ಮಂಗಳೂರಿನಲ್ಲಿ ಪ್ರೇತ ಉಚ್ಚಾಟನೆಗಾಗಿ ರಸ್ತೆ ಸಂಚಾರ ಬಂದ್: ಕಾರಣವೇನು?
ಮಂಗಳೂರಿನ ಕೊಟ್ಟಾರದಲ್ಲಿ ಬ್ರಹ್ಮರಾಕ್ಷಸ ಮತ್ತು ಇತರ ಪ್ರೇತಗಳ ಉಚ್ಚಾಟನಾ ಕಾರ್ಯಕ್ರಮದಿಂದಾಗಿ ರಾತ್ರಿ 10 ರಿಂದ ಬೆಳಿಗ್ಗೆ 3 ರವರೆಗೆ ರಸ್ತೆ ಸಂಚಾರವನ್ನು ಬಂದ್ ಮಾಡಲಾಗಿದೆ. ದೈವಸ್ಥಾನದ ಜೀರ್ಣೋದ್ಧಾರಕ್ಕೂ ಮುಂಚೆ ಈ ಅಗತ್ಯ ಕಂಡುಬಂದಿದೆ ಎಂದು ಆಯೋಜಕರು ಹೇಳಿದ್ದಾರೆ. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
![ಮಂಗಳೂರಿನಲ್ಲಿ ಪ್ರೇತ ಉಚ್ಚಾಟನೆಗಾಗಿ ರಸ್ತೆ ಸಂಚಾರ ಬಂದ್: ಕಾರಣವೇನು?](https://images.tv9kannada.com/wp-content/uploads/2025/01/pretha-road-bandh.jpg?w=1280)
ಮಂಗಳೂರು, ಜನವರಿ 29: ನಗರದಲ್ಲಿ ಪ್ರೇತ (Ghost) ಉಚ್ಚಾಟನೆ ಹಿನ್ನೆಲೆ ರಸ್ತೆ ಸಂಚಾರ ಬಂದ್ ಮಾಡಿರುವಂತಹ ಘಟನೆ ನಡೆದಿದೆ. ಕೊಟ್ಟಾರದ ಮಹಾದೈವರಾಜ ಕೋಟೆದ ಬಬ್ಬುಸ್ವಾಮಿ ದೈವಸ್ಥಾನ, ರಣಕಾಳಿ ಹಾಗೂ ಬ್ರಹ್ಮರಾಕ್ಷಸ ಅನ್ಯಪ್ರೇತ ಉಚ್ಚಾಟನೆ ಹಿನ್ನೆಲೆ ಕೊಟ್ಟಾರದ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ಮಾಡದಂತೆ ಬ್ಯಾನರ್ ಅಳವಡಿಸಿದ್ದು, ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 3 ಗಂಟೆಯವರೆಗೆ ಜನರು ಓಡಾಡದಂತೆ ಮನವಿ ಮಾಡಲಾಗಿದೆ. ಸದ್ಯ ಪ್ರೇತ ಉಚ್ಚಾಟನೆ ಬ್ಯಾನರ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ದೈವ ಆರಾಧಕ ಪ್ರಜ್ವಲ್ ಹೇಳಿದ್ದಿಷ್ಟು
ಈ ಬಗ್ಗೆ ದೈವ ಆರಾಧಕರಾದ ಪ್ರಜ್ವಲ್ ಟಿವಿ9 ಗೆ ಹೇಳಿಕೆ ನೀಡಿದ್ದು, ದೈವಸ್ಥಾನ ಜೀರ್ಣೋದ್ಧಾರ ಮಾಡಲು ತಾಂಬೂಲ ಪ್ರಶ್ನೆ ಕೇಳಲಾಯಿತು. ಆಗ ಇಲ್ಲಿ ಬ್ರಹ್ಮರಾಕ್ಷಸ, ಪ್ರೇತಾತ್ಮಗಳಿರುವುದು ಕಂಡು ಬಂದಿತ್ತು. ಜೀರ್ಣೋದ್ಧಾರಕ್ಕೂ ಮೊದಲು ಉಚ್ಚಾಟನೆ ಆಗಬೇಕು ಅಂತಾ ಬಂದಿತ್ತು ಎಂದಿದ್ದಾರೆ.
ಇದನ್ನೂ ಓದಿ: ದಕ್ಷಿಣಕನ್ನಡ ಜಿಲ್ಲೆ ಕುಂಪಲ ಗ್ರಾಮದಲ್ಲಿ ಸರಣಿ ಆತ್ಮಹತ್ಯೆ, ಅಪಘಾತಗಳಲ್ಲಿ ಸಾವು: ದೈವದ ಮುನಿಸೇ ಕಾರಣವಾಯ್ತಾ?
ಇಂದು ಅಮವಾಸ್ಯೆ ರಾತ್ರಿ 12 ಗಂಟೆ ವೇಳೆಗೆ ಪ್ರೇತಾತ್ಮ ಉಚ್ಚಾಟಣೆ ನಡೆಯಲಿದೆ. ಆಗ ಸುತ್ತಮುತ್ತ ಉಚ್ಚಾಟನೆ ವಿಧಿ ವಿಧಾನ ನಡೆಯುತ್ತೆ. ಹಾಗಾಗಿ ಈ ರೀತಿ ಮನವಿ ಮಾಡಿ ಬ್ಯಾನರ್ ಹಾಕಲಾಗಿದೆ ಎಂದು ಹೇಳಿದ್ದಾರೆ.
ಮಂಗಳೂರು ನಗರದ ಕೊಟ್ಟಾರ ಬಳಿ ಬ್ಯಾನರ್ ಅಳವಡಿಸಿದ್ದು, ಪೂಜಾ ವಿಧಿ ನೋಡಲು ರಾತ್ರಿ ಹತ್ತು ಗಂಟೆಯ ಒಳಗೆ ದೈವಸ್ಥಾನ ಪ್ರವೇಶ ಮಾಡಲು ಮನವಿ ಮಾಡಲಾಗಿದೆ. ಪ್ರೇತ ಉಚ್ಚಾಟನೆ ವೇಳೆ ಜನ ಸಂಚಾರವಾದರೆ ತೊಂದರೆಯಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಆಯೋಜಕರು.
ಇದನ್ನೂ ಓದಿ: ಮಂಗಳೂರು: ರಥೋತ್ಸವದ ವೇಳೆ ವಿಟ್ಲ ಪಂಚಲಿಂಗೇಶ್ವರ ದೇವರ ಮೂರ್ತಿ, ಅರ್ಚಕರಿಗೆ ಬಡಿದ ಡ್ರೋನ್
ಮಂಗಳೂರು ಪೊಲೀಸ್ ಇಲಾಖೆಗೂ ಆಯೋಜಕರು ಮನವಿ ಮಾಡಿದ್ದಾರೆ. ಸುಮಾರು 3-4 ಕಿಮೀ ರಸ್ತೆಯಲ್ಲಿ ವಾಹನ ಹಾಗೂ ಜನ ಸಂಚಾರವನ್ನು ನಿಷೇಧಿಸಿದ್ದು, ಅಂದರೆ ಸುಮಾರು ಐದು ಗಂಟೆಗಳ ಕಾಲ ಮಂಗಳೂರಿನ ಪ್ರಮುಖ ರಸ್ತೆ ಕೊಟ್ಟಾರ ಬಂದ್ ಆಗಲಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.