ತುಳುನಾಡಿನ ಜಾನಪದ ಕ್ರೀಡೆ ಕಂಬಳ ಗ್ರಾಮೀಣ ಜನರನ್ನ ಹುಚ್ಚೆದ್ದು ಆಕರ್ಷಿಸುತ್ತಿತ್ತು. ಕೇವಲ ಗ್ರಾಮೀಣ ಪ್ರದೇಶದಲ್ಲಿ ನಡೆಯುತ್ತಿದ್ದ ಕಂಬಳ ಈಗ ನಗರ ಪ್ರದೇಶಕ್ಕೂ ಕಾಲಿಟ್ಟಿದೆ. ಕಂಬಳಕ್ಕೂ ಹೈಟೆಕ್ ಟಚ್ ನೀಡಲಾಗಿದ್ದು ಸಿಟಿಯಲ್ಲೇ ಗ್ರಾಮೀಣ ಕ್ರೀಡೆಗೆ ಚಾಲನೆ ದೊರೆತಿದೆ. ಈ ಮೂಲಕ ನಗರದಲ್ಲಿ ಮತ್ತೆ ಕೊಣಗಳ ಗತ್ತು ಆರಂಭವಾಗಿದೆ.
ಮಂಗಳೂರಿನ ಗೋಲ್ಡ್ ಫಿಂಚ್ ಸಿಟಿಯಲ್ಲಿ ಕರಾವಳಿಯ ಜನಪದ ಕ್ರೀಡೆ ಕಂಬಳಕ್ಕೆ ಹೊಸ ಕಳೆ ಬಂದಿತ್ತು. ಮಂಗಳೂರಿನ ಕುಳೂರು ಬಳಿಯ ಗೋಲ್ಡ್ ಫಿಂಚ್ ಸಿಟಿ ಒಳಗೆ ಕೃತಕವಾಗಿ ರೂಪಿಸಿದ ರಾಮ ಲಕ್ಷ್ಮಣ ಜೋಡುಕೆರೆ ಕಂಬಳದ ಕರೆಯಲ್ಲಿ ಓಟದ ಕೋಣಗಳು ಜನರಲ್ಲಿ ಆಟದ ರಂಗನ್ನು ಮೂಡಿಸಿವೆ.
ಸಾಮಾನ್ಯವಾಗಿ ಕಂಬಳ ಹಳ್ಳಿಗಳಲ್ಲಿ ಮಾತ್ರ ಎನ್ನುವಂತಿದ್ದವು. ಆದರೆ ಈ ಬಾರಿ ನಗರದಲ್ಲಿ ಹಳ್ಳಿ ಸೊಗಡು ಸೃಷ್ಟಿಯಾಗಿತ್ತು. ಮಣ್ಣಿನ ಆಟವನ್ನು ನೋಡಿ ಸಿಟಿಜನ ಸಂಭ್ರಮ ಪಟ್ಟರು. ಅಷ್ಟೇ ಅಲ್ಲದೆ ಸಿಟಿಯಲ್ಲೊಂದು ಕಂಬಳ ಕ್ರೀಡೆ ಮಾಡಬೇಕು ಎಂದು ಕಳೆದ 5 ವರ್ಷದ ಹಿಂದೆ ಆರಂಭ ಮಾಡಲಾಗಿತ್ತು.
ಆರನೇ ವರ್ಷದ ಕಂಬಳ ಎರಡು ದಿನಗಳ ಕಾಲ ಹೋನಲು ಬೆಳಕಿನಲ್ಲಿ ನಡೆಸಲಾಗುತ್ತಿದೆ. ಇದರೊಂದಿಗೆ ತುಳುನಾಡಿನ ಸಂಸ್ಕೃತಿ ಮತ್ತು ಜಾನಪದ ಕ್ರೀಡೆಯನ್ನ ಉಳಿಸುವ ನಿಟ್ಟಿನಲ್ಲಿ ಯುವಕರ ತಂಡ ಸೇರಿಕೊಂಡು ಆಯೋಜನೆ ಮಾಡುತ್ತಾ ಇದೆ. ಮಾಜಿ ಸೈನಿಕ ಬ್ರಿಜೇಶ್ ಚೌಟ ತಂಡ ಸಿಟಿಯಲ್ಲಿ ಕಂಬಳ ನಡೆಸುತ್ತಿದ್ದು ಈ ಭಾರೀ ಕೂಡ ಹೊನಲು ಬೆಳಕಿಗೆ ಕಂಬಳ ಸಕತ್ ಮಜಾ ನೀಡಿತು.
16 ವರ್ಷಗಳ ಹಿಂದೆ ಮಂಗಳೂರಿನ ಹೃದಯಭಾಗದ ಕದ್ರಿಯಲ್ಲಿ ಕದ್ರಿ ಕಂಬಳ ಆಯೋಜಿಸಲಾಗುತ್ತಿತ್ತು. ಆದರೆ ಕೆಲವು ಕಾರಣಗಳಿಂದ ಇದು ನಿಂತುಹೋಗಿತ್ತು. ಆದರೀಗ ನಗರದಲ್ಲೀಗ ಮತ್ತೆ ಕಂಬಳ ಆರಂಭಗೊಂಡಿದೆ. ಕೋಣಗಳ ಗತ್ತು ಮತ್ತೆ ನಗರದಲ್ಲಿ ವಿಜೃಂಭಿಸತೊಡಗಿದೆ. ಮಂಗಳೂರಿನಂತಹ ನಗರ ಕಂಬಳ ಆಯೋಜಿಸಿದ್ದರಿಂದ ನೋಡಲು ಬಂದವರೂ ಖುಷಿಯಾಗಿದ್ದರು.
ಅಷ್ಟೇ ಅಲ್ಲದೆ, ಹಿಂದಿಗಿಂತಲೂ ಹೆಚ್ಚು ಜನ ಉತ್ಸಾಹದಲ್ಲಿ ಕ್ರೀಡೆಯಲ್ಲಿ ಪಾಲ್ಗೊಂಡಿದ್ದಾರೆ. ಇನ್ನು ಕೋಣಗಳ ಬಿರುಸಿನ ಓಟದ ಕ್ರೀಡೆ ನೋಡುವುದೇ ಆನಂದ. ಈ ಭಾರೀ ವಿಶೇಷವಾಗಿ ಮಕ್ಕಳಿಗೆ ಚಿತ್ರಕಲೆಯನ್ನು ಕೂಡ ಆಯೋಜಿಸಲಾಗಿತ್ತು. ಕಂಬಳ ವಿಷಯವನ್ನು ಇಟ್ಟುಕೊಂಡು ಚಿತ್ರವನ್ನು ಬಿಡಿಸಿದರು. ಇನ್ನು ಕಂಬಳ ನೋಡಲು ವಿದೇಶಿಗರು ಕೂಡ ಆಗಮಿಸಿದ್ದರು.
ಈ ಕಂಬಳ ಹೊನಲು ಬೆಳಕಿನಲ್ಲಿ ನಡೆಯಲಿದೆ. ಇಂದು ಮತ್ತು ನಾಳೆ ಈ ಕಂಬಳ ನಡೆಯುತ್ತಿದೆ. ಎಲ್ಲಾ ವಿಭಾಗಗಳಲ್ಲೂ ಪ್ರಥಮ ಸ್ಥಾನಕ್ಕೆ 2 ಪವನ್ ಚಿನ್ನ, ಎರಡನೇ ಸ್ಥಾನಕ್ಕೆ ಒಂದು ಪವನ್ ಚಿನ್ನವನ್ನು ಬಹುಮಾನವನ್ನಾಗಿ ಕೊಡಲಾಗುತ್ತಿದೆ. ಸದ್ಯ ಕಂಬಳ ನಗರ ಪ್ರದೇಶದ ಜನರನ್ನೂ ಹೆಚ್ಚು ಹೆಚ್ಚು ಆಕರ್ಷಿಸುತ್ತಿದೆ. ಅದಕ್ಕೆ ಸಾಕ್ಷಿ ಎಂಬತೆ ಅಪಾರ ಜನಸ್ತೋಮ ಕಂಬಳ ನೋಡಲು ಜಮಾಯಿಸುತ್ತಿದೆ. ಈ ಮೂಲಕ ಜಾನಪದ ಕ್ರೀಡೆ ಕಂಬಳದ ಕಹಳೆ ನಗರದಲ್ಲೂ ರಾರಾಜಿಸುವಂತೆ ಮಾಡಿದೆ. (ವರದಿ: ಪೃಥ್ವಿರಾಜ್ ಬೊಮ್ಮನಕೆರೆ, ಟಿವಿ9 ಮಂಗಳೂರು)
Published On - 9:54 pm, Sun, 22 January 23