ಮಂಗಳೂರು: ಗಣಿಗಾರಿಕೆ ಸ್ಫೋಟದಿಂದ ದೇಗುಲ ಬಿರುಕು; ಸೂಕ್ತ ಪರಿಹಾರಕ್ಕಾಗಿ ನಾಳೆ ಹಿಂದೂ ಜಾಗರಣ ವೇದಿಕೆಯಿಂದ ಸಂಕಿರ್ತನ ಯಾತ್ರೆ
ಅದು ಪ್ರಕೃತಿಯ ಮಧ್ಯೆ ಬೃಹದಾದ ಬಂಡೆಯ ಮೇಲೆ ನೆಲೆ ನಿಂತ ಶಿವ-ಪಾರ್ವತಿಯ ಸನ್ನಿಧಾನ. ಆದ್ರೆ ಮಾನವ ತನ್ನ ಸ್ವಾರ್ಥಕ್ಕಾಗಿ ಆ ದೇವಸ್ಥಾನದ ಸುತ್ತ ಗಣಿಗಾರಿಕೆ ನಡೆಸಿ ಭಗವಂತನ ಸನ್ನಿದಿಗೆ ಸಂಚಕಾರ ತಂದಿಟ್ಟಿದ್ದಾನೆ. ಈ ಸಮಸ್ಯೆಯ ಶಾಶ್ವತ ಪರಿಹಾರಕ್ಕಾಗಿ ಹಿಂದೂಜಾಗರಣ ವೇದಿಕೆ ಶಿವಮಾಲಾಧಾರಣೆ ಅಭಿಯಾನ ನಡೆಸಲು ಮುಂದಾಗಿದೆ.
ದಕ್ಷಿಣ ಕನ್ನಡ: ಜಿಲ್ಲೆಯ ಬಂಟ್ವಾಳ ತಾಲೂಕಿನ ಕಾರಿಂಜದಲ್ಲಿರುವ ಪ್ರಸಿದ್ದ ಕಾರಿಂಜೇಶ್ವರ ದೇವಸ್ಥಾನ. ಪ್ರಕೃತಿಯ ಮಡಿಲಲ್ಲಿ ಬೃಹದಾಕಾರವಾಗಿ ನಿಂತಿರುವ ಕಲ್ಲಿನ ಮೇಲೆ ಶಿವ ಪಾರ್ವತಿಯ ಈ ಕಾರಣಿಕ ದೇವಸ್ಥಾನವಿದೆ. ಆದ್ರೆ ಈ ದೇವಸ್ಥಾನದ ಸುತ್ತ ಕಾರ್ಯಾಚರಿಸುತ್ತಿದ್ದ ಕಲ್ಲು ಗಣಿಗಾರಿಕೆಗೆ ನಡೆಸಿದ ಸ್ಫೋಟದಿಂದ ದೇಗುಲ ಬಿರುಕು ಬಿಟ್ಟಿದೆ. ಇದರ ವಿರುದ್ದ ಹೋರಾಟ ನಡೆಸಿದ್ದ ಹಿಂದೂ ಜಾಗರಣ ವೇದಿಕೆ ಹಾಗೂ ಸ್ಥಳೀಯರಿಗೆ ಇದೀಗ ತಾತ್ಕಾಲಿಕ ಪರಿಹಾರ ಸಿಕ್ಕಿದೆ. ಜಿಲ್ಲಾಡಳಿತ ದೇವಸ್ಥಾನದ ಸುತ್ತಲಿನ 2 ಕಿ.ಮೀ ವ್ಯಾಪ್ತಿಯನ್ನ ಗಣಿಗಾರಿಕೆ ಚಟುವಟಿಕೆಗಳ ನಿಷೇಧಿತ ಪ್ರದೇಶವೆಂದು ಘೋಷಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಆದ್ರೆ ಈ ಗಣಿಗಾರಿಕೆಯನ್ನು ಶಾಶ್ವತವಾಗಿ ನಿಲ್ಲಿಸಬೇಕೆಂದು ಆಗ್ರಹಿಸಿ ಹಿಂದೂ ಜಾಗರಣ ವೇದಿಕೆ ಶಿವ ಮಾಲಾಧಾರಣೆ ಅಭಿಯಾನ ನಡೆಸಲು ಮುಂದಾಗಿದೆ.
ಇದೇ ಫೆಬ್ರವರಿ 16ರಂದು ಭಕ್ತರು ಮಾಲಾಧಾರಣೆ ಮಾಡಿ ಫೆಬ್ರವರಿ 18ರಂದು ಮಾಲಾಧಾರಿಗಳ ಬೃಹತ್ ಸಮೂಹದೊಂದಿಗೆ ಸಂಕೀರ್ತನ ಯಾತ್ರೆಯೊಂದಿಗೆ ಕಾರಿಂಜ ದೇವಸ್ಥಾನಕ್ಕೆ ತೆರಳಿ ಜಾಗೃತಿಗೆ ಮುಂದಾಗಿದೆ. ದೇವಸ್ಥಾನದಲ್ಲಿ ಇಟ್ಟ ತಾಂಬೂಲ ಪ್ರಶ್ನೆಯಲ್ಲಿ ಕಾರಿಂಜೇಶ್ವರನ ಬೆಟ್ಟದ ಕಲ್ಲು ಸುಮಾರು 6 ಕಿ.ಮೀ ವ್ಯಾಪ್ತಿಯವರೆಗೆ ಹರಡಿಕೊಂಡಿದೆ ಎಂಬುದು ತಿಳಿದುಬಂದಿತ್ತು. ಹರಡಿಕೊಂಡಿರುವ ಕಲ್ಲು ಈ ಬೆಟ್ಟದ ಪಂಚಾಗವಿದ್ದಂತೆ. ಇದನ್ನು ಲೂಟಿ ಮಾಡಿದ್ರೆ ಶಿವಕೋಪಕ್ಕೀಡಾಗುವುದು ಎಂಬುದನ್ನು ಸೂಚಿಸಲಾಗಿತ್ತು. ಹೀಗಾಗಿ ಈ ಅಕ್ರಮದ ವಿರುದ್ದ ಜನ ಎಚ್ಚೆತ್ತುಕೊಂಡಿದ್ದರು.
ಸದ್ಯ ಗಣಿಗಾರಿಕೆ ತಾತ್ಕಾಲಿಕವಾಗಿ ನಿಂತಿದ್ದು, ನಿಷೇಧದ ಪ್ರಸ್ತಾಪವನ್ನು ಸರ್ಕಾರಕ್ಕೆ ಕಳುಹಿಸಲಾಗಿದ್ದು ಶೀಘ್ರ ಅನುಮೋದನೆ ನೀಡುವಂತೆ ಒತ್ತಾಯಿಸಲಾಗಿದೆ. ಹೀಗಾಗಿ ಫೆ.16ರಂದು ಸೂರ್ಯೋದಯದ ಮೊದಲು ಶಿವ ಮಾಲಾಧಾರಣೆ ಮಾಡುವ ಭಕ್ತರು ಅಂದು 108 ಭಾರಿ ಶಿವ ನಾಮ ಜಪಿಸಲಿದ್ದಾರೆ. ಫೆ.18ರಂದು ಸಂಜೆ ಬೃಹತ್ ಭಕ್ತರ ಸಮೂಹ ದೇವಸ್ಥಾನಕ್ಕೆ ಸಾಗಿ ಪವಿತ್ರ ಸ್ನಾನ ಮಾಡಿ ದೇವರ ದರ್ಶನ ಪಡೆದು ಶಿವ ಜಾಗರಣೆ ಮಾಡಿ ಮರುದಿನ ಮುಂಜಾನೆ ಮಾಲೆ ವಿಸರ್ಜನೆ ಮಾಡಲಿದ್ದಾರೆ.
ಅಕ್ರಮ ಗಣಿಗಾರಿಕೆಯ ವಿರುದ್ದ ಜನ ಒಗ್ಗಟ್ಟಾಗಿ ದೇವಸ್ಥಾನದ ಸಂರಕ್ಷಣೆಗೆ ಮುಂದೆ ಬಂದಿದ್ದರಿಂದ ಜನರಿಗೆ ತಾತ್ಕಾಲಿಕ ಪರಿಹಾರ ಸಿಕ್ಕಿದೆ. ಶಾಶ್ವತವಾಗಿ ಈ ಗಣಿಗಾರಿಕೆ ನಿಲ್ಲದಿದ್ದರೆ ಈ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸುವ ಎಚ್ಚರಿಕೆಯನ್ನು ಹಿಂದೂ ಜಾಗರಣ ವೇದಿಕೆ ನೀಡಿದೆ.
ವರದಿ: ಅಶೋಕ್ ಟಿವಿ9 ಮಂಗಳೂರು
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ