
ಮಂಗಳೂರು, ಸೆ.4: ದಕ್ಷಿಣ ಕನ್ನಡದಲ್ಲಿ ದೈವರಾಧನೆಗೆ ಹೆಚ್ಚಿನ ಮಹತ್ವ ಇದೆ. ಇಲ್ಲಿ ದೈವ ನುಡಿಯುವ ಪ್ರತಿ ಮಾತು ಅಚ್ಚರಿ ಎಂಬಂತೆ ನಿಜವಾಗಿರುವ ಹಲವು ಸಾಕ್ಷಿಗಳು ಇದೆ. ತುಳುನಾಡಿನಲ್ಲಿ ದೈವ ಹಾಗೂ ನಾಗನಿಗೆ ಹೆಚ್ಚಿನ ಮಹತ್ವ ಇದೆ. ಈ ಕಾರಣಕ್ಕೆ ತುಳುನಾಡು ಎಂದು ತಕ್ಷಣ ಮೊದಲು ಕಾಣುವುದು ಇಲ್ಲಿ ದೈವಗಳು. ಮಂಗಳೂರಿನಲ್ಲಿ ಹಲವು ಕಾರ್ಣಿಕದ ಘಟನೆಗಳು ನಡೆದಿದೆ. ಹಾಗೂ ದೈವಗಳು ಎಚ್ಚರಿಕೆಗೆ ನೀಡಿದ ಮಾತುಗಳು ಕೂಡ ಇಂದಿಗೂ ಸಾಕ್ಷಿಯಾಗಿದೆ. ಇದೀಗ ಮತ್ತೊಂದು ಎಚ್ಚರಿಕೆಯನ್ನು ಉಗ್ರರೂಪಿ ಗುಳಿಗ ನೀಡಿದ್ದಾನೆ. ರಾಷ್ಟ್ರೀಯ ಹೆದ್ದಾರಿ 66ರ ನಂತೂರು ಪದವು ಬಳಿ ಇರುವ ಭಗವಾನ್ ಬಬ್ಬುಸ್ವಾಮಿ ದೈವಸ್ಥಾನದ ಆವರಣದ ರಸ್ತೆ ಡಿವೈಡರ್‌ನಲ್ಲಿರುವ ಪುರಾತನ ಸಂಪಿಗೆ ಮರದ ವಿಚಾರವಾಗಿ ಕಾರ್ಣಿಕ ದೈವ ರಾಹುಗುಳಿಗ ಉಗ್ರ ಸ್ವರೂಪ ತಾಳಿ ಎಚ್ಚರಿಕೆ ನೀಡಿದ ಘಟನೆ ನಡೆದಿದೆ. ನಂತೂರು ಸರ್ಕಲ್ ಬಳಿ ಸಾರಿಗೆ ದಟ್ಟಣೆ ನಿಯಂತ್ರಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಅಂಡರ್ ಪಾಸ್ ನಿರ್ಮಾಣಕ್ಕೆ ಯೋಜನೆ ರೂಪಿಸಿದೆ.
ಈ ಯೋಜನೆಯ ಭಾಗವಾಗಿ ರಸ್ತೆ ಡಿವೈಡರ್‌ನಲ್ಲಿರುವ ಪುರಾತನ ಸಂಪಿಗೆ ಮರವನ್ನು ತೆರವುಗೊಳಿಸಬೇಕು ಎಂದು NHAI ಅಧಿಕಾರಿಗಳು ಆಡಳಿತ ಮಂಡಳಿಗೆ ಸೂಚಿಸಿದ್ದರು. ಇತ್ತೀಚೆಗೆ ನಡೆದ ದೈವದ ನೇಮೋತ್ಸವದ ಸಂದರ್ಭದಲ್ಲಿ ಆಡಳಿತ ಮಂಡಳಿಯವರು ಈ ವಿಷಯವನ್ನು ದೈವದ ಎದುರು ಪ್ರಸ್ತಾಪಿಸಿದರು.
ಮರ ತೆರವಿನ ವಿಚಾರ ಕೇಳಿ ರಾಹುಗುಳಿಗ ದೈವ, “ಇದು ನನ್ನ ಮರ, ನನ್ನ ದೃಷ್ಟಿ ಅದರ ಮೇಲಿದೆ. ಅದನ್ನು ತೆರವುಗೊಳಿಸಿದರೆ ಪರಿಣಾಮ ನೆಟ್ಟಗಿರುವುದಿಲ್ಲ” ಎಂದು ಎಚ್ಚರಿಸಿ, ನೇರವಾಗಿ ಸಂಪಿಗೆ ಮರವನ್ನು ಹತ್ತಿ ಆದೇಶ ನೀಡಿದೆ. ಈ ಸಂಪಿಗೆ ಮರವು ದೈವಸ್ಥಾನಕ್ಕೆ ಸೇರಿದ ಪುರಾತನ ಮರವಾಗಿದೆ. ಹಿಂದಿನ ಕಾಲದಲ್ಲಿ ಈ ಮರದ ಕಟ್ಟೆಯಲ್ಲೇ ಮುಖ್ಯ ತೀರ್ಮಾನಗಳನ್ನು ಕೈಗೊಳ್ಳಲಾಗುತ್ತಿತ್ತು ಹಾಗೂ ಮರಕ್ಕೆ ಪೂಜೆ ಸಲ್ಲಿಸಲಾಗುತ್ತಿತ್ತು.
ಇಲ್ಲಿದೆ ನೋಡಿ ವಿಡಿಯೋ:
ಈ ಹಿಂದೆ ರಸ್ತೆ ಅಗಲೀಕರಣ ಮಾಡುವಾಗ ಮರವನ್ನು ತೆರವುಗೊಳಿಸದೇ ರಸ್ತೆ ನಿರ್ಮಿಸಲಾಗಿತ್ತು. ಆದರೆ ಆ ಭಾಗದಲ್ಲಿ ಸರಣಿ ಅಪಘಾತಗಳು ಸಂಭವಿಸುತ್ತಿದ್ದವು. ಅಪಘಾತಗಳನ್ನು ತಡೆಯುವ ಸಲುವಾಗಿ ಮರದಲ್ಲಿದ್ದ ರಾಹುಗುಳಿಗ ದೈವಕ್ಕೆ ದೈವಸ್ಥಾನದ ಆವರಣದಲ್ಲಿ ಪ್ರತ್ಯೇಕ ಗುಡಿ ನಿರ್ಮಿಸಿ ಪೂಜಿಸಲಾಯಿತು. ತದನಂತರ ಅಲ್ಲಿ ಅಪಘಾತಗಳು ನಿಂತುಹೋದವು. ಆದಾಗ್ಯೂ, ದೈವದ ದೃಷ್ಟಿ ಸಂಪಿಗೆ ಮರದ ಮೇಲೆಯೇ ಇತ್ತು.
ಇದನ್ನೂ ಓದಿ: ಕರಾವಳಿಯಲ್ಲಿ ‘ಅಷ್ಟಮಿ ಊಟ’ದ ಸಂಭ್ರಮ: ಏನಿದರ ಮಹತ್ವ? ಇಲ್ಲಿದೆ ಸಾಂಪ್ರದಾಯಿಕ ಕಥೆ
ಹಿಂದೆ ಸ್ಥಳೀಯ ಕಾರ್ಪೊರೇಟರ್ ಒಬ್ಬರು ಈ ಮರವನ್ನು ತೆರವುಗೊಳಿಸಲು ಬಂದಾಗ ಬೃಹತ್ ನಾಗರಹಾವು ಪ್ರತ್ಯಕ್ಷವಾಗಿ ಅವರು ಕಾಲ್ತೆಗೆದಿದ್ದರು. ಇದೀಗ NHAI ಅಧಿಕಾರಿಗಳು ಮತ್ತೆ ಮರ ತೆರವುಗೊಳಿಸಲು ಮುಂದಾಗಿದ್ದು, ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಈ ವಿಷಯದಲ್ಲಿ ಮಧ್ಯಪ್ರವೇಶಿಸಿ ಅಧಿಕಾರಿಗಳಿಗೆ ಸೂಕ್ತ ಮನವರಿಕೆ ಮಾಡಿಕೊಡಬೇಕು ಎಂದು ಆಡಳಿತ ಮಂಡಳಿ ವಿನಂತಿಸಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ