- TV9 Kannada Photo gallery Cricket photos Bhuvneshwar Kumar's Sensational 4-Wicket Haul in UP T20 League Fuels India Return Debate
36 ರನ್‌ಗೆ 7 ವಿಕೆಟ್; ಭುವಿ ಬೌಲಿಂಗ್ಗೆ ತತ್ತರಿಸಿದ ರಿಂಕು ಸಿಂಗ್ ತಂಡ
ಭುವನೇಶ್ವರ್ ಕುಮಾರ್ ಯುಪಿ ಟಿ20 ಲೀಗ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದು, ರಿಂಕು ಸಿಂಗ್ ತಂಡದ ವಿರುದ್ಧ ನಾಲ್ಕು ವಿಕೆಟ್ ಕಬಳಿಸಿದ್ದಾರೆ. ರಾಷ್ಟ್ರೀಯ ತಂಡದಿಂದ ವರ್ಷಗಳೇ ದೂರವಿದ್ದರೂ, ಐಪಿಎಲ್ ಮತ್ತು ದೇಶೀಯ ಪಂದ್ಯಾವಳಿಗಳಲ್ಲಿ ಅವರ ನಿರಂತರ ಅಮೋಘ ಆಟ ಭಾರತ ತಂಡಕ್ಕೆ ಅವರ ಪುನರಾಗಮನದ ಕುರಿತು ಚರ್ಚೆಗೆ ಕಾರಣವಾಗಿದೆ. ಈ ಮಾರಕ ಸ್ಪೆಲ್ ಅವರ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.
Updated on: Sep 03, 2026 | 8:48 PM

ಟೀಂ ಇಂಡಿಯಾದ ಅನುಭವಿ ವೇಗದ ಬೌಲರ್ ಭುವನೇಶ್ವರ್ ಕುಮಾರ್ ರಾಷ್ಟ್ರೀಯ ತಂಡದಲ್ಲಿ ಕಾಣಿಸಿಕೊಂಡು ವರ್ಷಗಳೇ ಕಳೆದಿವೆ. ಆದಾಗ್ಯೂ ಐಪಿಎಲ್ ಮತ್ತು ದೇಶಿಯ ಲೀಗ್ಗಳಲ್ಲಿ ಆಡುತ್ತಿರುವ ಭುವಿ ಪಂದ್ಯದಿಂದ ಪಂದ್ಯಕ್ಕೆ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಅದರಲ್ಲೂ ಕಳೆದ ಎರಡು ಆವೃತ್ತಿಗಳಲ್ಲಿ ಆರ್ಸಿಬಿ ಐಪಿಎಲ್ ಚಾಂಪಿಯನ್ ಆಗುವಲ್ಲಿ ಭುವಿ ಅವರ ಪಾತ್ರ ಅಪಾರವಾಗಿದೆ(PC-UP T20).

ಹೀಗಾಗಿಯೇ ಭುವನೇಶ್ವರ್ಗೆ ಭಾರತ ತಂಡದಲ್ಲಿ ಮತ್ತೆ ಅವಕಾಶ ನೀಡಬೇಕು ಎಂಬ ಕೂಗು ಜೋರಾಗಿದೆ. ಆದಾಗ್ಯೂ ಅವರಿಗೆ ತಂಡದಲ್ಲಿ ಅವಕಾಶ ಸಿಗುತ್ತಿಲ್ಲ. ಇದೆಲ್ಲದರ ನಡುವೆ ತಮ್ಮ ಅಮೋಘ ಪ್ರದರ್ಶನವನ್ನು ಮುಂದುವರೆಸಿರುವ ಭುವಿ ಯುಪಿ ಟಿ20 ಲೀಗ್‌ನಲ್ಲಿ ರಿಂಕು ಸಿಂಗ್ ತಂಡದ ವಿರುದ್ಧ ಮಾರಕ ದಾಳಿ ನಡೆಸಿ ತಂಡವನ್ನು ಕಟ್ಟಿ ಹಾಕಿದ್ದಾರೆ(PC-UP T20).

ಗುರುವಾರ ನಡೆದ ಲಕ್ನೋ ಫಾಲ್ಕನ್ಸ್ ಮತ್ತು ಮೀರತ್ ಮಾವರಿಕ್ಸ್ ನಡುವಿನ ಪಂದ್ಯದಲ್ಲಿ ಭುವನೇಶ್ವರ್ ಕುಮಾರ್ ಅದ್ಭುತ ಪ್ರದರ್ಶನ ನೀಡಿದರು. ಮೂಲತಃ ಮೀರತ್‌ನವರಾಗಿದ್ದರೂ, ಟೂರ್ನಮೆಂಟ್‌ನಲ್ಲಿ ಲಕ್ನೋ ತಂಡದ ನಾಯಕರಾಗಿರುವ ಭುವನೇಶ್ವರ್ ತಮ್ಮ ತವರು ತಂಡದ ಬ್ಯಾಟ್ಸ್‌ಮನ್‌ಗಳಿನ್ನು ಅಕ್ಷರಶಃ ಕಾಡಿದರು(PC-UP T20).

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಫಾಲ್ಕನ್ಸ್ ತಂಡ 145 ರನ್ ಕಲೆಹಾಕಿತು. ತಂಡದ ಪರ ಹಿಮಾಂಶು ಸಿಂಗ್ 45 ಎಸೆತಗಳಲ್ಲಿ 61 ರನ್ ಬಾರಿಸಿದರು. ಪ್ರಿಯಮ್ ಗರ್ಗ್ ಕೂಡ 24 ರನ್ಗಳ ಕಾಣಿಕೆ ನೀಡಿದರು. ಈ ಗುರಿ ಬೆನ್ನಟ್ಟಿದ ರಿಂಕು ಪಡೆ ಕೇವಲ 98 ರನ್ ಕಲೆಹಾಕಲಷ್ಟೇ ಶಕ್ತವಾಗಿ 47 ರನ್ಗಳಿಂದ ಸೋಲೊಪ್ಪಿಕೊಂಡಿತು(PC-UP T20).

145 ರನ್ಗಳ ಗುರಿ ಬೆನ್ನಟ್ಟಿದ ಮೀರತ್ ಮಾವರಿಕ್ಸ್ ವಿರುದ್ಧ ಮೊದಲ ಓವರ್‌ನಿಂದಲೇ ವಿಕೆಟ್ಗಳ ಬೇಟೆ ಶುರು ಮಾಡಿದ ಭುವನೇಶ್ವರ್, ಐದನೇ ಮತ್ತು ಆರನೇ ಎಸೆತಗಳಲ್ಲಿ ಸತತ ಎರಡು ವಿಕೆಟ್‌ಗಳನ್ನು ಪಡೆದು ಮೀರತ್ ತಂಡದ ಪತನಕ್ಕೆ ಕಾರಣರಾದರು. ನಂತರ ಭುವನೇಶ್ವರ್ ತಮ್ಮ ಮುಂದಿನ ಎರಡು ಓವರ್‌ಗಳಲ್ಲಿ ತಲಾ ಒಂದು ವಿಕೆಟ್ ಪಡೆದು ಮೀರತ್ ಮಾವರಿಕ್ಸ್ ತಂಡವನ್ನು ಸಂಕಷ್ಟಕ್ಕೆ ಸಿಲುಕಿಸಿದರು(PC-UP T20).

ಇದರ ಪರಿಣಾಮವಾಗಿ ಮೀರತ್ ತಂಡದ ಏಳು ವಿಕೆಟ್ಗಳು ಕೇವಲ 36 ರನ್‌ಗಳಿಗೆ ಪತನಗೊಂಡವು. ಲಕ್ನೋ ತಂಡದ ನಾಯಕ ಭುವನೇಶ್ವರ್ ಒಬ್ಬರೇ ಮಾತ್ರ ಈ ಪೈಕಿ ನಾಲ್ಕು ವಿಕೆಟ್‌ಗಳನ್ನು ಪಡೆದರು. ತಮ್ಮ ನಾಲ್ಕು ಓವರ್‌ಗಳಲ್ಲಿ ಭುವಿ ಕೇವಲ 10 ರನ್‌ಗಳನ್ನು ಬಿಟ್ಟುಕೊಟ್ಟು ಈ ನಾಲ್ಕು ವಿಕೆಟ್‌ಗಳನ್ನು ಪಡೆದರು. ಹೀಗಾಗಿ ಮೀರತ್‌ಗೆ 50 ರನ್ ಗಳಿಸುವುದು ಕಷ್ಟಕರವೆಂದು ತೋರುತ್ತಿತ್ತು. ಆದಾಗ್ಯೂ, ನಾಯಕ ರಿಂಕು ಸಿಂಗ್ ತಂಡವನ್ನು 98 ರನ್‌ಗಳಿಗೆ ಕೊಂಡೊಯ್ಯುವಲ್ಲಿ ಯಶಸ್ವಿಯಾದರು(PC-UP T20).




