡೆದಿದೆ.
ಯುಟಿ ಖಾದರ್ ಅವರಿಗೆ ಮುಸ್ಲಿಂ ಮತಗಳಗಳನ್ನು ಕ್ಲೀನ್ ಸ್ವೀಪ್ ಮಾಡುವ ಸಾಮರ್ಥ್ಯ ಇದೆ. ಅದೇ ರೀತಿ ಹಿಂದು ಮತಗಳನ್ನೂ ಹೆಚ್ಚಾಗಿ ಸೆಳೆಯುವ ಶಕ್ತಿ ಇದೆ. ಇತ್ತೀಚಿಗೆ ಭೂತ ಕೋಲದಲ್ಲಿ ಭಾಗವಹಿಸಿ ಖಾದರ್ ಅವರು ಹಿಂದುಗಳ ಮನ ಗೆದ್ದಿದ್ದು ಕೂಡ ಇಲ್ಲಿ ಗಮನಾರ್ಹ. ಅದೇ ರೀತಿ ಖಾದರ್ ಹಲವು ಬಾರಿ ನಡೆದುಕೊಂಡಿದ್ದಾರೆ. ಹಿಂದೂ ದೇಗುಲಗಳಿಗೆ ಭೇಟಿ ನೀಡುವುದು, ಸಮಾರಂಭಗಳಲ್ಲಿ ಭಾಗವಹಿಸುವುದನ್ನು ಮಾಡಿದ್ದಾರೆ. ಜತೆಗೆ, ಅನೇಕ ಹಿಂದೂ ಮುಖಂಡರ ಜತೆಗೂ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಇವೆಲ್ಲ ಅಂಶಗಳನ್ನೂ ಪರಿಗಣಿಸಲಾಗಿದೆ.
ಜಾತ್ಯತೀತ ನಡೆಯಿಂದ ಖಾದರ್ ಅವರಿಗೆ ಎಲ್ಲ ರೀತಿಯ ಓಟ್ ಬ್ಯಾಂಕ್ ಸೆಳೆಯುವ ಶಕ್ತಿ ಇದೆ ಎಂಬುದು ಅವರ ದೊಡ್ಡ ಪ್ಲಸ್ ಪಾಯಿಂಟ್ ಆಗಿದೆ. ಜತೆಗೆ, ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ ಎಂಬ ಅಭಿಪ್ರಾಯವೂ ಕ್ಷೇತ್ರದ ಜನತೆಯಲ್ಲಿದೆ. ಹೀಗಾಗಿ ಅವರ ಮೂಲಕ ಕರಾವಳಿ ಪ್ರದೇಶದಲ್ಲಿ ಮತ್ತೆ ಹಿಡಿತ ಸಾಧಿಸುವುದು ಕಾಂಗ್ರೆಸ್ ನಾಯಕರ ಲೆಕ್ಕಾಚಾರ ಎನ್ನಲಾಗಿದೆ.
ಒಪ್ಪುತ್ತಾರೆಯೇ ಯುಟಿ ಖಾದರ್?
ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಕ್ಷೇತ್ರದಿಂದ ಸ್ಪರ್ಧಿಸಲು ಒಂದು ವೇಳೆ ಕಾಂಗ್ರೆಸ್ ಪಕ್ಷವು ಯುಟಿ ಖಾದರ್ ಅವರ ಹೆಸರನ್ನೇ ಅಂತಿಮಗೊಳಿಸಿದರೆ ಅವರು ಅದನ್ನು ಒಪ್ಪುತ್ತಾರೆಯೇ ಎಂಬುದೂ ಪ್ರಶ್ನೆಯಾಗಿದೆ. ಯಾಕೆಂದರೆ, ಯುಟಿ ಖಾದರ್ ಅವರು ಈ ಹಿಂದೆ ರಾಜ್ಯ ಸರ್ಕಾರದಲ್ಲಿ ಸಚಿವರಾಗಿಯೂ ಕಾರ್ಯನಿರ್ವಹಿಸಿದವರು. ರಾಜ್ಯ ರಾಜಕಾರಣದಲ್ಲಿ ಅವರ ವರ್ಚಸ್ಸು ಉತ್ತಮವಾಗಿದೆ. ಇದೀಗ ಸ್ಪೀಕರ್ ಆಗಿದ್ದರೂ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ತಮ್ಮ ರಾಜಕೀಯ ಖದರ್ ಅನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ. ಹೀಗಾಗಿ ರಾಷ್ಟ್ರ ರಾಜಕೀಯಕ್ಕೆ ಧುಮುಕಲು ಅವರು ಮುಂದಾಗಲಿದ್ದಾರೆಯೇ ಎಂಬುದನ್ನು ಕಾದುನೋಡಬೇಕಿದೆ.
ಇದನ್ನೂ ಓದಿ: ಘಟಾನುಘಟಿ ನಾಯಕರನ್ನೇ ಕಣಕ್ಕಿಳಿಸಲು ರಾಜ್ಯ ಕಾಂಗ್ರೆಸ್ ನಾಯಕತ್ವ ಪಟ್ಟು
ಮತ್ತೊಂದೆಡೆ, ದಕ್ಷಿಣ ಕನ್ನಡ ಬಿಜೆಪಿಯಲ್ಲಿಯೂ ಈ ಬಾರಿ ತುಸು ಗೊಂದಲಗಳಿವೆ. ಇದರ ಲಾಭ ಪಡೆಯಲು ಕಾಂಗ್ರೆಸ್ ಯುಟಿ ಖಾದರ್ ಅವರ ಹೆಸರನ್ನು ಮುನ್ನೆಲೆಗೆ ಬಿಟ್ಟಿತೇ ಎಂಬ ಕುತೂಹಲವೂ ಮೂಡಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ