Bengaluru Crime: ಪತ್ನಿ, ಇಬ್ಬರು ಮಕ್ಕಳ ಹತ್ಯೆ; 11 ವರ್ಷಗಳ ಬಳಿಕ ಸಿಕ್ಕಿಬಿದ್ದ ತ್ರಿವಳಿ ಕೊಲೆ ಕೇಸ್ ಆರೋಪಿ
Crime News: 2012ರಲ್ಲಿ ಮದುವೆಯಾಗಿರುವ ಯಾದವ್ಗೆ ಇಬ್ಬರು ಮಕ್ಕಳಿದ್ದಾರೆ. ಅಸ್ಸಾಂನಲ್ಲಿ ಮದ್ಯ ಮಾರಾಟ ಪರವಾನಗಿ ಪಡೆದು ವೈನ್ ಶಾಪ್ ಹಾಕಿಕೊಂಡಿದ್ದಾನೆ. ವೈನ್ ಶಾಪ್ ನಡೆಸುತ್ತಿದ್ದ ಧರ್ಮಸಿಂಗ್ ಯಾದವ್ನನ್ನು ಇದೀಗ ಬಂಧಿಸಲಾಗಿದೆ.
ಬೆಂಗಳೂರು: ತ್ರಿವಳಿ ಕೊಲೆ ಕೇಸ್ ಆರೋಪಿ ಒಬ್ಬಾತ 11 ವರ್ಷಗಳ ಬಳಿಕ ಇಂದು (ಡಿಸೆಂಬರ್ 6) ಸೆರೆಸಿಕ್ಕಿದ್ದಾನೆ. ಅಸ್ಸಾಂನಲ್ಲಿ ಆರೋಪಿ ಧರ್ಮಸಿಂಗ್ ಯಾದವ್(53) ಸೆರೆ ಹಿಡಿಯಲಾಗಿದೆ. ಬೆಂಗಳೂರಿನ ವಿ.ವಿ.ಪುರಂ ಠಾಣೆ ಪೊಲೀಸರಿಂದ ಬಂಧನ ಮಾಡಲಾಗಿದೆ. 2008ರಲ್ಲಿ ಪತ್ನಿ, ಇಬ್ಬರು ಮಕ್ಕಳನ್ನು ಹತ್ಯೆಗೈದಿದ್ದ ಯಾದವ್, ಯಾರೋ ಕೊಂದಿದ್ದಾರೆಂದು ವಿದ್ಯಾರಣ್ಯಪುರ ಠಾಣೆಗೆ ದೂರು ನೀಡಿದ್ದ. ತನಿಖೆ ವೇಳೆ ಧರ್ಮಸಿಂಗ್ ಯಾದವ್ ಕೊಂದಿದ್ದಾಗಿ ಮಾಹಿತಿ ಬಯಲಾಗಿತ್ತು. 2 ವರ್ಷ 2 ತಿಂಗಳು ಜೈಲಿನಲ್ಲಿದ್ದ ಧರ್ಮಸಿಂಗ್ ಯಾದವ್ನನ್ನು ಬಳಿಕ ಮೂತ್ರಕೋಶದ ಸಮಸ್ಯೆ ಹಿನ್ನೆಲೆ ಆಸ್ಪತ್ರೆಗೆ ದಾಖಲಿಸಿದ್ದರು. ಧರ್ಮಸಿಂಗ್ನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದರು. ವೈದ್ಯರ ಸಲಹೆಯಂತೆ ವಾಕಿಂಗ್ ಮಾಡುತ್ತಿದ್ದ ಧರ್ಮಸಿಂಗ್ ಈ ವೇಳೆ, ಪೊಲೀಸರ ಮೇಲೆ ಖಾರದ ಪುಡಿ ಎರಚಿ ಪರಾರಿ ಆಗಿದ್ದ.
11 ವರ್ಷಗಳ ನಂತರ ಅಸ್ಸಾಂನಲ್ಲಿ ಧರ್ಮಸಿಂಗ್ ಪತ್ತೆಯಾಗಿದ್ದಾನೆ. ನಿವೃತ್ತ ಏರ್ಫೋರ್ಸ್ ಜವಾನ ಆಗಿರುವ ಈತ ಖಾಸಗಿ ಕಂಪನಿಯೊಂದರಲ್ಲಿ ಪರ್ಚೇಸಿಂಗ್ ಆಫೀಸರ್ ಆಗಿದ್ದ. ಜೀವನ್ಸಾಥಿ ಜಾಲತಾಣದಲ್ಲಿ ಪ್ರೊಫೈಲ್ ಅಪ್ಲೋಡ್ ಕೂಡ ಮಾಡಿದ್ದ. ರಾಜಾಜಿನಗರದ ಯುವತಿ ಸಂಪರ್ಕಿಸಿ 2ನೇ ಮದುವೆಯ ಆಸೆ ಹೊಂದಿದ್ದ. ಇದಕ್ಕೆ, ಮೊದಲ ಪತ್ನಿ, ಮಕ್ಕಳು ಅಡ್ಡಬರುವ ಸಾಧ್ಯತೆ ಹಿನ್ನೆಲೆ ಕೊಲೆ ಮಾಡಿದ್ದ. ವಿದ್ಯಾರಣ್ಯಪುರದ ಮನೆಯಲ್ಲಿ ಪತ್ನಿ, ಇಬ್ಬರು ಮಕ್ಕಳ ಕೊಲೆ ಮಾಡಿದ್ದ. ಚಿನ್ನಾಭರಣಕ್ಕಾಗಿ ಯಾರೋ ಕೊಲೆಗೈದಿದ್ದಾರೆಂದು ಕಥೆ ಕಟ್ಟಿದ್ದ.
ನಂತರ, ಪೊಲೀಸರಿಂದ ತಪ್ಪಿಸಿಕೊಂಡು ಅಸ್ಸಾಂಗೆ ತೆರಳಿದ್ದ ಧರ್ಮಸಿಂಗ್, ಶಾದಿ ಡಾಟ್ ಕಾಮ್ ಮೂಲಕ ಮತ್ತೊಂದು ಮಹಿಳೆ ವಿವಾಹವಾಗಿದ್ದ. 2012ರಲ್ಲಿ ಮದುವೆಯಾಗಿರುವ ಯಾದವ್ಗೆ ಇಬ್ಬರು ಮಕ್ಕಳಿದ್ದಾರೆ. ಅಸ್ಸಾಂನಲ್ಲಿ ಮದ್ಯ ಮಾರಾಟ ಪರವಾನಗಿ ಪಡೆದು ವೈನ್ ಶಾಪ್ ಹಾಕಿಕೊಂಡಿದ್ದಾನೆ. ವೈನ್ ಶಾಪ್ ನಡೆಸುತ್ತಿದ್ದ ಧರ್ಮಸಿಂಗ್ ಯಾದವ್ನನ್ನು ಇದೀಗ ಬಂಧಿಸಲಾಗಿದೆ.
ಸರ್ಕಾರಿ ಬಸ್ ಹರಿದು ಮಹಿಳೆ ಸ್ಥಳದಲ್ಲೇ ದುರ್ಮರಣ ಸರ್ಕಾರಿ ಬಸ್ ಹರಿದು ಮಹಿಳೆ ಸ್ಥಳದಲ್ಲೇ ದುರ್ಮರಣವನ್ನಪ್ಪಿದ ಘಟನೆ ರಾಮನಗರ ಜಿಲ್ಲೆ ಮಾಗಡಿ ಬಸ್ ನಿಲ್ದಾಣದಲ್ಲಿ ನಡೆದಿದೆ. ಬೆಂಗಳೂರು ಮೂಲದ ಶಿವಮ್ಮ(58) ಮೃತ ಮಹಿಳೆ ಆಗಿದ್ದಾರೆ. ಸಂಬಂಧಿಕರ ಮನೆಯಿಂದ ವಾಪಸಾಗ್ತಿದ್ದಾಗ ಅಪಘಾತ ಆಗಿದೆ. ಮಾಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ವಿದ್ಯುತ್ ಶಾರ್ಟ್‌ಸರ್ಕ್ಯೂಟ್‌ನಿಂದ ಕಬ್ಬು ಬೆಳೆ ಸುಟ್ಟು ಭಸ್ಮ ವಿದ್ಯುತ್ ಶಾರ್ಟ್‌ಸರ್ಕ್ಯೂಟ್‌ನಿಂದ ಕಬ್ಬು ಬೆಳೆ ಸುಟ್ಟು ಭಸ್ಮವಾದ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಪಡನೂರ ಗ್ರಾಮದಲ್ಲಿ ನಡೆದಿದೆ. 6 ಎಕರೆಯಲ್ಲಿ ಬೆಳೆದಿದ್ದ ಕಬ್ಬು ಬೆಂಕಿಗಾಹುತಿ ಆಗಿದೆ. ರಾಧಾಬಾಯಿ ಕುಲಕರ್ಣಿ ಎಂಬುವರ ಜಮೀನಿನಲ್ಲಿದ್ದ ಕಬ್ಬು ಇದೀಗ ಬೆಂಕಿಗಾಹುತಿಯಾಗಿದೆ. ಹೆಸ್ಕಾಂ ಸೂಕ್ತ ಪರಿಹಾರ ನೀಡಬೇಕೆಂದು ರೈತರ ಒತ್ತಾಯ ಕೇಳಿಬಂದಿದೆ. ಇಂಡಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ರಾಮನಗರ: ಕಾಡಾನೆ ದಾಳಿಯಿಂದ ಬೆಳೆ ಹಾನಿ ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಶಿವನೇಗೌಡನದೊಡ್ಡಿಯಲ್ಲಿ ಕಾಡಾನೆ ದಾಳಿಯಿಂದ ಬೆಳೆ ಹಾನಿ ಆದ ಘಟನೆ ನಡೆದಿದೆ. ಪುಟ್ಟಸ್ವಾಮಿ, ಶಿವರುದ್ರೇಗೌಡ, ಬಸವರಾಜು ಸೇರಿದ ಜಮೀನಿನಲ್ಲಿ ಬೆಳೆಹಾನಿ ಉಂಟಾಗಿದೆ. ಕಾಡಾನೆ ಹಿಂಡಿನ ದಾಳಿಯಿಂದ ಬಾಳೆ, ಭತ್ತ, ರಾಗಿ ಬೆಳೆ ಹಾನಿ ಆಗಿದೆ. ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ರೈತರ ಆಕ್ರೋಶ ಕೇಳಿಬಂದಿದೆ.
ಹಾವೇರಿ: ಅನರ್ಹ ಫಲಾನುಭವಿಗಳ ಆಯ್ಕೆ; 6 ಸಿಬ್ಬಂದಿ ಅಮಾನತು ಹಾವೇರಿ ಜಿಲ್ಲೆಯಲ್ಲಿ ಅನರ್ಹ ಫಲಾನುಭವಿಗಳ ಆಯ್ಕೆ ಹಿನ್ನೆಲೆ ಸವಣೂರು ತಾಲೂಕಿನ ಇಬ್ಬರು ಇಂಜಿನಿಯರ್‌ಗಳು, ಪುರಸಭೆ ಮುಖ್ಯಾಧಿಕಾರಿ, ಇಬ್ಬರು ಗ್ರಾಮ ಲೆಕ್ಕಿಗರು ಹಾಗೂ ಪಿಡಿಒ ಸೇರಿದಂತೆ 6 ಜನರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ. ಹಾವೇರಿ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರರಿಂದ ಆದೇಶ ನೀಡಲಾಗಿದೆ. ಸವಣೂರು ಪುರಸಭೆ ಮುಖ್ಯಾಧಿಕಾರಿ ಕೃಷ್ಣ ಕಟ್ಟೀಮನಿ, ಪಿಡಬ್ಲ್ಯುಡಿ ಸಹಾಯಕ ಇಂಜಿನಿಯರ್ ಹೆಚ್.ಡಿ. ಬಂಡಿವಡ್ಡರ, ಇಂಜಿನಿಯರ್ ಹನುಮಂತಪ್ಪ ಮಾದರ. ಹನುಮಂತಪ್ಪ, ಪಂಚಾಯತ್ ರಾಜ್ ಇಲಾಖೆ ಇಂಜಿನಿಯರ್, ವಿಎಗಳಾದ ಆರ್.ಬಿ.ಮಾಚಕನೂರ, ಕುಮಾರ ಬಾಲೇಹೊಸೂರು, ಶಿರಬಡಗಿ ಪಿಡಿಒ ಶೈಲಾ ಮಂಟೂರ ಸೇರಿ 6 ಸಿಬ್ಬಂದಿ ಅಮಾನತು ಮಾಡಲಾಗಿದೆ.
ಇದನ್ನೂ ಓದಿ: Crime Update: ರೌಡಿಶೀಟರ್ ಕೊಲೆ ಪ್ರಕರಣದ 9 ಆರೋಪಿಗಳ ಬಂಧನ, ಹೆತ್ತವರ ಕಣ್ಣೆದುರು ಹಳ್ಳದ ನೀರಿನಲ್ಲಿ ಕೊಚ್ಚಿ ಹೋದ ಮಗ
ಇದನ್ನೂ ಓದಿ: Crime Roundup: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಕಸಿದು ಪರಾರಿ, ಉದ್ಯಮಿ ಮನೆಯಲ್ಲಿ ಆಭರಣ ಕಳವು