ಮಂಗಳೂರು: ಇಲ್ಲಿನ ಉಪ್ಪಿನಂಗಡಿಯಲ್ಲಿ ಹಿಂದೂ ಕಾರ್ಯಕರ್ತರಿಗೆ ಚೂರಿ ಇರಿತ ಮಾಡಲಾದ ಘಟನೆ ಸೋಮವಾರ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿಯಲ್ಲಿ ಮೀನು ಮಾರುತ್ತಿದ್ದ ಮೂವರು ಹಿಂದೂ ಕಾರ್ಯಕರ್ತರಿಗೆ ಚೂರಿ ಇರಿಯಲಾಗಿದೆ. ಮೋಹನ್, ಮಹೇಶ್, ಅಶೋಕ್ ಇರಿತಕ್ಕೆ ಒಳಗಾದವರು. ಬೈಕ್ನಲ್ಲಿ ಬಂದಿದ್ದ ಮುಸುಕುಧಾರಿಗಳಿಂದ ಚೂರಿ ಇರಿತ ಆಗಿದೆ. ಗಾಯಾಳು ಕಾರ್ಯಕರ್ತರಿಗೆ ಪುತ್ತೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇಳಂತಿಲದಲ್ಲಿ ನಿನ್ನೆ ನಡೆದಿದ್ದ ಘಟನೆಗೆ ಪ್ರತೀಕಾರದ ಶಂಕೆ ವ್ಯಕ್ತವಾಗಿದೆ. ಇಳಂತಿಲ ಎಂಬಲ್ಲಿ ಅನ್ಯಕೋಮಿನ ಯುವಕರ ಮೇಲೆ ತಲವಾರ್ ದಾಳಿಯಾಗಿತ್ತು.
ಮಡಿಕೇರಿ: ರಾಜಕೀಯ ವೈಷಮ್ಯ ಹಿನ್ನೆಲೆಯಲ್ಲಿ ಗುಂಡು ಹಾರಿಸಿದ ಆರೋಪ
ರಾಜಕೀಯ ವೈಷಮ್ಯ ಹಿನ್ನೆಲೆಯಲ್ಲಿ ಗುಂಡು ಹಾರಿಸಿದ ಆರೋಪ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಚೆಟ್ಟಳ್ಳಿ ಎಂಬಲ್ಲಿ ಕೇಳಿಬಂದಿದೆ. ಇಲ್ಲಿನ ‘ಕೈ’ ಕಾರ್ಯಕರ್ತನ ವಿರುದ್ಧ ಬಿಜೆಪಿ ಕಾರ್ಯಕರ್ತ ಆರೋಪ ಮಾಡಿದ್ದಾರೆ. ಚೆಟ್ಟಳ್ಳಿಯ ಪಪ್ಪು ತಿಮ್ಮಯ್ಯ ವಿರುದ್ಧ ಕಂಠಿ ಕಾರ್ಯಪ್ಪ ಆರೋಪ ಮಾಡಿದ್ದಾರೆ. ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ಸದಸ್ಯನಾಗಿರುವ ಕಂಠಿ ಕಾರ್ಯಪ್ಪ ದೂರಿನ ಮೇಲೆ ಕಾಂಗ್ರೆಸ್ ಕಾರ್ಯಕರ್ತ ಪಪ್ಪು ತಿಮ್ಮಯ್ಯನನ್ನು ಪೊಲೀಸರು ಬಂಧಿಸಿದ್ದಾರೆ. ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರಿಂದ ಪ್ರಕರಣದ ತನಿಖೆ ನಡೆಸಲಾಗುತ್ತಿದೆ.
ಮಂಗಳೂರು: ಉಚ್ಚಾಟಿತ ಕಾಂಗ್ರೆಸ್ಸಿಗನನ್ನು ಬಿಜೆಪಿ ಸೇರಿಸಿಕೊಂಡಿದ್ದಕ್ಕೆ ವಿರೋಧ
ಉಚ್ಚಾಟಿತ ಕಾಂಗ್ರೆಸ್ಸಿಗನನ್ನು ಬಿಜೆಪಿ ಸೇರಿಸಿಕೊಂಡಿದ್ದಕ್ಕೆ ವಿರೋಧ ವ್ಯಕ್ತವಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಪುಣಚ ಗ್ರಾಮ ಪರಿಷತ್ ಚುನಾವಣಾ ಪ್ರಚಾರ ಸಭೆಯಲ್ಲಿ ನಡೆದಿದೆ. ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲು, ಸಚಿವರಾದ ಅಂಗಾರ, ಕೋಟ ಶ್ರೀನಿವಾಸ ಪೂಜಾರಿ ಎದುರೇ ಪ್ರತಿಭಟನೆ ನಡೆದಿದೆ. ಘಟನೆಯಿಂದ ರಾಜ್ಯ ಬಿಜೆಪಿ ನಾಯಕರಿಗೆ ಮುಜುಗರ ಉಂಟಾಗಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಕಟೀಲು ಎದುರೇ ಧಿಕ್ಕಾರ ಘೋಷಣೆ ಕೂಗಲಾಗಿದೆ. ಘೋಷಣೆ ಕೂಗಿದ ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ ನಡೆಸಲಾಗಿದೆ. ಬಂಟ್ವಾಳ ತಾಲೂಕಿನ ಮಾಣಿಲ ಗ್ರಾ.ಪಂ. ಮಾಜಿ ಅಧ್ಯಕ್ಷ ರಾಜೇಶ್ ಬಾಳೆಕಲ್ಲು ಬಿಜೆಪಿಗೆ ಸೇರ್ಪಡೆ ಆಗಿದ್ದರು. ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆ ಕಾಂಗ್ರೆಸ್ ಪಕ್ಷದಿಂದ ರಾಜೇಶ್ ಬಾಳೆಕಲ್ಲು ಉಚ್ಚಾಟಿಸಲಾಗಿತ್ತು. ಇದೀಗ ರಾಜೇಶ್ ಬಿಜೆಪಿ ಸೇರ್ಪಡೆಗೆ ಬಿಜೆಪಿ, ಸಂಘಪರಿವಾರ ವಿರೋಧ ವ್ಯಕ್ತಪಡಿಸಿದೆ. ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ಧಿಕ್ಕಾರ ಕೂಗಿ ಬಿಜೆಪಿ ಕಾರ್ಯಕರ್ತರು ಕಾರ್ಯಕ್ರಮದಿಂದಲೇ ಹೊರ ನಡೆದಿದ್ದಾರೆ.
ಕೇಸ್ ದಾಖಲಿಸದೆ ಠಾಣೆಗೆ ಕರೆತಂದು ವ್ಯಕ್ತಿಗೆ ಥಳಿಸಿದ್ದ ಪ್ರಕರಣ; PSI ಹರೀಶ್ ಅಮಾನತು
ಕೇಸ್ ದಾಖಲಿಸದೆ ಠಾಣೆಗೆ ಕರೆತಂದು ವ್ಯಕ್ತಿಗೆ ಥಳಿಸಿದ್ದ ಪ್ರಕರಣಕ್ಕೆ ಸಂಬಂಧಿಸಿ ಬ್ಯಾಟರಾಯನಪುರ ಪೊಲೀಸ್ ಠಾಣೆ PSI ಹರೀಶ್ ಅಮಾನತು ಮಾಡಲಾಗಿದೆ. ಕರ್ತವ್ಯಲೋಪ ಹಿನ್ನೆಲೆಯಲ್ಲಿ ಪಿಎಸ್ಐ ಹರೀಶ್ ಅಮಾನತು ಮಾಡಲಾಗಿದೆ. ಪಶ್ಚಿಮ ವಿಭಾಗದ ಡಿಸಿಪಿ ಡಾ.ಸಂಜೀವ್ ಪಾಟೀಲ್ ಈ ಬಗ್ಗೆ ಆದೇಶ ಹೊರಡಿಸಿದ್ದಾರೆ. ಮೈಸೂರು ರಸ್ತೆಯ ಹಳೆ ಗುಡ್ಡದಹಳ್ಳಿ ನಿವಾಸಿ ತೌಸಿಫ್ ಪಾಷಾನನ್ನು ಠಾಣೆಗೆ ಕರೆತಂದು ಥಳಿಸಿದ ಆರೋಪ ಕೇಳಿಬಂದಿತ್ತು. ಹಣಕಾಸು ವಿಚಾರ ಸಂಬಂಧ ಠಾಣೆಗೆ ಕರೆತಂದು ಹಲ್ಲೆ ಆರೋಪ ತಿಳಿದುಬಂದಿತ್ತು. ಈ ಸಂಬಂಧ, ಪಶ್ಚಿಮ ವಿಭಾಗ ಡಿಸಿಪಿ ಎಸಿಪಿ ನೇತೃತ್ವದಲ್ಲಿ ತನಿಖೆಗೆ ಆದೇಶಿಸಿದ್ದರು. ಇದೀಗ ಮಧ್ಯಂತರ ವರದಿ ಬಳಿಕ ಪಿಎಸ್ಐ ಅಮಾನತುಗೊಳಿಸಲಾಗಿದೆ.
ಇದನ್ನೂ ಓದಿ: Bengaluru Crime: ಪತ್ನಿ, ಇಬ್ಬರು ಮಕ್ಕಳ ಹತ್ಯೆ; 11 ವರ್ಷಗಳ ಬಳಿಕ ಸಿಕ್ಕಿಬಿದ್ದ ತ್ರಿವಳಿ ಕೊಲೆ ಕೇಸ್ ಆರೋಪಿ
ಇದನ್ನೂ ಓದಿ: Crime News: ಗಂಡ ಬ್ಲೌಸ್ ಹೊಲಿದಿದ್ದು ಸರಿಯಾಗಿಲ್ಲವೆಂದು ಹೆಂಡತಿ ಆತ್ಮಹತ್ಯೆ!