ಮಂಗಳೂರು: ಪೆದಮಲೆ ಗ್ರಾಮದಲ್ಲಿ ಮಣ್ಣಿನಡಿ ಹುದುಗಿ ಹೋಗಿದ್ದ 300 ವರ್ಷ ಹಳೆಯ ದೈವಸ್ಥಾನ ಪತ್ತೆ

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಸಮೀಪದ ನೀರುಮಾರ್ಗದ ಪೆದಮಲೆ ಗ್ರಾಮದಲ್ಲಿ ದೈವದ ಪವಾಡ ಕಂಡು ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ದೇಗುಲವೊಂದರ ಜೀರ್ಣೋದ್ಧಾರ ಸಂಬಂಧ ಮಾಡಲಾದ ಪ್ರಶ್ನಾ ಚಿಂತನೆಯಲ್ಲಿ ಕಂಡುಬಂದ ಪ್ರಕಾರ, ಖಾಲಿ ಸೈಟ್​ನಲ್ಲಿ ಶೋಧಕಾರ್ಯ ನಡೆಸಿದಾಗ 300 ವರ್ಷಗಳ ಹಳೆಯ ದೈವಸ್ಥಾನದ ಕುರುಹು ಕಂಡುಬಂದಿದೆ. ವಿವರಗಳು ಇಲ್ಲಿವೆ.

ಮಂಗಳೂರು: ಪೆದಮಲೆ ಗ್ರಾಮದಲ್ಲಿ ಮಣ್ಣಿನಡಿ ಹುದುಗಿ ಹೋಗಿದ್ದ 300 ವರ್ಷ ಹಳೆಯ ದೈವಸ್ಥಾನ ಪತ್ತೆ
ದೈವಸ್ಥಾನದ ಕುರುಹು ಪತ್ತೆಯಾದ ಜಾಗ
Edited By:

Updated on: Jan 30, 2025 | 11:14 AM

ಮಂಗಳೂರು, ಜನವರಿ 30: ಮಣ್ಣಿನಡಿ ಹುದುಗಿ ಹೋಗಿದ್ದ 300 ವರ್ಷಗಳ ಹಳೆಯ ದೈವಸ್ಥಾನವೊಂದು ಪತ್ತೆಯಾಗಿದ್ದು, ತುಳುನಾಡಿನ ಕಾರ್ಣಿಕ ದೈವದ ಇರುವಿಕೆ ಕಂಡು ಗ್ರಾಮಸ್ಥರು ಬೆಚ್ಚಿಬೀಳುವಂತಾಗಿದೆ. ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ತಾಲೂಕಿನ ನೀರುಮಾರ್ಗದ ಪೆದಮಲೆ ಗ್ರಾಮದಲ್ಲೊಂದು ಅಚ್ಚರಿಯ ವಿದ್ಯಮಾನ ನಡೆದಿದ್ದು, ದೈವದ ಮುನಿಸಿನಿಂದ ತೊಂದರೆಗೀಡಾದ ಗ್ರಾಮಸ್ಥರಿಗೆ ಪ್ರಶ್ನಾಚಿಂತನೆಯಲ್ಲಿ ದೈವಸ್ಥಾನದ ಸುಳಿವು ದೊರೆತಿದೆ.

300 ವರ್ಷಗಳಿಂದ ದೈವಸ್ಥಾನ ಗ್ರಾಮದ ಜನರ ಅರಿವಿಗೆ ಬಾರದೇ ಮಣ್ಣಿನಡಿ ಹುದುಗಿತ್ತು. ಪಾಳು ಬಿದ್ದು ಪೊದೆಗಳಿಂದ ಅವೃತ್ತವಾಗಿದ್ದ ದಟ್ಟ ನಿರ್ಜನ ಪ್ರದೇಶದಲ್ಲಿ ಗ್ರಾಮದ ಇಂದಿನ ಪೀಳಿಗೆಗೆ ದೈವಸ್ಥಾನ ಇದ್ದ ಬಗ್ಗೆ ಅರಿವೇ ಇರಲಿಲ್ಲ. ಆದರೆ, ಇದೀಗ ವಾಜಿಲ್ಲಾಯ-ಧೂಮವತಿ ದೈವದ ಕಾರ್ಣಿಕ ಕಂಡು ಗ್ರಾಮಸ್ಥರು ಅಚ್ಚರಿಪಟ್ಟಿದ್ದಾರೆ.

ಗ್ರಾಮದಲ್ಲಿ ಹೆಚ್ಚಿದ್ದ ಸಾವು-ನೋವು

ಗ್ರಾಮದಲ್ಲಿ ಮನೆಗಳಿಗೆ ಆಗಾಗ ನಾಗರಹಾವು ಪ್ರವೇಶಿಸುವುದು, ಆತ್ಮಹತ್ಯೆ, ಸಾವು-ನೋವು ಹೆಚ್ಚಳವಾಗಿತ್ತು. ನಿರಂತರ ನೆಮ್ಮದಿ ಇಲ್ಲದೇ ಹಲವು ಮನೆಯವರು ಗ್ರಾಮವನ್ನೇ ತೊರೆದಿದ್ದರು. ಹೀಗಾಗಿ ಪಾಳು ಬಿದ್ದಿದ್ದ ಉಮಾಮಹೇಶ್ವರ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಗ್ರಾಮಸ್ಥರು ಮುಂದಾಗಿದ್ದರು. ಈ ವೇಳೆ ದೇವಸ್ಥಾನದಲ್ಲಿ ಪ್ರಶ್ನಾಚಿಂತನೆ ನಡೆಸಲಾಗಿತ್ತು. ಅದರಲ್ಲಿ, ವಾಜಿಲ್ಲಾಯ ದೈವಸ್ಥಾನದ ಸುಳಿವು ಪತ್ತೆಯಾಗಿದೆ.

ಪ್ರಶ್ನಾ ಚಿಂತನೆಯಲ್ಲಿ ಸಿಕ್ಕ ಸುಳಿವು

ದೇಗುಲದ ಉತ್ತರ ದಿಕ್ಕಿನ ನಾಗಬನದ ಬಳಿ ವಾಜಿಲ್ಲಾಯ ದೈವಸ್ಥಾನ ಇರುವ ಸುಳಿವುದ ದೊರೆತಿದೆ. ನೂರಾರು ವರ್ಷಗಳ ಹಿಂದೆ ದೈವಾರಾಧನೆ ನಡೆಯುತ್ತಿದ್ದ ಸುಳಿವು ದೊರೆತಿದೆ. ಹೀಗಾಗಿ ನಾಗಬನದ ಸುತ್ತಲಿನ 50 ಸೆಂಟ್ಸ್ ಜಾಗದಲ್ಲಿ ಗ್ರಾಮಸ್ಥರು ಹುಡುಕಾಟ ನಡೆಸಿದ್ದಾರೆ. ಆಗ ದೈವಸ್ಥಾನದ ಕುರುಹು ಪತ್ತೆಯಾಗಿದ್ದು, ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.

ಇದನ್ನೂ ಓದಿ: ಮಂಗಳೂರಿನಲ್ಲಿ ಪ್ರೇತ ಉಚ್ಚಾಟನೆಗಾಗಿ ರಸ್ತೆ ಸಂಚಾರ ಬಂದ್: ಕಾರಣವೇನು?

ಸಂಪೂರ್ಣ ಶಿಥಿಲಗೊಂಡ ರೀತಿಯಲ್ಲಿ ದೈವಸ್ಥಾನದ ಸುತ್ತುಪೌಳಿ ಹಾಗೂ ಗುಡಿಯ ಪಂಚಾಂಗ ಪತ್ತೆಯಾಗಿದೆ. ಜನಸಂಚಾರವಿಲ್ಲದೆ ಶತಮಾನವೇ ಕಳೆದಿದ್ದ ಖಾಸಗಿ ವ್ಯಕ್ತಿಗಳಿಗೆ ಸೇರಿದ್ದ ಜಾಗ ಅದಾಗಿದೆ. ದೈವಸ್ಥಾನದ ಧ್ವಜ ಸ್ಥಂಭದ ಬುಡವೊಂದರ ದಂಬೆ ಕಲ್ಲು ಕೂಡ ಪತ್ತೆಯಾಗಿದೆ. ಒಂದು ಬದಿ ಕುದುರೆ ಮೇಲೆ ರಾಜನೊಬ್ಬನ ಕೆತ್ತನೆ ಹಾಗೂ ಇನ್ನೊಂದು ಬದಿ ಸೂರ್ಯ ಚಂದ್ರರ ಕೆತ್ತನೆಯ ಕಲ್ಲು ಕಾಣಿಸಿದೆ. ಜೊತೆಗೆ ಮಣ್ಣಿನಡಿ ಗಂಟೆ ಸೇರಿದಂತೆ ಹಲವು ದೈವಾರಾಧನೆ ಪರಿಕರಗಳು ಪತ್ತೆಯಾಗಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ