ಮಂಗಳೂರು: ನಗರದ ಹೊರವಲಯದ ಸುರತ್ಕಲ್‌ನ ಗುಡ್ಡೆಕೊಪ್ಲ ಸಮುದ್ರ ಬದಿಯಲ್ಲಿ ಹೂಳೆತ್ತಲು ಬಳಸುವ ಬೃಹದಾದ ಡ್ರೆಜ್ಜರ್ ನೌಕೆಯಿದ್ದು, ಈ ನೌಕೆಯ ಎಂಜಿನ್ ರೂಂ ಒಳಗೆ ಸಮುದ್ರದ ನೀರು ನುಗ್ಗಿ ನಿಷ್ಕ್ರೀಯಗೊಂಡು ಕಡಲ ಕಿನಾರೆಯಲ್ಲಿ ನಿಂತಿತ್ತು. ಈ ಬೃಹದಾದ ನೌಕೆ ನಿಂತಲ್ಲೇ ನಿಂತಿದ್ದರಿಂದ ಸ್ಥಳೀಯ ಮೀನುಗಾರರಿಗೆ ಸಾಕಷ್ಟು ತೊಂದರೆ ಉಂಟಾಗಿತ್ತು. ಇದೀಗ ಮೂರು ವರ್ಷಗಳ ನಂತರ ಈ ಬೃಹತ್ ನೌಕೆಗೆ ಮುಕ್ತಿ ನೀಡುವ ಕಾರ್ಯ ಆರಂಭವಾಗಿದೆ. ಈ ನಿಂತಿರುವ ಡ್ರೆಜ್ಜರ್ ನೌಕೆಯ ಹೆಸರು ‘ಭಗವತಿ ಫ್ರೇಮ್’ 114 ಮೀಟರ್ ಉದ್ದ, 21 ಮೀಟರ್ ಅಗಲ, 9,492 ಟನ್ ತೂಕದ ಕಡಲ ಕಿನಾರೆಯಲ್ಲಿ ಮುಳುಗಿರುವ ಈ ಡ್ರೆಜ್ಜರ್‌ನ್ನು ಸ್ಕ್ರಾಪ್‌ಗೊಳಿಸುವ ಕಾರ್ಯ ಆರಂಭವಾಗಿದೆ. ಕಳೆದ ಕೆಲವು ದಿನಗಳಿಂದ ಸ್ಕ್ರಾಪ್ ಮಾಡುವ ಕಾರ್ಯ ನಡೆಯುತ್ತಿದೆ. ಎನ್‌ಎಂಪಿಎ ಬಂದರಿನಲ್ಲಿ ಹೂಳೆತ್ತಲು ಗುತ್ತಿಗೆ ಪಡೆದಿದ್ದ ಮರ್ಕಟೇರ್ ಕಾರ್ಪೊರೇಷನ್ ಸಂಸ್ಥೆಗೆ ಸೇರಿದ್ದ 2 ಡ್ರೆಜ್ಜರ್‌ಗಳಲ್ಲಿ ಇದು ಕೂಡ ಒಂದಾಗಿತ್ತು. ಕಾಮಗಾರಿಗೆ ಸಂಬಂಧಿಸಿ ಎರಡೂ ಹಡಗುಗಳನ್ನು ತಡೆ ಹಿಡಿಯಲಾಗಿದ್ದು, ಬಳಿಕ ಸಮುದ್ರದಲ್ಲಿ ನಿಲ್ಲಿಸಲಾಗಿತ್ತು.
ಭಗವತಿ ಪ್ರೇಮ್ ಡ್ರೆಜ್ಜರ್‌ನ್ನು ಸಮುದ್ರದಲ್ಲಿ ನಿಲುಗಡೆ ಮಾಡಲಾಗಿದ್ದ ಸಂದರ್ಭದಲ್ಲಿ ಮುಳುಗಿದ್ದು ಅದರಲ್ಲಿದ್ದವರನ್ನು ರಕ್ಷಣೆ ಮಾಡಲಾಗಿತ್ತು. ಬಳಿಕ ಸಮುದ್ರದಲ್ಲಿ ಉಳಿದಿದ್ದ ಈ ಹಡಗನ್ನು 2019ರ ಅಕ್ಟೋಬರ್‌ನಲ್ಲಿ ಗುಡ್ಡೆಕೊಪ್ಪ ಸಮುದ್ರ ತೀರಕ್ಕೆ ತಂದು ನಿಲ್ಲಿಸಲಾಗಿತ್ತು. ಇದರಿಂದಾಗ ಇಲ್ಲಿನ ಮೀನುಗಾರರಿಗೆ ಮೀನುಗಾರಿಕೆ ನಡೆಸುವುದಕ್ಕೆ ತೊಂದರೆಯುಂಟಾಗಿತ್ತು. ಇದೀಗ ಡ್ರೆಜ್ಜರ್ ಅನ್ನು ಮಾಲಿನ್ಯವಿಲ್ಲದೇ ಕತ್ತರಿಸಿ ತೆಗೆಯಬೇಕೆಂಬ ಮೀನುಗಾರರ ಮನವಿಗೆ ಸೂಕ್ತ ಸ್ಪಂದನೆ ದೊರಕಿದ್ದು, ಸುಮಾರು 50ರಷ್ಟು ಉತ್ತರ ಭಾರತದ ಕಾರ್ಮಿಕರು ಡ್ರೆಜ್ಜರ್ ಕತ್ತರಿಸುವ ಕಾರ್ಯದಲ್ಲಿ ನಿರತರಾಗಿದ್ದು, ಆರು ತಿಂಗಳಲ್ಲಿ ಡ್ರೆಜ್ಜರ್ ಅನ್ನು ಸಂಪೂರ್ಣ ಕತ್ತರಿಸಿ ಗುಜರಿಗೆ ಹಾಕಲಾಗುತ್ತದೆ.
ಇದನ್ನೂ ಓದಿ:ಮಂಗಳೂರು ಸಿಟಿಯಲ್ಲೂ ಮೊಳಗಿದ ಕಂಬಳ ಕಹಳೆ, ಕೊಣಗಳ ಗತ್ತಿನ ಓಟ ನಗರದಲ್ಲಿ ಮತ್ತೆ ಆರಂಭ
ಒಪ್ಪಂದ ಮುರಿದ ಕಾರಣಕ್ಕೆ ಬಂದರು ಪ್ರಾಧಿಕಾರ ಮರ್ಕಟೇರ್ ಕಾರ್ಪೊರೇಷನ್ ಸಂಸ್ಥೆಯ ವಿರುದ್ದ ಕಾನೂನು ಕ್ರಮಕ್ಕೆ ಮುಂದಾಗಿ 5.5 ಕೋಟಿ ರೂ ನೀಡುವಂತೆ ನೋಟಿಸ್ ನೀಡಿತ್ತು. ಆದರೆ ನೋಟಿಸ್‌ಗೆ ಯಾವುದೇ ಪ್ರತಿಕ್ರಿಯೆ ಬಾರದಿರುವುದರಿಂದ ಈ ಹಡಗನ್ನು ಒಡೆದು ಗುಜರಿಗೆ ಹಾಕಿ ಹಣವನ್ನು ವಸೂಲಿ ಮಾಡಲು ನಿರ್ಧರಿಸಿದೆ. ಅದರಂತೆ ಇದೀಗ ಟೆಂಡರ್ ಕರೆದು ಹಡಗು ಒಡೆಯುವ ಗುತ್ತಿಗೆ ನೀಡಿದ್ದು ಶೀಘ್ರದಲ್ಲಿ ಹಡಗು ತೆರವಾಗಿ ಮೀನುಗಾರರ ಸಮಸ್ಯೆಗೆ ಮುಕ್ತಿ ದೊರೆಯಲಿದೆ.
ವರದಿ: ಅಶೋಕ್ ಟಿವಿ9 ಮಂಗಳೂರು
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ