AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಕ್ಷಿಣಕನ್ನಡ ಜಿಲ್ಲೆ ಕುಂಪಲ ಗ್ರಾಮದಲ್ಲಿ ಸರಣಿ ಆತ್ಮಹತ್ಯೆ, ಅಪಘಾತಗಳಲ್ಲಿ ಸಾವು: ದೈವದ ಮುನಿಸೇ ಕಾರಣವಾಯ್ತಾ?

ಆ ಗ್ರಾಮದಲ್ಲಿ ನಿಗೂಢವಾಗಿ ಸರಣಿ ಸಾವು ಸಂಭವಿಸುತಿತ್ತು. ಪದೇ ಪದೇ ಗ್ರಾಮದಲ್ಲಿ ಕೇಳಿ ಬರುತ್ತಿರುವ ಮರಣ ವಾರ್ತೆ ಕಂಡು ಜನ ಬೆಚ್ಚಿ ಬಿದ್ದಿದ್ದರು. ಆದರೆ, ಗ್ರಾಮದ ಜನತೆಯ ಈ ಸೀರಿಯಲ್ ಸಾವಿಗೆ ದೈವದ ಮುನಿಸು ಕಾರಣ ಎಂಬ ಸುಳಿವು ಸಿಕ್ಕಿದೆ. ಹೀಗಾಗಿ ಸಾವಿನ ಪಾಶದಿಂದ ಪಾರಾಗಲು ಗ್ರಾಮಸ್ಥರು ಮಹಾ ಮೃತ್ಯುಂಜಯ ಯಾಗದ ಮೊರೆ ಹೋಗಿದ್ದಾರೆ. ಹಾಗಾದ್ರೆ ಆ ಗ್ರಾಮ ಯಾವುದು, ದೈವದ ಮುನಿಸಿಗೆ ಕಾರಣವೇನು? ಇಲ್ಲಿದೆ ವಿವರ.

ದಕ್ಷಿಣಕನ್ನಡ ಜಿಲ್ಲೆ ಕುಂಪಲ ಗ್ರಾಮದಲ್ಲಿ ಸರಣಿ ಆತ್ಮಹತ್ಯೆ, ಅಪಘಾತಗಳಲ್ಲಿ ಸಾವು: ದೈವದ ಮುನಿಸೇ ಕಾರಣವಾಯ್ತಾ?
ಕುಂಪಲದ ಚಾಮುಂಡೇಶ್ವರಿ ದೇವಸ್ಥಾನದ ವಠಾರದಲ್ಲಿ ಮಹಾ ಮೃತ್ಯುಂಜಯ ಯಾಗ ನಡೆಸಲಾಯಿತು.
ಅಶೋಕ್​ ಪೂಜಾರಿ, ಮಂಗಳೂರು
| Updated By: Ganapathi Sharma|

Updated on: Jan 27, 2025 | 9:09 AM

Share

ಮಂಗಳೂರು, ಜನವರಿ 27: ದಕ್ಷಿಣಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ಕುಂಪಲ ಗ್ರಾಮದಲ್ಲಿ ಸಾಲು ಸಾಲು ಅಕಾಲಿಕ ಮೃತ್ಯು ಇಲ್ಲಿನ ಜನರನ್ನು ಬೆಚ್ಚಿಬೀಳಿಸಿತ್ತು. 2019ರಿಂದ ಈವರೆಗೆ ಸುಮಾರು 50ಕ್ಕೂ ಹೆಚ್ಚು ಮಂದಿ ವಯಸಲ್ಲದ ವಯಸ್ಸಿಗೆ ಅಪಮೃತ್ಯುವಿಗೆ ಒಳಗಾಗಿದ್ದರು. ಹೆಚ್ಚಿನ ಮಂದಿ ನೇಣಿಗೆ ಕೊರಳೊಡ್ಡಿ ಆತ್ಮಹತ್ಯೆ ಮಾಡಿಕೊಂಡಿದ್ದರೆ ಇನ್ನು ಕೆಲವರು ಅಪಘಾತ, ಮಾರಣಾಂತಿಕ ಕಾಯಿಲೆಗಳಿಗೆ ತುತ್ತಾಗಿ ಜೀವ ಕಳೆದುಕೊಂಡಿದ್ದರು. ಅದರಲ್ಲೂ ರೂಪದರ್ಶಿಯಾಗಿದ್ದ ಪ್ರೇಕ್ಷಾ ಎಂಬ ಯುವತಿ ನೇಣಿಗೆ ಕೊರಳೊಡ್ಡಿದ್ದರೆ, ಅಶ್ವಿನಿ ಬಂಗೇರ ಎಂಬ ಯುವತಿ ಗೃಹಪ್ರವೇಶವಾದ ಐದೇ ದಿನದಲ್ಲಿ ತನ್ನದೇ ನೂತನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಳು.

ಇದರಿಂದ ಕಂಗೆಟ್ಟ ಊರಿನ ಮಂದಿ ಕುಂಪಲದ ಆದಿಶಕ್ತಿ ಚಾಮುಂಡೇಶ್ವರಿ ಸನ್ನಿಧಾನದಲ್ಲಿ ದೈವಜ್ಞರ ಮೂಲಕ ಪ್ರಶ್ನಾ ಚಿಂತನೆಯನ್ನಿಟ್ಟರು. ಕರಾವಳಿ, ಕೇರಳ ಭಾಗದಲ್ಲಿ ಸಾಕಷ್ಟು ಮಹತ್ವ ಪಡೆದುಕೊಂಡಿರುವ ಈ ಪ್ರಶ್ನಾ ಚಿಂತನೆಯಲ್ಲಿ ಕುಂಪಲ ಗ್ರಾಮದ ಜನತೆಯ ಸರಣಿ ಸಾವಿಗೆ ದೈವದ ಮುನಿಸೇ ಕಾರಣ ಎಂಬ ಸುಳಿವು ಸಿಕ್ಕಿತು. ಇದರ ಜೊತೆ ಗ್ರಾಮದ ಜನರ ಅಕಾಲಿಕ ಮರಣಕ್ಕೆ ತಡೆ ನೀಡಲು ಮಹಾ ಮೃತ್ಯುಂಜಯ ಯಾಗ ನಡೆಸಲು ಸೂಚಿಸಲಾಗಿತ್ತು. ಅದರಂತೆ ಈ ಸಾವು ನೋವು ತಡೆಯಲು ಕುಂಪಲದಲ್ಲಿ ಮಹಾ ಮೃತ್ಯುಂಜಯ ಹೋಮ ನಡೆಸಲಾಯಿತು.

ದೈವಜ್ಞರ ಮೂಲಕ ನಡೆದ ಪ್ರಶ್ನಾಚಿಂತನೆಯಲ್ಲಿ ಕುಂಪಲ ಗ್ರಾಮದ ಪೂರ್ವ ದಿಕ್ಕಿನಲ್ಲಿ ದೈವ ಸಾನಿಧ್ಯ ಇರುವ ಬಗ್ಗೆ ಸುಳಿವು ಸಿಕ್ಕಿತ್ತು. ಆದರೆ, ಈ ದೈವದ ಗುಡಿ ಪಾಳು ಬಿದ್ದು ದೈವಕ್ಕೆ ಕಾಲಾದಿಯಲ್ಲಿ ನಡೆಯುವ ಪೂಜೆ, ಪುನಸ್ಕಾರಗಳು ನಿಂತಿರುವ ಬಗ್ಗೆ ಗೋಚರವಾಗಿದೆ. ಹೀಗಾಗಿ ದೈವ ಅಸಮಾಧಾನಗೊಂಡು ತನ್ನ ರೂಪವನ್ನು ಋಣಾತ್ಮಕವಾಗಿ ತೋರಿಸುತ್ತಿದೆ ಎಂದು ತಿಳಿದುಬಂದಿದೆ. ಈ ದೈವಸ್ಥಾನ ಬೆಳಗುವ ಮೊದಲು ಗ್ರಾಮದಲ್ಲಿ ಮಹಾ ಮೃತ್ಯುಂಜಯ ಯಾಗ ನಡೆಸುವಂತೆ ಪ್ರಶ್ನೆಯಲ್ಲಿ ಕಂಡುಬಂದಿತ್ತು. ಹೀಗಾಗಿ ಮೃತ್ಯು ಪಾಶದಿಂದ ಪಾರಾಗಲು ಹಿಂದೂ ಧರ್ಮದಲ್ಲಿ ನಡೆಸಲಾಗುವ ಮಹಾ ಮೃತ್ಯುಂಜಯ ಯಾಗವನ್ನು ಕುಂಪಲದ ಚಾಮುಂಡೇಶ್ವರಿ ದೇವಸ್ಥಾನದ ವಠಾರದಲ್ಲಿ ನಡೆಸಲಾಯಿತು. ಗ್ರಾಮದ ಕೇಸರಿ ಮಿತ್ರ ವೃಂದ ಹಾಗೂ ಗ್ರಾಮಸ್ಥರು ಸೇರಿ ಪುರೋಹಿತ ವೃಂದದ ನೇತೃತ್ವದಲ್ಲಿ, ವೇದ ಮಂತ್ರ ಪಠಣಗಳೊಂದಿಗೆ ಅತೀದೊಡ್ಡ ಯಾಗ ನಡೆಸಲಾಯಿತು. ಗ್ರಾಮದ ಜನ 21 ದಿನಗಳ ವೃತಾಚರಣೆಯನ್ನು ಮಾಡಿ ಭಕ್ತಿ ಭಾವದಿಂದ ಯಾಗದಲ್ಲಿ ಭಾಗಿಯಾದ್ರು.

ಇದನ್ನೂ ಓದಿ: ಮಂಗಳೂರು ಉದ್ಯಮಿಗೆ ಭೂಗತ ಪಾತಕಿಯಿಂದ ಬೆದರಿಕೆ ಕರೆ: 3 ಕೋಟಿ ರೂ ಡಿಮ್ಯಾಂಡ್

ಮೃತ್ಯು ಭಯವನ್ನು ಶಮನಗೊಳಿಸಲು ಮಹಾ ಮೃತ್ಯುಂಜಯ ಯಾಗ ಮಾಡಲಾಗುತ್ತದೆ. ಇದೀಗ ಕುಂಪಲ ಗ್ರಾಮದಲ್ಲಿಯು ಈ ಯಾಗ ನಡೆಸಲಾಗಿದ್ದು ಸಕರಾತ್ಮಕ ವಾತಾವರಣ ಸೃಷ್ಟಿಯಾಗಿದೆ ಎಂದು ಅಲ್ಲಿನವರು ಹೇಳುತ್ತಾರೆ. ಮುಂದಿನ ದಿನಗಳಲ್ಲಾದರೂ ಕುಂಪಲ ಗ್ರಾಮದಲ್ಲಿ ದುರಿತಗಳು ನಿವಾರಣೆಯಾಗಿ ಮನೆ ಮನೆಯಲ್ಲಿ ನೆಮ್ಮದಿ ನೆಲೆಯೂರತ್ತದೆಯೇ ಎಂಬುದನ್ನು ಕಾದುನೋಡಬೇಕಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ