ಮಂಗಳೂರು: ಐಸಿಸ್ (Islamic State) ಸಂಘಟನೆಗಳೊಂದಿಗೆ ನಂಟು ಹೊಂದಿದ್ದಾರೆ ಎಂದು ಶಂಕಿಸಲಾಗಿರುವ, 2020ರಿಂದ ನಾಪತ್ತೆಯಾಗಿರುವ ಮೂವರು ವ್ಯಕ್ತಿಗಳು ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಶಾರೀಖ್ಗೆ ತಾಂತ್ರಿಕ ಹಾಗೂ ಹಣಕಾಸು ನೆರವು ನೀಡಿರಬಹುದು. ಅವರೇ ಈತನ ‘ಹ್ಯಾಂಡ್ಲರ್’ ಸಹ ಆಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಪೊಲೀಸ್ ಪರಿಭಾಷೆಯಲ್ಲಿ ‘ಹ್ಯಾಂಡ್ಲರ್’ ಎಂದರೆ ಉಗ್ರಗಾಮಿ ಚಟುವಟಿಕೆ ನಡೆಸಲು ಗುರುತಿಸಿದ ವ್ಯಕ್ತಿಯ ಕಾರ್ಯನಿರ್ವಹಣೆಯನ್ನು ದೂರದಿಂದಲೇ ನಿಯಂತ್ರಿಸುವುದು ಎಂಬ ಅರ್ಥವಿದೆ.
ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಸ್ವತಃ ಈ ಅನುಮಾನ ವ್ಯಕ್ತಪಡಿಸಿದರು. ಐಸಿಸ್ ಜೊತೆಗೆ ನಂಟು ಹೊಂದಿರುವ ಶಂಕೆ ಇರುವ ಮುಸಾಬಿರ್ ಹುಸೇನ್, ಅಬ್ದುಲ್ ಮಥೀನ್ ತಾಹಾ ಮತ್ತು ಅರಾಫತ್ ಅಲಿ ಜಂಟಿಯಾಗಿ ಶಾರಿಕ್ನ ಚಟುವಟಿಕೆಗಳನ್ನು ನಿರ್ವಹಿಸಿರುವ ಸಾಧ್ಯತೆಯಿದೆ. ಅವರೇ ಶಾರಿಕ್ಗೆ ಹಣಕಾಸು ಹೊಂದಿಸಿಕೊಡುವುದರ ಜೊತೆಗೆ ಹ್ಯಾಂಡ್ಲರ್ಗಳಾಗಿಯೂ ಕಾರ್ಯನಿರ್ವಹಿಸಿರಬಹುದು ಎಂದು ತಿಳಿಸಿದರು.
ಶಾರಿಕ್ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ವಾಸಿ ಎಂದು ಸ್ಪಷ್ಟವಾಗಿದೆ. ಈತನ ಮೇಲೆ ಈ ಮೊದಲು ಮೂರು ಪ್ರಕರಣಗಳು ದಾಖಲಾಗಿವೆ. ಮುಸಾಬಿರ್ ಹುಸೇನ್ ಮತ್ತು ಮಥೀನ್ ತಾಹಾ ವಿರುದ್ಧ 2020ರಲ್ಲಿ ಬೆಂಗಳೂರಿನಲ್ಲಿ ಪ್ರಕರಣ ದಾಖಲಾಗಿತ್ತು. ಇನ್ನು ಗೋಡೆ ಬರಹ ಪ್ರಕರಣದಲ್ಲಿ ತಲೆಮರೆಸಿಕೊಂಡ ಅರಾಫತ್ ಅಲಿ ದುಬೈನಲ್ಲಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಈವರೆಗೂ ನಾಲ್ವರನ್ನು ಬಂಧಿಸಲಾಗಿದೆ. ಮೈಸೂರಿನ ಇಬ್ಬರು, ಮಂಗಳೂರಿನ ಒಬ್ಬ ಹಾಗೂ ಊಟಿಯಿಂದ ಒಬ್ಬನನ್ನು ಬಂಧಿಸಿ ಕರೆತರಲಾಗಿದೆ ಎಂದರು.
ಕೊಯಮತ್ತೂರು, ಕೇರಳ, ತಮಿಳುನಾಡು ತಿರುಗಾಡಿ ಕಳೆದ ಸೆ.20ರಂದು ಮೈಸೂರಿಗೆ ಶಾರಿಕ್ ಬಂದಿದ್ದ. ಮೈಸೂರಿನ ಲೋಕ ನಾಯಕ ನಗರದಲ್ಲಿ ಮೋಹನ್‍ಕುಮಾರ್ ಎಂಬುವರ ಮನೆಯಲ್ಲಿ ಬಾಡಿಗೆಗೆ ಇದ್ದನು. ಮನೆ ಮಾಲೀಕರಿಗೆ ಈತನ ಬಗ್ಗೆ ಗೊತ್ತಿರಲಿಲ್ಲ. ಹುಬ್ಬಳ್ಳಿ-ಧಾರವಾಡ ನಿವಾಸಿ ಪ್ರೇಮ್‍ರಾಜ್ ಎಂಬ ಆಧಾರ್ ಕಾರ್ಡ್ ಹೊಂದಿದ್ದನು ಎಂದು ಹೇಳಿದರು.
ಶಾರಿಕ್ ಇನ್ನೂ ಚಿಕಿತ್ಸೆ ಪಡೆದುಕೊಳ್ಳುತ್ತಿರುವುದರಿಂದ ಆತ ಬ್ಲಾಸ್ಟ್ಗೆ ಸಂಬಂಧಿಸಿದ ಸಾಧನಗಳನ್ನು ಎಲ್ಲಿಗೆ ತೆಗೆದುಕೊಂಡು ಹೋಗುತ್ತಿದ್ದನು ಎಂಬುವುದನ್ನು ತಿಳಿಯಬೇಕಾಗಿದೆ. ಬ್ಲಾಸ್ಟ್ಗೂ ಮುನ್ನ ಶಾರಿಕ್ ನವೆಂಬರ್ 10 ರಂದು ಮಂಗಳೂರಿಗೆ ಭೇಟಿ ನೀಡಿದ್ದನು. ಘಟನೆಯಲ್ಲಿ ಕೆಲ ಸ್ಥಳೀಯರ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ ಎಂದು ಅಲೋಕ್ ಕುಮಾರ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:33 am, Tue, 22 November 22