ಖಾಕಿಗೆ ಕಗ್ಗಂಟಾದ ಮಂಗಳೂರು ಜುವೆಲ್ಲರಿ ಮರ್ಡರ್ ಕೇಸ್, ಆರೋಪಿ ಜಾಡು ಹಿಡಿದು ಉತ್ತರ ಕರ್ನಾಟಕದಲ್ಲಿ ಮೊಕ್ಕಾಂ ಹೂಡಿದ ಖಾಕಿ
ಮಂಗಳೂರಿನಲ್ಲಿ ಹಾಡಹಗಲೇ ಜುವೆಲ್ಲರಿಗೆ ನುಗ್ಗಿ ಕೊಲೆ ಮಾಡಲಾಗಿದ್ದು, ಆಗಿ ವಾರ ಕಳೆಯುತ್ತಾ ಬಂತು. ಆದ್ರೆ ಆರೋಪಿಯ ಜಾಡು ಮಾತ್ರ ಇನ್ನು ಕೂಡ ಸಿಗೊ ಲಕ್ಷಣ ಕಾಣುತ್ತಿಲ್ಲ. 2013 ರ ಬೆಂಗಳೂರಿನ ಎಟಿಎಂ ಹಲ್ಲೆ ಪ್ರಕರಣವನ್ನು ಇದು ನೆನಪಿಸಿದೆ. ಅಸಲಿಗೆ ಜನರು ಕೂಡ ಈ ಕೇಸ್ ಮೇಲೆ ತಲೆಕೆಡೆಸಿಕೊಂಡಿದ್ದು, ಆರೋಪಿಯ ರೇಖಾ ಚಿತ್ರಣವನ್ನು ಬಿಡಿಸಿ ತಾವೇ ಶೇರ್ ಮಾಡಿಕೊಳ್ಳುತ್ತಿದ್ದಾರೆ.
ಮಂಗಳೂರು: ನಗರದ ಹೃದಯ ಭಾಗ ಹಂಪನಕಟ್ಟೆ ಬಳಿಯಿರುವ ಮಂಗಳೂರು ಜುವೆಲ್ಲರಿಯಲ್ಲಿ ಫೆ.03 ರಂದು ಹಾಡಹಗಲೆ ಕೊಲೆಯಾಗಿತ್ತು. ಅಂಗಡಿ ಕೆಲಸಗಾರ ರಾಘವೇಂದ್ರ ಆಚಾರ್ನನ್ನು ಚೂರಿ ಇರಿದು ಕೊಲೆ ಮಾಡಲಾಗಿತ್ತು. ಕೊಲೆಯಾಗಿ ವಾರ ಕಳೆದರು ಪೊಲೀಸರಿಗೆ ಹಂತಕನ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಕೊಲೆ ಮಾಡಿದ ಬಳಿಕ ಹಂತಕ ಅಲ್ಲಿಂದ ಒಂದು ಆಟೋ ಹಿಡಿದು ರಾಷ್ಟ್ರೀಯ ಹೆದ್ದಾರಿ 66 ಕ್ಕೆ ಹೋಗಿದ್ದಾನೆ. ಅಲ್ಲಿಂದ ಒಂದು ವಾಹನ ಹಿಡಿದು ಉತ್ತರ ಕರ್ನಾಟಕದ ಕಡೆ ಹೋಗಿದ್ದಾನೆ ಎನ್ನುವ ಮಾಹಿತಿ ಪೂಲೀಸರಿಗೆ ಸಿಕ್ಕಿದೆ. ಆದರೆ ಅಲ್ಲಿಂದ ಎಲ್ಲಿಗೆ ಹೋದ ಎಂಬ ಸುಳಿವು ಪೊಲೀಸರಿಗೆ ಸಿಕ್ಕಿಲ್ಲ. ಸದ್ಯ ಪೊಲೀಸರು ಆತನ ಜಾಡು ಹಿಡಿಯಲು ತಿಣುಕಾಡುತ್ತಿದ್ದಾರೆ. ಆತನ ಚಲನ ವಲನ ದಾಖಲಾದ ಸಿಸಿಟಿವಿ ಚಿತ್ರಗಳನ್ನು ಸಾರ್ವಜನಿಕವಾಗಿ ಹಂಚಿದ್ದಾರೆ. ಆದ್ರೆ ಆತನ ಮುಖ ಎಲ್ಲೂ ಕಾಣದ ಕಾರಣ ಪೊಲೀಸರಿಗೆ ಆರೋಪಿಯ ಗುರುತು ಪತ್ತೆ ಕಷ್ಟವಾಗುತ್ತಿದೆ.
ಇನ್ನು 2103 ರಲ್ಲಿ ಬೆಂಗಳೂರಿನಲ್ಲಿ ಎಟಿಎಂ ನಲ್ಲಿದ್ದ ಜ್ಯೋತಿ ಉದಯ್ ಮೇಲೆ ಮಧುಕರ್ ರೆಡ್ಡಿ ಎಂಬಾತ ಹಲ್ಲೆ ಮಾಡಿ ಪರಾರಿಯಾಗಿದ್ದ. ಆತನ ಮುಖ ಸಿಸಿಟಿವಿ ಕ್ಯಾಮೆರಾದಲ್ಲಿ ಚನ್ನಾಗಿ ಕಂಡಿದ್ರು ಕೂಡ ಆತನನ್ನು ಹಿಡಿಯುಲು ಮೂರು ವರ್ಷ ಬೇಕಾಯ್ತು. ನಂತರ ಬಂಧಿತನಾದ ಆತನಿಗೆ 12 ವರ್ಷ ಶಿಕ್ಷೆ ಪ್ರಕಟಗೊಂಡಿತ್ತು. ಸದ್ಯ ಈ ಪ್ರಕರಣ ಕೂಡ ಅದರಂತೆ ಆಗುತ್ತಾ ಅನ್ನೊ ಮಾತು ಪೊಲೀಸ್ ವಲಯದಲ್ಲೇ ಕೇಳಿ ಬರುತ್ತಿದೆ. ಯಾಕಂದ್ರೆ ಅದೇ ರೀತಿ ಇದು ಕೂಡ ಕ್ಲೂ ಲೆಸ್ ಕೇಸ್ ಆಗುವಂತೆ ಕಾಣುತ್ತಿದೆ. ಎಟಿಎಂ ಪ್ರಕರಣದ ಸಂತ್ರಸ್ಥೆ ಜ್ಯೋತಿ ಉದಯ್ ಪ್ರಕರಣದಲ್ಲಿ ಆರೋಪಿಯ ಮಾಹಿತಿ ನೀಡಿದವರಿಗೆ ನಗದು ಬಹುಮಾನ ಘೋಷಿಸಲಾಗಿತ್ತು. ಆದ್ರೆ ಜನರು ಅಷ್ಟೊಂದು ತಲೆ ಕೆಡಿಸಿಕೊಂಡರಲಿಲ್ಲ.
ಆದ್ರೆ ಈ ಪ್ರಕರಣದಲ್ಲಿ ಪೊಲೀಸರು ಸಾರ್ವಜನಿಕರ ಮೊರೆ ಹೋಗಿದ್ದಾರೆ. ಆತನ ಚಿತ್ರಗಳನ್ನು ಶೇರ್ ಮಾಡಿ ಮಾಹಿತಿ ನೀಡಲು ಕೋರಿದ್ದಾರೆ. ಆದ್ರೆ ಜನರು ಒಂದು ಕೈ ಮುಂದೆ ಹೋಗಿ ಆತ ಹೇಗಿರಬಹುದು ಎನ್ನುವ ರೇಖಾ ಚಿತ್ರ ಬರೆದು ಅದನ್ನು ತಾವೇ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಆದ್ರೆ ಈ ರೇಖಾ ಚಿತ್ರದ ಬಗ್ಗೆ ಪೊಲೀಸರಿಗೆ ಯಾವುದೇ ಮಾಹಿತಿ ಇಲ್ಲ. ಸದ್ಯ ಈ ಪ್ರಕರಣವನ್ನು ಬೇಧಿಸಲು ಪೊಲೀಸರ ತಂಡ ಹರಸಾಹಸ ಮಾಡುತ್ತಿದೆ. ಆರೋಪಿಗಾಗಿ ಒಂದು ತಂಡ ಉತ್ತರ ಕರ್ನಾಟಕದಲ್ಲೇ ಬೀಡುಬಿಟ್ಟಿದೆ. ಇನ್ನು ಆತನನ್ನು ಹಿಡಿದ್ರೆ ಮಾತ್ರ ಕರಾವಳಿ ಜನರು ನಿಟ್ಟುಸಿರು ಬಿಡುತ್ತಾರೆ.
ವರದಿ: ಪೃಥ್ವಿರಾಜ್ ಬೊಮ್ಮನಕೆರೆ ಟಿವಿ9 ಮಂಗಳೂರು
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ